ಕಹಾನಿ-2: ವಿದ್ಯಾ ಅಭಿನಯವೇ ಜೀವಾಳ

Update: 2016-12-03 18:48 GMT

ನಾಲ್ಕು ವರ್ಷಗಳ ಹಿಂದೆ ತೆರೆಕಂಡ‘ಕಹಾನಿ’ಯನ್ನು ವೀಕ್ಷಿಸಿ ರೋಮಾಂಚನ ಗೊಂಡವರು, ಕಹಾನಿ-2 ಚಿತ್ರದ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಅದ್ಭುತವಾದ ಚಿತ್ರಕಥೆ, ವಿದ್ಯಾಬಾಲನ್‌ರ ರೋಚಕ ಅಭಿನಯ ಕಹಾನಿಗೆ ಬಾಲಿವುಡ್‌ನಲ್ಲಿ ವಿಶಿಷ್ಟವಾದ ಸ್ಥಾನವನ್ನು ತಂದುಕೊಟ್ಟಿದ್ದವು.

ನಿರ್ದೇಶಕ ಸುಜಯ್‌ಘೋಷ್ ಕಹಾನಿ-2 ಮೂಲಕ ಸಸ್ಪೆನ್ಸ್ ಥ್ರಿಲ್ಲರ್‌ನೊಂದಿಗೆ ಮತ್ತೆ ಮರಳಿ ಬಂದಿದ್ದಾರೆ. ಆದರೆ ಮೊದಲ ಕಹಾನಿಯನ್ನು ನೋಡಿದವರಿಗೆ ಈ ಚಿತ್ರ ತುಂಬಾ ನಿರಾಸೆಯನ್ನುಂಟು ಮಾಡುತ್ತದೆ.

ಚಿತ್ರದ ನಾಯಕಿ ವಿದ್ಯಾಸಿನ್ಹಾ (ವಿದ್ಯಾಬಾಲನ್) ಮಹಾನಗರ ಕೋಲ್ಕತಾದ ದುಡಿಯುವ ಮಹಿಳೆ. ತನ್ನ ಪುತ್ರಿ ಮಿನಿ(ನಿಶಾ ಖನ್ನಾ)ಗೆ ಆಕೆಯೇ ತಂದೆ-ತಾಯಿ ಎಲ್ಲವೂ. ತನ್ನ ಬಿಡುವಿನ ವೇಳೆಯನ್ನು ಮಗಳ ಲಾಲನೆ-ಪಾಲನೆಯಲ್ಲಿಯೇ ಕಳೆಯುತ್ತಾಳೆ. ಪಾರ್ಶ್ವವಾಯುಪೀಡಿತಳಾದ ಮಿನಿಗೆ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಕೊಡಿಸಬೇಕೆಂಬ ಮಹದಾಸೆ ಆಕೆಯದು. ಒಂದು ದಿನ ವಿದ್ಯಾ ಸಿನ್ಹಾ ಕೆಲಸ ಮುಗಿಸಿ ವಾಪಸ್ ಬಂದಾಗ ಮಿನಿಯ ಅಪಹರಣವಾಗಿರುತ್ತದೆ. ಆಘಾತಗೊಂಡ ವಿದ್ಯಾ ಮನೆಯಿಂದ ಹೊರಬಂದು ಆಕೆಗಾಗಿ ಹುಡುಕಾಡುತ್ತಾ ಅಲೆ ದಾಡುತ್ತಿದ್ದಾಗ ದಾರಿಯಲ್ಲೊಂದು ಆಘಾತವಾಗುತ್ತದೆ. ಆಕೆ ಕೋಮಾಗೆ ಜಾರುತ್ತಾಳೆ. ಈ ಹಿಟ್ ಆ್ಯಂಡ್ ರನ್ ಪ್ರಕರಣದ ತನಿಖೆಗೆ ಬಂದ ಸಬ್ ಇನ್‌ಸ್ಪೆಕ್ಟರ್ ಇಂದರ್‌ಜಿತ್‌ಸಿಂಗ್ (ಅರ್ಜುನ್ ರಾಮ್‌ಪಾಲ್)ಗೆ, ಆಕೆ ಸ್ವಂತ ಮಗಳನ್ನು ಅಪಹರಿಸಿ, ಕೊಲೆಗೈದ ಆರೋಪ ಎದುರಿಸುತ್ತಿರುವ ಕಾಲಿಪಾಂಗ್ ನಗರದ ಯುವತಿ ದುರ್ಗಾಸಿಂಗ್ ಎಂಬುದನ್ನು ಅರಿತು ಅಚ್ಚರಿಯಾಗುತ್ತದೆ. ಈ ನಡುವೆ ದುರ್ಗಾರಾಣಿ ಸಿಂಗ್ ತನ್ನ ಆತ್ಮಕಥೆಯನ್ನು ಬರೆದಿರುವ ಡೈರಿಯೊಂದು ಇಂದರ್‌ಜಿತ್‌ಗೆ ದೊರೆಯುತ್ತದೆ. ದುರ್ಗಾರಾಣಿಯ ಬಾಲ್ಯದಲ್ಲಿ ದೌರ್ಜನ್ಯಕ್ಕೆ ತುತ್ತಾದ ನತದೃಷ್ಟೆಯೆಂಬ ಸತ್ಯವು ಅನಾವರಣಗೊಳ್ಳುತ್ತದೆ. ಹೀಗೆ ಹತ್ತು ಹಲವು ತಿರುವುಗಳನ್ನು ಪಡೆದುಕೊಂಡು ಕಹಾನಿಯ ಕಥೆ ಸಾಗುತ್ತದೆ. ಈಗ ಕಥೆಯು ಕಾಲಿಂಪೊಂಗ್ ಪಟ್ಟಣದಿಂದ ಕೋಲ್ಕತಾದ ಚಂದನ್‌ನಗರ್‌ನೆಡೆಗೆ ಹೊರಳುತ್ತದೆ. ಈ ಚಿತ್ರದಲ್ಲಿ ವಿದ್ಯಾಬಾಲನ್ ದ್ವಿಪಾತ್ರವೇ? ಅಥವಾ ದುರ್ಗಾರಾಣಿ ನಿಜಕ್ಕೂ ಅಪರಾಧಿಯೇ?. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂಟರ್‌ವೆಲ್ ಬಳಿಕ ದೊರೆಯುತ್ತದೆ.‘ಕಹಾನಿ2 ’ ಇಂಟರ್‌ವಲ್‌ವರೆಗೆ ಅದ್ಭುತವಾಗಿ ಮೂಡಿಬಂದಿದೆ. ಈ ಹಂತದವರೆಗೆ ಚಿತ್ರದ ಯಾವುದೇ ಫ್ರೇಮ್ ಕೂಡಾ ವ್ಯರ್ಥವೆಂದು ಅನಿಸುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಚಿತ್ರಕಥೆಯು ಹಿಡಿತವನ್ನು ಕಳೆದುಕೊಳ್ಳುತ್ತದೆ. ಆದರೆ ಒಂದಂತೂ ನಿಜ. ನಾಯಕಿ ವಿದ್ಯಾಬಾಲನ್ ತನ್ನ ರೋಚಕ ಅಭಿನಯದ ಮೂಲಕ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಆವರ ಅಭಿನಯ ಈ ಚಿತ್ರದ ಪ್ಲಸ್ ಪಾಯಿಂಟ್ ಕೂಡಾ ಹೌದು. ಭಯ, ಆತಂಕ,ದುಃಖ ಹೀಗೆ ಪ್ರತಿಯೊಂದು ದೃಶ್ಯದಲ್ಲೂ ವಿದ್ಯಾಬಾಲನ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅರ್ಜುನ್‌ರಾಮ್‌ಪಾಲ್ ಸಬ್‌ಇನ್‌ಸ್ಪೆಕ್ಟರ್ ಇಂದರ್‌ಜಿತ್‌ಸಿಂಗ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಗಂಭೀರವಾಗಿಯೇ ಸಾಗುವ ಕಹಾನಿ2ನಲ್ಲಿ ಪ್ರೇಕ್ಷಕರಿಗೆ ತುಸು ರಿಲೀಫ್ ನೀಡುವಂತೆ ಇನ್ಸ್‌ಪೆಕ್ಟರ್ ಇಂದ್ರಜಿತ್‌ಸಿಂಗ್‌ನ ಪತ್ನಿ, ಪುತ್ರಿ ಹಾಗೂ ಆತನ ಕುಟುಂಬದ ಜೀವನದ ಉಪಕಥೆಯನ್ನು ನಿರ್ದೇಶಕರು ಹದವಾಗಿ ಮಿಶ್ರಣಗೊಳಿಸಿದ್ದಾರೆ. ಜೊತೆಗೆ ಅರ್ಜುನ್ ರಾಮ್‌ಪಾಲ್ ಅವರ ಲಘುಹಾಸ್ಯದ ಸನ್ನಿವೇಶಗಳನ್ನು ಕೂಡಾ ಕಥೆಗೆ ಧಕ್ಕಬಾರದಂತೆ ಸೇರಿಸಲಾಗಿದೆ. ಆದರೆ ಚಿತ್ರದ ಕ್ಲೈಮಾಕ್ಸ್ ಸಂಪೂರ್ಣ ನಿರಾಶೆ ಮೂಡಿಸುತ್ತದೆ.. ಚಕಚಕನೆ ಸಾಗುವ ಚಿತ್ರದ ಕಥೆಯು ಇದ್ದಕ್ಕಿದ್ದಂತೆಯೇ ಮಾಮೂಲಿ ಬಾಲಿವುಡ್ ಚಿತ್ರಗಳಂತೆ ನಿರೀಕ್ಷಿತ ಅಂತ್ಯವನ್ನು ಕಂಡಾಗ ಏನನ್ನೊ ಕಳೆದುಕೊಂಡಂತೆ ಬೇಸರವಾಗುತ್ತದೆ. ಇದೊಂದು ವಿದ್ಯಾಬಾಲನ್ ಪಾತ್ರವೇ ಪ್ರಧಾನವಾಗಿರುವ ಚಿತ್ರವಾದರೂ, ಅರ್ಜುನ್‌ಗೂ ತನ್ನ ಅಭಿನಯಕೌಶಲ್ಯವನ್ನು ಪ್ರದರ್ಶಿಸಲು ನಿರ್ದೇಶಕ ಸಾಕಷ್ಟು ಅವಕಾಶ ನೀಡಿದ್ದಾರೆ. ಈ ಚಿತ್ರದೊಂದಿಗೆ ಮತ್ತೆ ಬೆಳ್ಳಿತೆರೆಗೆ ಮರಳಿರುವ ಜುಗಲ್ ಹಂಸರಾಜ್ ಪುಟ್ಟದಾದರೂ, ಪ್ರಾಮುಖ್ಯತೆಯಿರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾಲನಟಿ ನಿಶಾ ಖನ್ನಾ ಅಭಿನಯ ಕೂಡಾ ಸೂಪರ್ಬ್. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬಂಗಾಳಿ ನಟ ಖರಾಜ್ ಮುಖರ್ಜಿ ಉತ್ತಮ ಅಭಿನಯ ನೀಡಿದ್ದಾರೆ.
  ಕಹಾನಿ2 ಚಿತ್ರವು ಪ್ರೇಕ್ಷಕರನ್ನು ಕೋಲ್ಕತಾದ ಜನದಟ್ಟಣೆಯ ಬೀದಿಗಳಿಂದ, ಪಶ್ಚಿಮಬಂಗಾಳದ ಸುಂದರ ಗಿರಿಧಾಮ ಕಾಲಿಂಪಾಂಗ್‌ನೆಡೆಗೂ ಕೊಂಡೊಯ್ಯುತ್ತದೆ.ಛಾಯಾಗ್ರಾಹಕ ತಪನ್‌ಬಸ್ ಚಿತ್ರವನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ. ಚಿತ್ರದ ಸಂಗೀತ ಅತ್ಯಂತ ಶಕ್ತಿಯುತವಾಗಿದ್ದು, ಚಿತ್ರದ ಕಥೆಗೆ ಪೂರಕವಾಗಿ ಸಾಗುತ್ತದೆ. ‘ಮೆಹ್ರಾಂ’ ಹಾಗೂ ‘ಔರ್ ಮೈ ಖುಷ್ ಹೂಂ’ ಹಾಡುಗಳಲ್ಲಿ ಗೀತರಚನೆಕಾರ ಭಟ್ಟಾಚಾರ್ಯ ಹಾಗೂ ಸಂಗೀತ ನಿರ್ದೇಶಕ ಕ್ಲಿಂಟನ್ ಸೆರೆಜೊ ಗಮನಸೆಳೆಯುತ್ತಾರೆ. ಈ ಹಾಡುಗಳು ಇಂಪಾಗಿವೆ ಮಾತ್ರವಲ್ಲ ಕಥೆಯ ಮುನ್ನಡೆಗೂ ಸಹಕಾರಿಯಾಗಿವೆ. ಚಿತ್ರದ ಕೆಲವು ದೃಶ್ಯಗಳಂತೂ ಹಾಲಿವುಡ್ ಥ್ರಿಲ್ಲರ್ ಕಿಲ್‌ಬಿಲ್ ಹಾಗೂ ಬಾಲಿವುಡ್‌ನ ತೀನ್ ಚಿತ್ರಗಳನ್ನು ನೆನಪಿಸುತ್ತದೆ.
  ಆದಾಗ್ಯೂ ಕಹಾನಿ2 ಖಂಡಿತವಾಗಿಯೂ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ತಲುಪಲು ವಿಫಲವಾಗಿದೆ. ಆದರೆ ವಿದ್ಯಾಬಾಲನ್‌ರ ಅಭಿನಯ ಮಾತ್ರವೇ ಅವರನ್ನು ನಿರಾಶೆಯಿಂದ ಪಾರುಮಾಡಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News