ಬ್ರಿಟನ್: ಅಲ್ಪಸಂಖ್ಯಾತರನ್ನು ವಿಲೀನಗೊಳಿಸುವ ನೈಜ ಪ್ರಯತ್ನಗಳಾಗಿಲ್ಲ

Update: 2016-12-05 16:18 GMT

ಲಂಡನ್, ಡಿ. 5: ಅಲ್ಪಸಂಖ್ಯಾತರು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಿ ಮೂಲದ ಮುಸ್ಲಿಮರನ್ನು ತನ್ನೊಂದಿಗೆ ವಿಲೀನಗೊಳಿಸುವಲ್ಲಿ ಬ್ರಿಟನ್ ವಿಫಲವಾಗಿದೆ ಎಂದು ಸರಕಾರಿ ಬೆಂಬಲಿತ ನೂತನ ವರದಿಯೊಂದು ಇಂದು ತಿಳಿಸಿದೆ.
ಅಲ್ಪಸಂಖ್ಯಾತರನ್ನು ವಿಲೀನಗೊಳಿಸುವ ವಿವಿಧ ಸರಕಾರಗಳ ಪ್ರಯತ್ನಗಳು ‘‘ಸೀರೆಗಳು, ಸಮೋಸಗಳು ಮತ್ತು ಸ್ಟೀಲ್ ಡ್ರಮ್‌ಗಳಿಗಿಂತ ಮುಂದೆ ಹೋಗಿಲ್ಲ’’ ಎಂಬುದಾಗಿ ಸಮುದಾಯ ವಿಲೀನೀಕರಣ ಎಂಬ ಕುರಿತ ತನ್ನ ವರದಿಯಲ್ಲಿ ಹಿರಿಯ ನಾಗರಿಕ ಅಧಿಕಾರಿ ಡೇಮ್ ಲೂಯಿಸ್ ಕ್ಯಾಸಿ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಕಳೆದ ವರ್ಷ ಡೇಮ್ ಲೂಯಿಸ್ ಕ್ಯಾಸಿಯನ್ನು ನಿಯೋಜಿಸಿದ್ದರು.
‘‘2010ರಿಂದ ವಿಲೀನೀಕರಣ ನೀತಿಯನ್ನು ಸಂಕುಚಿತಗೊಳಿಸಲಾಗಿದೆ. ಈ ಸರಕಾರಿ ನೀತಿಗೆ ಸಣ್ಣ ಮೊತ್ತದ ನಿಧಿಯನ್ನು ಒದಗಿಸಲಾಗುತ್ತಿದ್ದು, ಧರ್ಮಗಳ ನಡುವೆ ಮಾತುಕತೆ, ಅಡುಗೆಯವರಿಗೆ ತರಬೇತಿ ನೀಡುವುದು ಅಥವಾ ವಿವಿಧ ಸಮುದಾಯಗಳು ಭಾಗವಹಿಸುವ ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮುಂತಾದ ಸಣ್ಣ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ಮಾತ್ರ ಸಾಧ್ಯವಾಗುತ್ತಿದೆ’’ ಎಂದು ವರದಿ ತಿಳಿಸಿದೆ.
‘‘ಈ ಯೋಜನೆಗಳು ‘ಸೀರೆಗಳು, ಸಮೋಸಗಳು ಮತ್ತು ಸ್ಟೀಲ್ ಡ್ರಮ್‌ಗಳ ವಿತರಣೆ’ಗೆ ಸೀಮಿತವಾಗಿವೆ. ಇವುಗಳು ವೌಲಿಕ ಹಾಗೂ ಸರಿಯಾದ ಕಾರ್ಯಕ್ರಮಗಳು ಹೌದು ಹಾಗೂ ಅವುಗಳು ಮುಂದುವರಿಯಬೇಕು. ಆದರೆ, ಅವಷ್ಟೇ ಸಾಕಾಗುವುದಿಲ್ಲ ಅಥವಾ ಕಠಿಣ ವಿಷಯಗಳನ್ನು ನಿಭಾಯಿಸುವುದಕ್ಕೆ ಅವುಗಳು ಸಂವಾದಿಯಲ್ಲ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News