×
Ad

6 ತಿಂಗಳು ವಿಸ್ತರಿಸುವಂತೆ ಜೇಟ್ಲಿಗೆ ಜಿಒಪಿಐಒ ಮನವಿ

Update: 2016-12-06 23:39 IST

ವಾಶಿಂಗ್ಟನ್, ಡಿ.6: ನೋಟು ರದ್ದತಿಯನ್ನು ‘ಧೈರ್ಯದ ನಿರ್ಧಾರ’ ಎಂದು ಬಣ್ಣಿಸಿರುವ ಭಾರತೀಯ ಮೂಲದ ಜನರ ಜಾಗತಿಕ ಸಂಘಟನೆಯೊಂದು, ರದ್ದಾದ ರೂ. 500 ಹಾಗೂ 1000ದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸುವ ಗಡುವನ್ನು 6 ತಿಂಗಳು ಮುಂದುವರಿಸುವಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ವಿನಂತಿಸಿದೆ.
ದೊಡ್ಡ ನೋಟುಗಳನ್ನು ರದ್ದುಪಡಿಸಿದ ಸರಕಾರದ ಇತ್ತೀಚಿನ ನಿರ್ಧಾರದ ಬಳಿಕ ಅಪಾರ ಸಂಖ್ಯೆಯ ಅನಿವಾಸಿ ಭಾರತೀಯರು ಹಾಗೂ ಭಾರತೀಯ ಮೂಲದ ಜನರ ಕಳವಳಗಳ ಮಹಾಪೂರವೇ ತನಗೆ ಬಂದಿದೆಯೆಂದು ಭಾರತೀಯ ಮೂಲದ ಜನರ ಜಾಗತಿಕ ಸಂಘಟನೆ (ಜಿಒಪಿಐಒ) ಇತ್ತೀಚಿನ ಪತ್ರವೊಂದರಲ್ಲಿ ಹೇಳಿದೆ.
ಇದು ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯದ ನಿರ್ಧಾರವಾಗಿದ್ದು, ತಾವು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆಂದು ಜಿಒಪಿಐಒದ ಅಧ್ಯಕ್ಷ ನೀರಜ್ ಬಕ್ಷಿ, ಇತ್ತೀಚೆಗೆ ಜೇಟ್ಲಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೆಲವು ಎನ್‌ಆರ್‌ಐ ಹಾಗೂ ಪಿಐಒಗಳು ಹಿಂದಿನ ಸಲ ಭಾರತಕ್ಕೆ ಭೇಟಿ ನೀಡಿದ ಬಳಿಕ ಅವರಲ್ಲಿ ನೋಟುಗಳು ಉಳಿದಿವೆ. ಇನ್ನು ಕೆಲವರು ಮುಂದಿನ ತಮ್ಮ ಭಾರತದ ಪ್ರವಾಸಕ್ಕಾಗಿ ಕರೆನ್ಸಿ ವಿನಿಮಯ ಕೇಂದ್ರ ಹಾಗೂ ಬ್ಯಾಂಕ್‌ಗಳಿಂದ ಭಾರತೀಯ ಹಣವನ್ನು ಪಡೆದಿರಿಸಿದ್ದಾರೆ. ಉಳಿದ ನೋಟುಗಳನ್ನು ಅವರು ಮುಂದೆ ಭಾರತಕ್ಕೆ ಹೋಗುವಾಗ ಬೇಕಾಗಬಹುದೆಂದು ಇರಿಸಿಕೊಳ್ಳುತ್ತಾರೆ.
ಅಂತಹವರು ಹಿಂದಿನ 10 ವರ್ಷಗಳ ವಿನಿಮಯ ಪುರಾವೆ ತೋರಿಸಿದಲ್ಲಿ ಎಷ್ಟೇ ನೋಟುಗಳಿದ್ದರೂ ಬದಲಾಯಿಸಿಕೊಳ್ಳಲು ಅವಕಾಶ ನೀಡಬೇಕೆಂದು ಜಿಪಿಐಒದ ಅಂತಾರಾಷ್ಟ್ರೀಯ ಅಧ್ಯಕ್ಷ ಥೋಮಸ್ ಅಬ್ರಹಾಂ ಮನವಿ ಮಾಡಿದ್ದಾರೆ.
ಹಲವರಿಗೆ 2016ರ ಡಿಸೆಂಬರ್ ಅಂತ್ಯದೊಳಗೆ ಭಾರತಕ್ಕೆ ಬರಲು ಸಾಧ್ಯವಾಗದಿರುವುದರಿಂದ ನೋಟು ಬದಲಾವಣೆ ಗಡುವನ್ನು 6 ತಿಂಗಳು ಮುಂದುವರಿಸಬೇಕು.
ಭಾರತದಲ್ಲಿ ವ್ಯಾಪಾರ ಹಾಗೂ ಇತರ ಆದಾಯ ಮೂಲಗಳಿರುವ ಭಾರತೀಯ ಮೂಲದ ಜನರಿಗೂ ದೇಶದ ನಿವಾಸಿಗಳಂತೆಯೇ ರೂ. 2.5 ಲಕ್ಷದವರೆಗೆ ಠೇವಣಿಯಿಡಲು ಅವಕಾಶ ನೀಡಬೇಕೆಂದು ಸಂಘಟನೆ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News