ಸೋಲೊಮನ್ ದ್ವೀಪದಲ್ಲಿ ಪ್ರಬಲ ಭೂಕಂಪ
ಸಿಡ್ನಿ/ವೆಲಿಂಗ್ಟನ್, ಡಿ. 9: ಸೋಲೊಮನ್ ಐಲ್ಯಾಂಡ್ಸ್ ದ್ವೀಪದ ಸಮುದ್ರದಲ್ಲಿ ಶುಕ್ರವಾರ ಪ್ರಬಲ 7.8ರ ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದ ಬೆನ್ನಿಗೇ ದಕ್ಷಿಣ ಪೆಸಿಫಿಕ್ ಸಾಗರದ ವಿಶಾಲ ವಲಯದಲ್ಲಿ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಯಿತು. ಆದರೆ, ಕೆಲ ಗಂಟೆಗಳ ಬಳಿಕ ಅದನ್ನು ಹಿಂದಕ್ಕೆ ಪಡೆಯಲಾಯಿತು.ಸಾಗರದಡಿಯ ಭೂಕಂಪದ ಕೇಂದ್ರ ಬಿಂದುವಿಗೆ ಸಮೀಪದಲ್ಲಿರುವ ಮಲಾಯ್ಟ ದ್ವೀಪದಲ್ಲಿರುವ ಕಟ್ಟಡಗಳು ಉರುಳಿರುವ ವರದಿಗಳು ಬಂದಿವೆ ಎಂದು ಸೋಲೊಮನ್ ಐಲ್ಯಾಂಡ್ಸ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿ ನಿರ್ದೇಶಕ ಲೋಟಿ ಯೇಟ್ಸ್ ತಿಳಿಸಿದರು.‘‘ಹೆಚ್ಚಿನ ಮನೆಗಳನ್ನು ಸಾಂಪ್ರದಾಯಿಕ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ.
ಹಾಗಾಗಿ, ದಕ್ಷಿಣ ಮಾಲಾಯ್ಟದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ’’ ಎಂದು ಅವರು ‘ರಾಯ್ಟರ್ಸ್’ಗೆ ತಿಳಿಸಿದರು.ಹಲವು ಗ್ರಾಮಗಳ ನಿವಾಸಿಗಳು ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿದ ಅವರು, ಸಾವು ಸಂಭವಿಸಿದ ಬಗ್ಗೆ ವರದಿಗಳಿಲ್ಲ ಎಂದರು.
ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆಯಿದ್ದ ಭೂಕಂಪ ಸ್ಥಳೀಯ ಸಮಯ ಮುಂಜಾನೆ 4:38ಕ್ಕೆ ಸಮುದ್ರ ತಳದಿಂದ ಸುಮಾರು 40 ಕಿ.ಮೀ. ಆಳದಲ್ಲಿ ಸಂಭವಿಸಿತು ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ.