ವಿಪಕ್ಷದ ಪ್ರಕಾರ ಇದು ’ಆಹಾರ ಗಲಭೆ’ ಸೃಷ್ಟಿಸುವ, ದೇಶದ್ರೋಹಿ ಕ್ರಮ

Update: 2016-12-10 04:17 GMT

ಹೊಸದಿಲ್ಲಿ, ಡಿ.10: ಗೋಧಿ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶುಕ್ರವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದವು. ಇದು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಹುನ್ನಾರ. ಇದು ರಾಷ್ಟ್ರ ವಿರೋಧಿ ಕ್ರಮ, ಇದು ದೇಶದಲ್ಲಿ ಆಹಾರದ ಗಲಭೆ ಸೃಷ್ಟಿಸುವ ಭೀತಿ ಇದೆ ಎಂದು ವಾಗ್ದಾಳಿ ನಡೆಸಿದವು.

ದೇಶದಲ್ಲಿ ಸಾಕಷ್ಟು ಗೋಧಿ ದಾಸ್ತಾನು ಇದ್ದರೂ, ಗೋಧಿ ಮೇಲಿನ ಆಮದು ತೆರಿಗೆಯನ್ನು ಶೇಕಡ 10ರಿಂದ ಸೊನ್ನೆಗೆ ಇಳಿಸಿರುವ ಕ್ರಮದಿಂದ ರೈತರಿಗೆ ನೇರ ಹೊಡೆತ ಬೀಳಲಿದೆ ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಎಡಪಕ್ಷಗಳ ಸದಸ್ಯರು ಹೇಳಿದರು.

ಈ ವಾದವನ್ನು ಅಲ್ಲಗಳೆದ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ದೇಶದಲ್ಲಿ ಗೋಧಿಯ ಕೊರತೆ ಇಲ್ಲ. ಆದರೆ ದೇಶದಲ್ಲಿ ಕೆಲ ವಾರಗಳಿಂದ ಇರುವ ಆಹಾರಧಾನ್ಯದ ಅಧಿಕ ಬೆಲೆಯನ್ನು ಇಳಿಸುವ ಸಲುವಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಮುಜಾಯಿಷಿ ನೀಡಿದರು.

ಬೆಲೆ ಹೆಚ್ಚಳಕ್ಕೆ ನೋಟು ಅಮಾನ್ಯ ನಿರ್ಧಾರ ಕಾರಣ ಎಂದು ಈ ಸಂದರ್ಭದಲ್ಲಿ ಸಿಪಿಎಂ ಮುಖಂಡ ಸೀತಾರಾಮ ಯಚೂರಿ ಪ್ರತಿದಾಳಿ ನಡೆಸಿದರು. ರೈತರಿಗೆ ಹಣ ಸಿಗುತ್ತಿಲ್ಲ. ಆದ್ದರಿಂದ ಆತ ಬೀಜ-ಗೊಬ್ಬರ ಖರೀದಿಸುವ ಸ್ಥಿತಿಯಲ್ಲೂ ಇಲ್ಲ. ಆಹಾರಧಾನ್ಯವನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡುವಂತೆಯೂ ಇಲ್ಲ. ಸರ್ಕಾರದ ಈ ಕ್ರಮ ರೈತವಿರೋಧಿ ಹಾಗೂ ದೇಶವಿರೋಧಿ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News