ಮಸಣದ ದಾರಿ ತೋರಿಸುತ್ತಿವೆ ಇಲ್ಲಿನ ಮದುವೆ ಮನೆಗಳು

Update: 2016-12-12 03:51 GMT

ಆಗ್ರಾ:, ಡಿ.12: ಮದುವೆ, ಹುಟ್ಟುಹಬ್ಬದ ಪಾರ್ಟಿಯಂಥ ಸಮಾರಂಭಗಳು ಜಿಲ್ಲೆಯಲ್ಲಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಸಣದ ದಾರಿ ತೋರಿಸುತ್ತಿವೆ. ಕಳೆದ ಒಂಬತ್ತು ತಿಂಗಳಲ್ಲಿ ಮದುವೆಮನೆ ಹಾಗೂ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ. ಇಂಥ 15 ದಾಳಿಗಳು ಈ ಅವಧಿಯಲ್ಲಿ ನಡೆದಿವೆ.
ಇಂಥ ದಾಳಿಗೆ ಬಲಿಯಾದವರಲ್ಲಿ ಸ್ನೇಹಿತರು, ಕಲಾದವಿದರು, ಆಯೋಜನೆ ಸಿಬ್ಬಂದಿ ಹಾಗೂ ಸಮಾರಂಭಕ್ಕೆ ಬಂದವರೂ ಸೇರಿದ್ದಾರೆ. ನವೆಂಬರ್ 30ರಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸಿಬ್ಬಂದಿ ಸುಭಾಷ್, ತಾಳ್ಮೆ ಕಳೆದುಕೊಂಡು ತಮ್ಮ ಪತ್ನಿಯ ಮೇಲೆಯೇ ಪಿಸ್ತೂಲಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಆತನ ಪತ್ನಿ ಆಶಾ ವೇದಿಕೆಗೆ ತೆರಳಿ ಇತರ ಪುರುಷರ ಜತೆಗೆ ನೃತ್ಯ ಮಾಡಲು ಮುಂದಾದಾಗ ತಾಳ್ಮೆ ಕಳೆದುಕೊಂಡ ಪೊಲೀಸ್ ಪೇದೆ ಗುಂಡು ಹಾರಿಸಿದ. ಆಗ್ರಾದ ಮಲಪುರ ಬಳಿಯ ಭಾಂಡಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾನೂನು ಕ್ರಮ ತಪ್ಪಿಸುವ ಸಲುವಾಗಿ ಆಕೆಯ ಬಾವಂದಿರು ಮರುದಿನವೇ ಶವ ಸಂಸ್ಕಾರ ನಡೆಸಿದರು. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ನವೆಂಬರ್ 22ರಂದು, ಮುಕುಲ್ ಮುದ್ಗಲ್ ಎಂಬಾತ ತನ್ನ ಸ್ನೇಹಿತನ ಸಹೋದರಿಯ ನಿಶ್ಚಿತಾರ್ಥ ಸಮಾರಂಭದಲ್ಲಿ ಗುಂಡಿಗೆ ಬಲಿಯಾಗಿದ್ದಾನೆ. ಆತನ ಸ್ನೇಹಿತ ಗೌರವ್ ಶರ್ಮಾ ಎಂಬಾತನೇ ಈ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ. ಜುಲೈ 22ರಂದು ತಮಂಚೆಯ್ ಪೆ ಡಿಸ್ಕೊ.. ಎಂಬ ಬಾಲಿವುಡ್ ಹಾಡು ಹಾಕಲು ಬಿಡದ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಗೆ ಗುಂಡಿಕ್ಕಿ ಕೊಂದಿದ್ದಾನೆ.
"ಇಂಥ ಘಟನೆಗಳನ್ನು ಸಹಿಸುವುದಿಲ್ಲ. ತಕ್ಷಣ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ" ಎಂದು ಇನ್‌ಸ್ಪೆಕ್ಟರ್ ಜನರಲ್ ಸುಜೀತ್ ಪಾಂಡೆ ಹೇಳಿದರು. ಆಗ್ರಾದಲ್ಲಿ 52 ಸಾವಿರ ಪರವಾನಗಿ ಪಡೆದ ಬಂದೂಕುಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News