ಅಲೆಪ್ಪೊ: ಶೇಖ್ ಸಯೀದ್ ಜಿಲ್ಲೆ ಸಿರಿಯ ಸೇನೆ ವಶಕ್ಕೆ

Update: 2016-12-12 14:47 GMT

ಅಲೆಪ್ಪೊ, ಡಿ. 12: ರವಿವಾರ ರಾತ್ರಿ ನಡೆದ ಕಾಳಗದಲ್ಲಿ ಸಿರಿಯ ಸೇನೆ ಮತ್ತು ಮೈತ್ರಿಕೂಟವು ಅಲೆಪ್ಪೊ ನಗರದ ಶೇಖ್ ಸಯೀದ್ ಜಿಲ್ಲೆಯನ್ನು ವಶಪಡಿಸಿಕೊಂಡಿವೆ ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಸೋಮವಾರ ತಿಳಿಸಿದೆ.

ರವಿವಾರ ರಾತ್ರಿ ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರ ದಾಳಿ ನಡೆಯಿತು ಹಾಗೂ ಬಂಡುಕೋರರು ನಗರದ ಒಂದು ಸಣ್ಣ ಭಾಗಕ್ಕೆ ಸೀಮಿತರಾಗಿದ್ದಾರೆ.

ಶೇಖ್ ಸಯೀದ್ ಜಿಲ್ಲೆಯು ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಅಲೆಪ್ಪೊದ ದಕ್ಷಿಣದಲ್ಲಿದೆ. ಸರಕಾರಿ ಪಡೆಗಳ ಎರಡು ವಾರಗಳ ಕಾರ್ಯಾಚರಣೆ ಬಳಿಕ, ಬಂಡುಕೋರರ ನಿಯಂತ್ರಣದಲ್ಲಿರುವ ಅಲೆಪ್ಪೊ ನಗರದ ಮುಕ್ಕಾಲು ಭಾಗಕ್ಕಿಂತಲೂ ಅಧಿಕ ಪ್ರದೇಶ ಅವರ ಕೈತಪ್ಪಿದೆ.


ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಬಂಡುಕೋರರು ಮತ್ತು ನಾಗರಿಕರನ್ನು ತೆರವುಗೊಳಿಸುವ ಅಮೆರಿಕ-ರಶ್ಯ ಪ್ರಸ್ತಾಪವೊಂದನ್ನು ರವಿವಾರ ಬಂಡುಕೋರರಿಗೆ ನೀಡಲಾಗಿತ್ತು. ಆದರೆ, ಬಿಕ್ಕಟ್ಟನ್ನು ನಿಭಾಯಿಸಲು ಜಿನೇವದಲ್ಲಿ ನಡೆಯುತ್ತಿರುವ ಮಾತುಕತೆಗಳಲ್ಲಿ ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ ಎಂದು ಮಾಸ್ಕೊ ಹೇಳಿದೆ.

ಬಂಡುಕೋರ ನಿಯಂತ್ರಣದ ಪ್ರದೇಶಗಳಲ್ಲಿ ಸಾವಿರಾರು ನಾಗರಿಕರು ಬಾಕಿಯಾಗಿದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

ರವಿವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ನಡೆದ ಕಾಳಗದಲ್ಲಿ ಶೇಖ್ ಸಯೀದ್ ಜಿಲ್ಲೆ ಸೇನೆಯ ವಶವಾಗಿದೆ ಎಂದು ಅದು ತಿಳಿಸಿದೆ. ಕಾಳಗದಲ್ಲಿ ಸಿರಿಯ ಸೇನೆಗೆ ರಶ್ಯದ ಯುದ್ಧ ವಿಮಾನಗಳು ಮತ್ತು ಇರಾನ್ ಬೆಂಬಲಿತ ಶಿಯಾ ಮಿಲಿಶಿಯ ಸಹಾಯ ಮಾಡಿವೆ.

ಅಲೆಪ್ಪೊದ ಮಕ್ಕಳು ಆಘಾತದಲ್ಲಿ: ಯುನಿಸೆಫ್

ಅಲೆಪ್ಪೊ, ಡಿ. 12: ಯುದ್ಧದಿಂದ ತತ್ತರಿಸಿರುವ ಸಿರಿಯದ ಅಲೆಪ್ಪೊ ನಗರದ ಎಲ್ಲ ಮಕ್ಕಳು ಆಘಾತಕ್ಕೊಳಗಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯನಿಸೆಫ್ ರವಿವಾರ ಹೇಳಿದೆ.

‘‘ಅಲೆಪ್ಪೊದಲ್ಲಿ ಮಕ್ಕಳು ಅನುಭವಿಸುತ್ತಿರುವ ಆಘಾತದಂಥ ಇನ್ನೊಂದು ಘಟನೆಯನ್ನು ನಾನು ನನ್ನ ಜೀವನದಲ್ಲಿ ಎಂದೂ ನೋಡಿಲ್ಲ’’ ಎಂದು ಅಲೆಪ್ಪೊದಲ್ಲಿರುವ ಯುನಿಸೆಫ್‌ನ ಕ್ಷೇತ್ರ ಕಚೇರಿಯ ಮುಖ್ಯಸ್ಥ ರಡೊಸ್ಲಾವ್ ಝೆಹಕ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.
ಅವರು 15 ವರ್ಷಗಳಿಂದ ಯುನಿಸೆಫ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News