ಶಕುಂತಲಾ ರೈಲ್ವೇಸ್: ಭಾರತದ ಏಕೈಕ ಖಾಸಗಿ ರೈಲು ಮಾರ್ಗ

Update: 2016-12-16 18:18 GMT

ಶಕುಂತಲಾ ರೈಲ್ವೇಸ್ ಈಗಲೂ ನ್ಯಾರೋಗೇಜ್ ಮಾರ್ಗವನ್ನೇ ಬಳಸುತ್ತಿದೆ ಮತ್ತು ಪ್ರತಿದಿನ ಒಂದು ರೈಲು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತದೆ. ಪ್ರಸ್ತುತ ಈ ರೈಲು ಯವತ್ಮಾಲ್ ಮತ್ತು ಅಮರಾವತಿ ಜಿಲ್ಲೆಯ ಅಚಲ್‌ಪುರ ನಡುವಿನ 190 ಕಿ.ಮೀ. ದೂರವನ್ನು ಕ್ರಮಿಸಲು ಬರೋಬ್ಬರಿ 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮಹಾರಾಷ್ಟ್ರದ ಇವೆರಡು ಊರುಗಳ ನಡುವೆ ಸಂಚರಿಸುವ ಬಡಜನರ ಪಾಲಿಗೆ ಈ ರೈಲು ಜೀವನಾಡಿಯಾಗಿದೆ.

ಸೇವೆಗಳು ಮತ್ತು ಹೊಸ ರೈಲುಗಳ ಬಗ್ಗೆ ಹೇಳುವುದಾದರೆ ಭಾರತೀಯ ರೈಲ್ವೆಯು ಅಗಾಧ ಪ್ರಗತಿಯನ್ನು ಸಾಧಿಸಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರೈಲು ಜಾಲಗಳಲ್ಲೊಂದು ಎಂಬ ಹೆಗ್ಗಳಿಕೆಯೂ ಅದಕ್ಕಿದೆ. ಆದರೆ ಮಹಾರಾಷ್ಟ್ರದಲ್ಲೊಂದು ಹೆಚ್ಚಿನ ಭಾರತೀಯರಿಗೆ ಗೊತ್ತೇ ಇಲ್ಲದ ರೈಲುಮಾರ್ಗವೊಂದಿದೆ. ಆದರೆ ಇದು ಭಾರತ ಸರಕಾರದ ಒಡೆತನದಲ್ಲಿಲ್ಲ, ಬ್ರಿಟನ್ನಿನ ಖಾಸಗಿ ಸಂಸ್ಥೆಯೊಂದು ಈ ರೈಲು ಮಾರ್ಗದ ಮಾಲಕನಾಗಿದೆ.

ಇತಿಹಾಸದಲ್ಲೊಂದು ಯಾತ್ರೆ

ಶಕುಂತಲಾ ರೈಲ್ವೇಸ್ ಹೆಸರಿನ ಈ ಸಂಸ್ಥೆ ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಮಹಾರಾಷ್ಟ್ರದ ಯವತ್ಮಾಲ್ ಮತ್ತು ಮುರ್ತಜಾಪುರ ನಡುವೆ 190 ಕಿ.ಮೀ.ಉದ್ದದ ಈ ನ್ಯಾರೋಗೇಜ್ ರೈಲು ಮಾರ್ಗವನ್ನು ನಿರ್ಮಿಸಿತ್ತು. ಮಧ್ಯ ಭಾರತದಾದ್ಯಂತ ಕಾರ್ಯಾಚರಿಸುತ್ತಿದ್ದ ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆ(ಜಿಐಪಿಆರ್) ಈ ಮಾರ್ಗದಲ್ಲಿ ರೈಲುಗಳನ್ನು ಓಡಿಸುತ್ತಿತ್ತು.

ವಿಚಿತ್ರವೆಂದರೆ 1952ರಲ್ಲಿ ರೈಲುಮಾರ್ಗಗಳು ರಾಷ್ಟ್ರೀಕರಣಗೊಂಡಾಗ ಈ ಮಾರ್ಗವನ್ನು ಅಲಕ್ಷಿಸಲಾಗಿತ್ತು. ಈ ರೈಲುಮಾರ್ಗವಿನ್ನೂ 19ನೆ ಶತಮಾನದಲ್ಲಿ ಅದನ್ನು ನಿರ್ಮಿಸಿದ್ದ ಕಂಪೆನಿಯ ಒಡೆತನದಲ್ಲಿಯೇ ಉಳಿದುಕೊಂಡಿದೆ.

ವಸಾಹತುಶಾಹಿ ರೈಲ್ವೆ ಪರಂಪರೆಯ ಕೊನೆಯ ತುಣುಕು

ಶಕುಂತಲಾ ರೈಲ್ವೇಸ್ ಈಗಲೂ ನ್ಯಾರೋಗೇಜ್ ಮಾರ್ಗವನ್ನೇ ಬಳಸುತ್ತಿದೆ ಮತ್ತು ಪ್ರತಿದಿನ ಒಂದು ರೈಲು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತದೆ. ಪ್ರಸ್ತುತ ಈ ರೈಲು ಯವತ್ಮಾಲ್ ಮತ್ತು ಅಮರಾವತಿ ಜಿಲ್ಲೆಯ ಅಚಲ್‌ಪುರ ನಡುವಿನ 190 ಕಿ.ಮೀ. ದೂರವನ್ನು ಕ್ರಮಿಸಲು ಬರೋಬ್ಬರಿ 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮಹಾರಾಷ್ಟ್ರದ ಇವೆರಡು ಊರುಗಳ ನಡುವೆ ಸಂಚರಿಸುವ ಬಡಜನರ ಪಾಲಿಗೆ ಈ ರೈಲು ಜೀವನಾಡಿಯಾಗಿದೆ.

ಯವತ್ಮಾಲ್‌ನಿಂದ ಹೊರಟು 20 ಗಂಟೆಗಳ ಬಳಿಕ ಅಚಲ್‌ಪುರ ತಲುಪುವ ರೈಲು ಮರುದಿನ ಅಲ್ಲಿಂದ ಹೊರಟು ಯವತ್ಮಾಲ್‌ಗೆ ವಾಪಸಾಗುತ್ತದೆ. ಇದನ್ನು ಬಿಟ್ಟರೆ ಬೇರೆ ಯಾವ ರೈಲೂ ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಈ ರೈಲು ಏಕಮೇವ ಚಕ್ರಾಧಿಪತಿಯಂತೆ. ಯವತ್ಮಾಲ್‌ನಿಂದ ಅಚಲ್‌ಪುರಕ್ಕೆ ಪ್ರಯಾಣಶುಲ್ಕವೂ ಕಡಿಮೆಯಿದೆ. ಮೇಡ್ ಇನ್ ಮ್ಯಾಂಚೆಸ್ಟರ್

ಈ ರೈಲು 1921ರಲ್ಲಿ ಬ್ರಿಟನ್ನಿನ ಮ್ಯಾಂಚೆಸ್ಟರ್‌ನಲ್ಲಿ ನಿರ್ಮಾಣ ಗೊಂಡಿದ್ದ 19ಝಡ್‌ಡಿ ಉಗಿಎಂಜಿನ್ನಿನ ಬಲದಲ್ಲಿ 1923ರಿಂದ ನಿರಂತರ 70 ವರ್ಷಗಳ ಕಾಲ ಓಡಿತ್ತು. 1994, ಎ.15ರಂದು ಈ ಎಂಜಿನ್‌ನ್ನು ಹಿಂದೆಗೆದುಕೊಂಡು ಡೀಸೆಲ್ ಎಂಜಿನ್‌ನ್ನು ಅಳವಡಿಸಲಾಗಿದೆ.

ವಸಾಹತುಶಾಹಿಯ ಪಳೆಯುಳಿಕೆ

ಬ್ರಿಟನ್ನಿನ ಖಾಸಗಿ ಸಂಸ್ಥೆ ಕಿಲಿಕ್-ನಿಕ್ಸನ್ 1910ರಲ್ಲಿ ಈ ಶಕುಂತಲಾ ರೈಲ್ವೇಸ್ ಕಂಪೆನಿಯನ್ನು ಸ್ಥಾಪಿಸಿತ್ತು. ಕಂಪೆನಿಯು ಭಾರತದಲ್ಲಿಯ ಆಗಿನ ಬ್ರಿಟಿಷ್ ಸರಕಾರದ ಸಹಭಾಗಿತ್ವದೊಂದಿಗೆ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪೆನಿಯನ್ನು ಜಂಟಿ ಉದ್ಯಮವಾಗಿ ಆರಂಭಿಸಿತ್ತು.

ಯವತ್ಮಾಲ್‌ನಿಂದ ಮುಂಬೈ ಮೇನ್ ಲೈನ್‌ಗೆ ಹತ್ತಿಯನ್ನು ಸಾಗಿಸಲು ಈ ನಾರೋಗೇಜ್ ಮಾರ್ಗವನ್ನು ನಿರ್ಮಿಸಲಾಗಿತ್ತು ಮುಂಬೈ ತಲುಪಿದ ಬಳಿಕ ಹತ್ತಿ ಮ್ಯಾಂಚೆಸ್ಟರ್‌ಗೆ ಹಡಗಿನ ಮೂಲಕ ರವಾನೆಯಾಗುತ್ತಿತ್ತು. ಅಂತಿಮವಾಗಿ ಈ ಮಾರ್ಗ ಪ್ರಯಾಣಿಕರನ್ನು ಸಾಗಿಸಲು ಬಳಕೆಯಾಗುತ್ತಿದೆ.

ಅಚ್ಚರಿಯ ವಿಷಯವೆಂದರೆ ಈ ಮಾರ್ಗದಲ್ಲಿ ರೈಲನ್ನು ಓಡಿಸಲು ಭಾರತೀಯ ರೈಲ್ವೆಯು ಈಗಲೂ ಬ್ರಿಟಿಷ್ ಕಂಪೆನಿಗೆ ವಾರ್ಷಿಕ ಒಂದು ಕೋಟಿ ರೂ.ಗೂ ಅಧಿಕ ಶುಲ್ಕವನ್ನು ಪಾವತಿಸುತ್ತಿದೆ.

ಭವಿಷ್ಯ

ಹಾಲಿ ಈ ರೈಲುಮಾರ್ಗವನ್ನು ಏಳು ಸಿಬ್ಬಂದಿಗಳ ತಂಡ ನಿರ್ವ ಹಿಸುತ್ತಿದೆ. ಬೋಗಿಗಳಿಂದ ಎಂಜಿನ್‌ನ್ನು ಬೇರ್ಪಡಿಸುವ ಮತ್ತು ವಾಪಸ್ ಜೋಡಿಸುವುದರಿಂದ ಹಿಡಿದು ಸಿಗ್ನಲ್ ಬದಲಾವಣೆ, ಟಿಕೆಟ್‌ಗಳ ಮಾರಾಟದವರೆಗೆ ಎಲ್ಲ ಕೆಲಸಗಳನ್ನೂ ಈ ಏಳು ಜನರೇ ಮಾಡುತ್ತಾರೆ.

ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಅವರು ಯವತ್ಮಾಲ್-ಮುರ್ತಜಾ ಪುರ-ಅಚಲ್‌ಪುರ ನ್ಯಾರೋಗೇಜ್ ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಲು 1,500 ಕೋ.ರೂ.ಗಳನ್ನು ಇತ್ತೀಚೆಗೆ ಮಂಜೂರು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News