ಸೇನಾ ವಾಹನಗಳ ಮೇಲೆ ಭಯೋತ್ಪಾದಕರ ದಾಳಿ, ಮೂವರು ಯೋಧರು ಹುತಾತ್ಮ
Update: 2016-12-17 22:28 IST
ಶ್ರೀನಗರ,ಡಿ.17: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುಲ್ವಾಮಾ ಜಿಲ್ಲೆಯ ಪಾಂಪೋರ್‌ನ ಜನನಿಬಿಡ ಸ್ಥಳದಲ್ಲಿ ಶನಿವಾರ ಸೇನಾ ವಾಹನಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನಾಧಿಕಾರಿಯೋರ್ವರು ತಿಳಿಸಿದರು.
ಪಾಂಪೋರ್‌ನಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಡ್ಲಾಬಾಲ್ ಎಂಬಲ್ಲಿ ಈ ದಾಳಿಯು ನಡೆದಿದ್ದು, ನಾಗರಿಕರಿಗೆ ಸಾವುನೋವುಗಳನ್ನು ತಡೆಯಲು ಭದ್ರತಾ ಪಡೆಗಳು ಪ್ರತಿದಾಳಿಗೆ ಮುಂದಾಗಲಿಲ್ಲವೆಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಈ ಮಾರಣಾಂತಿಕ ದಾಳಿಯನ್ನು ನಡೆಸಲು ಭಯೋತ್ಪಾದಕರು ಬೈಕ್‌ಗಳನ್ನು ಬಳಸಿರಬಹುದೆಂದು ಪ್ರಾಥಮಿಕ ತನಿಖೆಯು ಬೆಟ್ಟು ಮಾಡಿದೆ
ಸೇನಾ ವಾಹನಗಳು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ.