ಪ್ರಥಮ ಟೆಸ್ಟ್: ಪಾಕಿಸ್ತಾನಕ್ಕೆ ಕಠಿಣ ಗುರಿ

Update: 2016-12-17 18:06 GMT

ಬ್ರಿಸ್ಬೇನ್, ಡಿ.17: ನಾಯಕ ಸ್ಟೀವನ್ ಸ್ಮಿತ್(63) ಹಾಗೂ ಉಸ್ಮಾನ್ ಖ್ವಾಜಾ(74) 3ನೆ ವಿಕೆಟ್‌ಗೆ ಸೇರಿಸಿದ 111 ರನ್‌ಗಳ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯ ತಂಡ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ ಕಠಿಣ ರನ್ ಗುರಿ ವಿಧಿಸಿದೆ.

 3ನೆ ದಿನದಾಟವಾದ ಶನಿವಾರ ಗೆಲ್ಲಲು 490 ರನ್ ಗುರಿ ಪಡೆದಿರುವ ಪಾಕಿಸ್ತಾನ ತಂಡ ದಿನದಾಟದಂತ್ಯಕ್ಕೆ 70 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕ ಆಟಗಾರ ಅಝರ್ ಅಲಿ(ಅಜೇಯ 41) ಹಾಗೂ ಯೂನಿಸ್ ಖಾನ್(0) ಕ್ರೀಸ್ ಕಾಯ್ದುಕೊಂಡಿದ್ದಾರೆ. 112 ಟೆಸ್ಟ್ ಪಂದ್ಯ ಆಡಿರುವ ಯೂನಿಸ್ 19 ಎಸೆತಗಳನ್ನು ಎದುರಿಸಿದರೂ ಇನ್ನೂ ಖಾತೆ ತೆರೆದಿಲ್ಲ.

ಪಾಕಿಸ್ತಾನಕ್ಕೆ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಉಳಿದ 8 ವಿಕೆಟ್‌ಗಳ ಸಹಾಯದಿಂದ ಇನ್ನೂ 420 ರನ್ ಗಳಿಸಬೇಕಾಗಿದೆ. ಬ್ರಿಸ್ಬೇನ್ ಸ್ಟೇಡಿಯಂನಲ್ಲಿ ನಾಲ್ಕನೆ ಇನಿಂಗ್ಸ್‌ನಲ್ಲಿ ತಂಡವೊಂದು ಈ ತನಕ ಗಳಿಸಿರುವ ಗರಿಷ್ಠ ಸ್ಕೋರ್ 236. 1988ರಿಂದ 27 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯ ಈ ತನಕ ಸೋತಿಲ್ಲ.

 ಇದಕ್ಕೆ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 97 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ಕೇವಲ 142 ರನ್‌ಗೆ ಆಲೌಟಾಯಿತು. ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್(ಅಜೇಯ 59) ಏಕಾಂಗಿ ಹೋರಾಟ ನೀಡಿದರು. ಮುಹಮ್ಮದ್ ಆಮಿರ್(21) ಅವರೊಂದಿಗೆ 9ನೆ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿದ ಅಹ್ಮದ್ ತಂಡ 142 ರನ್ ಗಳಿಸಲು ನೆರವಾದರು.

ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 287 ರನ್ ಮುನ್ನಡೆ ಪಡೆದರೂ ಪಾಕ್‌ಗೆ ಫಾಲೋ-ಆನ್ ಹೇರದೆ ಎರಡನೆ ಇನಿಂಗ್ಸ್ ಆರಂಭಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.

 ಆಸ್ಟ್ರೇಲಿಯದ 2ನೆ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರಾದ ವಾರ್ನರ್(12) ಹಾಗೂ ರೆನ್‌ಶಾ(06)ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ. ಆಗ 3ನೆ ವಿಕೆಟ್‌ನಲ್ಲಿ ಜೊತೆಯಾದ ಖ್ವಾಜಾ(74 ರನ್, 109 ಎಸೆತ, 8 ಬೌಂಡರಿ) ಹಾಗೂ ಸ್ಮಿತ್(63 ರನ್, 70 ಎಸೆತ, 11 ಬೌಂಡರಿ) 111 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

ಮೊದಲ ಇನಿಂಗ್ಸ್‌ನಲ್ಲಿ ಶತಕ(130 ರನ್) ಗಳಿಸಿರುವ ಸ್ಮಿತ್ 2ನೆ ಇನಿಂಗ್ಸ್‌ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿ 19ನೆ ಅರ್ಧಶತಕ ಬಾರಿಸಿದರು. ಪಾಕಿಸ್ತಾನದ ಸಂಜಾತ ಖ್ವಾಜಾ ಆಫ್ರಿಕ ವಿರುದ್ಧ ಸರಣಿಯಲ್ಲಿ ತೋರಿರುವ ಪ್ರದರ್ಶನವನ್ನು ಪುನರಾವರ್ತಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ ಬಾರಿಸಿರುವ ಹ್ಯಾಂಡ್ಸ್‌ಕಾಂಬ್(ಅಜೇಯ 35) ಔಟಾಗದೆ ಉಳಿದರು. ಪಾಕಿಸ್ತಾನದ ಪರ ರಾಹತ್ ಅಲಿ(2-40) ಯಶಸ್ವಿ ಬೌಲರ್ ಎನಿಸಿಕೊಂಡರು. ಆಮಿರ್(3-37), ಯಾಸಿರ್ ಶಾ(1-45) ಹಾಗೂ ರಿಯಾಝ್(1-47) ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್:

130.1 ಓವರ್‌ಗಳಲ್ಲಿ 429

ಪಾಕಿಸ್ತಾನ ಪ್ರಥಮ ಇನಿಂಗ್ಸ್:

55 ಓವರ್‌ಗಳಲ್ಲಿ 142

(ಅಹ್ಮದ್ ಅಜೇಯ 59, ಅಸ್ಲಮ್ 22, ಆಮಿರ್ 21, ಸ್ಟಾರ್ಕ್ 3-63, ಹೇಝಲ್‌ವುಡ್ 3-22, ಬರ್ಡ್ 3-23)

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 39 ಓವರ್‌ಗಳಲ್ಲಿ 202/5 ಡಿಕ್ಲೇರ್

ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 33 ಓವರ್‌ಗಳಲ್ಲಿ 70/2

(ಅಝರ್ ಅಲಿ ಅಜೇಯ 41, ಲಿಯೊನ್ 1-13, ಸ್ಟಾರ್ಕ್ 1-28)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News