ರಾಜಕೀಯ ಪಕ್ಷಗಳ ಠೇವಣಿಗೆ ತೆರಿಗೆ ರಿಯಾಯಿತಿ
ಹೊಸದಿಲ್ಲಿ, ಡಿ.17: ರಾಜಕೀಯ ಪಕ್ಷಗಳ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗೆ ಸರಕಾರ ತೆರಿಗೆ ವಿನಾಯಿತಿ ನೀಡಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದೊಂದು ತಪ್ಪು ಅಭಿಪ್ರಾಯ ಕೊಡುವ ಸುದ್ದಿಯಾಗಿದೆ. ಕಳೆದ 15-20 ವರ್ಷಗಳಿಂದ ಜಾರಿಯಲ್ಲಿರುವ, ರಾಜಕೀಯ ಪಕ್ಷಗಳ ಕುರಿತು ಇರುವ ಕಾನೂನು ಮತ್ತು ತೆರಿಗೆ ಪ್ರಕ್ರಿಯೆಯ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅದು ಯಥಾಸ್ಥಿತಿ ಮುಂದುವರಿಯತ್ತದೆ ಎಂದವರು ವಿವರಿಸಿದ್ದಾರೆ. ರಾಜಕೀಯ ಪಕ್ಷಗಳ ಬ್ಯಾಂಕ್ ಠೇವಣಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸರಕಾರ ನಿರ್ಧರಿಸಿಲ್ಲ ಮತ್ತು ಈ ಬಗ್ಗೆ ಯಾವುದೇ ಯೋಜನೆ ಕೂಡಾ ಹೊಂದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳಲ್ಲಿ ಇಡುವ ಠೇವಣಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಶುಕ್ರವಾರ ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲವಾಸಾ ಘೋಷಿಸಿದ್ದರು. ಇದೀಗ ಈ ಬಗ್ಗೆ ವಿತ್ತ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.