×
Ad

ಆರೋಪ ಸಾಬೀತಿಗೆ ಪುರಾವೆ ಇಲ್ಲ: ಮಾನವ ಹಕ್ಕುಗಳ ಕಾರ್ಯಕರ್ತನ ಬಿಡುಗಡೆ

Update: 2016-12-20 20:58 IST

ತಿರುವನಂತಪುರಂ, ಡಿ.20: ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿರುವರೆಂಬ ಶಂಕೆಯ ಮೇಲೆ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದ ಮಾನವ ಹಕ್ಕುಗಳ ಕಾರ್ಯಕರ್ತ ನದೀರ್ ಗುಲ್ ಮುಹಮ್ಮದ್ ಎಂಬವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

   ಆರೋಪ ಸಾಬೀತುಪಡಿಸುವಂತಹ ಯಾವುದೇ ಪುರಾವೆ ಲಭ್ಯವಾಗದ ಕಾರಣ ನದೀರ್‌ರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಝಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ಸಾಹಿತಿ ಮತ್ತು ರಂಗನಟ ಕಮಲ್ ಸಿ.ಚವಾರ ಅವರನ್ನು ಭೇಟಿಯಾಗಲು ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ನದೀರ್‌ರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ಇದನ್ನು ವಿರೋಧಿಸಿ ಕಮಲ್ ಚವಾರಾ ಠಾಣೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಚವಾರಾ ವಿರುದ್ಧ ಕಾನೂನು ವಿರೋಧಿ ಕೃತ್ಯ ತಡೆ (ಯುಎಪಿಎ) ಕಾಯ್ದೆ ಅನ್ವಯ ಯಾವುದೇ ಪ್ರಕರಣ ದಾಖಲಾಗಿಲ್ಲ. ಸೆಕ್ಷನ್ 124 ಎ (ದೇಶದ್ರೋಹ) ದಡಿ ಪ್ರಕರಣ ದಾಖಲಾಗಿದೆ. ಆದರೆ ಈ ಆರೋಪ ಕೋರ್ಟಿನಲ್ಲಿ ಸಾಬೀತಾಗದು ಎಂದು ಡಿಜಿಪಿ ಲೋಕನಾಥ್ ಬೆಹಾರಾ ತಿಳಿಸಿದ್ದಾರೆ. ಕಮಲ್ ಚವಾರಾ ಮತ್ತು ನದೀಮ್ ಇಬ್ಬರನ್ನೂ ಬಂಧಿಸಲಾಗಿದೆ ಎಂಬ ಮಾಧ್ಯಮದ ವರದಿಯನ್ನು ಅವರು ನಿರಾಕರಿಸಿದ್ದಾರೆ. ಕಮಲ್‌ರನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಅವರು ಪೊಲೀಸ್ ಕಸ್ಟಡಿಯಲ್ಲಿಲ್ಲ ಎಂದಿರುವ ಅವರು, ಆರ್ಲಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ‘ಮನೆಗೆ ನುಗ್ಗಿ ಸುಲಿಗೆ ನಡೆಸಲು ಯತ್ನ’ ಪ್ರಕರಣಕ್ಕೆ ಸಂಬಂಧಿಸಿ ವಿವರಣೆ ನೀಡುವಂತೆ ನದೀರ್‌ರನ್ನು ಠಾಣೆಗೆ ಕರೆಸಲಾಗಿದೆ. ಅವರ ಹೇಳಿಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News