ಲಿಬಿಯಾದ ವಿಮಾನ ಅಪಹರಣ: ಸಂಧಾನದ ಬಳಿಕ ಎಲ್ಲ ಪ್ರಯಾಣಿಕರ ಬಿಡುಗಡೆ

Update: 2016-12-23 17:51 GMT

ವ್ಯಾಲೆಟಾ, ಡಿ.23: ಲಿಬಿಯಾದ ಸೆಭಾ ನಗರದಿಂದ ಟ್ರಿಪೋಲಿಗೆ 111 ಪ್ರಯಾಣಿಕರು ಮತ್ತು 7 ಸಿಬ್ಬಂದಿ ವರ್ಗದವರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದನ್ನು ಅಪಹರಿಸಿದ್ದು, ಮಾಲ್ಟಾಕ್ಕೆ ಕೊಂಡೊಯ್ಯಲಾಗಿದೆ. ಈ ಮಧ್ಯೆ ವಿಮಾನ ಅಪಹರಣಕಾರರ ಜೊತೆ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ಎಲ್ಲ ಪ್ರಯಾಣಿಕರನ್ನೂ ಬಿಡುಗಡೆ ಮಾಡಿದ್ದಾರೆ. ಇಬ್ಬರು ಅಪಹರಣಕಾರರು ಶರಣಾಗತರಾಗಿದ್ದು, ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

 ಗ್ರೆನೇಡ್‌ಗಳನ್ನು ಹೊಂದಿರುವ ಇಬ್ಬರು ಅಪಹರಣಕಾರರು ಮತ್ತು 7 ಮಂದಿ ಸಿಬ್ಬಂದಿ ವಿಮಾನದಲ್ಲಿದ್ದು, ಅಪಹರಣಕಾರರು ವಿಮಾನವನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು. ಆದರೆ, ಸಂದಾನ ಮಾತುಕತೆಯ ಬಳಿಕ ಅವರು ಶರಣಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಹರಣಕಾರರು ಲಿಬಿಯಾದ ಮಾಜಿ ಆಡಳಿತಗಾರ ಮುಮ್ಮರ್ ಗದಾಫಿಯ ಬೆಂಬಲಿಗರೆಂದು ಹೇಳಲಾಗಿದೆ.

 ಮುಮ್ಮರ್ ಗದಾಫಿಯನ್ನು 2011ರಲ್ಲಿ ಪದಚ್ಯುತ ಗೊಳಿಸಿದ ಬಳಿಕ ದೇಶದಲ್ಲಿ ಅಶಾಂತ ಪರಿಸ್ಥಿತಿ ಮುಂದು ವರಿದಿದ್ದು ದೇಶದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸೇನೆ ಹೆಣಗುತ್ತಿದೆ. ದೇಶದೊಳಗೆ ಹಾರಾಟ ನಡೆಸುತ್ತಿದ್ದ ಈ ವಿಮಾನದಲ್ಲಿ ಒಂದು ನವಜಾತ ಹಸುಳೆಯೂ ಸೇರಿ 111 ಪ್ರಯಾಣಿಕರು ಮತ್ತು 7 ಮಂದಿ ಸಿಬ್ಬಂದಿ ವರ್ಗದವರಿದ್ದರು. ಟ್ರಿಪೋಲಿಯಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಕಂಟ್ರೋಲ್ ರೂಂಗೆ ಕರೆ ಮಾಡಿದ ಪೈಲೆಟ್, ವಿಮಾನ ಹೈಜಾಕ್ ಆಗಿರುವುದಾಗಿ ತಿಳಿಸಿದ್ದು ಬಳಿಕ ಪೈಲೆಟ್‌ನೊಂದಿಗೆ ಸಂಪರ್ಕ ಸಾಧ್ಯವಾಗಲಿಲ್ಲ ಎಂದು ವಿಮಾನ ನಿಲ್ದಾಣದ ಹಿರಿಯ ಭದ್ರತಾ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಬಳಿಕ ವಿಮಾನವನ್ನು ಮಾಲ್ಟಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಈ ವೇಳೆ ವಿಮಾನದಲ್ಲಿದ್ದ ಇಬ್ಬರು ಅಪಹರಣಕಾರರೊಂದಿಗೆ ಸಂಧಾನ ಮಾತುಕತೆ ನಡೆದಿದ್ದು ಮಹಿಳೆಯರು, ಒಂದು ನವಜಾತ ಶಿಶು ಸೇರಿದಂತೆ 100 ಮಂದಿಯನ್ನು ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಿದ್ದಾರೆ. ಬಳಿಕ ಸಂಧಾನ ಮಾತುಕತೆ ಮುಂದುವರಿದಾಗ ಉಳಿದ 11 ಮಂದಿ ಪ್ರಯಾಣಿಕರನ್ನು ಮತ್ತು 7 ಮಂದಿ ಸಿಬ್ಬಂದಿ ವರ್ಗದವರನ್ನು ಬಿಡುಗಡೆ ಮಾಡಿದರು.

  ಮಾಲ್ಟಾ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಟುವಟಿಕೆಗಳ ಮಾಹಿತಿ ಬಂದಿದೆ. ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮಾಲ್ಟಾ ಅಂತಾರಾಷ್ಟ್ರೀಯ ವಾಯುಪಡೆಯ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಮಾಲ್ಟಾ ವಿಮಾನ ನಿಲ್ದಾಣದಲ್ಲಿ ಬ್ರಸೆಲ್ಸ್, ಲಂಡನ್ ಮತ್ತು ಪ್ಯಾರಿಸ್‌ನಿಂದ ಆಗಮಿಸುವ ವಿಮಾನಗಳು ಇಳಿಯುವ ಕಾರಣ ವಿಮಾನ ನಿಲ್ದಾಣದಲ್ಲಿ ಆತಂಕದ ಪರಿಸ್ಥಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News