×
Ad

ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ-ಪಾಕಿಸ್ತಾನ ಬಾಕ್ಸಿಂಗ್ ಡೇ ಟೆಸ್ಟ್ ಇಂದು ಶುರು

Update: 2016-12-25 23:52 IST

ಮೆಲ್ಬೋರ್ನ್, ಡಿ.25: ಕ್ರಿಸ್‌ಮಸ್ ಮರುದಿನ ನಡೆಯಲಿರುವ ಸಾಂಪ್ರದಾಯಿಕ ‘ಬಾಕ್ಸಿಂಗ್ ಡೇ’ ಟೆಸ್ಟ್‌ಗೆ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ಸಜ್ಜಾಗಿದೆ. ಎಂಸಿಜಿಯಲ್ಲಿ ಸೋಮವಾರ ಆರಂಭವಾಗಲಿರುವ 2ನೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕ್‌ನ ಯುವ ಬ್ಯಾಟ್ಸ್‌ಮನ್ ಅಸದ್ ಶಫೀಕ್ ಅವರ ವೀರೋಚಿತ ಪ್ರದರ್ಶನದ ಹೊರತಾಗಿಯೂ ಜಯಭೇರಿ ಬಾರಿಸಿತ್ತು.

ಪ್ರವಾಸಿ ತಂಡ ಪಾಕ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 142 ರನ್ ಗಳಿಸಿ ಆಲೌಟಾಗಿತ್ತು. ಮೊದಲ ಪಂದ್ಯ ಗೆಲ್ಲಲು 490 ರನ್ ಗುರಿ ಪಡೆದಿದ್ದ ಪಾಕ್ ಶಫೀಕ್ ಬಾರಿಸಿದ ಆಕರ್ಷಕ ಶತಕದ(137) ನೆರವಿನಿಂದ ಕೊನೆಯ ತನಕ ಹೋರಾಟ ನೀಡಿ 450 ರನ್‌ಗೆ ಆಲೌಟಾಯಿತು. ಕೇವಲ 39 ರನ್‌ಗಳ ಅಂತರದಿಂದ ಶರಣಾಗಿತ್ತು.

ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಕೇವಲ 15 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಿವರ್ಸ್ ಸ್ವಿಂಗ್‌ಗೆ ಹೆಸರುವಾಸಿಯಾಗಿರುವ ಎಂಸಿಜಿ ಪಿಚ್‌ನಲ್ಲಿ ಆಸ್ಟ್ರೇಲಿಯ ತಂಡ ಪಾಕ್ ಮೇಲೆ ಸವಾರಿ ಮಾಡಲು ಎದುರು ನೋಡುತ್ತಿದೆ.

ಅಂಕಿ-ಅಂಶ: *ಪಾಕಿಸ್ತಾನ ತಂಡ ಎಂಸಿಜಿಯಲ್ಲಿ 1979 ಹಾಗೂ 1981ರಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು. ಆ ಬಳಿಕ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ 3ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ. 2009ರಲ್ಲಿ ಕೊನೆಯ ಬಾರಿ ಈ ಮೈದಾನದಲ್ಲಿ ಆಡಿದೆ.

*ಪಾಕ್-ಆಸೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಯೂನಿಸ್‌ಖಾನ್ 14ನೆ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಮಾರ್ಕ್ ಹಾಗೂ ಸ್ಟೀವಾ, ಮಿಚೆಲ್ ಸ್ಲಾಟರ್ ಹಾಗೂ ಕಿಮ್ ಹ್ಯೂಸ್‌ರನ್ನು ಹಿಂದಕ್ಕೆ ತಳ್ಳಿ ಅಗ್ರ-10ರಲ್ಲಿ ಸ್ಥಾನ ಪಡೆಯಲಿದ್ದಾರೆ.

*ಪಾಕಿಸ್ತಾನ 1995ರ ಬಳಿಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿಲ್ಲ. 95ರ ಬಳಿಕ ಆಸೀಸ್‌ನ ವಿರುದ್ಧ ಸತತ 10 ಪಂದ್ಯಗಳಲ್ಲಿ ಸೋತಿದೆ. ಪಾಕ್ ತಂಡ ಕಾಂಗರೂ ನಾಡಿನಲ್ಲಿ ಈ ತನಕ ಟೆಸ್ಟ್ ಸರಣಿ ಜಯಿಸಿಲ್ಲ.

*ಆಸೀಸ್ ವಿರುದ್ಧ ಪಾಕ್ ಸಾಧಿಸಿರುವ 4 ಪಂದ್ಯಗಳ ಗೆಲುವಿನ ಪೈಕಿ ಎರಡು ಗೆಲುವನ್ನು ಎಂಸಿಜಿಯಲ್ಲಿ ಸಾಧಿಸಿದೆ.

*ಮಿಸ್ಬಾವುಲ್ ಹಕ್‌ಗೆ ಟೆಸ್ಟ್ ವೃತ್ತಿಜೀವನದಲ್ಲಿ 5,000 ರನ್ ಪೂರೈಸಲು ಇನ್ನೂ 116 ರನ್‌ಗಳ ಅಗತ್ಯವಿದೆ. ಡೇವಿಡ್ ವಾರ್ನರ್‌ಗೆ 5,000 ರನ್ ಪೂರೈಸಲು 51 ರನ್ ಅಗತ್ಯವಿದೆ.

ಟೀಮ್ ನ್ಯೂಸ್

ಆಸ್ಟ್ರೇಲಿಯ: ಮೂವರು ವೇಗಿಗಳ ಜೊತೆಗೆ ಆಲ್‌ರೌಂಡರ್ ಕಾರ್ಟ್‌ರೈಟ್‌ರನ್ನು ಬೌಲಿಂಗ್ ವಿಭಾಗಕ್ಕೆ ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ಆಸ್ಟ್ರೇಲಿಯ ಯೋಚಿಸುತ್ತಿದೆ. ಆಸೀಸ್‌ನ ಮೂವರು ವೇಗಿಗಳು ಮೊದಲ ಟೆಸ್ಟ್‌ನಲ್ಲಿ ಸಾಕಷ್ಟು ಓವರ್ ಬೌಲಿಂಗ್ ಮಾಡಿದ್ದರು. ಕಾರ್ಟ್‌ರೈಟ್ ಸೇರ್ಪಡೆ ಹೊರತುಪಡಿಸಿ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿದೆ.

ಪಾಕಿಸ್ತಾನ: ಬಲಗೈ ಬೌಲರ್ ರಾಹತ್ ಅಲಿ ಬದಲಿಗೆ ಇಮ್ರಾನ್ ಖಾನ್ ಪಾಕಿಸ್ತಾನದ ಅಂತಿಮ 11ರ ಬಳಗ ಸೇರುವ ನಿರೀಕ್ಷೆಯಿದೆ.

ಆಸ್ಟ್ರೇಲಿಯ: ಮ್ಯಾಟ್ ರೆನ್‌ಶಾ, ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್(ನಾಯಕ), ಪೀಟರ್ ಹ್ಯಾಂಡ್ಸ್‌ಕಾಂಬ್, ನಿಕ್ ಮ್ಯಾಡಿನ್ಸನ್, ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಕ್, ಜೊಶ್ ಹೇಝಲ್‌ವುಡ್, ನಥನ್ ಲಿಯೊನ್, ಜಾಕ್ಸನ್ ಬರ್ಡ್.

ಪಾಕಿಸ್ತಾನ: ಸಮಿ ಅಸ್ಲಾಂ, ಅಝರ್ ಅಲಿ, ಬಾಬರ್ ಆಝಂ, ಯೂನಿಸ್ ಖಾನ್, ಮಿಸ್ಬಾವುಲ್ ಹಕ್(ನಾಯಕ), ಅಸದ್ ಶಫೀಕ್, ಸರ್ಫರಾಝ್ ಅಹ್ಮದ್, ವಹಾಬ್ ರಿಯಾಝ್, ಯಾಸಿರ್ ಷಾ, ಮುಹಮ್ಮದ್ ಆಮಿರ್, ರಾಹತ್ ಅಲಿ/ ಇಮ್ರಾನ್ ಖಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News