ಮುಂಬೈಯಲ್ಲಿ ಭವ್ಯ ಸ್ಮಾರಕ: ಯಾವ ಶಿವಾಜಿಗೆ? ಯಾರ ಶಿವಾಜಿಗೆ?

Update: 2016-12-26 05:59 GMT

ಮೀನುಗಾರರು, ಪರಿಸರವಾದಿಗಳ ವ್ಯಾಪಕ ವಿರೋಧಗಳ ನಡುವೆ ಮುಂಬಯಿಯ ಸಮುದ್ರದ ಮಧ್ಯೆ 16 ಎಕರೆ ಪ್ರದೇಶದಲ್ಲಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಲು ನರೇಂದ್ರ ಮೋದಿಯವರು ಶಂಕು ಸ್ಥಾಪನೆ ನೆರವೇರಿಸಿದರು. ಇಡೀ ಯೋಜನೆಯ ವೆಚ್ಚವೆಷ್ಟು ಗೊತ್ತೆ! 3,600 ಕೋಟಿ ರೂಪಾಯಿ. ಸಮುದ್ರದ ಜಲಚರಗಳೂ ಸೇರಿದಂತೆ ಪರಿಸರಕ್ಕಾಗುವ ಹಾನಿಯ ಬೆಲೆಯನ್ನು ಇಲ್ಲಿ ಕಟ್ಟುವುದಕ್ಕೆ ಸಾಧ್ಯವಿಲ್ಲ.

ಇದೊಂದು ಕೈಗಾರಿಕೆಯೋ, ಬೃಹತ್ ಉದ್ಯಮವೋ, ಸಾರ್ವಜನಿಕರಿಗೆ ಉದ್ಯೋಗಗಳನ್ನು ನೀಡುವ ಇನ್ಯಾವ ಯೋಜನೆಯೋ ಆಗಿದ್ದರೂ ಸಮರ್ಥಿಸಲು ಒಂದಿಷ್ಟು ಅವಕಾಶಗಳಿತ್ತೇನೋ. ಆದರೆ ಇದೊಂದು ಅಪ್ಪಟ ರಾಜಕೀಯ ಅಜೆಂಡಾ ಹೊಂದಿರುವ ಯೋಜನೆ.

ನೋಟು ನಿಷೇಧದಿಂದಾಗಿ ಜನ ಸಾಮಾನ್ಯರು ತತ್ತರಿಸಿ ಕೂತಿರುವ ಹೊತ್ತಿನಲ್ಲಿ, ಸಣ್ಣ ಪುಟ್ಟ ಉದ್ದಿಮೆಗಳು ಸಂಪೂರ್ಣ ಮುಳುಗಿ ಹೋಗಿರುವ ಹೊತ್ತಿನಲ್ಲಿ ನರೇಂದ್ರ ಮೋದಿ, ಅವರೆಲ್ಲರ ಸಂಕಟಗಳನ್ನು, ನೋವುಗಳನ್ನು ಅಣಕಿಸುವಂತೆ ಈ ಬೃಹತ್ ಯೋಜನೆಗೆ ಶಂಕುಸ್ಥಾಪನೆಯನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮಾರಕದ ಕುರಿತಂತೆ ಬಿಜೆಪಿಯ ಮಿತ್ರ ಪಕ್ಷವಾಗಿರುವ ಶಿವಸೇನೆಯೂ ಒಂದು ಸಣ್ಣ ತಕರಾರು ತೆಗೆದಿದೆ.

‘‘ಬಿಜೆಪಿಯು ಶಿವಾಜಿಯನ್ನು ಹೈಜಾಕ್ ಮಾಡುತ್ತಿದೆ’’ ಎನ್ನುವುದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಂಕಟ. ಅಂದರೆ ಮಹಾರಾಷ್ಟ್ರದಲ್ಲಿ ಶಿವಾಜಿಯ ಹೆಸರಿಗಾಗಿ ರಾಜಕೀಯ ತಿಕ್ಕಾಟ ನಡೆಯುತ್ತಿದೆ. ಈವರೆಗೆ ಶಿವಾಜಿಯನ್ನು ಹೈಜಾಕ್ ಮಾಡಿ ರಾಜಕೀಯ ಪಕ್ಷವಾಗಿ ಬೆಳೆದಿರುವುದು ಶಿವಸೇನೆ. ಇಂದು ಮಹಾರಾಷ್ಟ್ರದಲ್ಲಿ ತನ್ನ ಬೇರನ್ನು ಗಟ್ಟಿಯಾಗಿ ಇಳಿಸಿಕೊಂಡು, ಶಿವಸೇನೆಯ ಸಹವಾಸದಿಂದ ಮುಕ್ತವಾಗುವ ಹವಣಿಕೆಯಲ್ಲಿದೆ ಬಿಜೆಪಿ.

ಈ ಕಾರಣದಿಂದಲೇ ಶಿವಸೇನೆಯನ್ನು ಆದಷ್ಟು ದೂರ ಉಳಿಸಿ ಈ ಮೂರು ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸ್ಮಾರಕದ ಶಂಕುಸ್ಥಾಪನೆಯ ಸರ್ವ ಹೆಗ್ಗಳಿಕೆಯನ್ನು ತಾನೇ ತೆಗೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಾಜಿಯ ಮೂಲಕ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದೆ.

ಈ ಹಿಂದೆ ಸಂಘಪರಿವಾರ ಭಗತ್ ಸಿಂಗ್‌ನನ್ನು ಹೈಜಾಕ್ ಮಾಡಲು ಹೋಗಿ ಸಂಪೂರ್ಣ ವಿಫಲವಾಗಿತ್ತು. ಆದರೆ ಶಿವಾಜಿಯನ್ನು ಮತ್ತು ವಿವೇಕಾನಂದರನ್ನು ಹೈಜಾಕ್ ಮಾಡುವಲ್ಲಿ ಮಾತ್ರ ಸಂಘಪರಿವಾರ ಸರ್ವರೀತಿಯಲ್ಲಿ ಯಶಸ್ವಿಯಾಯಿತು. ಭಗತ್ ಸಿಂಗ್‌ನನ್ನು ಎಡಪಂಥೀಯ ನಾಯಕರು ತಮ್ಮ ಐಕಾನ್ ಆಗಿ ಬಳಸಿಕೊಂಡಿದ್ದರಿಂದ ಸಂಘಪರಿವಾರದ ಆಟ ನಡೆಯಲಿಲ್ಲ.

ಆದರೆ ಶಿವಾಜಿಯ ಮತ್ತು ವಿವೇಕಾನಂದರ ವಿಷಯದಲ್ಲಿ ಯಾವ ರಾಜಕೀಯ ಪಕ್ಷಗಳೂ ಆಸಕ್ತಿ ತೋರಿಸದೇ ಇದ್ದುದರಿಂದ ಹಾಗೂ ಪ್ರಗತಿಪರರು ಈ ಕುರಿತಂತೆ ವೌನವಾಗಿದ್ದುದರಿಂದ, ಇಂದು ತನ್ನ ಅಜೆಂಡಾಗಳಿಗೆ ಪೂರಕವಾಗಿ ಶಿವಾಜಿಯ ಬದುಕು ಮತ್ತು ಇತಿಹಾಸವನ್ನು ವಿರೂಪಗೊಳಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ. ಶಿವಾಜಿಯ ಹೆಸರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕ, ಈ ವಿರೂಪಗೊಂಡ ಶಿವಾಜಿಯನ್ನು ಜನರಲ್ಲಿ ಭಾವನಾತ್ಮಕವಾಗಿ ಗಟ್ಟಿಗೊಳಿಸುವುದರ ಭಾಗವಾಗಿದೆ.

   ಇಂದು ಸಂಘಪರಿವಾರ, ಬಿಜೆಪಿ, ಶಿವಸೇನೆಯವರಿಗೆ ಶಿವಾಜಿ ಯಾಕೆ ಮುಖ್ಯವಾಗಿದ್ದಾನೆಂದರೆ, ಆತ ಮುಸ್ಲಿಮರ ವಿರುದ್ಧ ಅದರಲ್ಲೂ ಮುಸ್ಲಿಮ್ ರಾಜರ ವಿರುದ್ಧ ಹೋರಾಡಿದ ಎಂಬ ಕಾರಣಕ್ಕಾಗಿ. ಇಂದು ಸಾರ್ವಜನಿಕವಾಗಿ ಮುಸ್ಲಿಮ್ ದ್ವೇಷವನ್ನು ಹರಡುವುದಕ್ಕಾಗಿ ಬಿಜೆಪಿ ಮತ್ತು ಶಿವಸೇನೆಗೆ ಶಿವಾಜಿ ಬೇಕು. ತಮ್ಮ ಹಿಂದುತ್ವದ ಪ್ರಚಾರಕ್ಕಾಗಿ ಶಿವಾಜಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

ಆದರೆ ಶಿವಾಜಿ ಯಾವತ್ತೂ ಹಿಂದೂ ಹೆಸರಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯನ್ನು ಮಾಡಿರಲೇ ಇಲ್ಲ. ಶಿವಾಜಿ ತಳಸ್ತರದಿಂದ ಮೇಲೆದ್ದು, ತಳಸ್ತರದ ಜನರನ್ನೇ ಸಂಘಟಿಸಿ ತನ್ನ ಸಾಮ್ರಾಜ್ಯವನ್ನು ಕಟ್ಟಿದ. ಅವನು ಕಟ್ಟಿದ ಪಡೆಯಲ್ಲಿ ಬಹುಸಂಖ್ಯಾತರು ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರೇ ಇದ್ದರು.

ಮುಖ್ಯವಾಗಿ ಅವರ ಹೋರಾಟ, ಯುದ್ಧಗಳಲ್ಲಿ ಪ್ರಧಾನ ಪಾತ್ರವಹಿಸಿದ 11 ಮಂದಿ ಸರದಾರರೂ ಮುಸ್ಲಿಮರಾಗಿದ್ದರು. 1672ರಲ್ಲಿ ಇಂಗ್ಲಿಷ್ ಅಧಿಕಾರಿ ಜಾನ್ ಫೈರ್ ಅವರು ಬ್ರಿಟಿಷ್ ರಾಣಿಗೆ ಬರೆದ ಪತ್ರದಲ್ಲಿ, ಶಿವಾಜಿಯ ಸೇನೆಯಲ್ಲಿ 66 ಸಾವಿರ ಮುಸ್ಲಿಮ್ ಸೇನಾನಿಗಳಿದ್ದರು ಎನ್ನುವುದನ್ನು ಉಲ್ಲೇಖಿಸುತ್ತಾನೆ.

ಶಿವಾಜಿಯ ಹೋರಾಟ ಮುಸ್ಲಿಮ್ ರಾಜರ ವಿರುದ್ಧವೇ ಆಗಿದ್ದಿದ್ದರೆ, ಅದು ಹಿಂದುತ್ವದ ಪರ ಹೋರಾಟವೇ ಆಗಿದ್ದಿದ್ದರೆ, ಆ ಸೇನೆಯಲ್ಲಿ ಮುಸ್ಲಿಮರು ಹೇಗೆ ತಾನೇ ಸೇರ್ಪಡೆಯಾಗುತ್ತಿದ್ದರು ಅಥವಾ ಮುಸ್ಲಿಮರನ್ನು ಶಿವಾಜಿ ಯಾಕಾಗಿ ಸೇರ್ಪಡೆಗೊಳಿಸುತ್ತಿದ್ದ? ಶಿವಾಜಿ ತನ್ನ ಸೇನೆಯಲ್ಲಿ ಯಾವತ್ತೂ ಜಾತೀಯತೆಯನ್ನು ಹರಡಿದವನಲ್ಲ.

ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ. ಮುಸ್ಲಿಮ್ ಸೇನಾನಿಗಳಿಗೆ ನಮಾಝಿಗಾಗಿ ವಿಶೇಷ ಮಸೀದಿಯೊಂದನ್ನು ಕಟ್ಟಿಸಿದ್ದ. ಶಿವಾಜಿಯ ಹೋರಾಟ ಯಾವತ್ತೂ ಹಿಂದುತ್ವದ ವಾಸನೆಯನ್ನೂ ಹೊಂದಿರಲಿಲ್ಲ ಎನ್ನುವುದಕ್ಕೆ ಇನ್ನೊಂದು ಪ್ರಮುಖ ಉದಾಹರಣೆಯನ್ನು ತೆಗೆದುಕೊಳ್ಳಬಹುದು.

ಅಫ್ಝಲ್ ಖಾನ್ ಮತ್ತು ಶಿವಾಜಿಯ ಮುಖಾಮುಖಿಯ ಸಂದರ್ಭದಲ್ಲಿ ಶಿವಾಜಿಗೆ ಅಂಗರಕ್ಷಕರಾಗಿದ್ದವರಲ್ಲಿ ಒಬ್ಬ ಮುಸ್ಲಿಮ್ ಯೋಧನಾಗಿದ್ದರೆ ಇನ್ನೊಬ್ಬ ದಲಿತ ಯೋಧನಾಗಿದ್ದ. ಇದೇ ಸಂದರ್ಭದಲ್ಲಿ ಅಫ್ಝಲ್ ಖಾನ್‌ನ ಅಂಗರಕ್ಷಕನಾಗಿದ್ದವನು ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ. ಅಫ್ಝಲ್ ಖಾನ್‌ನನ್ನು ಶಿವಾಜಿ ಕೊಲ್ಲುವ ಸಂದರ್ಭದಲ್ಲಿ ಕುಲಕರ್ಣಿ ಶಿವಾಜಿಯ ಮೇಲೆ ದಾಳಿ ಮಾಡುತ್ತಾನೆ.

ಈ ಸಂದರ್ಭದಲ್ಲಿ ದಲಿತ ಯೋಧ ಧಾವಿಸಿ ಕುಲಕರ್ಣಿಯನ್ನು ಕೊಂದು ಹಾಕುತ್ತಾನೆ. ಶಿವಾಜಿ ಬದುಕಿರುವವರೆಗೆ ಮೇಲ್ವರ್ಣಿಯರು, ವೈದಿಕರು ಶಿವಾಜಿಯನ್ನು ಮಹಾರಾಜನೆಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಶಿವಾಜಿ ಕೆಳಜಾತಿ ಬೋಸಲೆ ಸಮುದಾಯಕ್ಕೆ ಸೇರಿದವನಾಗಿದ್ದ. ಹಾಗೆಯೇ ಶಿವಾಜಿಯನ್ನು ಸೋಲಿಸಿ ಆತನನ್ನು ಆಗ್ರಾದ ಜೈಲಿನಲ್ಲಿಟ್ಟಿದ್ದು ಮೊಗಲರ ಸೇನಾಧಿಪತಿಯಾಗಿದ್ದ ರಾಜಾ ಜಯಸಿಂಹ.

ರಾಜಾ ಜಯಸಿಂಹನ ಸೇನೆಯಲ್ಲಿ ರಜಪೂತರು, ಜಾಠರು, ಮರಾಠರು ವ್ಯಾಪಕ ಸಂಖ್ಯೆಯಲ್ಲಿದ್ದರು. ಆಗ್ರಾದಿಂದ ಶಿವಾಜಿಯ ಬಿಡುಗಡೆಗೆ ಮುಸ್ಲಿಮ್ ಸೇನಾನಿಗಳ ಪಾತ್ರ ಬಹುದೊಡ್ಡದು. ಶಿವಾಜಿಯ ಸೋಲಿಗಾಗಿ ಜಯಸಿಂಹ ನಡೆಸಿದ ಮಹಾಯಜ್ಞದಲ್ಲಿ ನಾನೂರು ಬ್ರಾಹ್ಮಣರು ಭಾಗವಹಿಸಿದ್ದರು.  

ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ತಿಂಗಳ ಕಾಲ ಈ ಯಜ್ಞ ನಡೆಯಿತು. ಇದೇ ಯುದ್ದಲ್ಲಿ ಶಿವಾಜಿ ಮತ್ತು ಅವನ ಪುತ್ರ ಜಯಸಿಂಹನಿಗೆ ಸೆರೆ ಸಿಕ್ಕಿರುವುದು. ರಾಜಾ ರಾಯ ಸಿಂಗ್, ಸುಜನ್ ಸಿಂಗ್, ಹರಿಭಾನ್ ಸಿಂಗ್, ಉದಯಭಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರ ಸೇನ, ಭಾಜಿರಾವ್ ಚಂದ್ರರಾವ್ ಇವರೆಲ್ಲರೂ ಮೊಗಲರ ಪರವಾಗಿ ಶಿವಾಜಿಯ ವಿರುದ್ಧ ಹೋರಾಡಿದರು.

ಕಾರಣ ಒಂದೇ, ಶಿವಾಜಿ ಕೆಳಜಾತಿಯವನಾಗಿದ್ದ. ಅಂತಿಮವಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೂ ಬ್ರಾಹ್ಮಣರು ಅಸಹಕಾರ ಮಾಡಿದರು. ಯಾವ ಬ್ರಾಹ್ಮಣರೂ ಶಿವಾಜಿಯ ಪಟ್ಟಾಭಿಷೇಕಕ್ಕೆ ನೇತೃತ್ವ ನೀಡಲು ಒಪ್ಪಲಿಲ್ಲ. ಅಂತಿಮವಾಗಿ ದೂರದ ಕಾಶಿಯಿಂದ ಓರ್ವ ಬ್ರಾಹ್ಮಣನನ್ನು ಭಾರೀ ಪ್ರಮಾಣದ ಹಣದ ಆಮಿಷ ಒಡ್ಡಿ ಕರೆತರಲಾಯಿತು.

ಅನಂತರ, ಆ ಪಟ್ಟಾಭಿಷೇಕವೂ ವ್ಯರ್ಥವಾಗಿ, ಎರಡನೆ ಬಾರಿ ಶೈವಾಚರಣೆಯ ಕ್ರಮದಲ್ಲಿ ಪಟ್ಟಾಭಿಷೇಕ ಮಾಡಲಾಯಿತು. ಹೀಗೆ, ಶಿವಾಜಿ ಕುರುಬರು, ದಲಿತರು, ಮುಸ್ಲಿಮರು, ಆದಿವಾಸಿಗಳು ಇವರನ್ನೆಲ್ಲ ಸಂಘಟಿಸಿ ಒಂದು ಸಾಮ್ರಾಜ್ಯವನ್ನು ಕಟ್ಟಿದರೆ, ಬಳಿಕ ಶಿವಾಜಿಯಿಂದ ಆ ಸಾಮ್ರಾಜ್ಯವನ್ನು ಹೈಜಾಕ್ ಮಾಡಿಕೊಂಡು ಚಿತ್ಪಾವನ ಬ್ರಾಹ್ಮಣ್ಯ ಸಮುದಾಯಕ್ಕೆ ಸೇರಿದ ಪೇಶ್ವೆಗಳು ಬ್ರಾಹ್ಮಣದ ತಳಹದಿಯಲ್ಲಿ ಸಾಮ್ರಾಜ್ಯವನ್ನು ಕಟ್ಟಲು ಹೊರಟು ವಿಫಲರಾದರು. ಮುಂದೆ ಲೂಟಿ, ದರೋಡೆಗಳಿಗೆ ಈ ಪೇಶ್ವೆಗಳು ಹೆಸರಾದರು.

ಮರಾಠರ ದಾಳಿಗೆ ಶೃಂಗೇರಿ ಮಠ ಬಲಿಯಾದಾಗ ನೆರವಿಗೆ ಧಾವಿಸಿದ್ದು ಟಿಪ್ಪು ಸುಲ್ತಾನ್. ಪೇಶ್ವೇ ಆಡಲಿತದಲ್ಲಿ ಜಾತೀಯತೆ ಎಲ್ಲೆ ಮೀರಿತು. ಇದರ ವಿರುದ್ಧ ಮುಂದೆ ದಲಿತರು ದಂಗೆ ಎದ್ದು, ಬ್ರಿಟಿಷರ ಜೊತೆ ಕೈ ಜೋಡಿಸಿ ಈ ಪೇಶ್ವೆಗಳ ದುರಾಡಳಿತಕ್ಕೆ ಅಂತ್ಯ ಹಾಡಿದರು.

ಇಂದು ಸಂಘಪರಿವಾರ ಶಿವಾಜಿಯ ಪ್ರತಿಮೆಯನ್ನಷ್ಟೇ ನಮ್ಮ ಮುಂದಿಟ್ಟುಕೊಂಡು, ಚಿತ್ಪಾವನ ಪೇಶ್ವೆಗಳ ಚಿಂತನೆಗಳನ್ನು ನಮ್ಮ ನಡುವೆ ತುರುಕುತ್ತಿದ್ದಾರೆ. ಮೂರೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಶಿವಾಜಿಯ ಸ್ಮಾರಕ ನಿರ್ಮಿಸಿದರೂ, ನಮ್ಮ ನಡುವೆ ಅವರು ಬಿತ್ತುತ್ತಿರುವುದು ಶಿವಾಜಿಯ ಮೌಲ್ಯಗಳನ್ನಲ್ಲ, ಜಾತೀಯವಾದಿ ಪೇಶ್ವೆಗಳ ಮೌಲ್ಯಗಳನ್ನು. ಆದುದರಿಂದಲೇ ನಾವು ಈ ಸ್ಮಾರಕವನ್ನು ತಿರಸ್ಕರಿಸಬೇಕಾಗಿದೆ.

ವಿರೂಪಗೊಂಡ ಶಿವಾಜಿಯ ಮೌಲ್ಯಗಳನ್ನು ಮೇಲೆತ್ತಿ ನಿಲ್ಲಿಸಬೇಕಾಗಿದೆ. ಮುಸ್ಲಿಮರು, ಆದಿವಾಸಿಗಳು, ಕುರುಬರು, ಕೆಳಸಮುದಾಯದ ಜನರನ್ನು ಸಂಘಟಿಸಿದ ಶಿವಾಜಿಯಷ್ಟೇ ನವಭಾರತವನ್ನು ನಿರ್ಮಿಸುವುದಕ್ಕೆ ಸ್ಫೂರ್ತಿಯಾಗಬಲ್ಲ.

ಬಿಜೆಪಿ, ಶಿವಸೇನೆ, ಸಂಘಪರಿವಾರ ಹೈಜಾಕ್ ಮಾಡಿರುವ ನಕಲಿ ಶಿವಾಜಿ ಈ ದೇಶವನ್ನು ಜಾತಿ, ಧರ್ಮದ ಹೆಸರಲ್ಲಿ ಛಿದ್ರಮಾಡುವುದಕ್ಕಷ್ಟೇ ಬಳಕೆಯಾಗಬಲ್ಲ. ಆದುದರಿಂದಲೇ, ಶಿವಾಜಿಯ ಸ್ಮಾರಕ, ಒಂದು ದೊಡ್ಡ ಆರ್ಥಿಕ ಪೋಲು ಮಾತ್ರವಲ್ಲ, ಅದು ಬಿಜೆಪಿ ನಾಯಕರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಂಸ್ಕೃತಿ, ಇತಿಹಾಸಕ್ಕೆ ಬಗೆಯುವ ದ್ರೋಹವೂ ಕೂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News