ತನ್ನ ಸರ್ಕಾರವನ್ನು ಉರುಳಿಸಿದ ಗಿರಿಧರ್ ಗಮಾಂಗ್ ರನ್ನು ಭೇಟಿಯಾದಾಗ ವಾಜಪೇಯಿ ಮಾಡಿದ್ದೇನು ?

Update: 2016-12-26 08:04 GMT

ಹೊಸದಿಲ್ಲಿ, ಡಿ.26: ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನ. ಈ ನಾಯಕನ ಉದಾತ್ತ ಗುಣವನ್ನು ವಿವರಿಸುತ್ತದೆ ಈ ಒಂದು ದೃಷ್ಟಾಂತ. 1999ರ ಎಪ್ರಿಲ್ 17ರಂದು ವಾಜಪೇಯಿ ನೇತೃತ್ವದ ಅಂದಿನ ಎನ್ ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆಯಾದಾಗ ಲೋಕಸಭೆಯಲ್ಲಿ ಕೇವಲ ಒಂದು ಮತದ ಅಂತರದಿಂದ ವಿಶ್ವಾಸ ಮತ ಕಳೆದುಕೊಳ್ಳಲು ಆಗ ಒಡಿಶಾ ಮುಖ್ಯಮಂತ್ರಿ ಗಿರಿಧರ್ ಗಮಾಂಗ್ ಕಾರಣರಾಗಿದ್ದರೆಂದು ಹೇಳಲಾಗಿತ್ತು. ಕಾಂಗ್ರೆಸ್ ಪಕ್ಷದವರಾಗಿದ್ದ ಅವರು ಮುಖ್ಯಮಂತ್ರಿಯಾಗಿದ್ದ ಹೊರತೂ ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ಅಷ್ಟರ ತನಕ ರಾಜೀನಾಮೆ ನೀಡಿರಲಿಲ್ಲವಾದ ಕಾರಣ ಅವರು ಲೋಕಸಭೆಗೆ ಆಗಮಿಸಿ ಸರಕಾರದ ವಿರುದ್ಧ ಮತ ಚಲಾಯಿಸಿದ್ದರು. ವಾಜಪೇಯಿ ಸರಕಾರ ಅಧಿಕಾರ ಕಳೆದುಕೊಳ್ಳಲು ಹಲವು ಕಾರಣಗಳಿದ್ದವು ಎಂದು ಹೇಳಲಾಗುತ್ತಿದ್ದರೂ ಗಮಾಂಗ್ ಸರಕಾರದ ವಿರುದ್ಧ ಚಲಾಯಿಸಿದ ಮತ ಬಹುಚರ್ಚಿತ ವಿಷಯವಾಗಿತ್ತು.

ಮುಂದಿನ ಚುನಾವಣೆಯಲ್ಲಿಎನ್ ಡಿಎ ಜಯಭೇರಿ ಬಾರಿಸಿ ವಾಜಪೇಯಿ ಮತ್ತೆ ಪ್ರಧಾನಿಯಾಗಿದ್ದು ಈಗ ಇತಿಹಾಸ. ಈ ಸಂದರ್ಭ ಅಂದರೆ 1999ರ ಅಕ್ಟೋಬರ್ 29ರಂದು ಒಡಿಶಾ ರಾಜ್ಯವು ಭಯಂಕರ ಚಂಡಮಾರುತದ ಹಾವಳಿಗೆ ತುತ್ತಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಆಗ ವಾಜಪೇಯಿ ಚಂಡಮಾರುತದಿಂದುಂಟಾದ ನಷ್ಟವನ್ನು ಪರಿಶೀಲಿಸಲು ಒಡಿಶಾ ಭೇಟಿಗೆ ಬಂದಿದ್ದರು.

ಈ ಸಂದರ್ಭದ ತಮ್ಮ ಅನುಭವವನ್ನು ವಿವರಿಸಿರುವ ಗಮಾಂಗ್, "ನಾನು ಮಿಶ್ರ ಭಾವನೆಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ವಾಜಪೇಯಿಯವರನ್ನು ಬರಮಾಡಿಕೊಳ್ಳಲು ನಿಂತಿದ್ದಾಗ ಆಗ ವಾಜಪೇಯಿಯವರಿದ್ದ ವಿಮಾನ ಆಗಮಿಸಿ ಅದರಿಂದಿಳಿದ ವಾಜಪೇಯಿ ಅವರು ನನ್ನನ್ನು ನೋಡುತ್ತಲೇ ಮುಗುಳ್ನಗಲು ಆರಂಭಿಸಿದ್ದರು'' ಎಂದು ಹೇಳಿದ್ದಾರೆ. ನಂತರ ಭುವನೇಶ್ವರದಲ್ಲಿ ಅವರಿಬ್ಬರೂ ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಚಂಡಮಾರುತದಿಂದ ತತ್ತರಿಸಿ ಹೋಗಿದ್ದ ಒಡಿಶಾಗೆ ವಾಜಪೇಯಿಯವರು ಸಕಲ ರೀತಿಯಲ್ಲೂ ಸಹಾಯ ಮಾಡಿದ್ದರು ಎಂದು ಗಮಾಂಗ್ ನೆನಪಿಸಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News