2016ರಲ್ಲಿ ನಾವು ನಂಬಿಯೇ ಬಿಟ್ಟ ಟಾಪ್ ಟೆನ್ ಫೇಕ್ ನ್ಯೂಸ್‌ಗಳು

Update: 2016-12-27 04:38 GMT

ಕರೆನ್ಸಿಯಿಂದ ಹಿಡಿದು ಉಪ್ಪಿನವರೆಗೆ 2016ರಲ್ಲಿ ಬಹಳಷ್ಟು ಸುಳ್ಳುಸುದ್ದಿಗಳು ನಮ್ಮನ್ನು ನಂಬುವಂತೆ ಮಾಡಿಬಿಟ್ಟಿವೆ. ವಾಟ್ಸ್ ಅಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಂದ ಹಿಡಿದು ಮುಖ್ಯವಾಹಿನಿ ಮಾಧ್ಯಮ ವರೆಗೆ ಯಾವುದೂ ಇದರಿಂದ ಹೊರತಾಗಿಲ್ಲ. ಯುನೆಸ್ಕೊ, ಆರ್‌ಬಿಐನಂಥ ಸಂಸ್ಥೆಗಳು ಕೂಡಾ ವಾಸ್ತವ ಏನು ಎಂದು ಸ್ಪಷ್ಟಪಡಿಸಲು ಹೇಳಿಕೆ ನೀಡಬೇಕಾಯಿತು. ಫೇಸ್‌ಬುಕ್, ಗೂಗಲ್‌ನಂಥ ದೈತ್ಯ ಇಂಟರ್‌ನೆಟ್ ಕಂಪನಿಗಳು ಕೂಡಾ ಈ ಬಗ್ಗೆ ಗಮನ ಹರಿಸಬೇಕಾಯಿತು. ಯಾವುದಪ್ಪ ಅಂಥ ಸುಳ್ಳು ಸುದ್ದಿಗಳು ಎಂಬ ಕುತೂಹಲವೇ? ಇಲ್ಲಿದೆ ನೋಡಿ ಟಾಪ್ ಟೆನ್ ಫೇಕ್ ಸುದ್ದಿಗಳ ಪಟ್ಟಿ.

1. ಒಂದನೇ ಸ್ಥಾನದಲ್ಲಿರುವ ಸುಳ್ಳು ಸುದ್ದಿಯನ್ನು ಯುನೆಸ್ಕೊ ಹೆಸರು ದರ್ಬಳಕೆ ಮಾಡಿ ಹರಡಲಾಯಿತು. 2016ರ ಜೂನ್‌ನಲ್ಲಿ ಯುನೆಸ್ಕೊ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಪರಿಗಣಿಸಿದೆ ಎಂದು ಜಾಲತಾಣಗಳಲ್ಲಿ ಬಿಸಿ ಬಿಸಿ ಸುದ್ದಿ ಹಬ್ಬಿತ್ತು. ಆದರೆ ಅಂತಹ ಯಾವುದೇ ಘೋಷಣೆಯನ್ನು ಮಾಡಿರಲೇ ಇಲ್ಲ !

2. ಇಂಥದ್ದೇ ಇನ್ನೊಂದು ಸುದ್ದಿ, ಜನ ಗಣ ಮನ- ಭಾರತದ ರಾಷ್ಟ್ರಗೀತೆ ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಯುನೆಸ್ಕೊ ಮೆಚ್ಚುಗೆಗೆ ಪಾತ್ರವಾಗಿದೆ ಎಂಬ ಸುದ್ದಿ 2008ರಿಂದಲೇ ಹರಿದಾಡುತ್ತಿದ್ದರೂ, ಈ ವರ್ಷ ವ್ಯಾಪಕವಾಗಿ ಹರಿದಾಡಿ ಕೊನೆಗೆ ಯುನೆಸ್ಕೊ ಸ್ಪಷ್ಟನೆ ನೀಡಬೇಕಾಯಿತು.

3. ಇಷ್ಟಾದರೂ ಇಂಥದ್ದೇ ಸುಳ್ಳುಸುದ್ದಿಯ ಸರಣಿ ಮುಂದುವರಿಯಿತು. ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ 2000 ರೂಪಾಯಿ ನೋಟು, ವಿಶ್ವದ ಅತ್ಯುತ್ತಮ ನೋಟು ಎಂಬ ಯುನೆಸ್ಕೊ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸುಳ್ಳು ಸುದ್ದಿ ಹರಡಿತು. ಬಳಿಕ  ಇದೂ ಸುಳ್ಳು ಎಂದು ತಿಳಿದುಬಂತು

4. ಇದೇ ನೋಟಿಗೆ ಸಂಬಂಧಿಸಿದ ಮತ್ತೊಂದು ಗಾಳಿ ಸುದ್ದಿ, ಈ ನೋಟ್‌ನಲ್ಲಿ ಜಿಪಿಎಸ್ ಚಿಪ್ ಅಳವಡಿಸಲಾಗಿದೆ ಎನ್ನುವುದು. ಈ ಮೂಲಕ ಹೊಸ ನೋಟು ಎಲ್ಲಿದ್ದರೂ ಅದರ ಜಾಡು ಹಿಡಿಯಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕೆಲವು ಖ್ಯಾತ ಸುದ್ದಿ ಮಾಧ್ಯಮಗಳೂ  ಇದನ್ನೂ ಪ್ರಸಾರ ಮಾಡಿದವು.

5. ಈ 2000 ರೂಪಾಯಿ ಹಾಗೂ 500 ರೂಪಾಯಿ ನೋಟುಗಳಲ್ಲಿ ವಿಕಿರಣಶೀಲ ಶಾಯಿ ಬಳಸಲಾಗಿದೆ ಎಂಬುದು ವದಂತಿ ಇನ್ನೊಂದು ಪ್ರಮುಖ ಸುಳ್ಳು ಸುದ್ದಿ.

6. ಇನ್ನೊಂದು ಸುಳ್ಳುಸುದ್ದಿ ನಿಮ್ಮನ್ನು ಬೆಚ್ಚಿ ಬೀಳಿಸುವಂಥದ್ದು. ವಾಟ್ಸಪ್ ಪ್ರೊಫೈಲ್ ಚಿತ್ರಗಳನ್ನು ಐಸಿಸ್ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ದಿಲ್ಲಿ ಪೊಲೀಸ್ ಕಮಿಶೆನರ್ ಹೆಸರು ಬಳಸಿ ವ್ಯಾಪಕವಾಗಿ ಹರಡಲಾಗಿತ್ತು.

7. ಆರ್‌ಬಿಐ 10 ರೂಪಾಯಿ ನಾಣ್ಯದ ಚಲಾವಣೆ ರದ್ದುಪಡಿಸಿದೆ ಎಂಬ ವದಂತಿ ಕೂಡಾ ಎಷ್ಟು ದಟ್ಟವಾಗಿ ಹಬ್ಬಿತ್ತು ಎಂದರೆ ಕೊನೆಗೆ ಆರ್‌ಬಿಐ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು.

8. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟ ತಕ್ಷಣ, ಅವರ ಗುಪ್ತ ಮಗಳು ಅಮೆರಿಕದಲ್ಲಿ ವಾಸವಿದ್ದಾಳೆ ಎಂಬ ಸುಳ್ಳು ಸುದ್ದಿ ಹಾಗೂ ಚಿತ್ರ ವಾಟ್ಸ್ ಅಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

Full View

9. ಭಾರತದಲ್ಲಿ 7517 ಕಿಲೋಮೀಟರ್ ಕರಾವಳಿ ಇದ್ದರೂ, 2016ರ ನವೆಂಬರ್‌ನಲ್ಲಿ ಉಪ್ಪು ಕೊರತೆ ಇದೆ ಎಂಬ ಸುದ್ದಿ ಮಧ್ಯರಾತ್ರಿ ವೇಳೆಗೆ ಹುಟ್ಟಿಕೊಂಡು ಜನರ ನಿದ್ದೆಗೆಡಿಸಿತು. ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ಹೈದ್ರಾಬಾದ್‌ನಲ್ಲಿ ಜನ ಈ ಸುದ್ದಿ ನಂಬಿ ಅಂಗಡಿಗಳಿಗೆ ಧಾವಿಸಿ ಉಪ್ಪು ಖರೀದಿಸಿಟ್ಟುಕೊಂಡರು.

10. ಬಿಬಿಸಿ ಭಾರತ ಬ್ಯೂರೊ ಮುಖ್ಯಸ್ಥ ಮಾರ್ಕ್ ಟುಲ್ಲಿ, ಮೋದಿ ಸರ್ಕಾರವನ್ನು ಬೆಂಬಲಿಸಿ, ನೆಹರೂ ಸರ್ಕಾರವನ್ನು ಆಲದ ಮರಕ್ಕೆ ಹೋಲಿಸಿದ್ದಾರೆ ಎಂಬ ಸುದ್ದಿ ಇನ್ನೊಂದು. ಜನ ಹಾಗೂ ಸಂಸ್ಥೆಗಳ ಬೆಳವಣಿಗೆಯ ಮೇಲೆ ದಟ್ಟ ನೆರಳಾಗಿ ಈ ಸರ್ಕಾರ ಇತ್ತು ಎಂದು ಅವರು ಹೇಳಿದ್ದಾರೆ ಎಂಬ ಸುದ್ದಿ ಈ ತಿಂಗಳ ಆರಂಭದಲ್ಲಿ ಹಬ್ಬಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News