ರಣಜಿ ಟ್ರೋಫಿ: ಜಾರ್ಖಂಡ್ ಸೆಮಿಫೈನಲ್‌ಗೆ ಲಗ್ಗೆ
ಬರೋಡಾ, ಡಿ.26: ಹರ್ಯಾಣ ವಿರುದ್ಧ ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಜಾರ್ಖಂಡ್ ತಂಡ ಈ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ ಎರಡನೆ ತಂಡ ಎನಿಸಿಕೊಂಡಿತು. ಕರ್ನಾಟಕವನ್ನು ಮಣಿಸಿರುವ ತಮಿಳುನಾಡು ತಂಡ ಸೆಮಿಫೈನಲ್ ತಲುಪಿರುವ ಮೊದಲ ತಂಡವಾಗಿದೆ.
ನಾಲ್ಕನೆ ದಿನವಾದ ಸೋಮವಾರ ಗೆಲ್ಲಲು 176 ರನ್ ಗುರಿ ಪಡೆದಿದ್ದ ಜಾರ್ಖಂಡ್ ತಂಡ ಇಶಾನ್ ಕಿಶನ್‌ಗೆ ಭಡ್ತಿ ನೀಡಿತು. ಆನಂದ್ ಸಿಂಗ್(27) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕಿಶನ್(86 ರನ್, 61 ಎಸೆತ, 9 ಬೌಂಡರಿ, 6 ಸಿಕ್ಸರ್) ಮೊದಲ ವಿಕೆಟ್‌ಗೆ 95 ರನ್ ಸೇರಿಸಿ ಜಾರ್ಖಂಡ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಭಡ್ತಿ ನೀಡಿದ ನಾಯಕ ಸೌರಭ್ ತಿವಾರಿ ನಿರ್ಧಾರವನ್ನು ಸಮರ್ಥಿಸಿಕೊಂಡರು.
ವಿರಾಟ್ ಸಿಂಗ್(21) ಅವರೊಂದಿಗೆ 44 ರನ್ ಜೊತೆಯಾಟ ನಡೆಸಿದ ಕಿಶನ್ ಮೊತ್ತ ಮೊದಲ ಬಾರಿ ಜಾರ್ಖಂಡ್ ತಂಡ ರಣಜಿ ಸೆಮಿಫೈನಲ್‌ಗೆ ತಲುಪಲು ಕಾರಣರಾದರು. ಹರ್ಯಾಣದ ಪರ ಎಸ್‌ಎಂ ಪಟೇಲ್ ಹಾಗೂ ಯುರ್ವೆುಂದ್ರ ಸಿಂಗ್ ತಲಾ 2 ವಿಕೆಟ್ ಪಡೆದರು.
ಇದಕ್ಕೆ ಮೊದಲು 2 ವಿಕೆಟ್ ನಷ್ಟಕ್ಕೆ 146 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಹರ್ಯಾಣ ಒಂದು ಹಂತದಲ್ಲಿ 195 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಬಾಲಂಗೋಚಿಗಳ ನೆರವಿನಿಂದ 262 ರನ್ ಗಳಿಸಲು ಸಮರ್ಥವಾಯಿತು.
2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ ನದೀಮ್(4-78) ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದರು. ಚಾಹಲ್‌ರನ್ನು ಔಟ್ ಮಾಡುವ ಮೂಲಕ ಈ ವರ್ಷದ ರಣಜಿಯಲ್ಲಿ 50ನೆ ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಹರ್ಯಾಣ 258,262(ಬಿಶ್ನಾಯ್ 52, ಶುಭಂ 43, ನಿತಿನ್ 41, ನದೀಮ 4-78, ಸಮರ್ ಖಾದ್ರಿ 3-75)
ಜಾರ್ಖಂಡ್ 345, 178/5(ಇಶಾನ್ 86, ವಿರಾಟ್ ಸಿಂಗ್ 21, ಹರ್ಷಲ್ ಪಹಲ್ 2-36, ಚಾಹಲ್ 2-43).
ಮುಂಬೈ ಬಿಗಿ ಹಿಡಿತ: ವಿಜಯ್ ಗೊಹಿಲ್ 5 ವಿಕೆಟ್ ಗೊಂಚಲು ನೆರವಿನಿಂದ ರಾಯ್‌ಪುರದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್‌ನ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
3 ವಿಕೆಟ್ ನಷ್ಟಕ್ಕೆ 102 ರನ್‌ನಿಂದ 4ನೆ ದಿನದಾಟ ಆರಂಭಿಸಿದ ಮುಂಬೈ ಆದಿತ್ಯ ತಾರೆ(57) ಹಾಗೂ ಸಿದ್ದೇಶ್ ಲಾಡ್(46) ಹೋರಾಟದ ನೆರವಿನಿಂದ 2ನೆ ಇನಿಂಗ್ಸ್‌ನಲ್ಲಿ 217 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ 14 ರನ್ ಮುನ್ನಡೆ ಪಡೆದಿದ್ದ ಮುಂಬೈ ತಂಡ ಹೈದರಾಬಾದ್‌ಗೆ 232 ರನ್ ಗುರಿ ನೀಡಿತು. ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿರುವ ಹೈದರಾಬಾದ್ ಸೋಲಿನ ಸುಳಿಯಲ್ಲಿದೆ.
ಹೈದರಾಬಾದ್‌ಗೆ ಸೆಮಿಫೈನಲ್ ತಲುಪಲು ಅಂತಿಮ ದಿನವಾದ ಮಂಗಳವಾರ 3 ವಿಕೆಟ್ ನೆರವಿನಿಂದ ಇನ್ನೂ 111 ರನ್ ಗಳಿಸಬೇಕಾಗಿದೆ. ಬಿ. ಅನಿರುದ್ಧ(ಅಜೇಯ 40) ತಂಡಕ್ಕೆ ಆಸರೆಯಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಮುಂಬೈ 293 ಹಾಗೂ 217(ತಾರೆ 57, ಸಿದ್ದೇಶ್ 46, ಮುಹಮ್ಮದ್ ಸಿರಾಜ್ 5-52, ಮಿಲಿಂದ್ 2-25)
ಹೈದರಾಬಾದ್: 280, 121/7(ಅನಿರುದ್ಧ ಅಜೇಯ 40, ತನ್ಮಯ್ ಅಗರವಾಲ್ 29, ವಿಜಯ್ ಗೊಹಿಲ್ 5-28, ನಾಯರ್ 2-27)
ಸಮಿತ್ ಗೊಹೆಲ್ ಅಜೇಯ ದ್ವಿಶತಕ, ಗುಜರಾತ್ 514/8: ಜೈಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ತಂಡ ಒಡಿಶಾದ ವಿರುದ್ಧ ಬ್ಯಾಟಿಂಗ್ ಪ್ರಾಬಲ್ಯ ಮೆರೆದಿದೆ.
ಅಜೇಯ 110 ರನ್‌ನಿಂದ 4ನೆ ದಿನದಾಟವನ್ನು ಆರಂಭಿಸಿರುವ ಸಮಿತ್ ಗೊಹೆಲ್ ಅಜೇಯ ದ್ವಿಶತಕ(261) ಬಾರಿಸಿ ಗುಜರಾತ್ ತಂಡ 8 ವಿಕೆಟ್ ನಷ್ಟಕ್ಕೆ 514ರನ್ ಗಳಿಸಲು ನೆರವಾಗಿದ್ದಾರೆ. ಗುಜರಾತ್ ಒಟ್ಟಾರೆ 578 ರನ್ ಮುನ್ನಡೆ ಸಾಧಿಸಿದೆ.
ಗೊಹೆಲ್‌ಗೆ ನಾಯಕ ಪಾರ್ಥಿವ್ ಪಟೇಲ್(40) ಉತ್ತಮ ಸಾಥ್ ನೀಡಿದರು. ಚೊಚ್ಚಲ ದ್ವಿಶತಕ ಬಾರಿಸಿರುವ ಗೊಹೆಲ್ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನ ಎಲ್ಲ ದಿಕ್ಕಿಗೆ ಸೆಲ್ಯೂಟ್ ಹೊಡೆದು ಸಂಭ್ರಮಾಚರಣೆ ಮಾಡಿದರು. ಗೊಹೆಲ್ ದ್ವಿಶತಕದ ಸಹಾಯದಿಂದ ಸೆಮಿ ಫೈನಲ್‌ಗೆ ತಲುಪುವ ಹಂತದಲ್ಲಿರುವ ಗುಜರಾತ್ ಜ.1 ರಿಂದ ಆರಂಭವಾಗಲಿರುವ ಸೆಮಿ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್
ಗುಜರಾತ್ 263, 514/8(ಸಮಿತ್ ಗೊಹೆಲ್ ಅಜೇಯ 261, ಪ್ರಿಯಾಂಕ್ ಪಾಂಚಾಲ್ 81)
ಒಡಿಶಾ: 199(ಸೂರ್ಯಕಾಂತ್ 47, ಜಸ್‌ಪ್ರೀತ್ ಬುಮ್ರಾ 5-41)