ದ್ವಿತೀಯ ಟೆಸ್ಟ್: ಪಾಕಿಸ್ತಾನ 142/4

Update: 2016-12-26 17:42 GMT

ಮೆಲ್ಬೋರ್ನ್, ಡಿ.26: ಪಾಕಿಸ್ತಾನ ವಿರುದ್ಧ ಸೋಮವಾರ ಇಲ್ಲಿ ಆರಂಭವಾದ ಮಳೆ ಬಾಧಿತ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ವೇಗದ ಬೌಲರ್ ಜಾಕ್ಸನ್ ಬರ್ಡ್ ಎರಡು ನಿರ್ಣಾಯಕ ವಿಕೆಟ್ ಪಡೆದು ಮಿಂಚಿದರು.

 ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ ಪ್ರವಾಸಿ ಪಾಕ್ ತಂಡ 4 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಝರ್ ಅಲಿ(ಅಜೇಯ 66) ಹಾಗೂ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿರುವ ಅಸದ್ ಶಫೀಕ್(4) ಕ್ರೀಸ್ ಕಾಯ್ದುಕೊಂಡಿದ್ದರು. ಟೀ ವಿರಾಮದ ಬಳಿಕ ಮಳೆ ಮುಂದುವರಿದ ಕಾರಣ ಪಂದ್ಯವನ್ನು 2ನೆ ದಿನಕ್ಕೆ ಮುಂದೂಡಲಾಯಿತು.

 ಟಾಸ್ ಜಯಿಸಿದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಎಚ್ಚರಿಕೆಯ ಆರಂಭ ಪಡೆದ ಪಾಕ್‌ನ ಪರ ಅಲಿ ಮಾತ್ರ ತಂಡವನ್ನು ಆಧರಿಸಿದರು. ಮಳೆಯಿಂದಾಗಿ ಪಂದ್ಯ ಮುಂದೂಡಲ್ಪಡುವ ಮೊದಲು ಬರ್ಡ್(2-53) ಕ್ಷಿಪ್ರವಾಗಿ ಅನುಭವಿ ಆಟಗಾರರಾದ ಯೂನಿಸ್ ಖಾನ್(21) ಹಾಗೂ ಮಿಸ್ಬಾವುಲ್ ಹಕ್(11) ವಿಕೆಟ್‌ನ್ನು ಉರುಳಿಸಿದರು.

ಯೂನಿಸ್‌ಖಾನ್ 3 ರನ್ ಗಳಿಸಿದ್ದಾಗ ಎಲ್‌ಬಿಡಬ್ಲು ತೀರ್ಪಿನಲ್ಲಿ ಔಟಾಗಿದ್ದರು. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಔಟಾಗುವುದರಿಂದ ಬಚಾವಾದ ಖಾನ್ ದೊಡ್ಡ ಮೊತ್ತ ಗಳಿಸದೇ 21 ರನ್‌ಗೆ ಔಟಾದರು. ಔಟಾಗುವ ಮೊದಲು ಅಲಿ ಅವರೊಂದಿಗೆ 3ನೆ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು.

ನಾಯಕ ಮಿಸ್ಬಾವುಲ್ ಹಕ್ 11 ರನ್ ಗಳಿಸಲಷ್ಟೇ ಶಕ್ತರಾದರು.

ಪಾಕಿಸ್ತಾನದ ಆರಂಭಿಕ ಆಟಗಾರರಾದ ಸಮಿ ಅಸ್ಲಂ ಹಾಗೂ ಅಲಿ ಆಸೀಸ್‌ನ ವೇಗದ ಬೌಲರ್‌ಗಳನ್ನು ಎದುರಿಸಲು ಸಮರ್ಥರಾದರು. ಆದರೆ, ಆಫ್ ಸ್ಪಿನ್ನರ್ ನಥಾನ್ ಲಿಯೊನ್ ಆತಿಥೇಯ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

41 ಎಸೆತಗಳಲ್ಲಿ 9 ರನ್ ಗಳಿಸಿದ್ದ ಅಸ್ಲಂಗೆ ಹೆಚ್ಚುವರಿ ಬೌನ್ಸ್ ಮೂಲಕ ಅಚ್ಚರಿ ಮೂಡಿಸಿದ ಲಿಯೊನ್ ಮೊದಲ ಸ್ಲಿಪ್‌ನಲ್ಲಿದ್ದ ನಾಯಕ ಸ್ಮಿತ್‌ಗೆ ಕ್ಯಾಚ್ ಕೊಡಿಸಿದರು.

6 ರನ್ ಗಳಿಸಿದ್ದಾಗ ಎಲ್‌ಬಿಡಬ್ಲು ಬಲೆಗೆ ಬೀಳುವುದರಿಂದ ಬಚಾವಾಗಿದ್ದ ಅಲಿ 134 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ ಔಟಾಗದೆ 66 ರನ್ ಗಳಿಸಿದರು.

ಬಾಬರ್ ಆಝಂ(23) ವಿಕೆಟ್ ಪಡೆದ ಹೇಝಲ್‌ವುಡ್(1-15) ಒಂದು ವಿಕೆಟ್ ಪಡೆದಿದ್ದರು. ಮೊದಲ ಟೆಸ್ಟ್‌ನಲ್ಲಿ ಕಳಪೆ ಫೀಲ್ಡಿಂಗ್ ಮಾಡಿದ್ದ ಸ್ಮಿತ್ ಅವರು ಇಂದು ಆಕರ್ಷಕ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದರು.

ಆಸ್ಟ್ರೇಲಿಯ ತಂಡ ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು 39 ರನ್‌ನಿಂದ ಗೆದ್ದುಕೊಂಡ ತಂಡವನ್ನೇ ಕಣಕ್ಕಿಳಿಸಿತು. ಪಾಕಿಸ್ತಾನ ಒಂದು ಬದಲಾವಣೆ ಮಾಡಿದ್ದು, ವೇಗದ ಬೌಲರ್ ರಾಹತ್ ಅಲಿ ಬದಲಿಗೆ ಸೊಹೈಲ್ ಖಾನ್‌ಗೆ ಅವಕಾಶ ನೀಡಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್:

50.5 ಓವರ್‌ಗಳಲ್ಲಿ 142/4

(ಅಲಿ ಅಜೇಯ 66, ಆಝಂ 23, ಬರ್ಡ್ 2-53)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News