ಕರ್ನಾಟಕದ ವಾಹನಗಳಿಗೆ ಕೇರಳದಿಂದ ವಾರ್ಷಿಕ ತೆರಿಗೆ, ಅಯ್ಯಪ್ಪ ಭಕ್ತರಿಗೆ ಸಮಸ್ಯೆ
ಬೆಂಗಳೂರು, ಡಿ.27: ಕರ್ನಾಟಕದಿಂದ ಬರುವ ಎಲ್ಲ ಪ್ರವಾಸಿ ವಾಹನಗಳಿಗೆ ವಾರ್ಷಿಕ ತೆರಿಗೆ ವಿಧಿಸಲು ಕೇರಳ ಸರ್ಕಾರ ನಿರ್ಧರಿಸಿರುವುದು ರಾಜ್ಯದಿಂದ ಅಪಾರ ಪ್ರಮಾಣದಲ್ಲಿ ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇತರ ರಾಜ್ಯಗಳಿಂದ ಹೋಗುವ ವಾಹನಗಳಿಗೆ ಕೇವಲ ಪ್ರವೇಶ ತೆರಿಗೆ ಪಾತ್ರ ಪಾವತಿಸಿದರೆ ಸಾಕು; ಈ ನಿರ್ಧಾರ ರಾಜ್ಯದ ಭಕ್ತರು ಹಾಗೂ ಟ್ರಾವೆಲ್ ಕಂಪೆನಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಈ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ, ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಕಟಿಸಿದ್ದಾರೆ.
"ಈ ನಿರ್ಧಾರದಿಂದಾಗಿ ರಾಜ್ಯದ ಅಯ್ಯಪ್ಪ ಭಕ್ತರು ತೊಂದರೆಗೀಡಾಗಿದ್ದಾರೆ. ಈ ಬಗ್ಗೆ ಕೇರಳ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಯೋಚಿಸಿದ್ದೇನೆ" ಎಂದು ದೇವೇಗೌಡ ಹೇಳಿದರು. ಜೆಡಿಎಸ್, ಕೇರಳದಲ್ಲಿ ಆಡಳಿತಾರೂಢ ಎಡರಂಗ ಮೈತ್ರಿಕೂಟದ ಘಟಕ ಪಕ್ಷವಾಗಿದೆ.
ಜುಲೈ 18ರಂದು ಕೇರಳ ಸರ್ಕಾರ ಹೊರಡಿಸಿರುವ ಆದೇಶದ ಅನ್ವಯ, ಕರ್ನಾಟಕದ ಎಲ್ಲ ಟೂರಿಸ್ಟ್ ವಾಹನಗಳಿಗೆ ವಾರ್ಷಿಕ ತೆರಿಗೆ ವಿಧಿಸಲಾಗುತ್ತದೆ. ಅವುಗಳು ಎಷ್ಟು ಬಾರಿ ರಾಜ್ಯಕ್ಕೆ ಪ್ರವೇಶಿಸುತ್ತವೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಅನ್ವಯಿಸುವುದಿಲ್ಲ. ಖಾಸಗಿ ಬಸ್ಸುಗಳು ಸಾಮಾನ್ಯವಾಗಿ ಶಬರಿಮಲೆ ಸೀಸನ್‌ನಲ್ಲಿ ಕೇರಳಕ್ಕೆ ಭಕ್ತರನ್ನು ಅಧಿಕ ಸಂಖ್ಯೆಯಲ್ಲಿ ಒಯ್ಯುತ್ತವೆ.
"ಈ ಸಮಸ್ಯೆ ನಿವಾರಣೆಗೆ ರಾಜಕೀಯ ಹಸ್ತಕ್ಷೇಪ ಅಗತ್ಯ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ" ಎಂದು ಜೆಡಿಎಸ್ ಮುಖಂಡ ಎ.ಪಿ.ರಂಗನಾಥ್ ಪ್ರಕಟಿಸಿದ್ದಾರೆ. ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಕೂಡಾ ಈ ಬಗ್ಗೆ ಕೇರಳ ಅಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಜತೆಗೂ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಒಪ್ಪಂದ ಮಾತುಕತೆ ಮುಂದುವರಿದಿದೆ ಎಂದು ಹೇಳಿದ್ದಾರೆ.