ಈಗಲೂ ನಾನೇ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ: ರಾಮಮೋಹನ್ ರಾವ್
ಚೆನ್ನೈ, ಡಿ.27:" ನನ್ನನ್ನು ಮಾಜಿ ಮುಖ್ಯ ಮಂತ್ರಿ ಜಯಲಲಿತಾ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಗೊಳಿಸಿದ್ದರು. ನಾನು ಈಗಲೂ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯಾಗಿರುವೆ "ಎಂದು ತಮಿಳುನಾಡಿನ ಮಾಜಿ ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್ ಹೇಳಿದ್ದಾರೆ.
ಚೆನ್ನೈನ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ" ಐಟಿ ದಾಳಿ ವೇಳೆ ನನ್ನ ಮನೆಯಲ್ಲಿ 1,12,320 ರೂಪಾಯಿ ಇತ್ತು. ನನ್ನ ಮನೆಯಲ್ಲಿ ಸೀಕ್ರೆಟ್ ಛೇಬರ್ ಇರಲಿಲ್ಲ. ನನ್ನ ನಿವಾಸದಲ್ಲಿ ಪತ್ತೆಯಾಗಿರುವ ಚಿನ್ನ ನನ್ನ ಪತ್ನಿ, ಮಗಳಿಗೆ ಸೇರಿದ್ದು" ಎಂದು ಹೇಳಿದ್ದಾರೆ.
"ನನ್ನ ಮನೆ ಮೇಳೆ ವಿನಾ ಕಾರಣ ಐಟಿ ದಾಳಿ ನಡೆದಿದೆ. ಅಧಿಕಾರಿಗಳು ನನ್ನನ್ನು ಗೃಹ ಬಂಧನದಲ್ಲಿದ್ದರು. ಪೊಲೀಸರು ನನಗೆ ಗನ್ ತೋರಿಸಿ ಬೆದರಿಸಿದ್ದರು.ನನ್ನ ಜೀವಕ್ಕೆ ಅಪಾಯವಿದೆ. ಪ್ರಾಣಭಯವಿದೆ” ಎಂದು ಹೇಳಿದ್ದಾರೆ.
"ತಮಿಳುನಾಡು ಸಿಎಸ್ ಕಚೇರಿ ಮೇಲೆ ಅಸಂವಿಧಾನಿಕ ದೌರ್ಜನ್ಯ ನಡೆದಿದೆ. ಜಯಲಲಿತಾ ಬದುಕಿದ್ದರೆ ಹೀಗೆ ಆಗುತ್ತಿರಲಿಲ್ಲ. ನಾನು 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ವರ್ಗಾವಣೆ ಪತ್ರ ನೀಡುವಷ್ಟು ತಾಕತ್ತು ಯಾರಿಗೂ ಇಲ್ಲ "ಎಂದು ತಮಿಳುನಾಡು ಸರಕಾರಕ್ಕೆ ಸವಾಲು ಹಾಕಿದ್ದಾರೆ.
"ಜಯಲಲಿತಾ ಇಲ್ಲ ಎಂದು ನನ್ನ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಜಯಲಲಿತಾ ಇಲ್ಲವಾದ ಮೇಲೆ ಎಲ್ಲವೂ ನಡೆಯುತ್ತಿದೆ. ನನ್ನ ಮೇಲೆ ಐಟಿ ವಿನಾಕಾರಣ ಆರೋಪ ಮಾಡಿದೆ. ನನ್ನ ನಿವಾಸಕ್ಕೆ ಏಕಾಏಕಿ ದಾಳಿ ನಡೆದಿದೆ. ಮಗನ ಮನೆ ಮೇಲೆ ದಾಳಿ ನಡೆದಿದೆ ” ಎಂದು ರಾಮಮೋಹನ್ ರಾವ್ ಅಭಿಪ್ರಾಯಪಟ್ಟಿದ್ದಾರೆ.