ನವಿಮುಂಬೈ: ರೂ.45 ಲಕ್ಷ ಮೊತ್ತದ ಹೊಸ ನೋಟು ಪತ್ತೆ
Update: 2016-12-27 20:55 IST
ಥಾಣೆ, ಡಿ.27: ನವಿ ಮುಂಬೈಯ ಖಾರ್‌ಘರ್‌ನಲ್ಲಿ ಸಂಸ್ಥೆಯೊಂದರ ವಾಣಿಜ್ಯ ಆವರಣಕ್ಕೆ ದಾಳಿ ನಡೆಸಿದ ಪೊಲೀಸರು ರೂ.45 ಲಕ್ಷ ಮೊತ್ತದ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಸಂಜೆ ಈ ದಾಳಿಯನ್ನು ನಡೆಸಲಾಗಿದ್ದು, ಈ ಸಂಬಂಧ ಐವರನ್ನು ವಶಕ್ಕೆ ಪಡೆಯಲಾಗಿದೆಯೆಂದು ಎಸಿಪಿ ನಿತಿನ್ ಕೌಥಡಿಕರ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಕೆಲವರು ಕಮಿಷನ್‌ಗಾಗಿ ಹಳೆಯ ನೋಟುಗಳಿಗೆ ಹೊಸ ನೋಟುಗಳನ್ನು ನೀಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ಆವರಣಕ್ಕೆ ದಾಳಿ ನಡೆಸಿದ್ದರು.
ವಶಪಡಿಸಲಾದವರನ್ನು ಜೈದಾಸ್ ವಿಲಾಸ್ ತೇಲವಣಿ(34), ಸುರೇಶ್ ಮನ್ಜಿ ಪಾಠಕ್(32) ಇಕ್ಬಾಲ್ ಕರೀಂ ಪಟೇಲ್(46), ಮಹೇಶ್ ವಸಂತ ಪಟೇಲ್(31) ಹಾಗೂ ಝಬೇರ್ ನಿಜಾಮುದ್ದೀನ್ ಪಟೇಲ್(40) ಎಂದು ಗುರುತಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
ವಶಪಡಿಸಿಕೊಳ್ಳಲಾದ ನೋಟುಗಳನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.