ರಣಜಿ ಟ್ರೋಫಿ ಸೆಮಿ ಫೈನಲ್: ಜಾರ್ಖಂಡ್‌ಗೆ ಧೋನಿ ಬೆಂಬಲ
ಹೊಸದಿಲ್ಲಿ, ಡಿ.30: ನಾಗ್ಪುರದಲ್ಲಿ ರವಿವಾರ ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿ ಫೈನಲ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಜಾರ್ಖಂಡ್ ಕ್ರಿಕೆಟ್ ತಂಡ ಗುಜರಾತ್ ತಂಡವನ್ನು ಎದುರಿಸಲಿದೆ.
ಭಾರತದ ಸೀಮಿತ ಓವರ್ ಕ್ರಿಕೆಟ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ರಾಜ್ಯ ಕ್ರಿಕೆಟ್ ತಂಡ ಜಾರ್ಖಂಡ್‌ಗೆ ಬೆಂಬಲ ನೀಡಲು ಆ ಪಂದ್ಯವನ್ನು ವೀಕ್ಷಿಸಲು ತೆರಳಲಿದ್ದಾರೆ.
ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಪ್ರಥಮ ದರ್ಜೆ ಅಥವಾ ರಣಜಿ ಪಂದ್ಯಗಳಲ್ಲಿ ಆಡಿಲ್ಲ. ಆದರೆ, ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಋತುವಿನಲ್ಲಿ ಜಾರ್ಖಂಡ್ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದರು.
‘‘ಧೋನಿ ನಾಗ್ಪುರದಲ್ಲಿ ಇರುವ ಎಲ್ಲ ಸಾಧ್ಯತೆಯಿದೆ. ಅಲ್ಲಿ ಅವರು ಇರಲು ಬಯಸಿದ್ದಾರೆ. ಆಟಗಾರರು ಅವರೊಂದಿಗೆ ಚರ್ಚಿಸುವ ಮೂಲಕ ಲಾಭ ಪಡೆಯುತ್ತಿದ್ದಾರೆ’’ ಎಂದು ಟೀಮ್ ಮ್ಯಾನೇಜ್‌ಮೆಂಟ್ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ವಿರುದ್ಧದ ಸ್ವದೇಶದಲ್ಲಿ ನಡೆಯುವ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಜನವರಿಯ ಮೊದಲ ವಾರದಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಧೋನಿಗೆ ರಣಜಿಯ ಎಲ್ಲ ದಿನಗಳಲ್ಲಿ ನಾಗ್ಪುರದಲ್ಲಿರಲು ಸಾಧ್ಯವಿಲ್ಲ.
ನ್ಯಾಶನಲ್ ತಂಡವೊಂದರ ನಾಯಕ ದೇಶೀಯ ತಂಡದೊಂದಿಗೆ ಅಭ್ಯಾಸ ನಡೆಸುವುದು ತುಂಬಾ ಅಪರೂಪ. ಧೋನಿ ಇದಕ್ಕೆ ಅಪವಾದ. ಅವರು ಪದೇ ಪದೇ ದೇಶೀಯ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ.
35ರ ಪ್ರಾಯದ ಧೋಣಿ ರಾಂಚಿಯ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ರಣಜಿ ಋತುವಿಗೆ ಮೊದಲು ನಡೆದ ಶಿಬಿರದಲ್ಲಿ ಭಾಗವಹಿಸಿದ್ದರು. ಆಗಸ್ಟ್‌ನಲ್ಲಿ ಬೂಚಿ ಬಾಬು ಆಹ್ವಾನಿತ ಟೂರ್ನಮೆಂಟ್‌ನ ವೇಳೆ ಚೆನ್ನೈ ತಂಡದೊಂದಿಗೆ ಧೋನಿ ಕೆಲವು ಸಮಯ ಕಳೆದಿದ್ದರು.
ಧೋನಿ ಯುವ ಆಟಗಾರರಿಗೆ ನೈತಿಕ ಸ್ಥೈರ್ಯ ತುಂಬುತ್ತಾರಲ್ಲದೆ, ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲು ನಿರ್ಣಾಯಕ ಅಭ್ಯಾಸವನ್ನು ನಡೆಸುತ್ತಾರೆ.
ವಿಜಯ್ ಹಝಾರೆ ಟ್ರೋಫಿ ಫೆ.25 ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಧೋನಿ ಜ.15 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಮೊದಲು ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡುತ್ತಿಲ್ಲ.