ಮೊಬೈಲ್ ಸ್ಫೋಟ : ಬೆಂಗಳೂರಿನ ಬಾಲಕ ಬಲಿ

Update: 2016-12-31 10:44 GMT

ವಿಲ್ಲುಪುರಂ, ಡಿ.31: ಕ್ರಿಸ್ಮಸ್ ರಜೆಯನ್ನು ಕಳೆಯಲು ತನ್ನ ಹೆತ್ತವರೊಂದಿಗೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವನೂರ್ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಬೆಂಗಳೂರಿನ 15 ವರ್ಷದ ಬಾಲಕನೊಬ್ಬ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಅದು ಸ್ಫೋಟಗೊಂಡ ಪರಿಣಾಮ ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.

ಮೃತ ಬಾಲಕ ಆರ್.ಅಭಿಲಾಷ್. ಈತನ ತಂದೆ ಎಂ.ರಾಜೇಶ್ ಭಾರತೀಯ ವಾಯುಸೇನೆಯ ಮಾಜಿ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದರೆ, ತಾಯಿ ಲಲಿತಾ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಈ ದಂಪತಿಗೆ ಅಭಿಲಾಷ್ ಏಕೈಕ ಪುತ್ರನಾಗಿದ್ದ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ. ವನೂರ್ ಪಟ್ಟಣದಲ್ಲಿ ರಾಜೇಶ್ ಅವರ ಭಾವ ವಾಸವಾಗಿದ್ದರು. ಎರಡೂ ಕುಟುಂಬಗಳು ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಿಸುವ ಸಂತೋಷದಲ್ಲಿದ್ದಾಗ ಈ ದುರಂತ ನಡೆದಿದೆ.

ಆ ದಿನ ಅಪರಾಹ್ನ ಸುಮಾರು 2 ಗಂಟೆ ಹೊತ್ತಿಗೆ ಮನೆಯ ಟೆರೇಸಿಗೆ ಹೋದ ಅಭಿಲಾಷ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಅದಕ್ಕೆ ಒಮ್ಮೆಗೇ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ. ಕೂಡಲೇ ಆತ ಫೋನನ್ನು ದೂರ ಎಸೆಯಲು ಯತ್ನಿಸಿದ್ದರೂ ಅದು ಆತನ ಶರ್ಟ್ ಮೇಲೆ ಬಿದ್ದು ಅರೆ ಕ್ಷಣದಲ್ಲೇ ಬೆಂಕಿಯ ಕೆನ್ನಾಲಗೆ ಆತನನ್ನು ಆವರಿಸಿ ಕುತ್ತಿಗೆಯಿಂದ ತೊಡೆಯವರೆಗೂ ಆತನಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು.

ಆತನನ್ನು ಕೂಡಲೇ ಜವಾಹರ್ ಲಾಲ್ ಇನಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಇಲ್ಲಿ ದಾಖಲಿಸಲಾಗಿತ್ತಾದರೂ ಆತ ಅಲ್ಲಿ ಗುರುವಾರ ಮೃತ ಪಟ್ಟಿದ್ದಾನೆ.

ಮನೆಯ ಟೆರೇಸಿನ ಮೇಲ್ಭಾಗದಲ್ಲಿ ಹೈ ಟೆನ್ಶನ್ ವಿದ್ಯುತ್ ಲೈನ್ ಹಾದು ಹೋಗುತ್ತಿರುವುದರಿಂದ ಆತ ಫೋನಿನಲ್ಲಿ ಮಾತನಾಡುವಾಗ ಅದರ ಇಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳು ಹೈಟೆನ್ಶನ್ ತಂತಿಯೊಂದಿಗೆ ಸಂಪರ್ಕವೇರ್ಪಟ್ಟು ಬೆಂಕಿ ಹತ್ತಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News