ಏಕದಿನ ಸರಣಿ: ಬಾಂಗ್ಲಾಕ್ಕೆ ಕಿವೀಸ್‌ನಿಂದ ಕ್ಲೀನ್‌ಸ್ವೀಪ್

Update: 2016-12-31 18:20 GMT

ನೆಲ್ಸನ್, ಡಿ.31: ನಾಯಕ ಕೇನ್ ವಿಲಿಯಮ್ಸನ್ ಹಾಗೂ ನೀಲ್ ಬ್ರೂಮ್ ಅವರು 179 ರನ್ ಜೊತೆಯಾಟದ ಸಹಾಯದಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ 3ನೆ ಹಾಗೂ ಕೊನೆಯ ಏಕದಿನ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 237 ರನ್ ಗುರಿ ಪಡೆದಿದ್ದ ಕಿವೀಸ್ ತಂಡದ ಪರ ವಿಲಿಯಮ್ಸನ್ ಅಜೇಯ 95 ರನ್ ಗಳಿಸಿದ್ದರೆ, ಬ್ರೂಮ್ 97ರನ್‌ಗೆ ಔಟಾದರು. ಎಸೆತಕ್ಕೊಂದು ರನ್ ಗಳಿಸಿದ್ದ ಬ್ರೂಮ್ 12 ಬೌಂಡರಿ, 1 ಸಿಕ್ಸರ್ ಬಾರಿಸಿದ್ದರು. ವಿಲಿಯಮ್ಸನ್ 116 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸಿದ್ದರು. ಕಿವೀಸ್ 41.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟದಲ್ಲಿ 239 ರನ್ ಗಳಿಸಿ ಗೆಲುವಿನ ಗುರಿ ತಲುಪಿತು.

2ನೆ ಪಂದ್ಯದಲ್ಲಿ ಅಜೇಯ 109 ರನ್ ಗಳಿಸಿ ತಂಡಕ್ಕೆ 67 ರನ್ ಗೆಲುವು ತಂದುಕೊಟ್ಟಿದ್ದ ಬ್ರೂಮ್ ಸತತ 2ನೆ ಬಾರಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು.

ಇದಕ್ಕೆ ಮೊದಲು ಟಾಸ್ ಜಯಿಸಿದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡು 9 ವಿಕೆಟ್‌ಗಳ ನಷ್ಟಕ್ಕೆ 236 ರನ್ ಗಳಿಸಿತು. ಇಮ್ರುಲ್ ಕೈಸ್(44) ಹಾಗೂ ತಮೀಮ್ ಇಕ್ಬಾಲ್ (59)ಮೊದಲ ವಿಕೆಟ್‌ಗೆ 102 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಆದರೆ, ಈ ಇಬ್ಬರು ಔಟಾದ ಬಳಿಕ ಬಾಂಗ್ಲಾ ಕುಸಿತ ಕಂಡಿತು. ಅಗ್ರ ಕ್ರಮಾಂಕದ ಆರು ವಿಕೆಟ್‌ಗಳು 68 ರನ್‌ಗಳಲ್ಲಿ ಉರುಳಿದವು. ಕೊನೆಯಲ್ಲಿ ನುರುಲ್ ಹುಸೈನ್(44) ಒಂದಷ್ಟು ಹೋರಾಟ ನೀಡಿದರು. ಅಂತಿಮವಾಗಿ ಬಾಂಗ್ಲಾದೇಶ 236 ರನ್ ಗಳಿಸಲಷ್ಟೆ ಶಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News