ಲೋಕಾಯುಕ್ತ ಪೊಲೀಸರಿಂದ 1.61 ಕೋಟಿ ರೂ.ಮೊತ್ತದ ಹಳೆಯ ನೋಟುಗಳ ನಿರಖು ಠೇವಣಿ
ಇಂದೋರ್, ಡಿ.31: ಲೋಕಾಯುಕ್ತ ಪೊಲೀಸರು ಕಳೆದ 10 ವರ್ಷಗಳಲ್ಲಿ ವಶಪಡಿಸಿಕೊಂಡಿದ್ದ ಈಗ ರದ್ದಾಗಿರುವ ರೂ.500 ಹಾಗೂ 1000ದ ನೋಟುಗಳಲ್ಲಿದ್ದ ರೂ.1.61 ಕೋಟಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶದಂತೆ ನಿರಖು ಠೇವಣಿಯಿರಿಸಿದ್ದಾರೆ.
ಅನೇಕ ಸರಕಾರಿ ಅಧಿಕಾರಿಗಳ ಆವರಣಗಳಿಗೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾಗಿದ್ದ ರೂ.1,61,56,000ವನ್ನು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ನಿರಖು ಠೇವಣಿಯಾಗಿ ಇರಿಸಿದ್ದೇವೆಂದು ಇಂದೋರ್ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ(ಡಿಎಸ್ಪಿ) ಬಿ.ಎಸ್. ಪಟಿಹಾರ್ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಭ್ರಷ್ಟಾಚಾರದ 30 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮೊತ್ತ ಇದಾಗಿದೆ. ನಿಯಮದಂತೆ ವಶಪಡಿಸಿಕೊಳ್ಳಲಾಗಿದ್ದ ಹಣವನ್ನು ಸರಕಾರಿ ಖಜಾನೆಯಲ್ಲಿರಿಸಲಾಗಿತ್ತು. ಆ ಹಣವನ್ನು ಯಾರಿಗೆ ಹಸ್ತಾಂತರಿಸಬೇಕೆಂದು ನ್ಯಾಯಾಲಯ ನಿರ್ಧರಿಸುವಾಗ ಅದಕ್ಕೆ ಹಾಜರುಪಡಿಸಲಾಗುತ್ತಿತ್ತೆಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕಳೆದ 10 ದಿನಗಳಲ್ಲಿ ಈ ಹಣವನ್ನು ಸರಕಾರಿ ಬೊಕ್ಕಸದಿಂದ ಹಿಂಪಡೆದು ಬ್ಯಾಂಕೊಂದರಲ್ಲಿ ನಿರಖು ಠೇವಣಿಯಿರಿಸ ಲಾಗಿದೆಯೆಂದು ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿ.19ರಂದು ಸರಕಾರಿ ಉದ್ಯೋಗಿಯೊಬ್ಬನ ವಿರುದ್ಧದ ಭ್ರಷ್ಟಾಚಾರ ಆರೋಪದ ವಿಚಾರಣೆಯ ವೇಳೆ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ರದ್ದಾದ ನೋಟುಗಳನ್ನು ಠೇವಣಿಯಿರಿಸುವ ಡಿ.30ರ ಅಂತಿಮ ಗಡುವಿನೊಳಗೆ ವಶಪಡಿಸಿಕೊಳ್ಳಲಾಗಿರುವ ಹಣವನ್ನು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ನಿರಖು ಠೇವಣಿಯಿರಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿತ್ತು.