ರೋಮ್ ದೊರೆ ನೀರೋ ನೆನಪಾದ...

Update: 2017-01-01 18:57 GMT

ಹೊಸ ವರ್ಷದ ಹೊಸ್ತಿಲಲ್ಲಿ ಸಹಜವಾಗಿ ಸಂತಸದ ಭಾವನೆಗಳು ಮೂಡಬೇಕು. ಎಲ್ಲರೂ ಜೊತೆಗೂಡಿ ನಡೆಯುವ ಆಶಾಭಾವ ವ್ಯಕ್ತವಾಗಬೇಕು. ವಿನೂತನ ಆಲೋಚನೆಗಳು ಹೊರಹೊಮ್ಮಬೇಕು. ಕಟ್ಟುತ್ತೇವೆ ಹೊಸ ನಾಡೊಂದನ್ನು ಎಂಬ ಹಾಡಿನ ಸಾಲಿನಂತೆ ಹೊಸ ಜಗತ್ತು ನಿರ್ಮಿಸುವ ಉಮೇದು ಇಮ್ಮಡಿಯಾಗಬೇಕು. 2016ರ ಕರಾಳ ಛಾಯೆ 2017ಕ್ಕೆ ವ್ಯಾಪಿಸದಿರಲಿ ಎಂಬ ಹಾರೈಕೆಯೊಂದಿಗೆ ಮುನ್ನಡೆಯಬೇಕು. ಈ ರೀತಿಯ ಅನಿಸಿಕೆ ಒಬ್ಬಿಬ್ಬರದ್ದಲ್ಲ, ಬಹುತೇಕ ಜನರದ್ದು. ಇದೇ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಆದರೆ ಇದೆಲ್ಲದರ ಮಧ್ಯೆ ರೋಮ್ ದೊರೆ ನೀರೋ ಮತ್ತು ಆತನ ಪಿಟೀಲು ವಾದನದ ಪ್ರಹಸನ ಯಾಕೋ ಪದೇ ಪದೇ ನೆನಪಾಗುತ್ತಿದೆ. ಶತಮಾನಗಳ ಹಿಂದೆ ರೋಮ್ ದೇಶ 6 ದಿನಗಳವರೆಗೆ ಹೊತ್ತಿ ಉರಿದಿತ್ತಂತೆ. ಮನೆಗಳು ಸುಟ್ಟು ಬೂದಿಯಾಗಿದ್ದವಂತೆ. ಎಲ್ಲವನ್ನೂ ಕಳೆದುಕೊಂಡು ಜನರು ನೆರವಿಗಾಗಿ ದೊರೆ ನೀರೋಗೆ ಮೊರೆಯಿಟ್ಟಾಗ, ಆತ ಏನನ್ನೂ ಮಾತನಾಡಲಿಲ್ಲ. ಜನರಿಗೆ ಆಶ್ರಯದ ನಿಖರ ಭರವಸೆಯೂ ನೀಡಲಿಲ್ಲ. ಆತ ಮಾಡಿದ್ದು ಒಂದೇ ಕೆಲಸ: ಪಿಟೀಲು ವಾದನ. ಮನೆಮಠ ಕಳೆದುಕೊಂಡು ಕಂಗಾಲಾದ ಜನರು ಹೊಟ್ಟೆ ಹಸಿದಿದ್ದರೂ ಅದನ್ನು ಮರೆತು ಸಂಗೀತ ಆಲಿಸಬೇಕು!

ನೀರೋ ಆಳ್ವಿಕೆ ವೇಳೆ ರೋಮ್‌ನಲ್ಲಿ ಹೀಗೆಲ್ಲ ನಡೆದಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇತಿಹಾಸದ ಪುಟಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳಿವೆ. ಈ ಘಟನೆ ನಡೆದಿತ್ತು ಎಂಬುದರ ಬಗ್ಗೆ ಕೆಲವರು ವಾದಿಸಿದರೆ, ಇದೆಲ್ಲವೂ ಕಪೋಲಕಲ್ಪಿತ ಎಂದು ಕೆಲವರು ಪ್ರತಿವಾದಿಸುತ್ತಾರೆ. ಆದರೆ ಇದೇ ನೀರೋ ಕತೆ ಹೋಲಿಸಿಕೊಂಡರೆ, ಸದ್ಯಕ್ಕೆ ಆಗಿನ ರೋಮ್ ಸ್ಥಿತಿಗೂ ಮತ್ತು ಭಾರತದ ಈಗಿನ ಪರಿಸ್ಥಿತಿಗೂ ಹೆಚ್ಚು ಭಿನ್ನತೆ ಕಾಣುವುದಿಲ್ಲ. ದೇಶದ ಜನರು ಸಮಸ್ಯೆಗಳ ಜ್ವಾಲೆಯಲ್ಲಿ ಒಂದಿಲ್ಲೊಂದು ರೀತಿ ಸುಡುತ್ತಿದ್ದರೆ, ದೊರೆಯಂತೆ ಕಾಣುವ ಪ್ರಧಾನಿ ಮಾತ್ರ, ದೇಶದಲ್ಲಿ ಅಹಿತಕರ ಘಟನೆಗಳೇ ನಡೆದಿಲ್ಲ. ಎಲ್ಲಾ ಕಡೆ ಶಾಂತ ವಾತಾವರಣ ಆವರಿಸಿದೆ. ಪ್ರಜೆಗಳು ಸುಖವಾಗಿದ್ದಾರೆ ಎಂದು ನಗುಮುಖ ಬೀರುತ್ತಾರೆ.

ನೀರೋ ನುಡಿಸಿದ ಪಿಟೀಲು ವಾದನ ಆಲಿಸುವ ಸೌಭಾಗ್ಯ ಸಿಕ್ಕಿಲ್ಲ. ಆದರೆ ಮಾಧ್ಯಮಗಳಲ್ಲಿ ಆಗಾಗ ಪ್ರಸಾರವಾಗುವ ಮನ್ ಕಿ ಬಾತ್ ಪಿಟೀಲು ನಾದ ಆಲಿಸುತ್ತಿರುವಂತೆ ಭಾಸವಾಗುತ್ತದೆ. ಅದನ್ನು ಆಲಿಸಿದವರು ಅಥವಾ ನೋಡಿದವರು, ದೇಶದ ಜನರು ಸುಖದ ಸಂಪತ್ತಿನಲ್ಲಿ ತೇಲುತ್ತಿದ್ದಾರೆ. ಸಮಸ್ಯೆಗಳ ಛಾಯೆಯೂ ತಟ್ಟಿಸಿಕೊಳ್ಳದೇ ಜನರು ನೆಮ್ಮದಿಯ ಬಾಳ್ವೆ ನಡೆಸಿದ್ದಾರೆ ಎಂದು ಅನ್ನಿಸುತ್ತದೆ. ದೇಶದ 30 ರಾಜ್ಯಗಳಲ್ಲಿ ಒಂದೊಂದು ಸಮಸ್ಯೆ-ಸವಾಲುಗಳು ಪೆಡಂಭೂತದ ಸ್ವರೂಪ ಪಡೆದಿವೆ. ಆದರೆ ಪ್ರಧಾನಿ ಮೋದಿಯವರ ಪಾಲಿಗೆ ಅವು ಸಮಸ್ಯೆಗಳೇ ಅಲ್ಲ. ದೇಶಭಕ್ತಿಯ ಜಪ ಮಾಡುವ ಬದಲು ಸಮಸ್ಯೆಗಳನ್ನು ಬಿಂಬಿಸುವುದು ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಅವರ ನಂಬಿಕೆ. ಹಾಗೆಯೇ ಮೋದಿ ಭಕ್ತರದ್ದು ಕೂಡ.

ಪ್ರತಿಭಾವಂತ, ಮುದ್ದಿನ ಮಗ ರೋಹಿತ್ ವೇಮುಲಾರನ್ನು ಕಳೆದುಕೊಂಡ ತಾಯಿ ರಾಧಿಕಾ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ವರ್ಷವಾದರೂ ಆಕೆಯ ನೋವಿಗೆ ಸ್ಪಂದನೆ ಸಿಕ್ಕಿಲ್ಲ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಪ್ರೀತಿಯ ಪುತ್ರ ನಜೀಬ್ ಅಹ್ಮದ್ ನಾಪತ್ತೆಯಾಗಿ ಒಂದೂವರೆ ತಿಂಗಳಾಗಿದ್ದು ಆತನನ್ನು ಹುಡುಕಿಕೊಡಿ ಎಂದು ತಾಯಿ ಫಾತಿಮಾ ಬೀಬಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಈವರೆಗೆ ಸರಕಾರದ ವತಿಯಿಂದ ಅವರ ಕಣ್ಣೀರನ್ನು ಯಾರೂ ಒರೆಸಲಿಲ್ಲ. ಪುತ್ರನನ್ನು ಹುಡುಕಿಕೊಡುವ ಭರವಸೆಯೂ ನೀಡಲಿಲ್ಲ. ತಾಯಂದಿರು ದೈವ ಸ್ವರೂಪಿ. ಅವರನ್ನು ನೋಯಿಸುವುದು ಪಾಪಕ್ಕೆ ಸಮಾನ ಎಂದು ಮೋದಿ ಭಕ್ತರು ಭಾವಪರವಶಗೊಳಗುತ್ತಾರೆ. ಆದರೆ ಈ ಇಬ್ಬರು ತಾಯಂದಿರ ಸಂಕಟ ಮತ್ತು ಯಾತನೆ ಪಾಪದ ವ್ಯಾಪ್ತಿಗೆ ಬರುವುದೇ ಇಲ್ಲ ಎಂಬಂತೆ ಅವರು ವರ್ತಿಸುತ್ತಾರೆ. ಹೊಸದಿಲ್ಲಿ, ಹೈದರಾಬಾದ್ ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಈ ತಾಯಂದಿರ ಪರವಾಗಿ ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸಿವೆ. ಆದರೆ ಅವರ ಬೇಡಿಕೆಗಳನ್ನು ಆಲಿಸಲು ಸಮಯವೇ ಇರದಷ್ಟು ಪ್ರಧಾನಿ ಮತ್ತು ಸಚಿವರು ದೇಶಸೇವೆಯಲ್ಲಿ ಮಗ್ನರಾಗಿದ್ದಾರೆ.

ದೇಶದ ಅರಣ್ಯ ಸಂಪತ್ತಿನ ಮೇಲೆ ಕಣ್ಣು ನೆಟ್ಟಿರುವ ಉದ್ಯಮಿಗಳ ಹಿತರಕ್ಷಣೆಗಾಗಿ ಛತ್ತೀಸ್‌ಗಡದ ಬಿಜೆಪಿ ಸರಕಾರವು ಆದಿವಾಸಿಗಳಿಗೆ ಸಂಬಂಧಿಸಿದ ಕಾನೂನನ್ನೇ ತಿದ್ದುಪಡಿಗೊಳಿಸಿದೆ. ಶತಮಾನಗಳಿಂದ ಆದಿವಾಸಿಗಳು ಕಾಡಿನ ಮೇಲೆ ಹೊಂದಿದ್ದ ಹಕ್ಕು ರದ್ದುಗೊಳಿಸಲಾಗಿದೆ. ಅವರನ್ನು ಅಲ್ಲಿಂದ ತೆರವುಗೊಳಿಸುವ ಪ್ರಯತ್ನ ನಡೆದಿದೆ. ಛತ್ತೀಸ್‌ಗಡದ ಸುರ್ಗುಜಾ ಜಿಲ್ಲೆಯ ಘಾಟಬರ್ರಾ ಎಂಬ ಗ್ರಾಮದಲ್ಲಿ ಈ ಪ್ರಕ್ರಿಯೆ ನಡೆದಿದೆ. ಕಾಡನ್ನು ನಾಶಪಡಿಸಿ ಕಲ್ಲಿದ್ದಲು ಗಣಿಗಾರಿಕೆ ಕೈಗೊಳ್ಳಲು ರಾಜಸ್ತಾನ ವಿದ್ಯುತ್ ಉತ್ಪನ್ನ ನಿಗಮ ಮತ್ತು ಅದಾನಿ ಖನಿಜ ಸಂಸ್ಥೆ ಉತ್ಸುಕವಾಗಿದೆ. ನೂರಾರು ವರ್ಷಗಳಿಂದ ಕಾಡಿನಲ್ಲೇ ವಾಸವಿದ್ದು ಕಾಡನ್ನು ರಕ್ಷಿಸಿಕೊಂಡು ಬಂದ ಆದಿವಾಸಿಗಳ ಬದುಕನ್ನು ಅತಂತ್ರಗೊಳಿಸುವ ಪ್ರಯತ್ನ ನಡೆದಿದೆ.

ಬರ ಸಮಸ್ಯೆ, ಅನುದಾನ ಕೊರತೆ, ಕಾವೇರಿ ನೀರಿನ ಸಮಸ್ಯೆ ಮುಂತಾದವುಗಳ ಬಗ್ಗೆ ಚರ್ಚಿಸಲು ಹಲವು ಬಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಬಾಗಿಲು ತಟ್ಟಿದರೂ ಪ್ರಧಾನಿಗೆ 10 ರಿಂದ 20 ನಿಮಿಷಗಳಷ್ಟು ಮಾತನಾಡುವಷ್ಟು ಪುರುಸೊತ್ತು ಸಿಗಲಿಲ್ಲ. ಮುಖ್ಯಮಂತ್ರಿ ಬರೆಯುವ ಪತ್ರಗಳಿಗೆ ಉತ್ತರಿಸಲಾಗದಷ್ಟು ಪ್ರಧಾನಿ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ವಿದೇಶಕ್ಕೆ ಹೋಗುವಷ್ಟು ಮತ್ತು ವಿದೇಶದಿಂದ ಬರುವ ಪ್ರತಿನಿಧಿಗಳನ್ನು ಬರಮಾಡಿಕೊಂಡು ಮಾತನಾಡುವಷ್ಟು ಸಮಯವಿರುತ್ತದೆ ಹೊರತು ದೇಶದ ರಾಜ್ಯಗಳಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ಮಾಡುವಷ್ಟು ಅವರಿಗೆ ಸಮಯ ಸಿಗುತ್ತಿಲ್ಲ.

ಹಲವು ದಿನಗಳವರೆಗೆ ಕಾಶ್ಮೀರ ಹೊತ್ತಿ ಉರಿಯಿತು. ದಿನಪತ್ರಿಕೆಗಳ ಮುದ್ರಣ ತಡೆಯುವುದರ ಜೊತೆಗೆ ದೃಶ್ಯ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಯಿತು. ಆದರೆ ಈ ವಿಷಯದ ಬಗ್ಗೆ ನೇರವಾಗಿ ಎಂದಿಗೂ ಪ್ರಸ್ತಾಪಿಸದ ಪ್ರಧಾನಿ ಸೈನಿಕರಿಗೆ ಸೇರಿದಂತೆ ಎಲ್ಲರಿಗೂ ದೇಶಭಕ್ತಿಯ ಪಾಠ ಮಾಡಿದರು. ಕಾಶ್ಮೀರ ಸಮಸ್ಯೆ ಜಟಿಲವಾಗಿದ್ದು, ಪರಿಹಾರ ಕಾಣಸಿಗುತ್ತಿಲ್ಲ. ನೀವು ಮಧ್ಯೆಪ್ರವೇಶಿಸಿ, ಸಮಸ್ಯೆ ಬಗೆಹರಿಸಿ ಎಂದು ದೇಶದ ವಿವಿಧ ರಾಜಕೀಯ ಪಕ್ಷದ ಮುಖಂಡರು ಒತ್ತಾಯಿಸಿದಾಗಲೂ ಪ್ರಧಾನಿಯವರು ನೀಡಿದ್ದು ಒಂದು ಸಾಲಿನ ಉತ್ತರ: ಅದು ರಾಜ್ಯದ ಸಮಸ್ಯೆ. ಅವರೇ ಪರಿಹರಿಸಿಕೊಳ್ಳುತ್ತಾರೆ.

ದೇಶದ 70 ವರ್ಷಗಳ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಮನ್ ಕಿ ಬಾತ್ ಮಾದರಿಯಲ್ಲಿ ದೇಶದ ಜನರನ್ನು ಆತಂಕಕ್ಕೆ ತಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಲಿಲ್ಲ. ಆಗಸ್ಟ್ 15, ಜನವರಿ 26 ಅಥವಾ ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರೇ ಹೊರತು ತಮ್ಮ ಮನಸ್ಸಿನ ಮಾತು ಎಂಬುದಾಗಿ ಪ್ರಸ್ತಾಪಿಸಲಿಲ್ಲ. ಸಂವಿಧಾನದ ಚೌಕಟ್ಟಿನಲ್ಲೇ ಮಾತುಗಳನ್ನು ಸೀಮಿತಗೊಳಿಸಿ, ದೇಶದ ಮುಂದಿನ ಹೆಜ್ಜೆಯಬಗ್ಗೆ ಸರಕಾರ ಹೊಂದಿರುವ ಗುರಿ ಮತ್ತು ಉದ್ದೇಶ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದರೇ ಹೊರತು ಸರ್ವಾಧಿಕಾರಿ ಧೋರಣೆಯಲ್ಲಿ ಮಾತನಾಡುತ್ತಿರಲಿಲ್ಲ. ಹಿಂದಿನ ಪ್ರಧಾನಿಗಳ ಭಾಷಣ ಗಾಂಭೀರ್ಯ ಸ್ವರೂಪದಿಂದ ಅರ್ಥಪೂರ್ಣವಾಗಿರುತಿತ್ತು. ಅಂತಹ ಭಾಷಣ ಮಾಡುವ ಮುನ್ನ ಪ್ರಧಾನಿಯಾದವರು ಸಂಪುಟ ದರ್ಜೆ ಸಚಿವರು ಅಥವಾ ಹಿರಿಯರೊಂದಿಗೆ ಚರ್ಚಿಸುತ್ತಿದ್ದರು. ಅದರ ನಂತರವಷ್ಟೇ ಟಿವಿ ಅಥವಾ ಆಕಾಶವಾಣಿ ಮೂಲಕ ಜನರಿಗೆ ತಮ್ಮ ವಿಚಾರ ಪ್ರಸ್ತುತಪಡಿಸುತ್ತಿದ್ದರು. ದೇಶದ ಸಮಗ್ರ ಪರಿಕಲ್ಪನೆ ಇರುತಿತ್ತೇ ಹೊರತು ಒಂದೆರಡು ವಿಷಯಕ್ಕೆ ಅಥವಾ ರಾಜ್ಯಗಳಿಗೆ ಅದು ಸೀಮಿತವಾಗುತ್ತಿರಲಿಲ್ಲ.

ಆದರೆ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪವಾಗುವ ವಿಷಯಗಳು ಸ್ವತಃ ಕ್ಯಾಬಿನೆಟ್ ದರ್ಜೆ ಸಚಿವರಿಗೆ ಗೊತ್ತಿರುವುದಿಲ್ಲ. ನೋಟುಗಳನ್ನು ಅಮಾನ್ಯಗೊಳಿಸುವ ವಿಷಯ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅಷ್ಟೇ ಅಲ್ಲ, ದೇಶದ ಆರ್ಥಿಕ ಜೀವಾಳವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್‌ಗೂ ಗೊತ್ತಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರು ಭಾವೋದ್ರೇಕವಾಗಿ ಮಾತನಾಡಿದ್ದು ಜನರಿಗೆ ಮುಜುಗರ ಉಂಟು ಮಾಡಿವೆ. ಅದರ ಪರಿಣಾಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲದೇ ಸಾರ್ವಜನಿಕ ಸಮಾರಂಭಗಳಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿವೆ.

ಪ್ರಧಾನಿ ಹುದ್ದೆಗೇರಿದವರು ಒಂದೆರಡು ರಾಜ್ಯಗಳ ವಿಷಯವಷ್ಟೇ ಅಲ್ಲ, ಇಡೀ 30 ರಾಜ್ಯಗಳ ಮೇಲೆ ಕಣ್ಣೋಟ ನೆಟ್ಟಿರಬೇಕು. ಯಾವ ರಾಜ್ಯದಲ್ಲಿನ ಯಾವ ಸಮಸ್ಯೆಗಳಿಗೆ ಕೇಂದ್ರ ಸರಕಾರ ಮಧ್ಯೆಪ್ರವೇಶಿಸಿ ಪರಿಹರಿಸಬಹುದು ಎಂಬುದು ಅರಿವಿರಬೇಕು. ಆರ್ಥಿಕ, ವಿಜ್ಞಾನ, ಸಾಮಾಜಿಕ, ಜನಜೀವನ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿರಬೇಕು. ಇದ್ಯಾವುದರ ಬಗ್ಗೆಯೂ ಸ್ಪಷ್ಟತೆಯಿರದೆ ಇಡೀ ದೇಶವೇ ಗುಜರಾತ್ ಎಂಬ ಭಾವನೆಯಲ್ಲಿ ಆಳ್ವಿಕೆ ನಡೆಸಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಕಾರಣ: ಇಲ್ಲಿ ಗುಜರಾತಿಗಳು ಅಷ್ಟೇ ವಾಸವಿಲ್ಲ. ಭಾರತ ಎಂಬುದು ಉಪಖಂಡ. ಒಂದೊಂದು ರಾಜ್ಯವೂ ಒಂದೊಂದು ದೇಶದಂತೆ ವೈವಿಧ್ಯಮಯ ಜನಜೀವನ ಮತ್ತು ಸಂಸ್ಕೃತಿ ಹೊಂದಿವೆ. ಅತಿಯಾದ ಆತ್ಮವಿಶ್ವಾಸ ಭ್ರಮೆ ಸೃಷ್ಟಿಸುತ್ತದೆಯೇ ಹೊರತು ವಾಸ್ತವಾಂಶದ ದರ್ಶನ ಮಾಡಿಸುವುದಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News