ನೋಟು ರದ್ದತಿ: ವಿರೋಧ ಪಕ್ಷಗಳು ಎಡವಿದ್ದೆಲ್ಲಿ?

Update: 2017-01-02 18:33 GMT

ಚಳಿಗಾಲದ ಅಧಿವೇಶನ ಆರಂಭದ ವೇಳೆಗೆ, ದೇಶದ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಬಗ್ಗೆ ಸರಣಿ ವರದಿಗಳು ಹರಿದುಬರುತ್ತಿದ್ದವು. ಹೊಸ ಕರೆನ್ಸಿ ಇಲ್ಲದೆ, ಚಿಕಿತ್ಸೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಕ್ಕಳು ಬಲಿಯಾಗುತ್ತಿರುವ, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೇ ಒದ್ದಾಡುತ್ತಿರುವ, ನಗದು ಆಧರಿತ ಆರ್ಥಿಕತೆ ಕ್ಷೀಣವಾಗುತ್ತಿರುವ ವರದಿಗಳು ಪ್ರಕಟವಾಗುತ್ತಿದ್ದವು. ಸದನದಲ್ಲಿ ಸರಕಾರದ ವಿರುದ್ಧ ಸಮರಕ್ಕೆ ವಿರೋಧ ಪಕ್ಷಗಳ ಬಳಿ ಸಾಕಷ್ಟು ಅಸ್ತ್ರಗಳಿದ್ದವು. ಆದರೆ ವಿರೋಧ ಪಕ್ಷಗಳ ಗುಂಡುಗಳೆಲ್ಲ ಗುರಿತಪ್ಪಿದವು.

ಭಾರತದ ಸಂಸತ್ ಕಲಾಪದಲ್ಲಿ ಚುನಾಯಿತ ಪ್ರತಿನಿಧಿಗಳು ಬಿರುಗಾಳಿ ಎಬ್ಬಿಸುವುದು ಅಸಹಜವೇನಲ್ಲ. ಮಾಧ್ಯಮ ಇದನ್ನು ಇಷ್ಟಪಡುತ್ತದೆ ಕೂಡಾ. ಆದರೆ ಈ ವರ್ಷದ ಚಳಿಗಾಲದ ಅಧಿವೇಶನ ದೊಡ್ಡ ಚಂಡಮಾರುತವನ್ನೇ ಸೃಷ್ಟಿಸಿದೆ. ಸಂಸತ್ ಕಲಾಪ ನವೆಂಬರ್ 16ರಂದು ಆರಂಭವಾಗುವ ಒಂದು ವಾರದ ಮುನ್ನ, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ಕರೆನ್ಸಿಯನ್ನು ಅಂದರೆ ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸುವ ನಿರ್ಧಾರ ಪ್ರಕಟಿಸಿದರು. ಇದು ದಿಟ್ಟ ನಡೆ ಎಂದು ಒಂದು ವರ್ಗ ವಾದಿಸಿದರೆ, ಮತ್ತೊಂದು ವರ್ಗ, ವಿನಾಶಕಾರಿ ನಿರ್ಧಾರ ಎಂದು ಜರೆಯುತ್ತಿದೆ.

ಚಳಿಗಾಲದ ಅಧಿವೇಶನ ಆರಂಭದ ವೇಳೆಗೆ, ದೇಶದ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಬಗ್ಗೆ ಸರಣಿ ವರದಿಗಳು ಹರಿದುಬರುತ್ತಿದ್ದವು. ಹೊಸ ಕರೆನ್ಸಿ ಇಲ್ಲದೆ, ಚಿಕಿತ್ಸೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಕ್ಕಳು ಬಲಿಯಾಗುತ್ತಿರುವ, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೇ ಒದ್ದಾಡುತ್ತಿರುವ, ನಗದು ಆಧರಿತ ಆರ್ಥಿಕತೆ ಕ್ಷೀಣವಾಗುತ್ತಿರುವ ವರದಿಗಳು ಪ್ರಕಟವಾಗುತ್ತಿದ್ದವು. ಸದನದಲ್ಲಿ ಸರಕಾರದ ವಿರುದ್ಧ ಸಮರಕ್ಕೆ ವಿರೋಧ ಪಕ್ಷಗಳ ಬಳಿ ಸಾಕಷ್ಟು ಅಸ್ತ್ರಗಳಿದ್ದವು. ಆದರೆ ವಿರೋಧ ಪಕ್ಷಗಳ ಗುಂಡುಗಳೆಲ್ಲ ಗುರಿತಪ್ಪಿದವು.

ಸಂಘಟಿತವಾಗಿ ಕಾರ್ಯ ನಿರ್ವಹಿಸಲು ವಿರೋಧ ಪಕ್ಷಗಳು ಎಲ್ಲಿ ಎಡವಿದವು ಎಂಬ ಐದು ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ. ಅಲ್ಪಕಾಲವಾದರೂ ದೇಶದಲ್ಲಿ ಗೊಂದಲ, ಅಲ್ಲೋಲ- ಕಲ್ಲೋಲ ಸ್ಥಿತಿ ಎಬ್ಬಿಸಿದ ಕೇಂದ್ರದ ನೀತಿಯ ಜನಪ್ರಿಯತೆಯ ಮೇಲೆ ದಾಳಿ ಮಾಡುವ ಸುವರ್ಣಾವಕಾಶವನ್ನು ಕಳೆದುಕೊಂಡವು.

ಕಾಂಗ್ರೆಸ್ ದಾರ್ಷ್ಟ್ಯ

ಲೋಕಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷವಾಗಿದ್ದರೂ, ಚಳಿಗಾಲ ಅಧಿವೇಶನದ ಮೊದಲ ವಾರ, ನೋಟು ರದ್ದತಿ ವಿರುದ್ಧ ಸರಕಾರದ ಮೇಲೆ ವಾಗ್ದಾಳಿ ಆರಂಭಿಸಿದ್ದು ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ. ಅಧಿವೇಶನದ ಮೊದಲ ದಿನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೆ ಹಲವು ವಿರೋಧ ಪಕ್ಷಗಳು ಕೂಡಾ ಬೆಂಬಲ ನೀಡಿದವು. ವಾರದ ಬಳಿಕ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸಭೆಯನ್ನೂ ನಡೆಸಿದರು. ಈ ಎರಡೂ ಸಂದರ್ಭಗಳಲ್ಲಿ ಕಾಂಗ್ರೆಸ್ ಗೈರುಹಾಜರಿ ಎದ್ದುಕಾಣುತ್ತಿತ್ತು.

ಈ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಗ್ಗೂಡಬೇಕು ಎಂಬ ಮಮತಾ ಕರೆಗೆ ಕಾಂಗ್ರೆಸ್ ಕಿವಿಗೊಡಲಿಲ್ಲ. ಏಕೆಂದರೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆಯಲು ಅಗತ್ಯವಿದ್ದ 55 ಸ್ಥಾನಗಳ ಮಿತಿಯನ್ನು ದಾಟಲು ಸಾಧ್ಯವಾಗದಿದ್ದರೂ, ತಾನೇ ಸಹಜ ವಿರೋಧ ಪಕ್ಷ ಎಂಬ ಅಹಂಕಾರದಿಂದ ವರ್ತಿಸಿತು. ತೃಣಮೂಲ ಕಾಂಗ್ರೆಸ್‌ನ ಕರೆಗೆ ಓಗೊಟ್ಟು ಪ್ರತಿಭಟನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರೆ, ಸರಕಾರ ವಿರೋಧ ಪಕ್ಷಗಳನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಸಂಸತ್ ಸಂಕೀರ್ಣದ ಗಾಂಧಿ ಪ್ರತಿಮೆಯ ಮುಂದೆ ಸಂಯುಕ್ತ ವಿರೋಧ ಪಕ್ಷಗಳು ನವೆಂಬರ್ 23 ಹಾಗೂ ಡಿಸೆಂಬರ್ 30ರಂದು ನಡೆಸಿದ ಧರಣಿ ಹಾಗೂ ನವೆಂಬರ್ 28ರಂದು ವಿರೋಧ ಪಕ್ಷಗಳು ಸಂಸತ್ ಭವನದ ಹೊರಗೆ ನಡೆಸಿದ ಧರಣಿ ಪರಿಣಾಮಕಾರಿಯಾಗಲಿಲ್ಲ.

ಸಂವಹನ ಕೊರತೆ

ಉತ್ತರ ಪ್ರದೇಶ ಸೇರಿದಂತೆ ಸದ್ಯದಲ್ಲೇ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಮೈತ್ರಿಯ ಕಟ್ಟುಪಾಡಿನಿಂದಾಗಿ ವಿರೋಧ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ಪರಿಸ್ಥಿತಿಗೆ ಅನುಗುಣವಾಗಿ ಸಂಘಟಿತವಾಗುವುದು ಸಾಧ್ಯವಾಗಲಿಲ್ಲ. ಇಂಥ ಕಟ್ಟುಪಾಡು ಇಲ್ಲದ ಪಕ್ಷಗಳು ಕೂಡಾ ಸರಳ ವಿಷಯ ಎನಿಸಿದ ಸಮನ್ವಯ, ಸಂವಹನದ ಕೊರತೆಯಿಂದಾಗಿ ಸಂಘಟಿತರಾಗುವುದು ಸಾಧ್ಯವಾಗಲಿಲ್ಲ.

ಇದರಲ್ಲಿ ಮುಖ್ಯವಾಗಿ ಎರಡು ಪ್ರಮಾದಗಳು ಸಂಭವಿಸಿದವು. ಉದಾಹರಣೆಗೆ ನವೆಂಬರ್ 28ರ ಭಾರತ್ ಬಂದ್ ಕರೆ ವೇಳೆ, ಆ ದಿನದ ಕಾರ್ಯಸೂಚಿ ಬಗ್ಗೆ ವಿರೋಧ ಪಕ್ಷಗಳಲ್ಲೇ ಸ್ಪಷ್ಟತೆ ಇರಲಿಲ್ಲ. ಅಷ್ಟು ಮಾತ್ರವಲ್ಲದೆ, ಸಂಪೂರ್ಣ ಬಂದ್ ಆಚರಿಸಬೇಕೇ ಅಥವಾ ರಸ್ತೆ ಹಾಗೂ ರೈಲು ತಡೆ, ಪ್ರತಿಭಟನಾ ಮೆರವಣಿಗೆ ಹೀಗೆ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಬೇಕೇ ಎಂಬ ಬಗೆಗೆ ಕೂಡಾ ಒಮ್ಮತ ಇರಲಿಲ್ಲ. ಇದರಿಂದಾಗಿ ಎಡಪಕ್ಷಗಳು ಕೆಲ ರಾಜ್ಯಗಳಲ್ಲಿ ಸಂಪೂರ್ಣ ಬಂದ್ ಕರೆ ನೀಡಿದರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಹಾಗೂ ಇತರ ಪಕ್ಷಗಳು ಇದನ್ನು ಪ್ರತಿಭಟನಾ ದಿನವಾಗಿ ಪರಿಗಣಿಸಿದವು.

ಇಂತಹ ಗೊಂದಲಗಳು ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಡಿಸೆಂಬರ್ 16ರಂದು ತೀವ್ರ ಸ್ವರೂಪ ಪಡೆದವು. ನೋಟು ರದ್ದತಿ ವಿರುದ್ಧ ರಾಷ್ಟ್ರಪತಿ ಭವನಕ್ಕೆ 16 ಪಕ್ಷಗಳು ಒಗ್ಗೂಡಿ ಬೃಹತ್ ಜಾಥಾ ನಡೆಸುವ ನಿರ್ಧಾರ ಕೊನೆ ಕ್ಷಣದಲ್ಲಿ ಕೇವಲ ಎಂಟು ಪಕ್ಷಗಳ ಪ್ರತಿಭಟನೆಯಾಗಿ ಮಾರ್ಪಟ್ಟಿತು. ಅಂದು ಬೆಳಗ್ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಮೋದಿಯವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡುವ ಆಗ್ರಹ ಮಂಡಿಸಿತು. ತಮ್ಮನ್ನು ಬಿಟ್ಟು ಏಕಾಏಕಿ ಇಂಥ ನಿರ್ಧಾರ ಕೈಗೊಂಡ ಕಾಂಗ್ರೆಸ್ ಯುವರಾಜನ ಬಗ್ಗೆ ಮುನಿಸಿಕೊಂಡ ಕೆಲ ಪಕ್ಷಗಳು ಪ್ರತಿಭಟನೆಯಿಂದ ಹಿಂದೆ ಸರಿದವು.

ಕಲಾಪಕ್ಕೆ ಅಡ್ಡಿ

 ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಪದೇ ಪದೇ ತಡೆ ಒಡ್ಡುವ ಮೂಲಕ ವಿರೋಧ ಪಕ್ಷಗಳು ನೋಟು ರದ್ದತಿ ಬಗ್ಗೆ ಕೇಂದ್ರ ಸರಕಾರವನ್ನು ಪೇಚಿಗೆ ಸಿಲುಕಿಸುವ ಸುವರ್ಣಾವಕಾಶ ಕಳೆದುಕೊಂಡವು. ಪರಿಣಾಮವಾಗಿ ಕಳೆದ ಹದಿನೈದು ವರ್ಷಗಳಲ್ಲೇ ಅತ್ಯಂತ ಅನುತ್ಪಾದಕ ಅಧಿವೇಶನ ಎಂಬ ಕುಖ್ಯಾತಿಗೆ ಇದು ಪಾತ್ರವಾಯಿತು. ಸಂಸತ್ತಿನ ಉಭಯ ಸದನಗಳಲ್ಲಿ ನೋಟು ರದ್ದತಿ ಬಗ್ಗೆ ಎಂಟು ಗಂಟೆಗಳ ಅವಧಿಯ ಚರ್ಚೆ ನಡೆದಿತ್ತು ಎನ್ನಲಾಗಿದ್ದರೂ, ಇದರಿಂದ ಯಾವ ನಿರ್ಣಯಕ್ಕೂ ಬರಲಾಗಲಿಲ್ಲ. ಇದರ ಪರಿಣಾಮವಾಗಿ ಸಂಸತ್ತಿನಲ್ಲಿ ನಿರೀಕ್ಷೆಯಂತೆ ಬಿರುಗಾಳಿ ಏಳುವ ಬದಲು ಹಿತವಾದ ಗಾಳಿ ಬೀಸಿತು. ಚರ್ಚೆಯಲ್ಲಿ ಅಲ್ಪಕಾಲ ಮಧ್ಯಪ್ರವೇಶಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ನೋಟು ರದ್ದತಿಯನ್ನು ಸಂಘಟಿತ ಲೂಟಿ ಎಂದು ಟೀಕಿಸಿದ್ದು, ಎಂಥ ಪ್ರಬಲ ದಾಳಿ ನಡೆಸಬಹುದಿತ್ತು ಎನ್ನುವ ಒಳನೋಟವನ್ನು ನೀಡಿತ್ತು.

ಬೆಟ್ಟದಷ್ಟು ಭರವಸೆ

ವಾಸ್ತವಕ್ಕಿಂತ ಮಿಗಿಲಾದ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಇದೇ ಮೊದಲಲ್ಲ. ‘ಭೂಕಂಪ ಸಂಭವಿಸುತ್ತದೆ’ ಎಂಬ ವಾತಾವರಣ ಸೃಷ್ಟಿಸಿದ್ದ ರಾಹುಲ್ ಗಾಂಧಿ ಹೇಳಿಕೆ ಅಂತಿಮವಾಗಿ ಸಣ್ಣ ಕಂಪನ ಮೂಡಿಸಲೂ ವಿಫಲವಾಯಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಡಿಸೆಂಬರ್ 14ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಮೋದಿಯವರ ಭ್ರಷ್ಟ ವ್ಯವಹಾರಗಳ ಬಗ್ಗೆ ಪುರಾವೆಗಳಿವೆ ಎಂದು ಘೋಷಿಸಿದರು. ಈ ಕಾರಣದಿಂದ ಸಂಸತ್ತಿನಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ.

ಭೂಕಂಪ ಸೃಷ್ಟಿಸುತ್ತದೆ ಎನ್ನಲಾದ ಈ ಸುದ್ದಿ ತೀರಾ ಸಪ್ಪೆಯಾಗಿ ಪರಿಣಮಿಸಿತು. ಡಿಸೆಂಬರ್ 21ರಂದು ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿ, ‘‘ಮೋದಿಯವರು ಸಹಾರಾ ಉದ್ಯಮ ಸಮೂಹ ಹಾಗೂ ಎ.ವಿ.ಬಿರ್ಲಾ ಸಮುದಾಯದಿಂದ 53 ಕೋಟಿ ರೂಪಾಯಿಗಳ ಲಂಚ ಸ್ವೀಕರಿಸಿದ್ದಾರೆ’’ ಎಂದು ಆರೋಪಿಸಿದರು.

ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಲು ನರೇಂದ್ರ ಮೋದಿಯವರ ತಾಯ್ನೆಲವಾದ ಗುಜರಾತನ್ನೇ ರಾಹುಲ್‌ಗಾಂಧಿ ಆಯ್ಕೆ ಮಾಡಿಕೊಂಡಿದ್ದರೂ, ಘೋಷಣೆಯಲ್ಲಿ ಮಾತ್ರ ಯಾವ ಹೊಸತನವೂ ಇರಲಿಲ್ಲ. ನವೆಂಬರ್‌ನಲ್ಲಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸಹಾರಾ-ಬಿರ್ಲಾ ಡೈರಿಯನ್ನು ಬೆಳಕಿಗೆ ತಂದಿದ್ದರು. ಇದರಲ್ಲಿ ರಾಜಕೀಯ ಧುರೀಣರಿಗೆ ನೀಡಿದ ಪಾವತಿಯ ವಿವರಗಳು ಇದೆ ಎನ್ನಲಾಗಿತ್ತು. ಇವರೊಂದಿಗೆ ಮೋದಿಗೆ ಇದ್ದ ಸಂಪರ್ಕವನ್ನು ಕೂಡಾ ದಿಲ್ಲಿ ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದರು. ಈ ಸಂಬಂಧ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ನಲ್ಲಿ ದಾವೆಯನ್ನೂ ಹೂಡಿದ್ದರು. ರಾಹುಲ್‌ಗಾಂಧಿಯವರ ರ್ಯಾಲಿಗೆ ಒಂದು ವಾರಕ್ಕೆ ಮುನ್ನ ಸುಪ್ರೀಂಕೋರ್ಟ್ ಈ ದಾಖಲೆಗಳ ಅಧಿಕೃತತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿತ್ತು.

ವಿಶ್ವಾಸದ ಕೊರತೆ

ನೋಟು ರದ್ದತಿ ನಿರ್ಧಾರ, ಭ್ರಷ್ಟಾಚಾರ ಹಾಗೂ ಕಪ್ಪುಹಣದ ಕಳೆಯನ್ನು ಕಿತ್ತುಹಾಕುವ ಪ್ರಯತ್ನ ಎಂದು ಬಿಂಬಿಸುವ ಮೂಲಕ ಮೋದಿ ಸರಕಾರ, ಇದನ್ನು ವಿರೋಧಿಸುವುದು ಕಷ್ಟಸಾಧ್ಯ ಎಂಬ ವಾತಾವರಣ ಸೃಷ್ಟಿಸಿತ್ತು. ರೈತರು, ದಿನಗೂಲಿ ಕಾರ್ಮಿಕರು ಹಾಗೂ ಗೃಹಿಣಿಯರು ಇಂದಿಗೂ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದರೂ ಮೋದಿ ಇದನ್ನು, ಶ್ರೀಮಂತರಿಂದ ಸಂಗ್ರಹಿಸಿ ಬಡವರಿಗೆ ಹಂಚುವ ಪ್ರಯತ್ನ ಎಂದೇ ಬಿಂಬಿಸುತ್ತಿದ್ದಾರೆ. ಇದರ ಪರಿಣಾಮ ಗಂಭೀರವಾಗಿ ಬೀರುವುದು ಕಾಳಧನಿಕರ ಮೇಲೆ ಎಂದು ಬಣ್ಣಿಸುತ್ತಿದ್ದಾರೆ. ಇದರಿಂದಾಗಿ ನೋಟು ರದ್ದತಿ ನಿರ್ಧಾರಕ್ಕೆ, ತೀರಾ ಬವಣೆಗೆ ಈಡಾಗಿರುವ ಬಡವರ್ಗದಿಂದ ಮಹತ್ವದ ಬೆಂಬಲವನ್ನು ದೊರಕಿಸಿಕೊಟ್ಟಿದೆ.

ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ಹೆಸರಂತೂ ಇಲ್ಲ. ಯುಪಿಎ ಆಡಳಿತಾವಧಿಯಲ್ಲಿ ಸರಣಿ ಹಗರಣಗಳು ನಡೆದ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್‌ಗೆ ಯಾವ ರಾಜಕೀಯ ಲಾಭವನ್ನೂ ತಂದುಕೊಟ್ಟಿಲ್ಲ. ಮಮತಾ ಬ್ಯಾನರ್ಜಿ, ಮುಲಾಯಂಸಿಂಗ್ ಯಾದವ್, ಮಾಯಾವತಿ, ಲಾಲೂ ಪ್ರಸಾದ್ ಯಾದವ್ ಹಾಗೂ ಇತರ ಮುಖಂಡರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರೂ, ಹಣಕಾಸು ಪ್ರಾಮಾಣಿಕತೆಯ ಗೌರವ ಇವರ್ಯಾರಿಗೂ ಇಲ್ಲ. ನೋಟು ರದ್ದತಿ ವಿರುದ್ಧದ ಎಲ್ಲ ಟೀಕೆಗಳನ್ನೂ ಸಾರಾಸಗಟಾಗಿ ತಳ್ಳಿಹಾಕುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ವಿರೋಧ ಪಕ್ಷಗಳು ಭ್ರಷ್ಟಾಚಾರ ಹಾಗೂ ಕಾಳಧನಿಕರ ಪರ ಎಂಬ ಗೂಬೆಕೂರಿಸುವ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ. ಇಂದಿನವರೆಗೂ ವಿರೋಧ ಪಕ್ಷಗಳಿಗೆ ಇದನ್ನು ಹೇಗೆ ವಿರೋಧಿಸಬೇಕು ಎನ್ನುವ ಮಾರ್ಗ ಸಿಕ್ಕಿಲ್ಲ.

ಏನಿಲ್ಲದಿದ್ದರೂ, ಪಕ್ಷದ ನಾಯಕರಿಗೆ ಮುಜುಗರ ತರುವಂಥದ್ದಾದರೂ, ಸಹರಾ-ಬಿರ್ಲಾ ಡೈರಿಯಲ್ಲಿ ಉಲ್ಲೇಖವಾಗಿರುವ ಶೀಲಾ ದೀಕ್ಷಿತ್ ಹಾಗೂ ಸಲ್ಮಾನ್ ಖುರ್ಷಿದ್ ಅವರಂಥ ನಾಯಕರಲ್ಲಿ ಸ್ಪಷ್ಟನೆ ಕೇಳುವ ಮೂಲಕ ರಾಹುಲ್‌ಗಾಂಧಿ, ಹೇಗೆ ತಮ್ಮ ಪಕ್ಷ ಭ್ರಷ್ಟಾಚಾರದ ವಿರುದ್ಧ ಸಮರವನ್ನು ಹೊಸದಾಗಿ ಆರಂಭಿಸಿದೆ ಎನ್ನುವುದನ್ನು ತೋರಿಸಿಕೊಡಲು ಅವಕಾಶವಿತ್ತು. ಬಡವರ ವಿಸ್ತೃತ ಹಿತಾಸಕ್ತಿ ಕಾಪಾಡುವ ಸಲುವಾಗಿ ಸರಕಾರ ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಧರ್ಮಯುದ್ಧ ಮಾಡುತ್ತಿದೆ ಎಂಬ ಮೋದಿ ಪ್ರತಿಪಾದನೆಯ ವಿರುದ್ಧ ಮಾತನಾಡಲು ಅವಕಾಶ ಸೃಷ್ಟಿಸಿಕೊಳ್ಳುವಲ್ಲಿ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದೇ ಹೇಳಬೇಕು.

ನೋಟು ರದ್ದತಿ ವಿರುದ್ಧದ ಹೋರಾಟವನ್ನು ಮುಂದೆ ಕೊಂಡೊಯ್ಯುವ ಸಂಬಂಧ ಚರ್ಚಿಸಲು ಕಳೆದ ಮಂಗಳವಾರ ಕಾಂಗ್ರೆಸ್ ಪಕ್ಷ ಕರೆದಿದ್ದ ಸಭೆಯಲ್ಲಿ ಅರ್ಧದಷ್ಟು ಪಕ್ಷಗಳು ಭಾಗವಹಿಸಲೇ ಇಲ್ಲ. ಹದಿನಾರು ಪಕ್ಷಗಳ ಪೈಕಿ ಕಾಂಗ್ರೆಸ್, ತೃಣಮೂಲ, ಡಿಎಂಕೆ, ರಾಷ್ಟ್ರೀಯ ಜನತಾದಳ ಹಾಗೂ ಜೆಡಿಯು ಹೀಗೆ ಎಂಟು ಪಕ್ಷಗಳ ಮುಖಂಡರು ಮಾತ್ರ ಭಾಗವಹಿಸಿದ್ದರು.

ಆದ್ದರಿಂದ 2016ನೆ ಇಸವಿ ನಗದು ಸಂಕಷ್ಟದ ಅನಿವಾರ್ಯ ಸ್ಥಿತಿಯಲ್ಲಿ ದೇಶವನ್ನು ಸಿಲುಕಿಸಿದೆ. ಜನರ ಸಂಕಷ್ಟಗಳು 50 ದಿನಗಳಲ್ಲಿ ಪರಿಹಾರವಾಗುತ್ತವೆ ಎಂಬ ಭರವಸೆಯನ್ನು ಮೋದಿ ನೀಡಿದ್ದರು. ಈ ದಿನವನ್ನು ಲೆಕ್ಕ ಮಾಡುತ್ತಲೇ ಕುಳಿತ ವಿರೋಧ ಪಕ್ಷಗಳು, ಇದನ್ನು ಕಾರ್ಯಸಾಧು ಪರ್ಯಾಯವಾಗಿ ಬಳಸಿಕೊಳ್ಳಲು ವಿಫಲವಾಗಿವೆ.

ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ ಹಾಗೂ ಗೋವಾ ರಾಜ್ಯ ವಿಧಾನಸಭೆಗಳಿಗೆ 2017ರಲ್ಲಿ ಚುನಾವಣೆ ನಡೆಯಲಿದ್ದು, ಸರಕಾರಕ್ಕೆ ನಿಜವಾಗಿಯೂ ಇದು ದೊಡ್ಡ ಸವಾಲು. ಜತೆಗೆ ವಿರೋಧ ಪಕ್ಷಗಳಿಗೆ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೂ ಇದನ್ನು ಅನ್ವಯಿಸಬಹುದು. ವಿರೋಧ ಪಕ್ಷಗಳು ಈ ರಾಜ್ಯಗಳಲ್ಲಿ ಅಲ್ಪ ಅವಧಿಯಲ್ಲೇ ತಮ್ಮ ಬಲವರ್ಧನೆ ಬಗ್ಗೆ ಚಿಂತಿಸುವ ಜತೆಗೆ, ಕೇಂದ್ರದ ವಿರುದ್ಧ ಬಲವನ್ನು ಒಗ್ಗೂಡಿಸುವ ನಿಟ್ಟಿನಲ್ಲೂ ಹೆಜ್ಜೆ ಇಡಬೇಕಾಗಿದೆ. ಇವೆರಡನ್ನೂ ಮಾಡಲು ವಿರೋಧ ಪಕ್ಷಗಳು ವಿಫಲವಾದರೆ, ಮತದಾರರು ಬಂಡೆ ಹಾಗೂ ಗಟ್ಟಿ ಪ್ರದೇಶದ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ.

ಕೃಪೆ: scroll.in

Writer - ಸೌಮ್ಯಾ ರಾವ್

contributor

Editor - ಸೌಮ್ಯಾ ರಾವ್

contributor

Similar News