ಭಾರತೀಯ ರಸ್ತೆಗಳು ಮಹಿಳೆಯರಿಗೆ ಸುರಕ್ಷಿತವಲ್ಲ !

Update: 2017-01-03 08:46 GMT

ಅದು 2003. ಲಖ್ನೋ ಮಹೋತ್ಸವದಲ್ಲಿ ಹೇಗೆ ಅಬಾಲವೃದ್ಧರಾಗಿ ಮಹಿಳೆಯರ ಮೇಲೆ ಹಲ್ಲೆ, ಲೈಂಗಿಕ ಸ್ಪರ್ಶಗಳನ್ನು ನಡೆಸಲಾಗಿತ್ತು ಎಂದು ಹತ್ತನೇ ತರಗತಿ ವಿದ್ಯಾರ್ಥಿನಿಗಳು ತಮ್ಮ ಶಾಲೆಯಲ್ಲಿ ವಿವರಿಸಿದ್ದರು. ಸಹೋದರರು ಹೇಗೆ  ತಮ್ಮನ್ನು ಸುತ್ತುವರಿದ ಪುರುಷರನ್ನು ದೂರ ಮಾಡಿ ರಕ್ಷಿಸಿದ್ದರು ಎನ್ನುವುದನ್ನು ಬಾಲಕಿಯರು ವಿವರಿಸಿದ್ದರು. ಕೆಲವರು ಬಟ್ಟೆಗಳು ಹರಿದಿದ್ದವು, ಅಶ್ಲೀಲ ಹಲ್ಲೆಗೆ ಒಳಗಾಗಿದ್ದರು. ಆದರೆ ಹಾಗೆ ಗುಂಪಿನಲ್ಲಿ ಆಕ್ರಮಣಗೈದ ಯುವಕರು ಯಾರೆಂದು ಕೊನೆಗೂ ತಿಳಿಯಲಿಲ್ಲ ಮತ್ತು ಬಂಧನಗಳೂ ನಡೆಯಲಿಲ್ಲ. ಈ ಬಗ್ಗೆ ಗೂಗಲ್ ಸರ್ಚ್ ಮಾಡಿದರೂ ಇನ್ನೇನೂ ವಿವರಗಳು ಸಿಗುವುದಿಲ್ಲ. ಲಖ್ನೋ ಮಹೋತ್ಸವದಲ್ಲಿ ಹೀಗೆ ಗುಂಪಿನಲ್ಲಿ ಮಹಿಳೆಯರು ಹಲ್ಲೆಗೊಳಗಾದ ವಿಷಯ ಎಲ್ಲರಿಗೂ ಗೊತ್ತಿದ್ದರೂ ಅದು ಸುದ್ದಿಯಾಗಲೇ ಇಲ್ಲ. ಭಾರತದ ಎಲ್ಲಾ ಜನಸಂದಣಿ ಸೇರುವ ಇಂಥ ಜಾತ್ರೆಗಳು, ಪರಿಷೆಗಳಂತಹ ಸ್ಥಳಗಳಲ್ಲಿ ಮಹಿಳೆಯರಿಗೆ ಇಂತಹುದೇ ಅನುಭವವಾಗುತ್ತದೆ. ಕೆಲವು ಪತ್ರಿಕೆಗಳ ಒಳಪುಟಗಳಲ್ಲಿ ಮತ್ತು ವಾಹಿನಿಗಳ ಎರಡು ದಿನದ ಬ್ರೇಕಿಂಗ್ ಸುದ್ದಿಯಾಗಿ ಇವು ಮರೆಯಾಗುತ್ತವೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಏನೂ ಬರೆಯಲಾಗುವುದಿಲ್ಲ. ಲಖನೌಶೇಮ್ ಅಥವಾ ಲಖನೌಹಲ್ಲೆ ಎಂದು ಟ್ರೆಂಡ್ ಆಗುವುದಿಲ್ಲ.

ಇದು 2016. ಈಗ ಬೆಂಗಳೂರು ಹೊಸ ವರ್ಷದ ಆಚರಣೆ ಸಂದರ್ಭ ನಡೆದ ಹಲ್ಲೆಯ ಬಗ್ಗೆ ಸುದ್ದಿಯಲ್ಲಿದೆ. ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಮಹಿಳೆಯರನ್ನು ಅತೀ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಮತ್ತು ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗುತ್ತಿದೆ. 2007ರಲ್ಲಿ ಮುಂಬೈನಲ್ಲೂ ಇಂತಹುದೇ ಆಕ್ರೋಶ ಕೇಳಿ ಬಂದಿತ್ತು. ಸಾಮಾಜಿಕ ಮಾಧ್ಯಮಗಳು, ಬ್ಲಾಗ್ ಗಳು ಆಕ್ರೋಶ ವ್ಯಕ್ತಪಡಿಸಿದರೆ, ಸಚಿವರು ಪಾಶ್ಚಾತ್ಯ ಸಂಸ್ಕೃತಿ ಹೆಸರಲ್ಲಿ ಸಂವೇದನಾರಹಿತವಾಗಿ ಹೇಳಿಕೆ ನೀಡಿರುವ ಬಗ್ಗೆ ಟೀಕೆಗಳು ಕೇಳಿಬಂದಿವೆ.

ಆದರೆ ವಾಸ್ತವವೆಂದರೆ ಭಾರತದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳು ಸುರಕ್ಷಿತವಲ್ಲ ಎನ್ನುವುದನ್ನು ಯುವತಿಯರು ಮತ್ತು ಹೆತ್ತವರು ತಿಳಿದುಕೊಳ್ಳುವ ಕಾಲ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಗುಂಪಿನಲ್ಲಿ ಓಡಾಡುವಾಗ ಲೈಂಗಿಕ ಹಲ್ಲೆಗಳು ನಡೆದೇ ನಡೆಯುತ್ತವೆ ಎನ್ನುವ ಸತ್ಯವನ್ನು ನಾವು ಜೀರ್ಣಿಸಿಕೊಳ್ಳಲೇಬೇಕು. ಇದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಾತ್ರ ಆಗುತ್ತದೆ ಎನ್ನುವುದು ನಿಮ್ಮ ಅಭಿಪ್ರಾಯವಾದರೆ, ವಾಸ್ತವಾಂಶದ ಅರಿವು ನಿಮಗಿಲ್ಲ. ಬಸ್ಸಿನಲ್ಲಿ ಜನಸಂದಣಿ ಹೆಚ್ಚಾಗಿದ್ದರೆ ನಿಮಗೆ ಇಂತಹ ಅನುಭವವಾಗಿಲ್ಲವೆ? ಲೇಡೀಸ್ ವಿಭಾಗದಲ್ಲಿ ನೀವು ಇಲ್ಲವೆಂದಾದಲ್ಲಿ ಇಂತಹ ಅನುಭವ ಸಾಮಾನ್ಯ. ಇಂತಹ ಅನುಚಿತ ಅನುಭವ ಆಗಬಾರದು ಎಂದಿದ್ದಲ್ಲಿ ಮಹಿಳೆಯರಿಗೆ ಮಾತ್ರ ಇರುವ ಸಾರಿಗೆ ವ್ಯವಸ್ಥೆ, ಕಡಿಮೆ ಜನಸಂದಣಿ ಇರುವ ಸ್ಥಳ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲೇ ಹೆಚ್ಚು ಓಡಾಡುವ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಯಾವುದೇ ನಗರವಿರಲಿ, ಸಂದೇಶ ಒಂದೇ. ಪುರುಷರು ಸಾರ್ವಜನಿಕ ಸ್ಥಳಗಳನ್ನು ಮಹಿಳೆಯರ ಜೊತೆಗೆ ಸೌಹಾರ್ದವಾಗಿ ಹಂಚಿಕೊಂಡು ಬದುಕಲು ಬಯಸುವುದಿಲ್ಲ. ರಸ್ತೆಗಳಲ್ಲಿ ಕುಡಿದು ತೂರಾಡುವುದನ್ನು ಪುರುಷರು ಮಾಡಿದಷ್ಟು ಸಲೀಸಾಗಿ ಯುವತಿಯರು ಮಾಡುವಂತಿಲ್ಲ. ಹಾಗೆ ಮಾಡಿದಲ್ಲಿ ಅದಕ್ಕೆ ಬೆಲೆ ತೆರಬೇಕು ಎನ್ನುವುದು ಸಾಬೀತಾಗುತ್ತದೆ.

ಬೆಂಗಳೂರಿನ ಘಟನೆ ಇಂತಹ ಮನೋಭಾವ ಮತ್ತು ನಡವಳಿಕೆಗೆ ಪ್ರತ್ಯಕ್ಷ ಸಾಕ್ಷಿ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಹಲ್ಲೆಗಳಾದಾಗ ಅವು ಭೀಕರ ಕತೆಗಳಾಗೇ ಉಳಿಯುತ್ತವೆಯೇ ವಿನಾ ಮಾಧ್ಯಮ, ಪೊಲೀಸರು ಅಥವಾ ಆಡಳಿತಕ್ಕೆ ಅದು ಮಹತ್ವವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News