ಇರುವ ಯೋಜನೆಯನ್ನು ಜಾರಿಗೆ ತರದೆ, ಹಳೆ ಯೋಜನೆಗೆ ಹೊಸ ಉಡುಪು ತೊಡಿಸಿದ ಪ್ರಧಾನಿ !

Update: 2017-01-03 09:08 GMT

ಹೊಸ ವರ್ಷದ ಮುನ್ನಾ ದಿನ ಪ್ರಧಾನ ಮಂತ್ರಿಯವರು ಭಾಷಣದಲ್ಲಿ ಕಪ್ಪುಹಣದ ಬಗ್ಗೆ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಭಾಷಣದಲ್ಲಿ ಪ್ರಧಾನಿ ವಿಚಿತ್ರ ವಿವರಗಳನ್ನು ನೀಡಿದ್ದರೂ, ಕೆಲವು ಹೊಸ ಕಲ್ಯಾಣ ಯೋಜನೆಗಳನ್ನು ಬಡವರಿಗಾಗಿ ಘೋಷಿಸಿದರು.

ಆದರೆ ಈ ಹೊಸ ಯೋಜನೆಗಳು ನಿಜವಾಗಿಯೂ ಪ್ರಧಾನಿಯವರ ಚಿಂತನೆಯ ಕೂಸುಗಳೇ? ಆದರೆ ಮಹಿಳೆಯರಿಗೆ ಪ್ರಸವದ ಸಂದರ್ಭದ ನೆರವಿಗೆಂದು ರೂ. 6000 ನೆರವು ಘೋಷಿಸಿರುವುದು ಹೊಸ ಯೋಜನೆಯೇನಲ್ಲ. ಈ ಮೊತ್ತವನ್ನು ಪಡೆಯುವುದು 2013ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಗರ್ಭಿಣಿಯರ ಹಕ್ಕಾಗಿದ್ದರೂ ಸರಕಾರ ಅದನ್ನು ಈವರೆಗೆ ಜಾರಿಗೆ ತರುವ ಪ್ರಯತ್ನವನ್ನೂ ಮಾಡಿಲ್ಲ.

ಪ್ರಸವದ ಸಂದರ್ಭ ರೂ. 6000 ಕೊಡಲಾಗುವುದು ಮತ್ತು ಈ ಯೋಜನೆಯನ್ನು ದೇಶದಾದ್ಯಂತ 650 ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು. ಈ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಪ್ರಸವದ ಸಂದರ್ಭದಲ್ಲಿ ಮಹಿಳೆಯರು ವೇತನ ಪಡೆಯಲು ಸಾಧ್ಯವಿಲ್ಲದ ಕಾರಣ ಈ ಪರಿಹಾರವನ್ನು ಘೋಷಿಸಲಾಗಿದೆ.

ಸಂಘಟಿತ ಕ್ಷೇತ್ರದ ಮಹಿಳೆಯರಿಗೆ ವೇತನ ಸಹಿತ ರಜಾ ಸಿಗುತ್ತಿದ್ದರೂ, ಅಸಂಘಟಿತ ಕ್ಷೇತ್ರಗಳಲ್ಲಿ ಈ ಸೌಲಭ್ಯವಿರುವುದಿಲ್ಲ. ಹೀಗಾಗಿ ಸರಕಾರ ನೀಡುವ ಹಣ ಅವರಿಗೆ ಅಗತ್ಯ. ಹೀಗಾಗಿ ಇದು ಉತ್ತಮ ಯೋಜನೆಯೇ ಆಗಿದ್ದರೂ, ಪ್ರಧಾನಿಯ ಅಥವಾ ಎನ್ ಡಿ ಎ ಸರಕಾರದ ಯೋಜನೆಯಂತೂ ಇದಲ್ಲ.

ಪ್ರಸವ ಸಂದರ್ಭ ಸರ್ಕಾರದಿಂದ ಎಲ್ಲಾ ಮಹಿಳೆಯರಿಗೆ ಕಡ್ಡಾಯವಾಗಿ ನೀಡುವ ಪರಿಹಾರ ರೂ. 6000ಕ್ಕಿಂತ ಕಡಿಮೆ ಇರಬಾರದು ಎಂದು 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರವೇ ಹೇಳಿದೆ. ಮೋದಿಯವರು ಈ ಹಿಂದಿನ ಕಾನೂನಿನ ಬಗ್ಗೆ ಯಾವುದೇ ಉಲ್ಲೇಖ ಮಾಡದೆ, ಯೋಜನೆಯನ್ನು ಮುಂದಿಟ್ಟಿದ್ದಾರೆ.

ಒಟ್ಟಾರೆಯಾಗಿ ನೋಟು ಅಮಾನ್ಯದ ವಿಚಾರವಾಗಿ ಸಂಕಷ್ಟದಲ್ಲಿರುವ ಸರಕಾರ ತನ್ನ ಮುಖವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನವಿದು ಎನ್ನುವ ಸಂಶಯ ಬರುತ್ತಿದೆ.

ಈಗಾಗಲೇ ಹಳೇ ಕಾಯ್ದೆಯಡಿ ದೇಶದ 53 ಜಿಲ್ಲೆಗಳಲ್ಲಿ ಪ್ರಸವದ ಸಂದರ್ಭ ಮಹಿಳೆಯರಿಗೆ ಸೌಲಭ್ಯ ಸಿಗುತ್ತಿದೆ. ಆದರೆ ಬಜೆಟ್ ನಲ್ಲಿ ಇದಕ್ಕೆ ಹಣ ಘೋಷಿಸದೆ ಇರುವ ಕಾರಣ ಪ್ರಾಯೋಗಿಕ ಹಂತದಲ್ಲಿ ಈ ಯೋಜನೆ ಜಾರಿಯಲ್ಲಿರುವ ಕಡೆಯೂ ಮಹಿಳೆಯರು ಸಂಪೂರ್ಣ ನೆರವು ಪಡೆದುಕೊಂಡಿಲ್ಲ ಮತ್ತು ಇದನ್ನು ಇತರ ಕಡೆಗಳಿಗೆ ವಿಸ್ತರಿಸಲೂ ಇಲ್ಲ.

2010ರಲ್ಲಿ ಆರಂಭವಾದ ಇಂದಿರಾ ಗಾಂಧಿ ಮಾತೃ ಸಹಯೋಗ ಯೋಜನೆಯಲ್ಲಿ ಗರ್ಭಿಣಿಯರಿಗೆ ನಗದು ಲಾಭವನ್ನು ನೀಡಲಾಗುತ್ತದೆ. 53 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದ್ದು, ತಾಯಂದಿರು ರೂ. 6000ವನ್ನು ಮೂರು ಕಂತುಗಳಲ್ಲಿ ಪಡೆಯುತ್ತಿದ್ದಾರೆ.  ಮಹಿಳೆ 19 ವರ್ಷ ಮೇಲ್ಪಟ್ಟಿದ್ದು,ಮೊದಲ ಎರಡು ಮಕ್ಕಳಿಗೆ ಮಾತ್ರ ಪರಿಹಾರ ಸಿಗುತ್ತದೆ.

ಆದರೆ ಪ್ರಾಯೋಗಿಕವಾಗಿ ಇದು ಜಾರಿಯಲ್ಲಿದ್ದ ಕಡೆಯೂ ಕೇವಲ ಶೇ. 20ರಷ್ಟು ಮಹಿಳೆಯರು ಮಾತ್ರ ಯೋಜನೆಯ ಲಾಭ ಪಡೆದಿದ್ದಾರೆ. ಅನುದಾನ ಕೊರತೆಯೂ ಅನುಷ್ಠಾನ ಸರಿಯಾಗಿ ಆಗದೆ ಇರಲು ಕಾರಣ ಎನ್ನಲಾಗಿದೆ. ಹೀಗಾಗಿ ಈ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡಬೇಕೆಂದು ರಾಜಸ್ಥಾನದ ರೋಜಿ ರೋಟಿ ಅಧಿಕಾರ್ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮೊದಲಾದ ಸರ್ಕಾರೇತರ ಸಂಘಟನೆಗಳು ಬೇಡಿಕೆ ಇಟ್ಟಿವೆ.

ಈ ಯೋಜನೆಗೆ ಬಜೆಟ್ ನಲ್ಲಿ ರೂ. 400 ಕೋಟಿ ಮಾತ್ರ ಮೀಸಲಿಡಲಾಗಿದೆ. ಆದರೆ ವಾಸ್ತವದಲ್ಲಿ ಎಲ್ಲಾ ಗರ್ಭಿಣಿಯರನ್ನು ತಲುಪಲು ಕನಿಷ್ಠ ರೂ. 16,000 ಕೋಟಿ ಅನುದಾನದ ಅಗತ್ಯವಿದೆ.

ಕೇಂದ್ರ ಈ ಯೋಜನೆಯಲ್ಲಿ ವಿಫಲವಾಗಿದ್ದರೂ ತಮಿಳುನಾಡು ಮತ್ತು ಒಡಿಶಾಗಳು ತಾಯಂದಿರಿಗೆ ತಮ್ಮದೇ ಬಜೆಟ್ ಅನುದಾನದ ಮೂಲಕ ಉತ್ತಮ ಪರಿಹಾರವನ್ನು ಕೊಡುತ್ತಿವೆ. ತಮಿಳುನಾಡಿನಲ್ಲಿ 1987ರಿಂದಲೇ ಇಂತಹ ಯೋಜನೆ ಜಾರಿಯಲ್ಲಿದೆ.

ಆರಂಭದಲ್ಲಿ ಪ್ರತೀ ಗರ್ಭಿಣಿಗೆ ರೂ. 300 ಅನುದಾನ ನೀಡುತ್ತಿದ್ದರೆ, ಈಗ 2011ರಿಂದ ಅದನ್ನು ರೂ. 12,000ಕ್ಕೆ ಏರಿಸಲಾಗಿದೆ. ಒಡಿಶಾದಲ್ಲಿ ಇಂತಹುದೇ ಯೋಜನೆಯಲ್ಲಿ ತಾಯಂದಿರು ರೂ. 5000 ಪರಿಹಾರ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News