ದೊಣ್ಣೆಮೆಣಸು....ಹೆಸರಿನಲ್ಲಿ ಮಾತ್ರ ದೊಣ್ಣೆ

Update: 2017-01-03 09:30 GMT

ಸಿಹಿಮೆಣಸು ಎಂದೂ ಕರೆಯಲಾಗುವ ದೊಣ್ಣೆಮೆಣಸು ಕ್ಯಾಪ್ಸಿಕಂ ಎನ್ಯೂಯಮ್ ಕುಟುಂಬದಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಮೆಣಸಿನಕಾಯಿ ಆಗಿದೆ. ನಮ್ಮ ಪಲಾವ್‌ಗಂತೂ ದೊಣ್ಣೆ ಮೆಣಸು ಬೇಕೇಬೇಕು. ಅದಿಲ್ಲದಿದ್ದರೆ ಪಲಾವ್ ತಿಂದಂತೆಯೇ ಆಗುವುದಿಲ್ಲ.

ಇನ್ನು ಜನಪ್ರಿಯವಾಗಿರುವ ಚೈನೀಸ್ ಖಾದ್ಯಗಳಲ್ಲಂತೂ ದೊಣ್ಣೆಮೆಣಸು ಅವಿಭಾಜ್ಯ ಅಂಗವಾಗಿದೆ. ಇದರ ವೈಜ್ಞಾನಿಕ ಕೆಸರು ಕ್ಯಾಪ್ಸಿಕಮ್ ಎನ್ಯೂಯಮ್ ಎಲ್.

ಇದು ಇತರ ಮೆಣಸಿನಕಾಯಿಗಳಂತೆ ಅಲ್ಲ. ವಿಶಿಷ್ಟವಾದ ಗಂಟೆಯ ಆಕಾರವನ್ನು ಹೊಂದಿರುವ ದೊಣ್ಣೆಮೆಣಸು ಇತರ ಮೆಣಸಿನಕಾಯಿಗಳಿಗೆ ಹೋಲಿಸಿದರೆ ಘಾಟು ವಾಸನೆಯನ್ನು ಹೊಂದಿಲ್ಲ, ಖಾರದ ಪ್ರಮಾಣವೂ ಅತ್ಯಂತ ಕಡಿಮೆ.

ತಿಂದರೆ ಖಾರ ಅನುಭವಕ್ಕೇ ಬರುವುದಿಲ್ಲ. ಹೀಗಾಗಿಯೇ ದೊಣ್ಣೆಮೆಣಸನ್ನು ಇತರ ಸಾಮಾನ್ಯ ತರಕಾರಿಗಳಂತೆ ಬಳಸಲಾಗುತ್ತದೆ.

 ಮೆಕ್ಸಿಕೊ ಮತ್ತು ಇತರ ಮಧ್ಯ ಅಮೇರಿಕ ಪ್ರದೇಶಗಳ ಮೂಲದ ಬೆಳೆಯಾದ ದೊಣ್ಣೆಮೆಣಸು 16 ಮತ್ತು 17ನೇ ಶತಮಾನಗಳಲ್ಲಿ ಸ್ಪೇನ್ ಮತ್ತು ಪೋರ್ಚುಗೀಸ್ ಅನ್ವೇಷಕರಿಂದ ಜಗತ್ತಿನ ಇತರೆಡೆಗಳಿಗೆ ಹರಡಿತ್ತು. ಇಂದು ವಿಶ್ವದ ಹಲವು ಭಾಗಗಳಲ್ಲಿ ಇದನ್ನು ವಾಣಿಜ್ಯಿಕ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇತರ ಮೆಣಸಿನಕಾಯಿ ಮಾದರಿಗಳಂತೆ ದೊಣ್ಣೆಮೆಣಸಿನಲ್ಲಿಯೂ ಹಲವರು ಮಾದರಿಗಳಿವೆ.

ಮೆಣಸಿನಕಾಯಿಯಲ್ಲಿನ ಖಾರದ ಪ್ರಮಾಣವನ್ನು ಸ್ಕೊವಿಲ್ಲೆ ಹೀಟ್ ಯುನಿಟ್ (ಎಸ್‌ಎಚ್‌ಯು)ಗಳ ಮೂಲಕ ಅಳೆಯಲಾಗುತ್ತದೆ. ದೊಣ್ಣೆಮೆಣಸು ಶೂನ್ಯ ಎಸ್‌ಎಚ್‌ಯುಗಳನ್ನು ಹೊಂದಿದ್ದರೆ, ಜಲಪೆನೊ ವರ್ಗದ ಮೆಣಸು ಸುಮಾರು 2,500-4,000 ಮತ್ತು ಮೆಕ್ಸಿಕನ್ ಹಬನಿರೊಸ್ 2,00,000-5,00,000 ಎಸ್‌ಎಚ್‌ಯುಗಳನ್ನು ಹೊಂದಿವೆ.

ದೊಣ್ಣೆಮೆಣಸಿನ ಆರೋಗ್ಯವರ್ಧಕ ಗುಣಗಳು

ದೊಣ್ಣೆಮೆಣಸು ಹಲವಾರು ರೋಗ ನಿರೋಧಕ ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿಯಾದ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬನ್ನು ಹೊಂದಿರುವ ದೊಣ್ಣೆಮೆಣಸು ಪ್ರತಿ 100 ಗ್ರಾಮ್‌ನಲ್ಲಿ ಕೇವಲ 31 ಕ್ಯಾಲೊರಿಗಳನ್ನು ನೀಡುತ್ತದೆ.

ಹೃದಯಕ್ಕೆ ಲಾಭಕಾರಿಯಾದ ಕಾಪ್ಸಾಯಿಸಿನ್ ಹೆಸರಿನ ಅಲ್ಕಲಾಯ್ಡಾ ಸಂಯುಕ್ತವನ್ನು ಸ್ವಲ್ಪ ಪ್ರಮಾಣದಲ್ಲಿ ಹೊಂದಿದೆ. ಇದು ಬೊಜ್ಜುದೇಹದ ವ್ಯಕ್ತಿಗಳಲ್ಲಿ ಟ್ರೈಗ್ಲಿಸರಾಯ್ಡಿಗಳು ಮತ್ತು ಎಲ್‌ಡಿಎಲ್ ಕೊಲೆಸ್ಟರಲ್ ಮಟ್ಟವನ್ನು ತಗ್ಗಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ.

  ಕೆಂಪು ಅಥವಾ ಹಸಿರು ತಾಜಾ ದೊಣ್ಣೆಮೆಣಸಿನಕಾಯಿಯಲ್ಲಿ ವಿಟಾಮಿನ್ ಸಿ ಸಮೃದ್ಧವಾಗಿದೆ. ಕೆಂಪು ದೊಣ್ಣೆಮೆಣಸಿನಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ನೀರಿನಲ್ಲಿ ಸುಲಭವಾಗಿ ಕರಗಬಲ್ಲ ವಿಟಾಮಿನ್ ಸಿ ಕೊಲಾಜೆನ್ ಸಂಶ್ಲೇಷಣೆಗಾಗಿ ನಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ.

ಕೊಲಾಜೆನ್ ರಕ್ತನಾಳಗಳು,ಚರ್ಮ,ಅಂಗಾಂಗಗಳು ಮತ್ತು ಎಲುಬುಗಳ ಸಮಗ್ರತೆಯನ್ನು ಕಾಯ್ದುಕೊಳ್ಳಲು ಅಗತ್ಯವಾದ ಮುಖ್ಯ ರಚನಾತ್ಮಕ ಪ್ರೋಟಿನ್ ಆಗಿದೆ. ವಿಟಮಿನ್ ಸಿ ಹೇರಳವಾಗಿ ಒಳಗೊಂಡಿರುವ ಆಹಾರದ ನಿಯಮಿತ ಸೇವನೆಯು ಸ್ಕರ್ವಿ ರೋಗದ ವಿರುದ್ಧ ರಕ್ಷಣೆ ನೀಡುವುದರ ಜೊತೆಗೆ ಸೋಂಕು ಕಾರಕಗಳ ವಿರುದ್ಧ ಪ್ರತಿರೋಧಕ ಶಕ್ತಿಯನು ಹೆಚ್ಚಿಸುತ್ತದೆ. ದೇಹದಲ್ಲಿರುವ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುತ್ತದೆ.

ದೊಣ್ಣೆಮೆಣಸು ವಿಟಾಮಿನ್ ಎ ಅನ್ನೂ ಉತ್ತಮ ಪ್ರಮಾಣದಲ್ಲಿ ಹೊಂದಿದೆ. 100 ಗ್ರಾಮ್ ದೊಣ್ಣೆಮೆಣಸಿನಲ್ಲಿ ಶೇ.101ರಷ್ಟು ವಿಟಾಮಿನ್ ಎ ಇರುತ್ತದೆ. ಜೊತೆಗೆ ಎ ಮತ್ತು ಬಿ ಬೀಟಾ-ಕ್ಯಾರೊನೆಟ್, ಲುತೆನ್, ಝೀ-ಕ್ಸಾಂತಿನ್ ಮತ್ತು ಕ್ರಿಪ್ಟೊಕ್ಸಾಂತಿನ್ ನಂತಹ ಆ್ಯಂಟಿಆಕ್ಸಿಡಂಟ್‌ಗಳು ಇದರಲ್ಲಿವೆ.

ಇವು ಒತ್ತಡದಿಂದಾಗಿ ಮತ್ತು ಅನಾರೋಗ್ಯದ ಸ್ಥಿತಿಯಿಂದಾಗಿ ಉತ್ಪತ್ತಿಯಾಗುವ ಫ್ರೀ ರ್ಯಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳಿಂದ ನಮ್ಮ ದೇಹಕ್ಕೆ ರಕ್ಷಣೆಯನ್ನು ನೀಡುತ್ತವೆ.

 ದೊಣ್ಣೆಮೆಣಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಖನಿಜಗಳಿವೆ. ಕಬ್ಬಿಣ, ತಾಮ್ರ, ಸತುವು, ಪೊಟ್ಯಾಶಿಯಂ, ಮ್ಯಾಂಗನೀಜ, ಮ್ಯಾಗ್ನೇಶಿಯಂ ಮತ್ತು ಸೆಲೆನಿಯಂ ಇವುಗಳಲ್ಲಿ ಮುಖ್ಯವಾದುವುಗಳು. ಮ್ಯಾಂಗನೀಸ್‌ನ್ನು ನಮ್ಮ ಶರೀರವು ಆ್ಯಂಟಿಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ. ಸೆಲೆನಿಯಂ ಕೂಡ ಇದೇ ಪಾತ್ರವನ್ನು ನಿರ್ವಹಿಸುತ್ತದೆ.

ನಿಯಾಸಿನ್,ಪೈರಿಡಾಕ್ಸಿನ್(ವಿಟಾಮಿನ್ ಬಿ-6),ರಿಬೊಫ್ಲಾವಿಯನ್ ಮತ್ತು ಥಿಯಾಮಿನ್(ವಿಟಾಮಿನ್ ಬಿ-1)ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳು ಸಾಕಷ್ಟು ಉತ್ತಮ ಪ್ರಮಾಣದಲ್ಲಿ ದೊಣ್ಣೆಮೆಣಸಿನಲ್ಲಿವೆ. ಈ ವಿಟಾಮಿನ್‌ಗಳು ನಮ್ಮ ಶರೀರಕ್ಕೆ ಹೊರಗಿನಿಂದಲೇ ಪೂರೈಕೆಯಾಗಬೇಕಾಗಿರುವುದರಿಂದ ದೊಣ್ಣೆಮೆಣಸು ನಮ್ಮ ಶರೀರದ ಆರೋಗ್ಯಕ್ಕೆ ಸಾಕಷ್ಟು ಸಹಾಯಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News