ಕಳೆದ ವರ್ಷ ಇರಾಕ್‌ನಲ್ಲಿ 6,878 ನಾಗರಿಕರು ಬಲಿ

Update: 2017-01-03 17:46 GMT

ಬಗ್ದಾದ್, ಜ. 3: ಕಳೆದ ವರ್ಷ ಇರಾಕ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 6,878 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
2016ರಲ್ಲಿ 12,388 ನಾಗರಿಕರು ಗಾಯಗೊಂಡಿದ್ದಾರೆ ಎಂದು ಇರಾಕ್ ವಿಶ್ವಸಂಸ್ಥೆ ಕಚೇರಿಯು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದಾಗ್ಯೂ, ಈ ಅಂಕಿಸಂಖ್ಯೆಗಳಲ್ಲಿ ಇರಾಕ್‌ನ ಪಶ್ಚಿಮದ ಪ್ರಾಂತ ಅನ್ಬರ್‌ನಲ್ಲಿ ಮೇ, ಜುಲೈ, ಆಗಸ್ಟ್ ಮತ್ತು ಡಿಸೆಂಬರ್‌ಗಳಲ್ಲಿ ಸಂಭವಿಸಿದ ನಾಗರಿಕರ ಸಾವು-ನೋವುಗಳ ವಿವರಗಳು ಸೇರಿಲ್ಲ.

ತಾನು ನೀಡಿರುವ ಅಂಕಿಸಂಖ್ಯೆಗಳನ್ನು ತೀರಾ ಕನಿಷ್ಠ ಎಂಬುದಾಗಿ ಪರಿಗಣಿಸಬೇಕು, ಯಾಕೆಂದರೆ, ಸಂಘರ್ಷ ಪ್ರದೇಶಗಳಲ್ಲಿ ಸಂಭವಿಸಿರುವ ನಾಗರಿಕರ ಸಾವು-ನೋವುಗಳ ಬಗ್ಗೆ ಸ್ವತಂತ್ರವಾಗಿ ದೃಢೀಕರಿಸಲು ತನಗೆ ಸಾಧ್ಯವಾಗಿಲ್ಲ ಎಂದು ಅದು ತಿಳಿಸಿದೆ. ಅದೇ ವೇಳೆ, ನೀರು, ಆಹಾರ, ಔಷಧಗಳು ಮತ್ತು ಆರೋಗ್ಯ ಸೇವೆಗಳ ಕೊರತೆ ಮುಂತಾದ ಹಿಂಸಾಚಾರದ ಎರಡನೆ ಹಂತದ ಪರಿಣಾಮವಾಗಿ ಮೃತಪಟ್ಟವರನ್ನು ಇಲ್ಲಿ ಪರಿಗಣಿಸಲಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.
2015ರಲ್ಲಿ ಇರಾಕ್‌ನಲ್ಲಿ ಕನಿಷ್ಠ 7,515 ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News