ಫಿಲಿಪ್ಪೀನ್ಸ್ ಜೊತೆ ಜಂಟಿ ಸಮರಾಭ್ಯಾಸಕ್ಕೆ ರಶ್ಯ ಸಜ್ಜು

Update: 2017-01-03 18:46 GMT

 ಮನಿಲಾ (ಫಿಲಿಪ್ಪೀನ್ಸ್), ಜ. 3: ಅಮೆರಿಕದ ತೆಕ್ಕೆಯಿಂದ ಹೊರಬರುತ್ತಿರುವ ಫಿಲಿಪ್ಪೀನ್ಸ್ ಜೊತೆ ಯುದ್ಧ ಕ್ರೀಡೆ ನಡೆಸಲು ಯೋಚಿಸುತ್ತಿರುವುದಾಗಿ ರಶ್ಯದ ಸೇನೆ ಮಂಗಳವಾರ ಹೇಳಿದೆ.

  ಈ ಯೋಜನೆಯ ಅನುಸಾರವಾಗಿ ರಶ್ಯದ ಎರಡು ಯುದ್ಧ ನೌಕೆಗಳು ಮನಿಲಾದಲ್ಲಿ ತಂಗಿವೆ.

ಈ ವಲಯದ ಎರಡು ಪ್ರಮುಖ ಸಮಸ್ಯೆಗಳಾದ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಗಳ ಮೇಲೆ ಜಂಟಿ ಸೇನಾಭ್ಯಾಸವು ಗಮನ ಹರಿಸುತ್ತದೆ ಎಂದು ರಶ್ಯ ನೌಕಾ ಪಡೆಯ ಪೆಸಿಫಿಕ್ ಫ್ಲೀಟ್‌ನ ಉಪ ಮುಖ್ಯಸ್ಥ ರಿಯರ್ ಅಡ್ಮಿರಲ್ ಎಡ್ವರ್ಡ್ ಮಿಖೈಲೊವ್ ಹೇಳಿದರು. ‘‘ಭವಿಷ್ಯದಲ್ಲಿ ನಿಮ್ಮಿಂದಿಗೆ ಇಂಥ ಕಸರತ್ತುಗಳನ್ನು ನಡೆಸುವ ಬಗ್ಗೆ ನಾವು ಖಚಿತ ಅಭಿಪ್ರಾಯ ಹೊಂದಿದ್ದೇವೆ. ಬಹುಷಃ ಅದು ಕೇವಲ ವಿಶೇಷ ಚಲನೆಗಳಾಗಿರಬಹುದು ಅಥವಾ ಕೆಲವು ಯುದ್ಧ ವ್ಯವಸ್ಥೆಗಳ ಪ್ರಯೋಗವಾಗಿರಬಹುದು’’ ಎಂದು ಇಲ್ಲಿ ಲಂಗರು ಹಾಕಿರುವ ರಶ್ಯದ ಡಿಸ್ಟ್ರಾಯರ್ (ಯುದ್ಧ ನೌಕೆ) ‘ಅಡ್ಮಿರಲ್ ಟ್ರೈಬಟ್ಸ್’ನ ಪಕ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಖೈಲೊವ್ ಹೇಳಿದರು. ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಮಲೇಶ್ಯಗಳೊಂದಿಗೆ ಜಂಟಿ ಸಮರಾಭ್ಯಾಸಗಳನ್ನು ನಡೆಸುವ ಉದ್ದೇಶವೂ ಇದೆ ಎಂದು ಅವರು ನುಡಿದರು.

 ದಕ್ಷಿಣ ಚೀನಾ ಸಮುದ್ರದ ಹಲವು ಕಡೆ ಒಂದೇ ಪ್ರದೇಶದ ಮೇಲೆ ವಿವಿಧ ದೇಶಗಳು ಹಕ್ಕು ಸ್ಥಾಪಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News