×
Ad

ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ

Update: 2017-01-04 10:07 IST

ಚುನಾವಣೆಯಲ್ಲಿ ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಈ ರೀತಿ ಮತಯಾಚನೆ ಮಾಡಿ ಯಾರೇ ಗೆದ್ದಿರಲಿ ಅಂತಹವರ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ಅಭ್ಯರ್ಥಿ ಮಾತ್ರವಲ್ಲ. ಆತನ ಚುನಾವಣಾ ಏಜೆಂಟರು, ಮತದಾರರು ಅಥವಾ ಅಭ್ಯರ್ಥಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಧರ್ಮದ ಆಧಾರದಲ್ಲಿ ಮತ ಕೇಳುವುದು ತಪ್ಪು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಆದರ್ಶ್ ಕುಮಾರ್ ಗೋಯಲ್, ಉದಯ್ ಮತ್ತು ಉಮೇಶ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಚುನಾವಣೆಯನ್ನು ಜಾತ್ಯತೀತವಾಗಿ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಈವರೆಗೆ ಅಭ್ಯರ್ಥಿಯು ಧರ್ಮ ಹಾಗೂ ಇತರ ಅಂಶಗಳ ಆಧಾರದಲ್ಲಿ ಮತಕೇಳಿದರೆ ಅದನ್ನು ಚುನಾವಣಾ ಭ್ರಷ್ಟಾಚಾರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಸೋಮವಾರ ನೀಡಿದ ತೀರ್ಪಿನಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆ ವ್ಯಾಪ್ತಿಯನ್ನು ವಿಸ್ತರಿಸಿದ ಸುಪ್ರೀಂಕೋರ್ಟ್, ಅಭ್ಯರ್ಥಿಯ ಪರವಾಗಿ ಆತನ ಚುನಾವಣಾ ಏಜೆಂಟ್ ಆಗಲಿ, ಯಾರೇ ಆಗಲಿ ಅಭ್ಯರ್ಥಿಯ ಧರ್ಮ ಹಾಗೂ ಇತರ ಸಂಕುಚಿತ ಅಸ್ಮಿತೆಯ ಆಧಾರದಲ್ಲಿ ಮತಯಾಚನೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

  ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳು ಧರ್ಮ, ಜನಾಂಗ, ಜಾತಿ, ಸಮುದಾಯ ಹಾಗೂ ಭಾಷೆಯ ಹೆಸರಿನಲ್ಲಿ ವೋಟ್‌ಬ್ಯಾಂಕ್ ನಿರ್ಮಿಸಿಕೊಳ್ಳುವ ಸನ್ನಾಹದಲ್ಲಿರುವಾಗ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಸ್ವಾಗತಾರ್ಹವಾಗಿದೆ. ಕೋಮು ಮತ್ತು ಜಾತಿಯ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಕ್ಷಗಳು ಒಲ್ಲದ ಮನಸ್ಸಿನಿಂದ ಈ ತೀರ್ಪನ್ನು ಸ್ವಾಗತಿಸಿವೆ.

ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಏನೇ ಹೇಳಿರಲಿ ಕಳೆದ 25 ವರ್ಷಗಳಿಂದ ಈ ದೇಶದ ರಾಜಕಾರಣ ಜಾತಿ ಮತ್ತು ಧರ್ಮದ ಸುತ್ತ ಗಿರಕಿ ಹೊಡೆಯುತ್ತಿದೆ. 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ನಂತರ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವಲ್ಲಿ ಕೋಮುವಾದಿ ಶಕ್ತಿಗಳು ಯಶಸ್ವಿಯಾಗಿವೆ. 90ರ ದಶಕದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ನಡೆಸಿದ ರಥಯಾತ್ರೆ ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ ಮೊದಲ ದೊಡ್ಡ ಪ್ರಯತ್ನವಾಗಿತ್ತು. ಆ ಯಾತ್ರೆಯಲ್ಲಿ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಇದ್ದರು. ಆ ರಥಯಾತ್ರೆಯ ಪರಿಣಾಮವಾಗಿ ದೇಶದ ಅನೇಕ ನಗರ ಮತ್ತು ಹಳ್ಳಿಗಳಲ್ಲಿ ಕೋಮುಗಲಭೆಗಳು ನಡೆದವು. ಅದರ ರಾಜಕೀಯ ಲಾಭವನ್ನು ಪಡೆದ ಬಿಜೆಪಿ ಲೋಕಸಭೆಯಲ್ಲಿ ತನ್ನ ಬಲವನ್ನು ಎರಡರಿಂದ 86ಕ್ಕೆ ಏರಿಸಿಕೊಂಡಿತ್ತು. ಈ ರಥಯಾತ್ರೆಯ ಆನಂತರ ಉಳಿದೆಲ್ಲ ವಿಷಯಗಳು ಕಡೆಗಣಿಸಲ್ಪಟ್ಟವು. ಪ್ರತೀ ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬಂದಾಗ ಉದ್ದೇಶಪೂರ್ವಕವಾಗಿ ಅಯೋಧ್ಯೆಯ ರಾಮಮಂದಿರ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ. ಚುನಾವಣೆ ಬಂದಾಗಲೆಲ್ಲ ವಿಶ್ವಹಿಂದು ಪರಿಷತ್ತು ಹಿಂದೂ ವೋಟ್‌ಬ್ಯಾಂಕ್ ನಿರ್ಮಾಣಕ್ಕಾಗಿ ಇಟ್ಟಿಗೆಯಾತ್ರೆ, ಪಾದುಕೆಯಾತ್ರೆ ಇದೇ ರೀತಿಯ ನಾನಾಯಾತ್ರೆಗಳನ್ನು ಮಾಡಿ ದೇಶದ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಅಂತಹ ಯಾತ್ರೆ ಮಾಡಿದವರೇ ಈಗ ದೇಶದ ಅಧಿಕಾರದ ಸೂತ್ರ ಹಿಡಿದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೇಶದ ಜಾತ್ಯತೀತ ಜನತಂತ್ರದಲ್ಲಿ ನಂಬಿಕೆ ಇಟ್ಟವರಿಗೆ ಕೊಂಚ ನೆಮ್ಮದಿಯನ್ನು ಉಂಟು ಮಾಡಿದೆ.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಇನ್ನೊಂದು ಪ್ರಮುಖ ಅಂಶ ಅಡಕವಾಗಿದೆ. ‘‘ಪ್ರಭುತ್ವವು ಜಾತ್ಯತೀತವಾಗಿರುವುದರಿಂದ ಅದು ಯಾವುದೇ ಧರ್ಮದ ಜೊತೆ ಗುರುತಿಸಿಕೊಳ್ಳಬಾರದು. ಲೋಕಸಭೆ, ವಿಧಾನಸಭೆ ಹೀಗೆ ಯಾವುದೇ ಚುನಾವಣೆಯಲ್ಲಿ ಧರ್ಮದ ಬಳಕೆಗೆ ಅವಕಾಶ ನೀಡಬಾರದು. ಚುನಾವಣಾ ಪ್ರಕ್ರಿಯೆ ಜಾತ್ಯತೀತವಾಗಿರಬೇಕು’’ ಎಂದು ಸುಪ್ರೀಂ ಕೋರ್ಟ್ ಸೋಮವಾರದ ತೀರ್ಪಿನಲ್ಲಿ ಹೇಳಿದೆ. ಆದರೆ, ಇದೇ ಸುಪ್ರೀಂ ಕೋರ್ಟ್ ಕೆಲ ವರ್ಷಗಳ ಹಿಂದೆ ನೀಡಿದ ತೀರ್ಪೊಂದರಲ್ಲಿ ಹಿಂದುತ್ವ ಎಂಬುದು ಧರ್ಮವಲ್ಲ. ಅದೊಂದು ಜೀವನ ವಿಧಾನ ಎಂದು ವ್ಯಾಖ್ಯಾನಿಸಿತ್ತು. ಆದರೆ, ಸೋಮವಾರ ನೀಡಿದ ತೀರ್ಪಿನಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಸೋಮವಾರ ನೀಡಿದ ತೀರ್ಪಿಗೂ ಹಿಂದುತ್ವದ ಬಗ್ಗೆ ಹಿಂದೆ ನೀಡಿದ ತೀರ್ಪಿಗೂ ವಿರೋಧಾಭಾಸ ಕಂಡುಬರುತ್ತದೆ. ಹಿಂದುತ್ವದ ಪರವಾಗಿ ವಾದಿಸುವವರು ಈ ಲೋಪದಿಂದ ರಕ್ಷಣೆ ಪಡೆಯುವ ಸಾಧ್ಯತೆ ಇದೆ. ಆದರೆ, ಪ್ರಭುತ್ವ ಜಾತ್ಯತೀತವಾಗಿರಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿರುವುದರಿಂದ ಕಾರ್ಯಾಂಗ ಈ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ.

ಜಾತಿ, ಧರ್ಮ, ಭಾಷೆ ಇವುಗಳನ್ನೆಲ್ಲ ವ್ಯಾಖ್ಯಾನಿಸುವಾಗ ಭಾಷೆಯ ಬಗ್ಗೆ ಪ್ರಸ್ತಾಪವಾಗಿರುವುದು ಕೆಲವರಿಗೆ ಒಂದಿಷ್ಟು ಅಸಮಾಧಾನವುಂಟು ಮಾಡಿದೆ. ಧರ್ಮ ಮತ್ತು ರಾಜಕೀಯ ಪ್ರತ್ಯೇಕವಾಗಿರಬೇಕು ಎಂಬುದೇನೋ ಸರಿ. ಆದರೆ, ಭಾಷೆಯ ಪ್ರಶ್ನೆಯಲ್ಲಿ ಮತಯಾಚನೆ ಮಾಡಬಾರದು ಎಂದು ನಿರ್ಬಂಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈ ಬಗ್ಗೆ ಗೊಂದಲ ನಿವಾರಣೆಯಾಗಬೇಕಾಗಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿ ವಿರೋಧಿ ಆಂದೋಲನದ ಮೂಲಕ ಅಸ್ತಿತ್ವಕ್ಕೆ ಬಂದ ದ್ರಾವಿಡ ಪಕ್ಷಗಳು ಭಾಷೆಯ ಆಧಾರದಲ್ಲೇ ಚುನಾವಣಾ ಪ್ರಚಾರ ಮಾಡುವುದರಿಂದ ಸಹಜವಾಗಿ ಈ ತೀರ್ಪು ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಬಾರದೆಂದು ಸುಪ್ರೀಂ ಕೋರ್ಟ್ ತೀರ್ಪನ್ನೇನೋ ನೀಡಿದೆ. ಆದರೆ ಕಳೆದ ಮೂರು ದಶಕಗಳಿಂದ ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾ ಬಂದವರನ್ನು ನಿಗ್ರಹಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಧರ್ಮದ ಹೆಸರಿನಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಶಿವಸೇನೆ ನಾಯಕ ಬಾಳಾ ಠಾಕ್ರೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಾಂಗಕ್ಕೂ ಸಾಧ್ಯವಾಗಿಲ್ಲ. ಬಾಳಾ ಠಾಕ್ರೆ ಮಾತ್ರವಲ್ಲ ತೊಗಾಡಿಯಾ, ಸಾಕ್ಷಿ ಮಹಾರಾಜ್, ಸಾಧ್ವಿ ಋತಂಬರಾ ಅಂತಹವರೂ ಧರ್ಮದ ವೇಷ ಹಾಕಿಕೊಂಡು ಆಗಾಗ ಕೋಮು ಭಾವನೆ ಕೆರಳಿಸುವ ಭಾಷಣ ಮಾಡುತ್ತಿರುತ್ತಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡಾ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ವಾಸ್ತವಾಂಶ ಹೀಗಿರುವಾಗ ಸುಪ್ರೀಂ ಕೋರ್ಟ್ ಬರೀ ತೀರ್ಪು ನೀಡಿದರೆ ಸಾಲದು. ಜಾತಿ ಮತ್ತು ಕೋಮು ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿರುವ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕಾಗಿದೆ. ಕೋಮು ಆಧಾರಿತ ಪಕ್ಷಗಳ ಅಸ್ತಿತ್ವದಿಂದಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ದುರ್ಬಲವಾಗತೊಡಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಪ್ರಜಾಪ್ರಭುತ್ವವಾದಿ ಶಕ್ತಿಗಳು ಮುಂದಾಗಬೇಕು.

ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಚುನಾವಣಾ ಆಯೋಗ ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಾತ್ಯತೀತ ಪಕ್ಷಗಳು ಒಟ್ಟುಗೂಡಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News