ಲೋಳೆಯೆಂದು ಹೀಗಳೆಯಬೇಡಿ..ಬೆಂಡೆಯನ್ನು ದೂರ ಮಾಡಬೇಡಿ

Update: 2017-01-05 09:06 GMT

ಬೆಂಡೆಕಾಯಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಬಳಕೆಯಾಗುತ್ತದೆ. ಇದು ಹೆಚ್ಚಿನವರ ಇಷ್ಟದ ತರಕಾರಿಯೂ ಹೌದು. ‘ಲೇಡಿಸ್ ಫಿಂಗರ್ ’ ಅಥವಾ ‘ಬಾಮಿಯಾ’ ಎಂದೂ ಕರೆಯಲಾಗುವ ಇದು ಈಶಾನ್ಯ ಆಫ್ರಿಕಾ ಮೂಲದ್ದಾಗಿದೆ. ಇಂಗ್ಲಿಷ್‌ನಲ್ಲಿ ‘ಓಕ್ರಾ’ಎಂದು ಚಿರಪರಿಚಿತವಾಗಿದೆ.

ಹಸಿರು ಬಣ್ಣವಿದ್ದಾಗಲೇ, ಪೂರ್ತಿ ಬಲಿಯುವ ಮುನ್ನವೇ ಬೆಂಡೆಕಾಯಿಯನ್ನು ಗಿಡದಿಂದ ಕಿತ್ತು ಬಳಸಲಾಗುತ್ತದೆ. ವಿಶ್ವಾದ್ಯಂತ ಉಷ್ಣವಲಯಗಳಲ್ಲಿ ಸುಲಭವಾಗಿ ಬೆಳೆಯುವ ಬೆಂಡೆಕಾಯಿ ಸಾಕಷ್ಟು ನಾರಿನಂಶದ ಜೊತೆಗೆ ಇತರ ಪೋಷಕಾಂಶಗಳನ್ನು ಹೊಂದಿದೆ.

 ಸಸ್ಯಶಾಸ್ತ್ರೀಯವಾಗಿ ಮಾಲ್ವಾಸೀ ಕುಟುಂಬಕ್ಕೆ ಸೇರಿರುವ ಬೆಂಡೆಯ ವೈಜ್ಞಾನಿಕ ಹೆಸರು ಅಬೆಲ್‌ಮೊಷಸ್ ಎಸ್ಕುಲೆಂಟಸ್.

ಸಾಮಾನ್ಯವಾಗಿ 5ರಿಂದ 15 ಸೆಂ.ಮೀ.ಉದ್ದವಿರುವ ಬೆಂಡೆ 50-60 ದಿನಗಳಲ್ಲಿ ಕಟಾವಿಗೆ ಬರುತ್ತದೆ.

ಬೆಂಡೆಯ ಆರೋಗ್ಯವರ್ಧಕ ಅಂಶಗಳು

ಬೆಂಡೆ ಅತ್ಯಂತ ಕಡಿಮೆ ಕ್ಯಾಲೊರಿಗಳನ್ನೊಳಗೊಂಡಿರುವ ತರಕಾರಿಗಳಲ್ಲೊಂದಾಗಿದೆ. ಪ್ರತಿ 100 ಗ್ರಾಂ ಬೆಂಡೆಯಲ್ಲಿ ಕೇವಲ 30 ಕ್ಯಾಲೊರಿಗಳಿದ್ದು, ಕೊಬ್ಬು ಮತ್ತು ಕೊಲೆಸ್ಟರಾಲ್‌ರಹಿತವಗಿದೆ. ಸಮೃದ್ಧ ನಾರಿನಂಶ, ಖನಿಜಗಳು ಮತ್ತು ವಿಟಾಮಿನ್‌ಗಳನ್ನು ಹೊಂದಿದೆ.

ಕೊಲೆಸ್ಟರಾಲ್ ನಿಯಂತ್ರಣಕ್ಕೆ ಮತ್ತು ತೂಕ ಕಡಿಮೆಗೊಳಿಸಿಕೊಳ್ಳಲು ಬೆಂಡೆಯನ್ನು ಆಹಾರದಲ್ಲಿ ಬಳಸುವಂತೆ ವೈದ್ಯರು ಶಿಫಾರಸು ಮಾಡುವದು ಹೆಚ್ಚು.

ಬೆಂಡೆಯಲ್ಲಿ ಲೋಳೆಯಂಶ ಪುಷ್ಕಳವಾಗಿದ್ದು, ಇದು ಜೀರ್ಣಗೊಂಡ ಆಹಾರ ದೊಡ್ಡಕರುಳಿನ ಮೂಲಕ ಸುಲಭವಾಗಿ ಸಾಗಲು ನೆರವಾಗುತ್ತದೆ. ತನ್ಮೂಲಕ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

 ವಿಟಾಮಿನ್ ಎ ಮತ್ತು ಬೀಟಾ-ಕ್ಯಾರೊಟಿನ್, ಕ್ಸಾಂತಿನ್, ಲುಟೆನ್‌ನಂತಹ ಫ್ಲಾವನಾಯ್ಡಾ ಆ್ಯಂಟಿಆಕ್ಸಿಡಂಟ್‌ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊಂಡಿರುವ ತರಕಾರಿಗಳಲ್ಲಿ ಬೆಂಡೆಯೂ ಒಂದಾಗಿದೆ. ಇವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿವೆ.

ವಿಟಾಮಿನ್ ಎ ಶರೀರದಲ್ಲಿನ ಲೋಳೆಗಳನ್ನೊಳಗೊಂಡ ವಪೆಗಳು ಮತ್ತು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ. ಫ್ಲಾವನಾಯ್ಡಾ ಗಳನ್ನು ಸಮೃದ್ಧವಾಗಿ ಹೊಂದಿರುವ ನೈಸರ್ಗಿಕ ತರಕಾರಿಗಳ ಸೇವನೆಯು ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ.

ತಾಜಾ ಬೆಂಡೆ ಫೊಲೇಟ್‌ಗಳ ಉತ್ತಮ ಆಗರವಾಗಿದ್ದು, ಪ್ರತಿ 100 ಗ್ರಾಂ ನಮ್ಮ ದೈನಂದಿನ ಅಗತ್ಯದ ಶೇ.22ರಷ್ಟು ಫೊಲೇಟ್‌ಗಳನ್ನು ಒದಗಿಸುತ್ತದೆ. ವಿಶೇಷವಾಗಿ ಗರ್ಭಧಾರಣೆಯ ಪೂರ್ವದ ಅವಧಿಯಲ್ಲಿ ಪೊಲೇಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಆಹಾರದ ಸೇವನೆಯು ಭ್ರೂಣದ ನ್ಯೂರಲ್ ಟ್ಯೂಬ್‌ನಲ್ಲಿ ದೋಷಗಳು ಕಾಣಿಸಿಕೊಳ್ಳುವ ಸಂಭಾವ್ಯತೆಯನ್ನು ತಗ್ಗಿಸುತ್ತದೆ.

ಆ್ಯಂಟಿಆಕ್ಸಿಡಂಟ್ ಆಗಿರುವ ವಿಟಾಮಿನ್ ಸಿ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಬೆಂಡೆಕಾಯಿ ನಮ್ಮ ಶರೀರದ ದೈನಂದಿನ ಅಗತ್ಯದ ಶೇ.36ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ. ವಿಟಾಮಿನ್ ಸಿ ಹೆಚ್ಚಿರುವ ಆಹಾರಗಳ ಸೇವನೆಯು ಶೀತ ಮತ್ತು ಕಫವನ್ನು ತಗ್ಗಿಸುವ ಜೊತೆಗೆ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ.

ಬೆಂಡೆಕಾಯಿ ನಿಯಾಸಿನ್, ವಿಟಾಮಿನ್ ಬಿ-6(ಪೈರಿಡಾಕ್ಸಿನ್), ಥಿಯಾಮಿನ್ ಮತ್ತು ಪ್ಯಾಂಟೊಥೆನಿಕ್ ಆ್ಯಸಿಡ್‌ಗಳಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳನ್ನು ಹೇರಳ ಪ್ರಮಾಣದಲ್ಲಿ ಹೊಂದಿದೆ. ಉತ್ತಮ ಪ್ರಮಾಣದಲ್ಲಿ ವಿಟಾಮಿನ್ ಕೆ ಕೂಡ ಬೆಂಡೆಯಲ್ಲಿದೆ.

ಇದು ರಕ್ತವನ್ನು ಹೆಪ್ಪುಗಟ್ಟಿಸುವ ಎಂಝೈಮ್ ಆಗಿ ಕಾರ್ಯ ನಿರ್ವಹಿಸುವ ಜೊತೆಗೆ ಮೂಳೆಗಳನ್ನು ಸದೃಢಗೊಳಿಸುವಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸುತ್ತದೆ.

ಕಬ್ಬಿಣ,ಕ್ಯಾಲ್ಸಿಯಂ,ಮ್ಯಾಂಗನೀಸ್ ಮತ್ತು ಮ್ಯಾಗ್ನೇಶಿಯಂನಂತಹ ಹಲವಾರು ಮಹತ್ವದ ಖನಿಜಾಂಶಗಳನ್ನೂ ಬೆಂಡೆಕಾಯಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News