ಲಂಚ: ಡೆಪ್ಯುಟಿ ಚೀಫ್ ಲೇಬರ್ ಕಮೀಶನರ್ ಸಹಿತ ನಾಲ್ವರ ಬಂಧನ
ಕೊಚ್ಚಿ,ಜ 6: ಕಟ್ಟಡ ನಿರ್ಮಾಣ ಕಂಪೆನಿಯಿಂದ ಲಂಚ ಸ್ವೀಕರಿಸಿದ ಕೊಚ್ಚಿ ಡೆಪ್ಯುಟಿ ಚೀಫ್ ಲೇಬರ್ ಕಮಿಶನರ್ ಸಹಿತ ನಾಲ್ವರನ್ನು ಸಿಬಿಐ ಬಂಧಿಸಿದೆ. ಕ್ಯಾಲಿಕಟ್ ಕೆ.ಕೆ.ಬಿಲ್ಡರ್ಸ್‌ನಿಂದ ಲಂಚ ಪಡೆಯುವ ವೇಳೆ ಡೆಪ್ಯುಟಿ ಚೀಫ್ ಲೇಬರ್ ಕಮಿಶನರ್ ಎ.ಕೆ. ಪ್ರತಾಪ್, ಅಸಿಸ್ಟೆಂಟ್ ಲೇಬರ್ ಕಮಿಶನರ್ ಡಿ.ಎಸ್. ಜಾಧವ್, ಲೇಬರ್ ಎಂಫೋರ್ಸ್‌ಮೆಂಟ್ ಆಫೀಸರ್ ಸಿ.ಪಿ. ಸುನೀಲ್ ಕುಮಾರ್, ಕೆ.ಕೆ. ಬಿಲ್ಡರ್ಸ್ ಎಚ್.ಆರ್. ಮ್ಯಾನೇಜರ್ ವಿ.ಕೆ. ಅನೀಶ್‌ರನ್ನು ಸಿಬಿಐ ಕೊಚ್ಚಿ ವಿಭಾಗ ಇನ್ಸ್‌ಪೆಕ್ಟರ್ ಪಿ.ಐ. ಅಬ್ದುಲ್ ಅಝೀಝ್ ನೇತೃತ್ವದ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಮಧ್ಯಾಹ್ನ ಆರೋಪಿಗಳನ್ನು ಎರ್ನಾಕುಲಂ ವಿಶೇಷ ಸಿಬಿಐ ಕೋರ್ಟಿಗೆ ಹಾಜರು ಪಡಿಸಲಾಗಿದೆ. ಆರೋಪಿಗಳಿಗೆ ಜನವರಿ 19ರವರೆಗೆ ಕೋರ್ಟು ಜ್ಯುಡಿಶಿಯಲ್ ಕಸ್ಟಡಿ ವಿಧಿಸಿದೆ. ಮೊದಲ ಮೂವರು ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿ ಹಾಗೂ ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಮನವಿ ಕುರಿತು ಶುಕ್ರವಾರ ವಿಚಾರಣೆ ನಡೆಯಲಿದೆ. ಆರೋಪಿಗಳಾದ ಎ.ಕೆ.ಪ್ರತಾಪ್, ಜಾಧವ್ ವಿವಿಧ ಸಂಸ್ಥೆಗಳಿಗೆ ಕಾರ್ಮಿಕರನ್ನು ಒದಗಿಸುವ ಗುತ್ತೆದಾರರಿಂದ ಭಾರೀ ಮೊತ್ತದ ಲಂಚ ಪಡೆಯುತ್ತಿದ್ದರೆಂದು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಕೈಗೊಂಡಿತ್ತು. ಭ್ರಷ್ಟಾಚಾರ ದೃಢಪಟ್ಟ ಬಳಿಕ ಎರ್ನಾಕುಲಂ ವಿಶೇಷ ಸಿಬಿಐ ಕೋರ್ಟು(ಎರಡನೆ) ಮುಂದೆ ಇಬ್ಬರನ್ನು ಆರೋಪಿಗಳನ್ನಾಗಿಸಿ ಕೇಸು ದಾಖಲಿಸಿ ಬಂಧನ ಸತ್ರ ಆರಂಭವಾಯಿತು. ಕಾರ್ಮಿಕರಿಗೆ ಸರಿಯಾದ ವೇತನ, ವಾಸ ಸೌಕರ್ಯ ಸಿಗುತ್ತಿದೆಯೇ ಎಂಬುದನ್ನು ಚೀಫ್ ಡೆಪ್ಯುಟಿ ಕಮಿಶನರ್ ಪರಿಶೀಲಿಸುವ ಹೊಣೆಗಾರಿಕೆ ಹೊಂದಿದ್ದರು. ಆದರೆ ಒಂದನೆ, ಎರಡನೆ ಆರೋಪಿಗಳು ಕಟ್ಟಡ ನಿರ್ಮಾಣ ಕಂಪೆನಿಗಳಿಂದ ಲಂಚ ಪಡೆದು ಕರ್ತವ್ಯ ಲೋಪ ಎಸಗಿರುವುದು ಸಿಬಿಐ ಪತ್ತೆ ಹಚ್ಚಿದೆ. ಐಐಎಮ್‌ನಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕೆ.ಕೆ. ಬಿಲ್ಡರ್ಸ್‌ನಿಂದ ಇವರಿಬ್ಬರು ಲಂಚ ಕೇಳಿದ್ದರು. ಈ ವಿವರ ಆರಿತ ಸಿಬಿಐ ಅಧಿಕಾರಿಗಳು ಕೆ.ಕೆ. ಬಿಲ್ಡರ್ಸ್ ಎಚ್.ಆರ್. ಮ್ಯಾನೇಜರ್ ಅನೀಶ್ ಒಂದನೆ, ಎರಡನೆ ಅರೋಪಿಗಳಿಗೆ ತಲಾ 25,000 ಮೂರನೆ ಆರೋಪಿಗೆ 10,000 ರೂಪಾಯಿ ಲಂಚ ನೀಡುತ್ತಿದ್ದ ವೇಳೆ ರೆಡ್‌ಹ್ಯಾಂಡಾಗಿ ಬಂಧಿಸಿದರು. ಮೊದಲು ಎಫ್‌ಐಆರ್‌ನಲ್ಲಿ ಅನೀಶ್ ಮತ್ತು ಸುನೀಲ್ ಕುಮಾರ್‌ರನ್ನು ನಂತರ ಆರೋಪ ಪಟ್ಟಿಯಲ್ಲಿ ಸೇರಿಸಿ ಸಿಬಿಐ ಬಂಧಿಸಿದೆ ಎಂದು ವರದಿ ತಿಳಿಸಿದೆ.