ಬ್ರ್ಯಾಂಡ್ ಅಖಿಲೇಶ್ ಹಿಂದಿರುವ ಶಕ್ತಿ ಈ ವ್ಯಕ್ತಿ !
ಲಕ್ನೋ, ಜ.6: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ಸಜ್ಜುಗೊಳ್ಳುತ್ತಿರುವಂತೆಯೇ ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಗನ ಜಗಳದಿಂದ ದೊಡ್ಡ ಬಿರುಕೊಂದು ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತನ್ನ ತಂದೆಗೇ ಸಡ್ಡು ಹೊಡೆದಿದ್ದರೂ ಅವರ ಜನಪ್ರಿಯತೆಗೆ ಒಂದಿನಿತೂ ಕುಂದುಂಟಾಗಿಲ್ಲವೆಂಬ ಭಾವನೆಯಿದೆ. ಇದಕ್ಕೆ ಕಾರಣ-ಬ್ರ್ಯಾಂಡ್ ಅಖಿಲೇಶ್ ಅನ್ನು ಜನರ ಮುಂದಿಡಲು ಕಳೆದ ಕೆಲ ಸಮಯದಿಂದ ನಡೆಸಲಾಗುತ್ತಿರುವ ಪ್ರಯತ್ನ. ಅಖಿಲೇಶ್ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಹಾಗೂ ಸರಕಾರ ಮತ್ತು ಜನರ ನಡುವೆ ಸಂರ್ಪ ಸೇತು ಬೆಳೆಸಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ.
ಈ ಬ್ರ್ಯಾಂಡ್ ಅಖಿಲೇಶ್ ಹಿಂದಿರುವ ಶಕ್ತಿಯೇ ಹಾರ್ವರ್ಡ್ ಕೆನಡಿ ಸ್ಕೂಲ್ ಇಲ್ಲಿನ ಪಬ್ಲಿಕ್ ಪಾಲಿಸಿ ಪ್ರೊಫೆಸರ್ ಆಗಿರುವ ಸ್ಟೀವ್ ಜಾರ್ಡಿಂಗ್. ಜಾರ್ಡಿಂಗ್ ಅವರ ಹಳೆ ವಿದ್ಯಾರ್ಥಿ ಅದ್ವೈತ್ ವಿಕ್ರಮ್ ಸಿಂಗ್ ಅವರ ನೇತೃತ್ವದಲ್ಲಿ 100 ಜನರ ತಂಡವು ಲಕ್ನೋದಲ್ಲಿ ಈಗಾಗಲೇ ಅಖಿಲೇಶ್ ಪ್ರಚಾರ ಕಾರ್ಯವನ್ನು ಸಂಘಟಿಸುತ್ತಿದೆ. ಈ ತಂಡ ಅಖಿಲೇಶ್ ಅವರಿಗೆ ತಂತ್ರಗಾರಿಕೆ ವಿಚಾರದಲ್ಲಿ ಸಲಹೆ ನೀಡುತ್ತಿದ್ದು, ಅವುಗಳ ಜಾರಿ ಹೊಣೆ ಮಾತ್ರ ಅವರದಲ್ಲವಾಗಿದೆ.
ಅಖಿಲೇಶ್ ಅವರು ರಾಜ್ಯದಲ್ಲಿ ಹಲವು ವಿಭಾಗಗಳಲ್ಲಿ ಅಭಿವೃದ್ಧಿ ಸಾಧಿಸಲು ಸಫಲರಾಗಿದ್ದಾರೆಂದು ಬಿಜೆಪಿಯ ಮೇಲ್ವರ್ಗದ ಮತದಾರರು ಹಾಗೂ ಬಹುಜನ ಸಮಾಜ ಪಕ್ಷದ ದಲಿತ ಬೆಂಬಲಿಗರು ಕೂಡ ಹೇಳುತ್ತಾರೆ.
ಜಾರ್ಡಿಂಗ್ ಅವರು ಅಖಿಲೇಶ್ ಜತೆ ಈ ವರ್ಷದ ಆಗಸ್ಟ್ ತಿಂಗಳಿಂದ ಕಾರ್ಯಾಚರಿಸುತ್ತಿದ್ದು, ಇಲ್ಲಿಯ ತನಕ ಲಕ್ನೋಗೆ ಐದು ಬಾರಿ ಭೇಟಿ ನೀಡಿದ್ದಾರೆ. ಒಂದು ಬಾರಿ ಇಟಾಹ್ ಜಿಲ್ಲೆಗೆ ಮುಖ್ಯಮಂತ್ರಿ ಜತೆ ಕೂಡ ಅವರು ಆಗಮಿಸಿದ್ದರು. ಹಾರ್ವರ್ಡ್ ನಲ್ಲಿ ಅದ್ವೈತ್ ಅವರು ಜಾರ್ಡಿಂಗ್ ಅವರ ಖ್ಯಾತ ‘ಮೇಕಿಂಗ್ ಆಫ್ ಎ ಪಾಲಿಟೀಶಿಯನ್’ ಕೋರ್ಸ್'ನಲ್ಲಿ ಭಾಗವಹಿಸಿದ್ದರು. ಜಾರ್ಡಿಂಗ್ ಅವರು ಬಾಂಗ್ಲಾದೇಶದ ಶೇಖ್ ಹಸೀನಾ ಸೇರಿದಂತೆ ವಿಶ್ವದ ಹಲವಾರು ರಾಜಕಾರಣಿಗಳ ರಾಜಕೀಯ ಸಲಹೆಗಾರರಾಗಿದ್ದವರು.
ಜಾರ್ಡಿಂಗ್ ಅವರ ತಂಡ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಅಲ್ಲಿ ಪ್ರಧಾನಿ ಮೋದಿಯ ಪ್ರಭಾವ ಹೆಚ್ಚಿದ್ದರೂ ಗ್ರಾಮೀಣ ಯುವಜನತೆ ಅಖಿಲೇಶ್ ಅವರಲ್ಲಿ ಆಶಾಕಿರಣ ಕಾಣುವಂತೆ ಮಾಡುವುದು ಈ ತಂಡದ ಉದ್ದೇಶವಾಗಿದೆ. ಉತ್ತರ ಪ್ರದೇಶದ ಒಂದು ಲಕ್ಷಕ್ಕೂ ಅಧಿಕ ಮತದಾನ ಬೂತ್ ಗಳನ್ನು ಗಣನೆಗೆ ತೆಗೆದುಕೊಂಡು ಅವರು ಲಕ್ಷಗಟ್ಟಲೆ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇವರನ್ನೆಲ್ಲಾ ಸಮಾಜವಾದಿ ವಿಕಾಸ್ ಯೋಜನಾ ಪ್ರಮುಖ್ ಗಳೆಂದು ಗುರುತಿಸಲಾಗಿದ್ದು, ಜನವರಿ ಅಂತ್ಯದೊಳಗೆ 30 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಗುರಿಯಿದೆ. ಈ ಯೋಜನಾ ಪ್ರಮುಖರೆಲ್ಲರೂ ಸ್ಟೀವ್ ಜಾರ್ಡಿಂಗ್ ಅವರ ಲಕ್ನೋ ಕಚೇರಿಯೊಂದಿಗೆ ಸ್ಮಾರ್ಟ್ ಫೋನ್ ಮೂಲಕ ಸಂಪರ್ಕದಲ್ಲಿದ್ದಾರೆ. ಇವರೆಲ್ಲರೂ ಅಖಿಲೇಶ್ ಸರಕಾರದ ವಿವಿಧ ಯೋಜನೆಗಳಾದ ಸಮಾಜವಾದಿ ಪಿಂಚಣಿ ಯೋಜನೆ, ಕಾಮಧೇನು ಡೈರಿ ಯೋಜನೆ, ನೀರಾವರಿ ಯೋಜನೆ, 2017ರ ಚುನಾವಣೆ ನಂತರ ಸ್ಮಾರ್ಟ್ ಫೋನ್ ವಿತರಣೆ ಮುಂತಾದ ಯೋಜನೆಗಳ ರಾಯಭಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಾ ಜಾತಿ, ಧರ್ಮಗಳ ಮಂದಿಯೂ ಸಮಾಜವಾದಿ ವಿಕಾಸ್ ಯೋಜನಾ ಪ್ರಮುಖ್ ಆಗಿದ್ದಾರೆ.
ಈ ರೀತಿಯ ತಂತ್ರಗಾರಿಕೆಯ ಮೂಲಕ ಜನರೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸಿರುವ ಅಖಿಲೇಶ್, ತಮ್ಮ ಪಕ್ಷದಲ್ಲಿನ ಬಿರುಕಿನ ಚಟುವಟಿಕೆಗಳ ಹೊರತಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.