ಅಡಿಡಾಸ್ ತಿರಸ್ಕರಿಸಿದ ಅದರ ಜಾಹೀರಾತು ಈಗ ಸೂಪರ್ ಹಿಟ್

Update: 2017-01-09 10:37 GMT

ಜರ್ಮನಿಯ ಚಲನಚಿತ್ರ ಕೋರ್ಸ್‌ನ ವಿದ್ಯಾರ್ಥಿ ಯುಜೆನ್ ಮರ್ಹರ್ ತನಗಾಗಿ ತಯಾರಿಸಿದ್ದ ಜಾಹೀರಾತನ್ನು ಪ್ರಖ್ಯಾತ ಶೂ ತಯಾರಿಕೆ ಕಂಪನಿ ಅಡಿಡಾಸ್ ತಿರಸ್ಕರಿಸಿತ್ತು. ಈ ಜಾಹೀರಾತಿನಲ್ಲಿ ಮಾಮೂಲು ಮಸಾಲೆಯಿಲ್ಲ. ಸ್ಕ್ರಿಪ್ಟ್ ಕೂಡ ಮಾಮೂಲಿನಂತಿಲ್ಲ. ಖ್ಯಾತ ಕ್ರೀಡಾಳುಗಳು,ಅವರ ಮುಖದ ಮೇಲಿನ ಬೆವರ ಹನಿಗಳು,ಸ್ಲೋ ಮೋಷನ್ ಚಿತ್ರಣ ಇತ್ಯಾದಿಗಳು ಈ ಜಾಹೀರಾತಿನಲ್ಲಿ ಇಲ್ಲವೇ ಇಲ್ಲ

 ಇದು ಯುಜೆನ್ ಅಡಿಡಾಸ್‌ಗಾಗಿ ತಯಾರಿಸಿದ್ದ ‘ಅಣಕು ’ಜಾಹೀರಾತು ಆಗಿತ್ತು. ತನ್ನ ಕೆಲಸವನ್ನು ಮೆಚ್ಚಿ ತನಗೆ ಜಾಹೀರಾತು ನಿರ್ಮಾಣದ ಕೆಲಸವನ್ನು ಕೊಡಬಹುದು ಎಂಬ ಆಶಯದೊಂದಿಗೆ ಅಡಿಡಾಸ್‌ನ ಗಮನವನ್ನು ಸೆಳೆಯಲು ತನ್ನದೇ ಪರಿಕಲ್ಪನೆಯೊಂದಿಗೆ ಆತ ಈ ಜಾಹೀರಾತನ್ನು ನಿರ್ಮಿಸಿದ್ದ. ಆದರೆ ಅಡಿಡಾಸ್ ಅದನ್ನು,ಆತನ ಪರಿಕಲ್ಪನೆಯನ್ನು ತಿರಸ್ಕರಿಸಿತ್ತು. ಇದೀಗ ‘ಬ್ರೆಕ್ ಫ್ರೀ ’ಶೀರ್ಷಿಕೆಯ ಈ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೇವಲ ಹದಿನೈದೇ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ಜನರು ಅದನ್ನು ವೀಕ್ಷಿಸಿದ್ದಾರೆ. ಬಹುಶಃ ಅಡಿಡಾಸ್ ತಾನು ಈ ಜಾಹೀರಾತನ್ನು ತಿರಸ್ಕರಿಸಿ ತಪ್ಪು ಮಾಡಿದೆ ಎಂದು ಕೈಕೈ ಹಿಸುಕಿ ಕೊಳ್ಳುತ್ತಿರಬಹುದು.

 ಒಂದು ಜೊತೆ ಶೂ ಸಂಗಡ ಯಾರಾದರೂ ಹೇಗೆ ಭಾವನೆಗಳನ್ನು ಬೆಳೆಸಿ ಕೊಂಡಿರಬಹುದು ಎನ್ನುವುದನ್ನು ಈ ಜಾಹೀರಾತು ನಮ್ಮ ಮುಂದಿರಿಸುತ್ತದೆ. ನಿವೃತ್ತರ ಧಾಮದಲ್ಲಿ ವಾಸವಾಗಿರುವ ಮಾಜಿ ಜರ್ಮನ್ ಮ್ಯಾರಥಾನ್ ಓಟಗಾರನೋರ್ವ ತಾನು ಹಿಂದೆ ಅಭ್ಯಾಸದ ಸಂದರ್ಭ ಬಳಸುತ್ತಿದ್ದ ಶೂಗಳನ್ನು ಧರಿಸಿಕೊಂಡು ಬದುಕಿನ ಏಕತಾನತೆಯಿಂದ ಪಾರಾಗಲು ಆ ಧಾಮದಿಂದ ಹೊರಗೆ ಹೆಜ್ಜೆಗಳನ್ನಿಡಲು ಪ್ರಯತ್ನಿಸುತ್ತಾನೆ. ಆದರೆ ಆತನ ಸಹವಾಸಿಗಳು ಆತನನ್ನು ಹೊರಕ್ಕೆ ಹೋಗಲು ಬಿಡುವುದೇ ಇಲ್ಲ.

ಆದರೆ ಅದೊಂದು ದಿನ ಆತನ ಸಹವಾಸಿಗಳೇ ಆತನಿಗೆ ಏಕತಾನತೆಯನ್ನು ಕಳೆದುಕೊಳ್ಳಲು ನೆರವಾಗುತ್ತಾರೆ. ಓರ್ವ ವ್ಯಕ್ತಿ ಶೂ ಗಳನ್ನು ತಂದು ಆತನಿಗೆ ನೀಡುತ್ತಾನೆ ಮತ್ತು ಅದನ್ನು ಧರಿಸಿಕೊಂಡು ಮೆಲ್ಲನೆ ಓಡುತ್ತ ಆತ ನಿವೃತ್ತರ ಧಾಮದ ಲಕ್ಷ್ಮಣ ರೇಖೆಯನ್ನು ದಾಟಿ ಮುಕ್ತ ವಾತಾವರಣದಲ್ಲಿ ಹೆಜ್ಜೆಯಿರಿಸುತ್ತಾನೆ ಮತ್ತು ಓಡುತ್ತಲೇ ಎರಡೂ ಕೈಗಳನ್ನು ಮೇಲಕ್ಕೆತ್ತಿ ವಿಜಯದ ಸಂಕೇತವಮನ್ನು ಪ್ರದರ್ಶಿಸುತ್ತಾನೆ.

 ಇದೀಗ ನಿಜವಾದ ಜಾಹೀರಾತೆಂದರೆ ಹೀಗಿರಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News