ಕಸಾಪ ಮಹಾರಾಷ್ಟ್ರ ಘಟಕದ ಸಂಕಟ

Update: 2017-01-09 18:48 GMT

ನೂತನ ಸಮಿತಿ Vs ನಿಕಟಪೂರ್ವ ಸಮಿತಿ
ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ ಈ ಬಾರಿ ‘ಮುಂಬೈ ಕನ್ನಡಿಗ’ರಿಗೆ ಹಿಂದಿನಂತೆ ಮಹತ್ವವನ್ನು ಪಡೆದಿಲ್ಲ. ಕಸಾಪ ಘಟಕವೊಂದು ಮಹಾರಾಷ್ಟ್ರದಲ್ಲಿದೆ ಎಂಬುದನ್ನೇ ಮುಂಬೈ ಕನ್ನಡಿಗರು ಮರೆತಿದ್ದಾರೆ!

ಆಶ್ಚರ್ಯವಾಯಿತೇ? ಹೌದು. 1973ರಲ್ಲಿ ಮುಂಬೈ ಕನ್ನಡಿಗರ ಮೊದಲ ಸಾಹಿತ್ಯ ಸಮ್ಮೇಳನದ ಸಂಘಟನೆ ಕಾಣಿಸಿಕೊಂಡಿತ್ತು. ಅಧ್ಯಕ್ಷತೆ ವಹಿಸಿದವರು ಕಾರಂತರು. ಈ ಸಮ್ಮೇಳನದ ನಂತರ ಮುಂಬೈ ಸಮಿತಿಯನ್ನು ವಿಶೇಷವಾಗಿ ಗುರುತಿಸಲಾಯಿತು. ಮುಂದೆ 1977ರಲ್ಲಿ ಪರಿಷತ್‌ನ ವಜ್ರಮಹೋತ್ಸವ ಬೆಂಗಳೂರಿನಲ್ಲಿ ನಡೆದಾಗ ಮುಂಬೈ ಸಮಿತಿಯ ಅಧ್ಯಕ್ಷರನ್ನು ಹೊರನಾಡಿನ ಕನ್ನಡಿಗರ ಗೋಷ್ಠಿಗೆ ಅಧ್ಯಕ್ಷರನ್ನಾಗಿಸಿದರು ಹಾಗೂ ಇಲ್ಲಿಯ ಮೂವರು ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ರೀತಿ 1978ರಿಂದ ಮುಂಬೈ ಸಾಹಿತಿಗಳಿಗೆ ಆಹ್ವಾನ ಬರುತ್ತಲೇ ಇತ್ತು.

1978ರಲ್ಲಿ ಮುಂಬೈ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಡಾ.ತಾಳ್ತಜೆ ವಸಂತ ಕುಮಾರ್ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಜೊತೆಯಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿಯೂ ಗಮನಾರ್ಹ ಕೆಲಸಗಳನ್ನು ಕೆಲವು ತಿಂಗಳು ನಿರ್ವಹಿಸಿದ್ದರು. ಅನಂತರ 2004ರ ತನಕ ಡಾ.ಜಿ.ಡಿ.ಜೋಶಿ ಅಧ್ಯಕ್ಷರಾದರು. ಅವರು ‘ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ’’ ಎನ್ನುವ ಕಾರ್ಯಕ್ರಮವನ್ನು ಆಗಾಗ ಸಾಹಿತ್ಯಾಸಕ್ತರ ಮನೆಗಳಲ್ಲಿ ಏರ್ಪಡಿಸಿ ಅಲ್ಲಿ ವಿವಿಧ ಆಸಕ್ತ ಲೇಖಕರು ತಮ್ಮ ತಮ್ಮ ಸ್ವರಚಿತ ಕತೆ, ಕವನ, ಕಿರುಲೇಖನಗಳನ್ನು ಓದಿ ಒಂದೆರಡು ಗಂಟೆ ಸಾಹಿತ್ಯದ ರಸದೌತಣವನ್ನು ಎಲ್ಲರಿಗೂ ಉಣಬಡಿಸಲು ಆರಂಭಿಸಿದ್ದು ಅದು ಇಂದಿನ ತನಕವೂ (ಅವರು ಅಧ್ಯಕ್ಷರಾಗಿಲ್ಲದಿದ್ದರೂ) ಮುಂದುವರಿದಿದೆ.

2005ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರಾಗಿ ಬಂದವರು ಎಚ್.ಬಿ.ಎಲ್.ರಾವ್. 2005ರಿಂದ 2015ರ ತನಕ ಸುಮಾರು ಒಂದು ದಶಕದ ಕಾಲ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ರಾರಾಜಿಸಿದ್ದರು. ಇವರ ಕಾಲದಲ್ಲಿ ಸಾಕಷ್ಟು ಕನ್ನಡದ ಕೆಲಸಗಳು ನಡೆದಿವೆ.

2004ರ ಕೊನೆಗೆ ಕಸಾಪ ಮಾಹಾರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಎಚ್.ಬಿ.ಎಲ್.ರಾವ್ ಅವರಿಗೆ ಅನೇಕ ಟೀಕೆಗಳು ಬಂದಿತ್ತು. ಯಕ್ಷಗಾನ ಕ್ಷೇತ್ರದಲ್ಲಿದ್ದವರು ಸಾಹಿತ್ಯ ಕ್ಷೇತ್ರಕ್ಕೆ ಬರುವುದು ಎಷ್ಟು ಸರಿ? ಎನ್ನುವ ಚರ್ಚೆ ಕೂಡಾ ಕೇಳಿ ಬಂದದ್ದಿದೆ. ಆದರೆ ಅವರು ತಮ್ಮ ಒಂದು ದಶಕದ ಕಾಲಾವಧಿಯಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಮೂಲಕ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದರು. ಜೊತೆಗೆ ನವಿ ಮುಂಬೈಯಲ್ಲಿ ‘ಸಿಡ್ಕೋ’ ನೀಡಿದ ಜಾಗದಲ್ಲಿ ಕರ್ನಾಟಕ ಸರಕಾರದ ‘ಕರ್ನಾಟಕ ಭವನ’ದ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವಂತಹ ಸಂದರ್ಭದಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಮುಂದಾಳತ್ವದಲ್ಲಿ ಭವನ ನಿರ್ಮಾಣಕ್ಕೆ ಮತ್ತೆ ಚಾಲನೆ ನೀಡಲು ಕಾರಣರಾದರು. ಒಂದಿಷ್ಟು ವಿವಾದವನ್ನೂ ಎದುರಿಸಿದರು. ಕೊನೆಗೆ ಕರ್ನಾಟಕ ಸರಕಾರ ಎಂಎಸ್‌ಐಎಲ್‌ಗೆ ಅದರ ಜವಾಬ್ದಾರಿ ನೀಡಿದ ನಂತರ ಒಂದು, ಎರಡು, ಮೂರು ಮಳಿಗೆಗಳು ಏರತೊಡಗಿತು.

ಅಷ್ಟೇ ಅಲ್ಲ, ಕರ್ನಾಟಕ ಸರಕಾರದ ಎಸೆಸೆಲ್ಸಿ ಬೋರ್ಡ್ ನಡೆಸುವ ಸಂಗೀತ, ನೃತ್ಯ, ತಾಳ, ವಾದ್ಯ ಪರೀಕ್ಷಾ ಕೇಂದ್ರವನ್ನು ಮುಂಬೈಯಲ್ಲಿ ಮಾಡುವ ವಿಷಯದಲ್ಲಿ ಪ್ರಯತ್ನಿಸಿ ಯಶಸ್ಸು ಕಂಡರು. ತನ್ನ ಪ್ರಧಾನ ಸಂಪಾದಕತ್ವದಲ್ಲಿ ಮುಂಬೈ ಲೇಖಕರ ಕತೆಗಳು, ಮಹಾರಾಷ್ಟ್ರ ಕನ್ನಡ ವಾಹಿನಿ, ಶತದಳ ಪದ್ಮ, ಮುಂಬೈ ಕನ್ನಡ ದರ್ಶನ, ಮುಂಬೈ ಮಿಡಿತ ಇವನ್ನೆಲ್ಲ ಪ್ರಕಟಿಸಿದ ಶ್ರೇಯಸ್ಸು ಇವರದು. ಇಷ್ಟೇ ಅಲ್ಲ, ಕಸಾಪ ಮಹಾರಾಷ್ಟ್ರ ಘಟಕವು 2014-15ರಲ್ಲಿ ತನ್ನ ವಿಂಶತಿ ಸಮಾರಂಭ ಆಚರಿಸಿದಾಗ ಹಲವು ಲೇಖಕರ ಕತೆ, ಕವಿತೆ, ಲೇಖನಗಳ ಕೃತಿಗಳನ್ನು ಪ್ರಕಟಿಸಿತ್ತು. ಪ್ರಾತಿನಿಧಿಕ ಕವನ ಸಂಕಲನವನ್ನು ಪ್ರಕಟಿಸಿದೆ. ಗಣ್ಯ ಕನ್ನಡಿಗರ ಅಭಿನಂದನಾ ಗ್ರಂಥಗಳನ್ನೂ ಪ್ರಕಟಿಸಿರುವುದನ್ನು ನೆನಪಿಸಿಕೊಳ್ಳಬೇಕು. ಕಸಾಪ ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅನುಪಮ ಸೇವೆ ಸಲ್ಲಿಸಿದ ಐವತ್ತಕ್ಕೂ ಹೆಚ್ಚು ಗಣ್ಯರನ್ನು, ಸಾಹಿತಿಗಳನ್ನು, ಕನ್ನಡ ಸಂಸ್ಥೆಗಳನ್ನು ಗೌರವಿಸಿ ಸನ್ಮಾನಿಸಲಾಗಿದೆ.

ಇಷ್ಟೆಲ್ಲ ಕನ್ನಡ ಕೆಲಸಗಳನ್ನು ಕಸಾಪ ಮಹಾರಾಷ್ಟ್ರ ಘಟಕ 2005ರಿಂದ 2015ರ ಎಪ್ರಿಲ್ ತನಕ ಮಾಡಿ ತೋರಿಸಿದೆ ಅಧ್ಯಕ್ಷ ಎಚ್.ಬಿ.ಎಲ್.ರಾವ್ ಅವರ ಕಾರ್ಯಾವಧಿಯಲ್ಲಿ.

ಹೀಗೆ ಮೂರು ಅವಧಿಗೆ ಎಚ್.ಬಿ.ಎಲ್.ರಾವ್ ಅಧ್ಯಕ್ಷರಾಗಿದ್ದರು. ಕಳೆದ ವರ್ಷದ ಕಸಾಪ ಚುನಾವಣೆಯಲ್ಲಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಸೊಲ್ಲಾಪುರದಿಂದ ಬಸವರಾಜ ಮಸೂತಿ ಮತ್ತು ಮುಂಬೈಯಿಂದ ಎಚ್.ಬಿ.ಎಲ್.ರಾವ್. ಆದರೆ ಕೆಲವು ತಾಂತ್ರಿಕ ನ್ಯೂನತೆಗಳೋ ಅಥವಾ ಲೆಕ್ಕಪತ್ರಗಳ ಗೊಂದಲವೋ ಅಂತೂ ಎಚ್.ಬಿ.ಎಲ್.ರಾವ್ ಅವರ ನಾಮಪತ್ರವು ಕಸಾಪ ಕೇಂದ್ರದಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಸೊಲ್ಲಾಪುರದ ಬಸವರಾಜ ಮಸೂತಿ ಅವರು ಅವಿರೋಧ ಆಯ್ಕೆಗೊಂಡರು. ಇದೇನು ತಲೆಬಿಸಿಯ ಸಂಗತಿಯಲ್ಲ ಬಿಡಿ. ಆದರೆ ಕಸಾಪ ಮಹಾರಾಷ್ಟ್ರ ಘಟಕದ ಎರಡನೆ ಅಧ್ಯಾಯ ಇಲ್ಲಿಂದ ಆರಂಭವಾಗಿದೆ ಎನ್ನುವುದೇ ಈ ಲೇಖನ. ಅಧಿಕೃತವಾಗಿ ಘಟಕಕ್ಕೆ ಎರಡು ದಶಕಗಳ ಇತಿಹಾಸ.

ಕಳೆದ ವರ್ಷದ ತನಕವೂ ‘ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ’ ಎಂದಿದ್ದರೂ ಅದು ‘ಕಸಾಪ ಮುಂಬೈ ಘಟಕ’ ಎಂಬ ಟೀಕೆಗೂ ಗುರಿಯಾಗಿತ್ತು ಎನ್ನುವುದನ್ನು ಮರೆಯಬಾರದು. ಪುಣೆ, ಸೊಲ್ಲಾಪುರದಲ್ಲಿ ಒಂದೊಂದು ಕಾರ್ಯಕ್ರಮ ಬಿಟ್ಟರೆ ಈ ಕಸಾಪ ಮಹಾರಾಷ್ಟ್ರ ಘಟಕವು ಇಷ್ಟು ವರ್ಷಗಳ ಕಾಲ ಮುಂಬೈ ನಗರ-ಉಪನಗರಗಳಲ್ಲೇ ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇದು ಸತ್ಯವೂ ಹೌದು. ಮಹಾರಾಷ್ಟ್ರ ಘಟಕ ನಾಮಕಾವಸ್ಥೆಯೇ ಆಗಿದೆ. ಅದು ನಿಜ ಅರ್ಥದಲ್ಲಿ ‘ಮುಂಬೈ ಘಟಕ’ವೇ ಎನ್ನಬಹುದೇನೋ. ಇರಲಿ. ಮುಂಬೈಯಲ್ಲೇ ಅತಿ ಹೆಚ್ಚು ಕನ್ನಡಿಗರಿರುವುದಲ್ಲವೇ?

ಈಗ ಸೊಲ್ಲಾಪುರದ ಬಸವರಾಜ ಮಸೂತಿ ಅವರು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾದ ನಂತರ ಮುಂಬೈಯಲ್ಲಿ ಒಂದು ರೀತಿಯ ನಿರಾಶದಾಯಕ ವಾತಾವರಣ! ಸೊಲ್ಲಾಪುರದವರು ಮುಂಬೈಗೆ ಬಂದು ಕಾರ್ಯಕ್ರಮಗಳನ್ನು ನಡೆಸಲಾರರು. ಹಾಗಾಗಿ ಇನ್ನು ಮೂರು ವರ್ಷ ಕಸಾಪ ಮಹಾರಾಷ್ಟ್ರ ಘಟಕ ನಮಗೇನೂ ಲಾಭವಾಗಲಾರದು ಎಂದು ಮುಂಬೈ ಸಾಹಿತಿ-ಕನ್ನಡಿಗರ ಪ್ರತಿಕ್ರಿಯೆ.

ಇಲ್ಲಿ ಕೆಲವರು ಎಚ್.ಬಿ.ಎಲ್.ರಾವ್ ಅವರನ್ನೂ ತರಾಟೆಗೆ ಎಳೆದಿದ್ದಾರೆ. ನಾಮಪತ್ರ ರಿಜೆಕ್ಟ್ ಆಗಬಹುದು ಎಂಬ ಅನುಮಾನ ಇದ್ದಾಗ ಮುಂಬೈಯಿಂದ ಇನ್ನೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಮೊದಲೇ ನಾಮಪತ್ರ ಸಲ್ಲಿಸಲು ಹೇಳಬಹುದಿತ್ತು. ಕನ್ನಡಿಗರು ಇರುವುದೇ ಮುಂಬೈಯಲ್ಲಿ ಹೆಚ್ಚು. ಕನ್ನಡ ಕಾರ್ಯಕ್ರಮಗಳೂ ಇಲ್ಲೇ ಜಾಸ್ತಿ. ಹಾಗಿರುವಾಗ ಇನ್ನು ಮೂರು ವರ್ಷ ಕಸಾಪ ಮಹಾರಾಷ್ಟ್ರ ಘಟಕ ಇದ್ದೂ ಮುಂಬೈ ಕನ್ನಡಿಗರಿಗೆ ಅದು ಸತ್ತಂತೆಯೇ! ಎನ್ನುವುದು ಹಲವರ ಟೀಕಾಸ್ತ್ರ. ಈ ನಡುವೆ ಅತಿ ಹೆಚ್ಚು ಸದಸ್ಯರನ್ನು ಮುಂಬೈಯಿಂದ ಮಾಡಿಸಿ ‘ಕಸಾಪ ಮುಂಬೈ ಘಟಕ’ ಎಂಬ ನೂತನ ಘಟಕಕ್ಕೆ ಮಾನ್ಯತೆ ಸಿಗುವಂತೆ ಪ್ರಯತ್ನಿಸಬೇಕೆಂಬ ಸಲಹೆಯೂ ಬಂದಿದೆ. ಘಟಕದ ನೂತನ ಅಧ್ಯಕ್ಷ ಬಸವರಾಜ ಮಸೂತಿ ಅವರು ಇತ್ತೀಚೆಗೆ ಡೊಂಬಿವಲಿ-ಕಲ್ಯಾಣ್‌ನಲ್ಲಿ ಕಾರ್ಯಕ್ರಮವೊಂದನ್ನು ಮಾಡಿದ್ದು (ಸಹ ಪ್ರಾಯೋಜಕತ್ವದಲ್ಲಿ) ಬಿಟ್ಟರೆ ಇನ್ನೂ ಮುಂಬೈಗೆ ಪ್ರವೇಶಿಸಿಲ್ಲ.

‘‘ನಾನು ಮುಂಬೈಯಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ತಯಾರಿದ್ದೇನೆ. ಆದರೆ ಮುಂಬೈಯ ಯಾವುದೇ ಸಂಘ ಸಂಸ್ಥೆಗಳು ತನ್ನನ್ನು ಇನ್ನೂ ಸಂಪರ್ಕಿಸಲು ಆಸಕ್ತಿ ತೋರಿಸುತ್ತಿಲ್ಲ’’ ಎನ್ನುತ್ತಾರೆ ಈಗಿನ ಅಧ್ಯಕ್ಷ ಬಸವರಾಜ ಮಸೂತಿ.

ಅತ್ತ ಮುಂಬೈಯ ‘ಸಿಡ್ಕೋ’ ನೀಡಿದ ಜಾಗದಲ್ಲಿ ನಿರ್ಮಾಣವಾದ ‘ಕರ್ನಾಟಕ ಭವನ’ದಲ್ಲಿ ‘ಕಸಾಪ ಮಹಾರಾಷ್ಟ್ರ ಘಟಕ’ಕ್ಕೆ ಒಂದು ರೂಮು ಸಿಗಬಹುದೆಂಬ ಆಸೆಯನ್ನಿರಿಸಿ ಹೋರಾಟ ಮಾಡಿಕೊಂಡು ಬಂದಿರುವ ಹಿಂದಿನ ಅಧ್ಯಕ್ಷ ಎಚ್.ಬಿ.ಎಲ್.ರಾವ್ ಅವರ ಕನಸು ಕೂಡಾ ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಯಾಕೆಂದರೆ ‘ಮಹಾರಾಷ್ಟ್ರ ಘಟಕ’ ಮೂರು ವರ್ಷ ಸೊಲ್ಲಾಪುರದಲ್ಲೇ ಇರುವುದು! ಎಂಎಸ್‌ಐಎಲ್ ಕೂಡಾ ಈ ಕಟ್ಟಡದಲ್ಲಿ ರೂಮು ನೀಡುವ ಗೋಜಿಗೆ ಹೋಗುತ್ತಿಲ್ಲ! ‘ಕರ್ನಾಟಕ ಭವನ’ಕ್ಕಾಗಿ ಹೋರಾಟ ಮಾಡಿದ್ದೇ ಬಂತು ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಘಟಕದ ವಿವಾದಗಳು ಇಲ್ಲಿಗೇ ಮುಗಿದಿಲ್ಲ. ಈಗ ಕಸಾಪ ಮಹಾರಾಷ್ಟ್ರ ಘಟಕದ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹಿಂದಿನ ಸಮಿತಿಯು ನೂತನ ಸಮಿತಿಗೆ ಇನ್ನೂ ಹಸ್ತಾಂತರಿಸಿಲ್ಲ ಎನ್ನುವುದು ಈಗಿನ ಅಧ್ಯಕ್ಷರ ಆಕ್ಷೇಪ. ಈ ವಿಷಯವಾಗಿ ಕೆಲವು ಸಲ ನೆನಪಿಸಿದರೂ ಇನ್ನೂ ಘಟಕದ ಖಾತೆಯಲ್ಲಿರುವ ಹಣವನ್ನು ನೂತನ ಸಮಿತಿಗೆ ಹಸ್ತಾಂತರವಾಗಿಲ್ಲ ಎನ್ನುತ್ತಾರೆ ಈಗಿನ ಅಧ್ಯಕ್ಷ ಬಸವರಾಜ ಮಸೂತಿ. ಈ ಬಗ್ಗೆ ಅವರು ಕಸಾಪ ಕೇಂದ್ರ ಅಧ್ಯಕ್ಷ ಮನು ಬಳಿಗಾರ ಅವರಲ್ಲೂ ದೂರು ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ‘‘ಏನಾದರೂ ಈ ಬಗ್ಗೆ ವಿಚಾರಿಸಿ ಸಮಸ್ಯೆ ಬಗೆಹರಿಸಲು ನೆರವಾಗಿ’’ ಎಂದು ಈಗಿನ ಅಧ್ಯಕ್ಷ ಬಸವರಾಜ ಮಸೂತಿ ನನಗೂ ಕರೆ ಮಾಡಿದ್ದಾರೆ. ‘‘ಬ್ಯಾಂಕ್‌ನವರಿಗೆ ಹೇಳಿದ್ದೇವೆ. ಟ್ರಾನ್ಸ್‌ಫರ್ ಮಾಡಲು. ಆದರೆ ಸೊಲ್ಲಾಪುರದಿಂದ ಸರಿಯಾಗಿ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಹೇಳಿದ್ದು ಅವರಿಗೆ ಅರ್ಥವಾಗುತ್ತಿಲ್ಲ’’ ಎನ್ನುತ್ತಾರೆ ಹಿಂದಿನ ಸಮಿತಿಯ ಕಾರ್ಯದರ್ಶಿಗಳು.

ಈ ಲೇಖನ ಮುಗಿಸುವ ಮುನ್ನ ಮತ್ತೆ ಘಟಕದ ಈಗಿನ ಅಧ್ಯಕ್ಷ ಬಸವರಾಜ ಮಸೂತಿ ಅವರನ್ನು ಮಾತನಾಡಿದೆ. ‘‘ಘಟಕದ ನಿಕಟಪೂರ್ವ ಅಧ್ಯಕ್ಷರು ಸಹಕಾರವನ್ನೇ ನೀಡುತ್ತಿಲ್ಲ. ಕಸಾಪ ಪರಿಷತ್‌ನಿಂದ ಮುಂಬೈಯಲ್ಲಿ ಮುಂದಿನ ದಿನಗಳಲ್ಲಿ ಹೊರನಾಡ ಸಮ್ಮೇಳನ ಜರಗಲಿದೆ. ನಿಯಮದಂತೆ ನಿಕಟಪೂರ್ವ ಅಧ್ಯಕ್ಷರು ಸಮಿತಿಯಲ್ಲಿ ಇದ್ದಾರೆ. ಆದರೆ ಯಾವುದೇ ಸಹಕಾರ ನೀಡುತ್ತಿಲ್ಲ. ಮನು ಬಳಿಗಾರ ಅವರಿಗೂ ಹೇಳಿದ್ದೇನೆ. ಅವರು ಆ ಬಗ್ಗೆ ಪತ್ರ ಬರೆಯಬಹುದು. ನಾವು ಎಲ್ಲಾ ಕನ್ನಡಿಗರ ಸಹಕಾರವನ್ನು ಬಯಸುತ್ತೇವೆ. ಮುಂಬೈಯಲ್ಲಿ ಶೀಘ್ರವೇ ಹೊರನಾಡ ಕನ್ನಡ ಸಮ್ಮೇಳನ ನಡೆಯಲಿದೆ. ಇಂತಹ ಸಮಯದಲ್ಲಿ ಹಿಂದಿನ ಘಟಕದ ಸಮಿತಿಯವರ ಅಸಹಕಾರ ನೋವು ತರಿಸಿದೆ’’ ಎಂದರು ಈಗಿನ ಅಧ್ಯಕ್ಷರು.

ಅಂತೂ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷತೆ ಮುಂಬೈಯವರ ಕೈಯಿಂದ ಜಾರಿದ ನಂತರ ಸದ್ಯಕ್ಕೆ ಮುಂಬೈ ಕನ್ನಡಿಗರಿಗೆ ಅದರಲ್ಲಿ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಹಾಗಾಗಿ ಈಗಿನ ಸಮಿತಿಯವರಿಗೆ ಸಹಕಾರ ನೀಡುವ ಮಾತಾದರೂ ಇಲ್ಲಿದೆ! ಕೇಂದ್ರ ಅಧ್ಯಕ್ಷರು ಏನು ಕ್ರಮ ಕೈಗೊಳ್ಳುವರೋ ಕಾದು ನೋಡೋಣ. ಇನ್ನು ಮೂರು ವರ್ಷ ಹೆಚ್ಚಿನ ಮುಂಬೈ ಕನ್ನಡಿಗ ಸಾಹಿತಿಗಳು ಹಿಂದಿನಂತೆ ಘಟಕದ ಬಗ್ಗೆ ಆಸಕ್ತಿ ತೋರಿಸಲಾರರು ಎನ್ನುವುದಂತೂ ಸತ್ಯವೇ!

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News