ಮಣಿಪುರಿ ವಿದ್ಯಾರ್ಥಿಗಳಿಗೆ ತಾಜ್ ಮಹಲ್ ಪ್ರವೇಶಕ್ಕೆ ತಡೆ !

Update: 2017-01-10 06:55 GMT

ಗಾಂಧಿ ಮತ್ತು ಬುದ್ಧನ ನಾಡಿನಲ್ಲಿ ಜನಾಂಗೀಯವಾದ ಎನ್ನುವುದು ಎಷ್ಟೇ ನಿರಾಕರಿಸಿದರೂ ಸಹ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ. ಮಣಿಪುರದ ಮಹಿಳೆ ಮೋನಿಕಾ ಖಾಂಗೇಂಬಮ್ ರನ್ನು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ಭಾರತೀಯಳಂತೆ ಕಾಣುತ್ತಿಲ್ಲ” ಎಂದು ಸಿಬ್ಬಂದಿಗಳು ಸತಾಯಿಸಿದ ನಂತರ ಈಗ ಮಣಿಪುರದ ಪ್ರಜೆಗಳು ಅಂತಹುದೇ ಇನ್ನೊಂದು ತಾರತಮ್ಯವನ್ನು ಕಂಡಿದ್ದಾರೆ.

ರವಿವಾರ ಮಣಿಪುರದ ವಿದ್ಯಾರ್ಥಿಗಳ ತಂಡವೊಂದು ಅಖಿಲ ಭಾರತ ಶೈಕ್ಷಣಿಕ ಪ್ರವಾಸದ ಅಂಗವಾಗಿ ವಿಶ್ವಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಸೌಂದರ್ಯವನ್ನು ವೀಕ್ಷಿಸಲು ಹೋಗಿದ್ದರು. ಆದರೆ ಭದ್ರತಾ ಸಿಬ್ಬಂದಿಗಳು ಈ ವಿದ್ಯಾರ್ಥಿಗಳು ವಿದೇಶಿಯರಂತೆ ಕಾಣುತ್ತಿರುವ ನೆಪವೊಡ್ಡಿ ಪೌರತ್ವದ ಸಾಕ್ಷ್ಯವನ್ನು ತೋರಿಸುವಂತೆ ಹೇಳಿ ತಡೆದಿದ್ದಾರೆ. ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿದೇಶಿಯರಂತೆ ಕಾಣುತ್ತಿದ್ದ ಕಾರಣದಿಂದ ಅವರಿಗೆ ತಾಜ್ ಮಹಲಿಗೆ ಪ್ರವೇಶಿಸಲು ಅನುಮತಿ ಸಿಗಲಿಲ್ಲ.

ಇತರ ಎಲ್ಲಾ ಪ್ರವಾಸಿ ತಾಣಗಳಂತೆ ತಾಜ್ ಮಹಲ್ ನಲ್ಲೂ ವಿದೇಶಿಯರು ರೂ. 1000 ಕೊಟ್ಟು ಟಿಕೆಟುಗಳನ್ನು ಖರೀದಿಸಬೇಕು. ಭಾರತೀಯರಿಗೆ ಈ ಮೊತ್ತ ರೂ. 40 ಮಾತ್ರ. ಮಣಿಪುರ ವಿದ್ಯಾರ್ಥಿಗಳು ತಾಜ್ ಮಹಲ್ ವೀಕ್ಷಿಸಲು ಒಳ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿಗಳು ತಡೆದರು. ಭಾರತೀಯರು ಎಂದು ಸುಳ್ಳು ಹೇಳಿ ಅಗ್ಗದ ಟಿಕೆಟು ಖರೀದಿಸಿ ಒಳಪ್ರವೇಶಿಸುತ್ತಿದ್ದಾರೆ ಎಂದು ಸಿಬ್ಬಂದಿ ಅವರ ಮೇಲೆ ಆರೋಪ ಹೊರಿಸಿದ್ದರು.

ಆದರೆ ಪ್ರಕರಣ ಇಷ್ಟಕ್ಕೇ ನಿಲ್ಲಲಿಲ್ಲ. ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡುಗಳು ಮತ್ತು ಅವರು ರಾಷ್ಟ್ರೀಯ ಪ್ರವಾಸದಲ್ಲಿದ್ದಾರೆ ಎನ್ನುವ ಪತ್ರವನ್ನು ತೋರಿಸಿದರೂ ಭದ್ರತಾ ಸಿಬ್ಬಂದಿ ಒಪ್ಪಿಕೊಳ್ಳಲಿಲ್ಲ. ಅವರ ಆಧಾರ್ ಕಾರ್ಡುಗಳನ್ನು ತೋರಿಸುವಂತೆ ಒತ್ತಡ ಹೇರಿದರು. ನಂತರ ಆಧಾರ್ ಕಾರ್ಡ್ ಇದ್ದವರನ್ನು ಮಾತ್ರ ಒಳಗೆ ಹೋಗಲು ಅನುಮತಿ ಕೊಡಲಾಯಿತು. ನಂತರ ಪ್ರವಾಸೋದ್ಯಮ ಇಲಾಖೆ ಮಧ್ಯಪ್ರವೇಶಿಸಿದ ಮೇಲೆ ಉಳಿದ ವಿದ್ಯಾರ್ಥಿಗಳಿಗೆ ಒಳಗೆ ಹೋಗಲು ಅನುಮತಿ ಸಿಕ್ಕಿತು. “ಪೌರತ್ವದ ಸಾಕ್ಷಿಯನ್ನು ತೋರಿಸಲೇಬೇಕು ಎಂದು ಭದ್ರತಾ ಸಿಬ್ಬಂದಿಗಳು ಅವಹೇಳನಕಾರಿಯಾಗಿ ಒತ್ತಡ ಹೇರಿದ್ದರು. ಅಲ್ಲದೆ ಕೆಟ್ಟ ವರ್ತನೆ ತೋರಿಸಿದ್ದರು. ನಂತರ ಪ್ರವಾಸೋದ್ಯಮ ಇಲಾಖೆಗೆ ಕರೆ ಮಾಡಿದ ಮೇಲೆ ಅವರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳು ಒಳಹೋಗಲು ಅವಕಾಶ ನೀಡಿದರು” ಎಂದು ಮಾಧ್ಯಮದ ಜೊತೆಗೆ ಮಾತನಾಡಿದ ಪ್ರವಾಸಿ ಪೊಲೀಸ್ ಠಾಣಾ ಮುಖ್ಯಸ್ಥರಾದ ಆರ್ ಪಿ ಪಾಂಡೆ ಹೇಳಿದ್ದಾರೆ.

ಈ ವಿಚಾರವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದೆ. ಈ ವಿಷಯದ ಬಗ್ಗೆ ವಾಸ್ತವ ತಿಳಿದುಕೊಳ್ಳಲು ತಾಜ್ ಗೇಟ್ ಗಳ ಬಳಿ ಇರುವ ಸಿಸಿಟಿವಿ ದೃಶ್ಯಗಳನ್ನು ಕೊಡುವಂತೆ ಕೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News