ಸಾಕ್ಷಿ ಮಹಾರಾಜ್‌ಗೆ ಚು. ಆಯೋಗ ನೋಟಿಸ್
ಹೊಸದಿಲ್ಲಿ, ಜ.10: ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣರೆಂದು ದೂರುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಸಾಕ್ಷಿಮಹಾರಾಜ್‌ಗೆ ಚುನಾವಣಾ ಆಯೋಗವು ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಈ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿ ಬುಧವಾರ ಸಂಜೆಯೊಳಗೆ ಉತ್ತರಿಸುವಂತೆ ಆಯೋಗವು ಉತ್ತರಪ್ರದೇಶದ ಸಾಕ್ಷಿ ಮಹಾರಾಜ್‌ಗೆ ನೋಟಿಸ್‌ನಲ್ಲಿ ಸೂಚನೆ ನೀಡಿದೆ.
ಸಾಕ್ಷಿ ಮಹಾರಾಜ್ ಅವರು ಶುಕ್ರವಾರ ಮೇರಠ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜನಸಂಖ್ಯೆ ಹೆಚ್ಚಳಕ್ಕೆ ಹಿಂದೂಗಳು ಕಾರಣರಲ್ಲ. ನಾಲ್ವರು ಪತ್ನಿಯರು ಹಾಗೂ 40 ಮಕ್ಕಳು ಎಂಬ ಪರಿಕಲ್ಪನೆಯನ್ನು ಬೆಂಬಲಿಸುತ್ತಿರುವವರಿಂದಾಗಿ ಜನಸಂಖ್ಯೆ ಬೆಳೆಯುತ್ತಿದೆ’’ ಎಂದು ಹೇಳಿದ್ದರು. ಗೋಹತ್ಯೆಯಿಂದ ದೊರೆಯುವ ಹಣವನ್ನು ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಲು ಬಳಸಲಾುತ್ತಿದೆಯೆಂದು ಅವರು ಆಪಾದಿಸಿದ್ದರು.
ಆದರೆ ಸಾಕ್ಷಿಯವರ ಹೇಳಿಕೆಯಿಂದ ಬಿಜೆಪಿ ಅಂತರವನ್ನು ಕಾಯ್ದುಕೊಂಡಿದೆ. ಈ ಹೇಳಿಕೆಯನ್ನು ಬಿಜೆಪಿಯ ನಿಲುವೆಂದು ಭಾವಿಸಕೂಡದು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಉತ್ತರಪ್ರದೇಶದ ಈ ಲೋಕಸಭಾ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಆಗಗ್ರಹಿಸಿದೆ.
ಚುನಾವಣಾ ಆಯೋಗವು ಇಂದು ನೀಡಿದ ಹೇಳಿಕೆಯೊಂದರಲ್ಲಿ, ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಕ್ಷಿ ಮಹಾರಾಜ್ ಹೇಳಿಕೆ ಚುನಾವಣಾ ನೀತಿಯ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಅಲ್ಲದೆ ಧರ್ಮ, ಜಾತಿ, ಜನಾಂಗ, ಸಮುದಾಯ ಅಥವಾ ಭಾಷೆಯ ಹೆಸರಿನಲ್ಲಿ ಮತಯಾಚನೆ ಮಾಡುವುದನ್ನು ಸಹ ಚುನಾವಣಾ ಭ್ರಷ್ಟಾಚಾರವಾಗಿ ಪರಿಗಣಿಸಬೇಕೆಂಬ ಸುಪ್ರೀಂಕೋರ್ಟ್‌ನ ಕಳೆದ ವಾರದ ತೀರ್ಪಿನ ಉಲ್ಲಂಘನೆಯಾಗಿದೆಯೆಂದು ಆಯೋಗವು ಹೇಳಿದೆ.