ಬೆನ್ನು ಹುರಿ ಹಾನಿಯಾಗಿ ವೀಲ್ ಚೇರ್ ಪಾಲಾದವನು ಈಗ ಕ್ಯಾಟ್ ಟಾಪರ್ !

Update: 2017-01-11 11:36 GMT

ಬ್ಯುಸಿನೆಸ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಬರೆಯುವ ಕ್ಯಾಟ್ (ಕಾಮನ್ ಅಡ್ಮಿಶನ್ ಟೆಸ್ಟ್) ಪರೀಕ್ಷೆಯನ್ನು ಶೇ. 99.97 ಅಂಕಗಳ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದು ಪಾಸ್ ಮಾಡಿರುವ ಸಿಮರ್ ಪ್ರೀತ್ ಸಿಂಗ್ ದೈಹಿಕ ಊನತೆಯು ಸಾಧನೆಗೆ ತಡೆಯೊಡ್ಡುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. 22 ವರ್ಷದ ಈ ಯುವಕ 2015 ಆಗಸ್ಟ್ ನಲ್ಲಿ ಆದ ಅಪಘಾತದಲ್ಲಿ ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡಿದ್ದಾರೆ.

ಈಗ ಗುರುಗಾಂವ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿಮರ್ ಪ್ರೀತ್, ಚಂಡೀಗಢದ ಸೈಂಟ್ ಜಾನ್ಸ್ ಹೈಸ್ಕೂಲ್ ನಲ್ಲಿ ಮತ್ತು ನಂತರ ಡೂನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪಿಳನಿಯ ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

“2015 ಆಗಸ್ಟ್ ನಲ್ಲಿ ನನ್ನ ಮಗ ಚಂಡೀಗಢದಿಂದ ವಾಪಾಸಾಗುತ್ತಿದ್ದಾಗ ಅಪಘಾತವಾಗಿ ಬೆನ್ನುಹುರಿ ನಾಶವಾಗಿ ಸೊಂಟದ ಕೆಳಗೆ ಸ್ವಾದೀನವಿಲ್ಲ. ಅಂದಿನಿಂದ ವೀಲ್ ಚೇರ್ ಮೇಲೆಯೇ ಕಾಲ ಕಳೆಯುತ್ತಿದ್ದಾನೆ. ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಯಾವುದೇ ಕೋಚಿಂಗ್ ಕೂಡ ತೆಗೆದುಕೊಳ್ಳದೆ ಮೊದಲ ರ್ಯಾಂಕ್ ಬಂದಿದ್ದಾನೆ” ಎಂದು ತಂದೆ ಪುಷ್ಟಿಂದರ್ ಸಿಂಗ್ ಖುಷಿಪಡುತ್ತಿದ್ದಾರೆ.

“ನನಗೆ ಬೆಂಗಳೂರು ಮತ್ತು ಅಹ್ಮದಾಬಾದ್ ನಿಂದ ಕರೆ ಬಂದಿದೆ. ನಾನು ಅಹ್ಮದಾಬಾದ್ ನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಗೆ ಹೋಗಲು ಬಯಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಅತ್ಯುತ್ತಮ ವ್ಯಕ್ತಿಯಾಗಲು ಬಯಸಿರುವೆ” ಎನ್ನುತ್ತಾರೆ ಸಿಮರ್ ಪ್ರೀತ್.

ಗುರುಗ್ರಾಮ್ ನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಇಂಜಿನಿಯರ್ ಪೀಯೂಶ್ ಮಿತ್ತಲ್ ಶೇ. 99.96 ಅಂಕಗಳನ್ನು ಪಡೆದಿದ್ದಾರೆ. ಏಳು ಮಂದಿ ಪುರುಷರು ಶೇ. 99 ಮೇಲೆ ಅಂಕಗಳನ್ನು ಪಡೆದು ಟಾಪ್ ಸ್ಥಾನಗಳನ್ನು ಪಡೆದಿದ್ದಾರೆ. ಟಾಪ್ ಮೂರರೊಳಗೆ ಒಬ್ಬ ಮಹಿಳೆಯೂ ಇದ್ದಾರೆ.

ಪ್ರೀತಿಕಾ ಸಚದೇವ ಶೇ.99.62 ಅಂಕಗಳನ್ನು ಪಡೆದಿದ್ದಾರೆ. ಉಳಿದಂತೆ, ಅಂಚಿತ್ ಸಿಂಗ್ಲಾ (ಶೇ.99.34), ರಿಶವ್ ಶರ್ಮಾ (ಶೇ.99.7), ಅರ್ನವ್ ಬನ್ಸಾಲ್ (ಶೇ.99.15) ಮತ್ತು ಸಾರಾಂಶ್ ಸಕ್ಸೇನ (ಶೇ.99.87) ಮುಖ್ಯವಾಗಿ ಶೇ. 99ರ ಮೇಲೆ ಅಂಕಗಳನ್ನು ಪಡೆದಿದ್ದಾರೆ.

ಚಂಡೀಗಢದವರೇ ಆಗಿರುವ ಪ್ರನ್ಶು ಬಾತ್ರಾ ಶೇ. 99.48 ರಷ್ಟು ಅಂಕಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News