​ಯೋಧರ ಆಹಾರದ ಗುಣಮಟ್ಟ ತಪಾಸಣೆಗೆ ಗಡಿಗಳಿಗೆ ತಜ್ಞರ ತಂಡ

Update: 2017-01-11 18:52 GMT

 ಗುವಾಹಟಿ,ಜ.11: ಯೋಧರಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟವನ್ನು ದೃಢೀಕರಿಸಲು ಸರಕಾರವು ದೇಶದ ಎಲ್ಲಾ ಗಡಿ ಠಾಣೆಗಳಿಗೆ ಆಹಾರ ತಜ್ಞರ ತಂಡಗಳನ್ನು ಕಳುಹಿಸಲಿದೆಯೆಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ತಿಳಿಸಿದ್ದಾರೆ. ಗಡಿಯಲ್ಲಿರುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆಯೆಂದು ಆರೋಪಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ರಿಜಿಜು ಈ ಭರವಸೆ ನೀಡಿದ್ದಾರೆ.
   ಗುವಾಹಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೈನಿಕರು ಹಾಗೂ ಅವರ ಆಹಾರ ಮತ್ತು ಸಂತೃಪ್ತಿಯು ಸರಕಾರದ ಆದ್ಯತೆಯಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು. ವಿವಾದಿತ ವೀಡಿಯೊದ ಬಗ್ಗೆ ತನಿಕೆ ನಡೆಸಲು ಸರಕಾರವು ಈಗಾಗಲೇ ಗಡಿಭದ್ರತಾಪಡೆಯ ಬ್ರಿಗೇಡಿಯರ್ ದರ್ಜೆಯ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದಾಗಿ ರಿಜಿಜು ತಿಳಿಸಿದರು. ಕೆಲವು ದಿನಗಳ ಹಿಂದೆ ಬಿಎಸ್‌ಎಫ್ ಕಾನ್ಸ್ಟೇಬಲ್ ತೇಜ್ ಬಹಾದ್ದೂರ್ ಯಾದವ್, ಗಡಿಗಳಲ್ಲಿ ಯೋಧರಿಗೆ ಕಳಪೆಗುಣಮಟ್ಟದ ಆಹಾರವನ್ನು ನೀಡಲಾಗುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿರುವುದು ದೇಶಾದ್ಯಂತ ಕೋಲಾಹಲವನ್ನು ಸೃಷ್ಟಿಸಿತ್ತು. ವಿವಾದಿತ ವೀಡಿಯೊ ಅಸಲಿಯೇ ಎಂಬುದನ್ನು ದೃಢೀಕರಿಸಲು ಈಗಾಗಲೇ ತನಿಖೆಯನ್ನು ಆರಂಭಿಸಲಾಗಿದೆಯೆಂದು ರಿಜಿಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News