ಇವಳು ಜಿಯಾ ಜಿಯಾ....ಥೇಟ್ ಹೆಣ್ಣಿನ ರೂಪದ ರೋಬೊಟ್

Update: 2017-01-12 10:26 GMT

ಶಾಂಘೈ,ಜ.12: ಈ ಚೀನಿ ಸುಂದರಿಯ ಹೆಸರು ಜಿಯಾ ಜಿಯಾ. ನಿಮ್ಮಂದಿಗೆ ಸರಳ ಸಂಭಾಷಣೆಯನ್ನು ನಡೆಸುವ ಈ ಬೆಡಗಿ ಪ್ರಶ್ನೆಗಳಿಗೆ ಮುಖದಲ್ಲಿಯೇ ಭಾವನೆಗಳನ್ನು ಪ್ರಕಟಿಸುವ ಮೂಲಕ ಅರ್ಧ ಉತ್ತರವನ್ನು ನೀಡಿಬಿಡುತ್ತಾಳೆ. ಅಂದ ಹಾಗೆ ಜಿಯಾ ಜಿಯಾ ನಿಜವಾದ ಹೆಣ್ಣಲ್ಲ. ಹರೆಯದ ಯುವತಿಯೋರ್ವಳು ಸಾಕ್ಷಾತ್ ಎದುರಿನಲ್ಲಿ ನಿಂತಂತಿರುವ ಜಿಯಾ ಜಿಯಾ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಇಂಜಿನಿಯರ್‌ಗಳ ತಂಡವು ರೂಪಿಸಿರುವ ರೋಬೊಟ್! ಜಿಯಾ ಜಿಯಾ ಭವಿಷ್ಯದಲ್ಲಿ ಚೀನಾದ ಕಾರ್ಮಿಕರ ಜೊತೆಗೂಡಿ ಕಾರ್ಯ ನಿರ್ವಹಿಸಲಿರುವ ರೋಬೊಟ್ ಸಂಕುಲದ ಪ್ರಾತಿನಿಧಿಕ ಸಂಕೇತವಾಗಿದ್ದಾಳೆ ಎನ್ನುತ್ತಾರೆ ಆಕೆಯ ಸೃಷ್ಟಿಕರ್ತರು.

ಜಿಯಾ ಜಿಯಾ ಚೀನಾದ ಮೊದಲ, ಮಹಿಳೆಯನ್ನೇ ಹೋಲುವ ರೋಬೊಟ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಕಳೆದ ವರ್ಷ ವಿವಿಯ ಇಂಜಿನಿಯರ್‌ಗಳ ತಂಡ ಇಂತಹ ರೋಬೊಟ್ ನಿರ್ಮಾಣಕ್ಕಾಗಿ ಮೊದಲ ಬಾರಿಗೆ ಕನಸು ಕಂಡಿದ್ದರು.

ಬ್ಯಾಂಕಿಂಗ್ ದೈತ್ಯ ಯುಬಿಎಸ್ ಈ ವಾರದ ಆರಂಭದಲ್ಲಿ ಶಾಂಘೈನಲ್ಲಿ ಆಯೋಜಿಸಿದ್ದ ಆರ್ಥಿಕ ಸಮ್ಮೇಳನದಲ್ಲಿ ವಿವಿಯ ಇಂಜಿನಿಯರ್‌ಗಳ ತಂಡ ಜಿಯಾ ಜಿಯಾಳೊಂದಿಗೆ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿತ್ತು. ತಂಡದ ನಾಯಕ ಚೆನ್ ಕ್ಸಿಯಾವೊಪಿಂಗ್ ಅವರ ಪಾಲಿಗಂತೂ ಜಿಯಾ ಜಿಯಾ ಹೆಮ್ಮೆಯ ಪುತ್ರಿಯಾಗಿಬಿಟ್ಟಿದ್ದಾಳೆ.

ಇನ್ನೊಂದು ದಶಕದೊಳಗೆ ಜಿಯಾ ಜಿಯಾಳಂತಹ ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ರೋಬೊಟ್‌ಗಳು ಚೀನಿ ರೆಸ್ಟಾರಂಟ್‌ಗಳು, ನರ್ಸಿಂಗ್ ಹೋಮ್‌ಗಳು, ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುವ ದೃಶ್ಯ ಸಾಮಾನ್ಯವಾಗಲಿದೆ ಎಂದು ಚೆನ್ ಭವಿಷ್ಯ ನುಡಿದಿದ್ದಾರೆ.

ಹೆಗಲ ಮೇಲಿನಿಂದ ಇಳಿಬಿದ್ದಿರುವ ಕಪ್ಪು ತಲೆಗೂದಲು,ಚೀನಾದ ಸಾಂಪ್ರದಾಯಿಕ ಉಡುಗೆಯೊಂದಿಗೆ ಮಿಂಚುವ ಜಿಯಾ ಜಿಯಾ ಸೌಂದರ್ಯವತಿಯೇನೋ ಹೌದು, ಆದರೆ ಕೆಲವೊಮ್ಮೆ ಸರಳ ಪ್ರಶ್ನೆಗಳಿಗೂ ಉತ್ತರಿಸುವಾಗ ಎಡವುತ್ತಾಳೆ. ಕೆಲಸ ಇನ್ನೂ ಪೂರ್ಣಗೊಂಡಿಲ್ಲ,ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದಿದ್ದಾರೆ ಚೆನ್.

 ಅಂದ ಹಾಗೆ ತನ್ನನ್ನು ಪ್ರಶ್ನಿಸುವ ವ್ಯಕ್ತಿ ಗಂಡೋ ಹೆಣ್ಣೋ ಅನ್ನುವುದನ್ನು ಜಿಯಾ ಜಿಯಾ ಸರಿಯಾಗಿಯೇ ಗುರುತಿಸುತ್ತಾಳೆ. ಸಮ್ಮೇಳನದಲ್ಲಿ ಪ್ರತಿನಿಧಿಯೋರ್ವರನ್ನು ‘ನೀವು ಸುಂದರ ಪುರುಷ ’ಎಂದು ಅಭಿನಂದಿಸಿ ತನ್ನ ಪ್ರೌಢಿಮೆ ತೋರಿಸಿದ್ದಾಳೆ. ‘‘ನಿನಗೆ ಬಾಯ್‌ಫ್ರೆಂಡ್ ಇದ್ದಾನೆಯೇ ’’ಎಂಬ ಪ್ರಶ್ನೆಗೆ, ‘‘ಬೇಡಪ್ಪ ಬೇಡ,ನಾನು ಒಂಟಿಯಾಗಿಯೇ ಇರುತ್ತೇನೆ ’’ಎಂಬ ಚಾಲಾಕಿ ಉತ್ತರವನ್ನೂ ನೀಡಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News