ಬಿಜೆಪಿಯ ದ್ವಿಮುಖ ನೀತಿ
ದೇಶ ಸರ್ವಾಧಿಕಾರದತ್ತ ದಾಪುಗಾಲಿಡುತ್ತ ಸಾಗಿದೆ. ಕಾನೂನು, ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳಿಗೆ ಸರಕಾರವನ್ನು ನಡೆಸುತ್ತಿರುವ ಪಕ್ಷದವರಿಂದಲೇ ನಿತ್ಯವೂ ಸವಾಲು ಎದುರಾಗುತ್ತಿದೆ. ಕಾವಿ ವೇಷ ಧರಿಸಿದ ಆಷಾಢಭೂತಿಗಳು ಬಾಯಿಗೆ ಬಂದಂತೆ ಮಾತನಾಡು ತ್ತಿದ್ದಾರೆ. ಈ ಅವಿವೇಕಿಗಳ ನಾಲಗೆಗೆ ಕಡಿವಾಣವೇ ಇಲ್ಲದಂತಾಗಿದೆ. ಉತ್ತರಪ್ರದೇಶದಿಂದ ಲೋಕಸಭೆಗೆ ಚುನಾಯಿತರಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ತನ್ನ ಹೊಲಸು ನಾಲಗೆಯನ್ನು ಮತ್ತೆ ಹರಿಯಬಿಟ್ಟಿದ್ದಾರೆ.
ಬರುವ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಕೋಮುಧ್ರುವೀಕರಣ ಮಾಡುವ ಸಂಘಪರಿವಾರದ ಷಡ್ಯಂತ್ರದ ಭಾಗವಾಗಿ ಈ ಕಾವಿ ವೇಷಧಾರಿ ಮತ್ತೆ ವಿಷ ಕಕ್ಕಿದ್ದಾರೆೆ. ಯಾವುದೇ ಕೋಮಿನ ಹೆಸರನ್ನು ನಿರ್ದಿಷ್ಟವಾಗಿ ಹೇಳದಿದ್ದರೂ ಇವರು ಆಡಿರುವ ಮಾತುಗಳು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಕಳೆದ ವಾರ ಮೀರತ್‌ನಲ್ಲಿ ಧಾರ್ಮಿಕಸಭೆಯೊಂದರಲ್ಲಿ ಮಾತನಾಡಿದ ಅವರು ಜನಸಂಖ್ಯಾ ಸ್ಫೋಟದ ಬಗ್ಗೆ ಪ್ರಸ್ತಾಪಿಸುತ್ತ, ಇದಕ್ಕೆ ಹಿಂದೂಗಳು ಕಾರಣರಲ್ಲ ಎಂದು ಹೇಳಿದರು. ‘‘ನಾಲ್ವರು ಹೆಂಡತಿಯರನ್ನು ಮದುವೆ ಮಾಡಿಕೊಂಡು ನಲ್ವತ್ತು ಮಕ್ಕಳನ್ನು ಹೆರುತ್ತಿರುವವರು ಜನಸಂಖ್ಯಾ ಸ್ಫೋಟಕ್ಕೆ ಕಾರಣ’’ ಎಂದು ಅಣಿಮುತ್ತುಗಳನ್ನು ಉದುರಿಸಿದರು. ಈ ಪ್ರಚೋದನಾಕಾರಿ ಭಾಷಣಕ್ಕಾಗಿ ಸಾಕ್ಷಿ ಮಹಾರಾಜ್‌ರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗವು ಕೂಡ ನೋಟಿಸ್ ಜಾರಿ ಮಾಡಿದೆ.
ಈ ಸನ್ಯಾಸಿ ಈ ರೀತಿ ಮಾತನಾಡಿದ್ದು ಇದೇ ಮೊದಲ ಬಾರಿ ಅಲ್ಲ, ಆಕಸ್ಮಿಕವೂ ಅಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಸಂಘಪರಿವಾರ ರೂಪಿಸಿದ ಷಡ್ಯಂತ್ರದ ಭಾಗವಾಗಿ ಇವರು ಕೋಮುಭಾವನೆಯನ್ನು ಕೆರಳಿಸುವ ಮಾತನ್ನಾಡಿದ್ದಾರೆ. ಈ ರೀತಿ ಮಾತನಾಡಿ ಜನರನ್ನು ವಿಭಜಿಸಿ ಹಿಂದೂ ಓಟ್‌ಬ್ಯಾಂಕ್ ನಿರ್ಮಿಸುವುದು ಇವರ ಹುನ್ನಾರವಾಗಿದೆ. ಸಾಕ್ಷಿ ಮಹಾರಾಜ್ ಮಾತ್ರವಲ್ಲದೆ ಸಾಧ್ವಿ ಋತಾಂಬರಾ, ನಿರಂಜನ ಜ್ಯೋತಿ, ಮಹಾಂತ ಅವೈದ್ಯನಾಥ್‌ರಂತಹ ಅನೇಕರು ಚುನಾವಣೆ ಬಂದಾಗಲೆಲ್ಲಾ ಪ್ರತ್ಯಕ್ಷರಾಗಿ ಜನರ ನೆಮ್ಮದಿಗೆ ಕೊಳ್ಳಿ ಇಡುವ ಇಂತಹ ಮಾತುಗಳನ್ನಾಡುತ್ತಾರೆ. ಒಂದು ಕಡೆ ಸ್ವಯಂಘೋಷಿತ ಸನ್ಯಾಸಿಗಳಿಂದ ಈ ರೀತಿಯ ಹೇಳಿಕೆಗಳನ್ನು ಕೊಡಿಸುವ ಸಂಘಪರಿವಾರವು ಇನ್ನೊಂದು ಕಡೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಂದ ಇನ್ನೊಂದು ಹೇಳಿಕೆಯ ಮೂಲಕ ಸಾಕ್ಷಿ ಮಹಾರಾಜ್ ಹೇಳಿಕೆಗೂ ಸರಕಾರಕ್ಕೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ಕೊಡಿಸುತ್ತದೆ.
ಬಿಜೆಪಿ ಅಸ್ತಿತ್ವಕ್ಕೆ ಬಂದಾಗಿನಿಂದ... ಅದರಲ್ಲೂ 90ರ ದಶಕದ ನಂತರ ಇಂತಹ ಹೇಳಿಕೆಗಳನ್ನು ಕೊಡಿಸುತ್ತಲೇ ಬಂದಿದೆ. ಈ ಹೇಳಿಕೆಗಳಿಗೆ ಬಿಜೆಪಿ ಎಂದೂ ಹೊಣೆ ಹೊತ್ತುಕೊಳ್ಳುವುದಿಲ್ಲ. ಸಾಕ್ಷಿ ಮಹಾರಾಜ್ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗಿರುವ ವ್ಯಕ್ತಿ. ಪಕ್ಷದ ಸಂಸದನಾಗಿ ಅವರು ಮನಬಂದಂತೆ ಮಾತನಾಡುವಂತಿಲ್ಲ. ಆದರೆ ಪದೇ ಪದೇ ಈ ರೀತಿ ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಪಕ್ಷದ ಉನ್ನತ ನಾಯಕರ ವೌನಸಮ್ಮತಿ ಇದ್ದೇ ಇರುತ್ತದೆ. ಸಾಕ್ಷಿ ಮಹಾರಾಜ್ ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವೌನವ್ರತ ತಾಳುತ್ತಾರೆ. ಕಾಟಾಚಾರಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಂದ ಹೇಳಿಕೆ ಕೊಡಿಸುತ್ತಾರೆ. ಸಾಕ್ಷಿ ಮಹಾರಾಜ್ ಈ ರೀತಿ ಪ್ರಚೋದನಾಕಾರಿಯಾಗಿ ಮಾತನಾಡಿದ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಇದು ಸಾಕ್ಷಿ ಮಹಾರಾಜ್‌ರದು ವೈಯಕ್ತಿಕ ಹೇಳಿಕೆ ಮಾತ್ರವಾಗಿರದೆ ಪಕ್ಷದ ಉನ್ನತ ಮೂಲಗಳ ಸೂಚನೆಯಂತೆ ನೀಡಿದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಇಂತಹ ಹೇಳಿಕೆಯನ್ನು ಕೊಡಿಸಿ ಜನಸಾಮಾನ್ಯರಲ್ಲಿ ಕೋಮು ಉನ್ಮಾದ ಕೆರಳಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮತಾಂತರ, ಗೋಹತ್ಯೆ ನಿಷೇಧ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾಕ್ಷಿ ಮಹಾರಾಜ್, ಗಿರಿರಾಜ್ ಸಿಂಗ್, ಮಹಾಂತ ಅವೈದ್ಯನಾಥ್ ಮುಂತಾದ ಸಂಸದರು ಪ್ರಚೋದನಾ ಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈ ರೀತಿ ಹೇಳಿಕೆ ನೀಡಿದವರಲ್ಲಿ ಕೆಲವರು ಮಂತ್ರಿಗಳು ಆಗಿದ್ದಾರೆ. ಕೇಂದ್ರ ಸರಕಾರ ಇಂತಹವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಬಿಜೆಪಿ ಸಂಸದೀಯ ಪಕ್ಷ ಕಾಟಾಚಾರದ ಸ್ಪಷ್ಟೀಕರಣವನ್ನು ನೀಡಿದರೂ ಇಂತಹ ಹೇಳಿಕೆಗಳು ಹೊರಬೀಳುತ್ತಿರುವುದು ಸ್ಥಗಿತಗೊಂಡಿಲ್ಲ. ಯಾರಿಂದಲೋ ಹೇಳಿಕೆ ಕೊಡಿಸಿ ಸಮಾಜದ ಶಾಂತಿ-ನೆಮ್ಮದಿಗೆ ಧಕ್ಕೆ ತರುವ ಈ ಪ್ರವೃತ್ತಿ ಆಘಾತಕಾರಿಯಾಗಿದೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ‘ವೌನಿ ಬಾಬಾ’ ಎಂದು ಕರೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಈಗ ಉದ್ದೇಶಪೂರ್ವಕವಾಗಿ ನಾಟಕೀಯ ವೌನ ತಳೆದಿದ್ದಾರೆ. ಚುನಾವಣೆಗಳಲ್ಲಿ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಬಾರದೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸಾಕ್ಷಿ ಮಹಾರಾಜ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ಬಂದ ನಂತರ ಚುನಾವಣೆಯಲ್ಲಿ ಧರ್ಮದ ಬಳಕೆಯನ್ನು ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಹೇಳಿಕೆಯನ್ನು ನೀಡಿತು. ಆದರೇ ಈ ಹೇಳಿಕೆ ಕೇವಲ ತೋರಿಕೆಯದ್ದು ಎನ್ನುವುದು ಈಗ ಸ್ಪಷ್ಟವಾಗಿದೆ. ಬಿಜೆಪಿಗೆ ಕಾನೂನಿನ ಬಗ್ಗೆ ನಂಬಿಕೆ ಇದ್ದರೆ ಸಾಕ್ಷಿ ಮಹಾರಾಜ್, ಮಹಾಂತ ಅವೈದ್ಯನಾಥ್ ಮುಂತಾದ ಗಲಭೆ ಪ್ರಚೋದಕ ನಕಲಿ ಸನ್ಯಾಸಿಗಳ ಮೇಲೆ ಕ್ರಮ ಕೈಗೊಳ್ಳಲಿ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ. ಆದರೆ ಅದು ಸಾಧ್ಯವಿಲ್ಲ. ಬಿಜೆಪಿಯ ಕಾರ್ಯಸೂಚಿಯ ಭಾಗವಾಗಿ ಅವರು ಈ ರೀತಿ ಮಾತನಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು. ಕೋಮುಪ್ರಚೋದಕ ಹೇಳಿಕೆಯನ್ನು ನೀಡುವ ಸಂಸದರನ್ನು ಹೊಂದಿರುವ ಪಕ್ಷಗಳ ಮಾನ್ಯತೆಯನ್ನು ರದ್ದುಗೊಳಿಸಬೇಕು.
ಆದರೆ ಈ ವರೆಗೆ ಆಯೋಗವು ಇಂತಹ ದಿಟ್ಟ ಕ್ರಮಗಳನ್ನು ಕೈಗೊಂಡಿಲ್ಲ. ಇದಕ್ಕಾಗಿ ಈಗ ಎಲ್ಲ ಜಾತ್ಯತೀತ ಮತ್ತು ಪ್ರಗತಿಪರ ಪಕ್ಷಗಳು ಮತ್ತು ಸಂಘಟನೆಗಳು ಚುನಾವಣಾ ಆಯೋಗದ ಮೇಲೆ ಒತ್ತಡ ತರಬೇಕಾಗಿದೆ. ಕೋಮುವಾದಿ ಪಕ್ಷಗಳು ಚುನಾವಣಾ ಗೆಲುವಿಗಾಗಿ ಈ ರೀತಿ ಕಾನೂನು ಮತ್ತು ಸಂವಿಧಾನಕ್ಕೆ ಅಪಚಾರವನ್ನು ಉಂಟುಮಾಡುವ ಚಟುವಟಿಕೆಗಳನ್ನು ಮುಂದುವರಿಸಿದರೆ ಅವು ಮುಂದೊಂದು ದಿನ ನಮ್ಮ ಸಂಸದೀಯ ಪ್ರಜಾಪ್ರಭುತ್ವಕ್ಕೇ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಮಠ-ಮಂದಿರಗಳಲ್ಲಿ ಪರಮಾತ್ಮನ ನಾಮಸ್ಮರಣೆ ಯಲ್ಲಿ ತೊಡಗಿರಬೇಕಾದ ಸನ್ಯಾಸಿಗಳು ಇಂದು ರಾಜಕೀಯ ಪಕ್ಷದ ಟಿಕೆಟ್ ಪಡೆದು ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಅಂತಹವರು ಈ ರೀತಿ ಪ್ರಚೋದನಾಕಾರಿಯಾಗಿ ಮಾತನಾಡುವುದು ಸರಿಯಲ್ಲ. ಬಿಜೆಪಿ ತಾನೊಂದು ರಾಜಕೀಯ ಪಕ್ಷವೆಂದು ಹೇಳಿಕೊಳ್ಳುತ್ತದೆ. ಆದರೆ ತನ್ನ ನಿಷ್ಠೆ ಸಂವಿಧಾನಕ್ಕೋ ಅಥವಾ ಸಂಘಪರಿವಾರಕ್ಕೋ ಎನ್ನುವುದನ್ನು ಅದು ಸ್ಪಷ್ಟಪಡಿಸ ಬೇಕಾಗುತ್ತದೆ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಕಾಶಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ಈ ವ್ಯವಸ್ಥೆಯನ್ನೇ ನಾಶಮಾಡಿ ಹಿಂದೂ ರಾಷ್ಟ್ರ ನಿರ್ಮಿಸುವುದು ಸಂಘಪರಿವಾರದ ಉದ್ದೇಶವಾಗಿದೆ.
ಬಿಜೆಪಿ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಅದರ ಚಟುವಟಿಕೆಗಳಿಂದ ಸ್ಪಷ್ಟವಾಗುತ್ತದೆ. ಅಧಿಕಾರಕ್ಕೆ ಬರುವ ಮುನ್ನ ಜನತೆಗೆ ನೀಡಿದ್ದ ಭರವಸೆಗಳನ್ನು ನೀಡುವಲ್ಲಿ ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯ ಪ್ರಕರಣದ ನಂತರ ದೇಶದ ಕೋಟ್ಯಂತರ ಜನರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದರು. ಈ ಬಿಕ್ಕಟ್ಟಿನಿಂದ ಪಾರಾಗಲು ಮತ್ತು ಜನರನ್ನು ದಾರಿತಪ್ಪಿಸಲು ಸಾಕ್ಷಿ ಮಹಾರಾಜ್ ಅಂತಹವರ ಮೂಲಕ ಕೋಮು ಉನ್ಮಾದ ಕೆರಳಿಸಲು ಮೋದಿ ಮಸಲತ್ತು ನಡೆಸಿರುವಂತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ಎಲ್ಲರೂ ಈ ಮಸಲತ್ತನ್ನು ವಿಫಲಗೊಳಿಸಬೇಕಾಗಿದೆ.