ವಿದ್ಯಾರ್ಥಿಯ ಪರೋಕ್ಷ ಕೊಲೆ: ಸೂಲಿಬೆಲೆ ಚಿಂತನೆಗೆ ತೆತ್ತ ಬೆಲೆ

Update: 2017-01-13 18:58 GMT

ಜಾತಿ ಭೇದಗಳನ್ನು ಅಳಿಸಿ ವಿದ್ಯಾರ್ಥಿಗಳನ್ನು ಒಂದಾಗಿಸಬೇಕಾದ ಶಾಲೆ, ಕಾಲೇಜುಗಳಲ್ಲಿ ದ್ವೇಷದ ಚಿಂತನೆಯನ್ನು ಹಿಡಿದುಕೊಂಡು ರಾಜಕೀಯ ನಾಯಕರು ಪ್ರವೇಶಿಸಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದಕ್ಕೆ ಶೃಂಗೇರಿಯ ಕಾಲೇಜೊಂದರ ವಿದ್ಯಾರ್ಥಿಯ ಆತ್ಮಹತ್ಯೆಯೇ ಉದಾಹರಣೆ. ಇದನ್ನು ಆತ್ಮಹತ್ಯೆ ಎಂದು ನೇರವಾಗಿ ಕರೆಯುವುದಕ್ಕಿಂತ, ಕೆಲವು ರಾಜಕೀಯ ಸಂಘಟನೆಗಳು ತಮ್ಮ ದುರುದ್ದೇಶಕ್ಕಾಗಿ ಈ ಹುಡುಗನನ್ನು ಆತ್ಮಹತ್ಯೆಗೆ ನೂಕಿತು ಎನ್ನ್ನುವುದೇ ಸರಿ. ರಾಜಕೀಯ ಪಕ್ಷಗಳ ಪ್ರಚೋದಕ ಮಾತುಗಳಿಗೆ ಬಲಿಯಾಗಿ, ಸಂಘರ್ಷಕ್ಕಿಳಿಯುವ ವಿದ್ಯಾರ್ಥಿಗಳಿಗೆ ಅದರ ಪರಿಣಾಮಗಳ ಅರಿವಿರುವುದಿಲ್ಲ. ಪರಿಣಾಮದ ಅರಿವಾಗುವಾಗ ಅದರಿಂದ ವಾಪಸು ಬರುವಂತಹ ಸ್ಥಿತಿಯೂ ಇರುವುದಿಲ್ಲ.

ಇಂದು ಕಾಲೇಜುಗಳು ಈ ರಾಜಕೀಯ ಕಾರಣಗಳಿಂದ ವಿದ್ಯಾರ್ಥಿಗಳನ್ನು ಅರಳಿಸುವ ವೇದಿಕೆಯಾಗುವ ಬದಲಿಗೆ ಅವರ ಭವಿಷ್ಯವನ್ನು ಮುರುಟಿಸುವ ಅಗ್ನಿಕುಂಡಗಳಾಗುತ್ತಿವೆ. ಶೃಂಗೇರಿಯಲ್ಲಿ ನಡೆದಿರುವುದು ಇಂದು ದೇಶಾದ್ಯಂತ ನಡೆಯುತ್ತಿವೆ. ಎಲ್ಲ ಕಾಲೇಜುಗಳು ರಾಜಕೀಯ ರೌಡಿಗಳನ್ನು ನಿರ್ಮಾಣ ಮಾಡುವ ವೇದಿಕೆಗಳಾಗಿ ಬದಲಾಗುತ್ತಿವೆ. ವಿವಿಧ ಪಕ್ಷಗಳ ರಾಜಕಾರಣಿಗಳು ಕಾಲೇಜುಗಳೊಳಗೆ ಬೇರೆ ಬೇರೆ ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿ ಪ್ರವೇಶಿಸಿ ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆಗಳನ್ನು ಸೃಷ್ಟಿಸಿ, ಪರಸ್ಪರ ಸಂಘರ್ಷಕ್ಕೆ ಹಚ್ಚಿ ಅವರನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸುತ್ತಿದ್ದಾರೆ. ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದು, ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗವನ್ನು ತನ್ನದಾಗಿಸಿ ಬದುಕು ಕಟ್ಟಬೇಕಾದ ವಿದ್ಯಾರ್ಥಿಗಳ ಮೇಲೆ ಪಿಯುಸಿ, ಪದವಿ ಹಂತದಲ್ಲೇ ಎಫ್‌ಐಆರ್ ದಾಖಲಾಗುವಂತೆ ಮಾಡುತ್ತಿದ್ದಾರೆ. ಅಲ್ಲಿಗೆ ತಮ್ಮ ಪಕ್ಷಗಳಿಗೆ ಭವಿಷ್ಯಕ್ಕೆ ಬೇಕಾಗುವ ರೌಡಿಯೊಬ್ಬ ತಯಾರಾಗುತ್ತಾನೆ. ಇಂತಹ ಬಲೆಯಲ್ಲಿ ಬಿದ್ದಿದ್ದೇವೆ ಎನ್ನುವುದು ಕೆಲವು ವಿದ್ಯಾರ್ಥಿಗಳಿಗೆ ಕೊನೆಯ ಗಳಿಗೆಯಲ್ಲಿ ಗೊತ್ತಾಗುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳೂ ಕೆಲವೊಮ್ಮೆ ಪ್ರಚೋದನೆಗೊಳಗಾಗಿ, ತಪ್ಪು ದಾರಿಗೆ ತಳ್ಳಲ್ಪಟ್ಟು ತಮಗರಿವಿಲ್ಲದೆ ಇಂತಹ ಸಂಘಟನೆಗಳನ್ನು ಸೇರುವುದಿದೆ. ಹೊಂಡಕ್ಕೆ ಬಿದ್ದ ಬಳಿಕ ಏನನ್ನೂ ಮಾಡುವಂತಿಲ್ಲ. ಕೆಲವು ವಿದ್ಯಾರ್ಥಿಗಳು ಶಾಲೆಯನ್ನೇ ತೊರೆಯಬೇಕಾಗುತ್ತದೆ. ಕೆಲವರು ಜೈಲು ಸೇರಬೇಕಾಗುತ್ತದೆ. ಏನೇ ಆಗಲಿ, ಅವರ ಬದುಕಂತೂ ಅಲ್ಲೇ ಮುಗಿಯುತ್ತದೆ. ಭವಿಷ್ಯ ಸಂಪೂರ್ಣ ಮುರುಟಿಹೋಗುತ್ತದೆ. ಸತ್ಯ ಗೊತ್ತಾದಾಗ ಕೆಲವು ಮೃದು ಹೃದಯಿಗಳಿಗೆ ಇದನ್ನು ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಆಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಶೃಂಗೇರಿ ಕಾಲೇಜಿನ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆ ಸಾಲಿಗೆ ಸೇರಿದ ಹುಡುಗ.

ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಸೈನಿಕರನ್ನು ಸ್ಮರಿಸುವಂತಹ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಇದು ನಿಜಕ್ಕೂ ಶ್ಲಾಘನಾರ್ಹ ಕೆಲಸ. ವಿದ್ಯಾರ್ಥಿಗಳಿಗೆ ಸೈನಿಕರ ತ್ಯಾಗ, ಬಲಿದಾನವನ್ನು ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವೂ ಆಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಅರ್ಹ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಕಾಲೇಜುಗಳಿಗೆ ಕರೆಸುವುದು ಶಾಲಾ ಶಿಕ್ಷಕರು ಮತ್ತು ಸಂಘಟಕರ ಜವಾಬ್ದಾರಿ. ಒಬ್ಬ ನಿವೃತ್ತ ಸೈನಿಕನನ್ನೋ ಅಥವಾ ಹಿರಿಯ ಲೇಖಕರನ್ನೋ, ಹಿರಿಯ ಪತ್ರಕರ್ತರನ್ನೋ ಕರೆದು ಸೈನಿಕರ ಕುರಿತಂತೆ ಮಾತನಾಡಿಸುವುದಕ್ಕೆ ಕಾಲೇಜಿಗೆ ಅವಕಾಶವಿತ್ತು. ಸೈನಿಕರ ತ್ಯಾಗ, ಬಲಿದಾನಗಳನ್ನು ವಿವರಿಸುವ ಹಲವು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಆದರೆ ಶೃಂಗೇರಿ ಕಾಲೇಜಿನಲ್ಲಿ ಸೈನಿಕರನ್ನು ಸ್ಮರಿಸಲು ಸಂಘಟಕರು ಸಂಪನ್ಮೂಲ ವ್ಯಕ್ತಿಯಾಗಿ ಆರಿಸಿದ್ದು ಚಕ್ರವರ್ತಿ ಸೂಲಿಬೆಲೆ ಎಂಬ ಕೋಮುಪ್ರಚೋದಕ ವ್ಯಕ್ತಿಯನ್ನು. ಈತ ಒಬ್ಬ ಆರೆಸ್ಸೆಸ್‌ನ ವೃತ್ತಿಪರ ಹರಿಕತೆ ದಾಸ. ಒಂದು ದಿನ ಗಡಿಯಲ್ಲಿ ಕೆಲಸ ಮಾಡಿದವನಲ್ಲ. ಸಮಾಜಸೇವೆ ಬಿಡಿ, ಸಮಾಜದಲ್ಲಿ ವಿಷದ ಚಿಂತನೆಗಳನ್ನು ಬಿತ್ತುತ್ತಾ ಹೊಟ್ಟೆ ಹೊರೆಯುತ್ತಿರುವ ವ್ಯಕ್ತಿ. ಎಲ್ಲಕ್ಕಿಂತ ದುರಂತವೆಂದರೆ, ಮಂಗಳೂರಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತನೊಬ್ಬನ ಕೊಲೆಯ ಆರೋಪಿಯೊಬ್ಬನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡವನು.

ಮೋದಿ ಬ್ರಿಗೇಡ್ ಕಟ್ಟಿ ಆ ಮೂಲಕ ಹೊಟ್ಟೆ ಹೊರೆಯುತ್ತಿದ್ದಾತ. ಸೈನಿಕರ ಬಗ್ಗೆ ಮಾತನಾಡುವುದು ಪಕ್ಕಕ್ಕಿರಲಿ, ಒಂದು ವಿದ್ಯಾ ಸಂಸ್ಥೆಗೆ ಕಾಲಿಡುವಂತಹ ಯಾವ ಯೋಗ್ಯತೆಯೂ ಈತನಿಗಿಲ್ಲ. ಈತ ಒಂದು ವೇಳೆ ಕಾಲೇಜಿನೊಳಗೆ ಕಾಲಿಟ್ಟರೆ, ಇಡೀ ಪರಿಸರವನ್ನು ಇನ್ನಷ್ಟು ಕೆಡಿಸಿ ಹಾಕುತ್ತಾನೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಒಂದಿಷ್ಟು ಸುಳ್ಳುಗಳನ್ನು, ಕೆಲವು ರಾಜಕೀಯ ಅಜೆಂಡಾಗಳನ್ನು, ದ್ವೇಷ ಚಿಂತನೆಗಳನ್ನು ಬಿತ್ತಿ ಹೋಗುತ್ತಾನೆ. ಆದುದರಿಂದ ಈ ವ್ಯಕ್ತಿಯನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿರುವ ಸಂಘಟಕರು ಮತ್ತು ಕಾಲೇಜಿನ ಶಿಕ್ಷಕರು ಅಭಿಷೇಕ್ ಎನ್ನುವ ವಿದ್ಯಾರ್ಥಿಯ ಆತ್ಮಹತ್ಯೆಗೆ ಮೊದಲ ಕಾರಣರು. ಸೂಲಿಬೆಲೆಯನ್ನು ಕಾಲೇಜಿಗೆ ಕರೆಸಿದ ಯಾರೇ ಆಗಿರಲಿ ಅವರು ಅಪ್ಪಟ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಕರೆಸಿದ್ದಾರೆ. ಅವರ ರಾಜಕೀಯ ಉದ್ದೇಶಕ್ಕಾಗಿಯೇ ಅಭಿಷೇಕ್‌ನನ್ನು ಬಲಿ ತೆಗೆದುಕೊಂಡಿದ್ದಾರೆ.

ಕೆಲ ವಿದ್ಯಾರ್ಥಿಗಳು ಸಹಜವಾಗಿಯೇ ಇದನ್ನು ಪ್ರತಿಭಟಿಸಿದ್ದಾರೆ. ಪ್ರತಿಭಟಿಸುವುದರ ಹಿಂದೆಯೂ ರಾಜಕೀಯ ಕಾರಣಗಳಿರಬಹುದು. ಎಬಿವಿಪಿ ಇರುವಂತೆಯೇ ಕಾಲೇಜಿನಲ್ಲಿ ಎನ್‌ಎಸ್‌ಯುಐ ಎನ್ನುವ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವೂ ಇದೆ. ಒಬ್ಬ ನಿರ್ದಿಷ್ಟ ರಾಜಕೀಯ ಪಕ್ಷದ ಅಜೆಂಡಾ ಇರುವ ಭಾಷಣಕಾರನನ್ನು ಕಾಲೇಜು ಕರೆಸಲು ಆಹ್ವಾನಿಸಿದಾಗ ಇನ್ನೊಂದು ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಸಂಘಟನೆ ಅದನ್ನು ವಿರೋಧಿಸುವುದು ಸಹಜವೂ ಕೂಡ. ಎನ್‌ಎಸ್‌ಯುಐ ಪ್ರತಿಭಟಿಸಿದ್ದು ತಪ್ಪೋ ಸರಿಯೋ, ಆದರೆ ಸೂಲಿಬೆಲೆಯಂತಹ ಮನುಷ್ಯನನ್ನು ವಿದ್ಯಾಲಯದಂತಹ ಒಳ್ಳೆಯ ಸ್ಥಳಕ್ಕೆ ಆಹ್ವಾನಿಸುವುದನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಪ್ರತಿಭಟಿಸುವುದಂತೂ ಅಗತ್ಯ. ಅದೇನೇ ಇರಲಿ. ಎನ್‌ಎಸ್‌ಯುಐ ರಾಜಕೀಯ ಕಾರಣಕ್ಕಾಗಿ ಅದನ್ನು ಪ್ರತಿಭಟಿಸಿತು. ಒಂದು ವೇಳೆ ಮಾತನಾಡುವುದಕ್ಕಾಗಿ ಯಾವುದಾದರೂ ಕಾಂಗ್ರೆಸ್ ಮುಖಂಡನನ್ನು ಕರೆಸಿದ್ದರೆ ಅದನ್ನು ಎಬಿವಿಪಿ ವಿರೋಧಿಸುತ್ತಿರಲಿಲ್ಲವೇ? ಈ ಪ್ರತಿಭಟನೆ ಅಂತಿಮವಾಗಿ ಎರಡು ಸಂಘಟನೆಗಳ ನಡುವೆ ತಿಕ್ಕಾಟಕ್ಕೆ ಕಾರಣವಾಯಿತು. ಸಹಜವಾಗಿಯೇ ಈ ರಾಜಕೀಯ ತಿಕ್ಕಾಟ, ಹೊಡಿಬಡಿ ರೂಪ ತಾಳಿ ಪೊಲೀಸ್ ಠಾಣೆ ಹತ್ತಿತು. ಆತ್ಮಹತ್ಯೆಗೈದ ವಿದ್ಯಾರ್ಥಿ ಅಮಾಯಕನೇ ಇರಬಹುದು. ಆದರೆ ಕೆಲವೊಮ್ಮೆ ಪರಸ್ಪರ ದೂರುಕೊಡುವ ಸಂದರ್ಭದಲ್ಲಿ ಸಂಘಟನೆಯ ಮುಂಚೂಣಿಯಲ್ಲಿದ್ದವರ ಹೆಸರನ್ನು ನೀಡಿ ಬಿಡುತ್ತಾರೆ. ಇಲ್ಲಿಯೂ ಹಾಗೆಯೇ ಆಗಿರಬಹುದು. ಪೊಲೀಸ್ ಠಾಣೆಯವರೆಗೂ ಇದು ಹೋಗುತ್ತದೆ, ತನ್ನ ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗುತ್ತದೆ ಎನ್ನುವ ಯಾವ ಕಲ್ಪನೆಯೂ ಇರದ ಅಭಿಷೇಕ್‌ಗೆ ಆಘಾತವಾಗಿದೆ. ಎಬಿವಿಪಿಗೆ ಆತ ಇನ್ನೊಬ್ಬರ ಪ್ರಚೋದನೆಯ ಮೂಲಕ ಸೇರಿರಬಹುದು.

ಅವನು ಇತರ ರಾಜಕೀಯ ಮುಖಂಡರ ಬಲಿಪಶು ಅಷ್ಟೇ. ಅಭಿಷೇಕ್‌ನನ್ನು ಬಲಿತೆಗೆದುಕೊಂಡಿರುವುದು ಸೂಲಿಬೆಲೆಯ ದ್ವೇಷ ಚಿಂತನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಅಜೆಂಡಾಗಳನ್ನು, ರಾಜಕೀಯ ಚಿಂತನೆಗಳನ್ನು ಹರಡುವುದಕ್ಕೆ ಇಷ್ಟ ಇದ್ದವರು ಅದನ್ನು ಶಾಲೆ, ಕಾಲೇಜುಗಳ ಹೊರಗಡೆ, ಬೇರೆಯೇ ವೇದಿಕೆಗಳಲ್ಲಿ ಇಟ್ಟುಕೊಳ್ಳಲಿ. ಅಲ್ಲಿ ತಮಗೆ ಬೇಕಾದವರನ್ನು ಕರೆಸಿಕೊಳ್ಳಲಿ. ಶಾಲೆಯೊಳಗೆ ವಿಚ್ಛಿದ್ರಕಾರಿ ಶಕ್ತಿಗಳನ್ನು ಆಹ್ವಾನಿಸಿ, ಅವರಿಗೆ ಗೌರವ ನೀಡಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಶಾಲಾಕಾಲೇಜುಗಳ ಮುಖಂಡರು, ಉಪನ್ಯಾಸಕರು, ಪ್ರಾಂಶುಪಾಲರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಎಲ್ಲ ರಾಜಕೀಯ ಮುಖಂಡರು ಮತ್ತು ರಾಜಕೀಯ ಅಜೆಂಡಾಗಳಿರುವ ಉಪನ್ಯಾಸಕರು ಅಭಿಷೇಕ್ ಸಾವಿನಲ್ಲಿ ತಮ್ಮ ತಮ್ಮ ಪಾತ್ರವೆಷ್ಟು ಎನ್ನುವುದನ್ನು ಎದೆಮುಟ್ಟಿ ತಮಗೆ ತಾವೇ ಕೇಳಿಕೊಂಡು ಪಶ್ಚಾತ್ತಾಪ ಪಟ್ಟುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News