ಗಾಂಧಿ ಜಾಗದಲ್ಲಿ ಮೋದಿ:ದೇಶದ ಆತ್ಮಗೌರವಕ್ಕೆ ಧಕ್ಕೆ

Update: 2017-01-16 04:37 GMT

ಖಾದಿ ಎನ್ನುವುದು ಭಾರತದ ಪಾಲಿಗೆ ಕೇವಲ ಒಂದು ಉದ್ಯಮ ಮಾತ್ರ ಅಲ್ಲ. ಖಾದಿ ಮಂಡಳಿ ಎನ್ನುವುದು ಬರೇ ಖಾದಿ ಬಟ್ಟೆ ಮಾರಾಟದ ಮಳಿಗೆಯೂ ಅಲ್ಲ. ಖಾದಿ ‘ಸ್ವದೇಶಿ’ತನದ ಸಂಕೇತ. ನಮ್ಮ ಸ್ವಾವಲಂಬಿತನದ, ಸ್ವಾಭಿಮಾನದ ಸಂಕೇತ. ಭಾರತದ ಸ್ವಾತಂತ್ರ ಹೋರಾಟದಲ್ಲಿ ಖಾದಿಯ ಹಿರಿತನ ಬಹುದೊಡ್ಡದು. ಸರ್ವಾಧಿಕಾರಿಗಳನ್ನು, ಈಸ್ಟ್ ಇಂಡಿಯಾ ಕಂಪೆನಿಯನ್ನು ಭಾರತದಿಂದ ಒದ್ದೋಡಿಸಿದ್ದು ಈ ಖಾದಿಯೇ ಆಗಿದೆ. ವಿದೇಶಿ ವಸ್ತುಗಳ ಬಹಿಷ್ಕಾರದ ಸಂದರ್ಭದಲ್ಲಿ, ಜನರು ಖಾದಿಯನ್ನು ಆರಿಸಿಕೊಂಡು, ಎಲ್ಲ ವಿದೇಶಿ ಬಟ್ಟೆಗಳನ್ನು ಸುಟ್ಟು ಹಾಕಿದರು. ಗಾಂಧೀಜಿ ಪಾಲಿಗೆ ಚರಕವೆನ್ನುವುದು ತನ್ನ ಸ್ವದೇಶಿ ಆಂದೋಲನದ ಸಂಕೇತವಾಗಿದೆ. ಖಾದಿ ಧರಿಸುವ ಮೂಲಕ ನಮ್ಮ ಮೈಯನ್ನು ಮಾತ್ರವಲ್ಲ, ಆತ್ಮಗೌರವವನ್ನೂ ನಾವು ಹೆಚ್ಚಿಸಿಕೊಳ್ಳುತ್ತೇವೆ. ಖಾದಿ ಎಂದಾಗ ನಾ ವುನೆನಪಿಸಿಕೊಳ್ಳುವುದು ಗಾಂಧೀಜಿ ಸಾರಿದ ವೌಲ್ಯಗಳನ್ನು. ಖಾದಿಯ ಮೂಲಕ ನಾವು ಧರಿಸಿಕೊಳ್ಳುವುದು ಗಾಂಧೀಜಿ ಸಾರಿದ ವೌಲ್ಯಗಳನ್ನು. ಆದುದರಿಂದಲೇ ಖಾದಿಯ ಜೊತೆ ಜೊತೆಗೆ ಗಾಂಧೀಜಿಯ ನೂಲುವ ಭಾವಚಿತ್ರವೂ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಇಂದು ಖಾದಿ ನಿಗಮ ನಷ್ಟದಲ್ಲಿದೆಯಾದರೂ ಸರಕಾರ ಅದನ್ನು ಯಾಕೆ ಉಳಿಸಿಕೊಂಡಿದೆ, ಅದು ಪ್ರತಿಪಾದಿಸುವ ಗಾಂಧೀಜಿಯ ವೌಲ್ಯಗಳ ಕಾರಣಗಳಿಗಾಗಿ. ದುರದೃಷ್ಟವಶಾತ್, ಇಂದು ಈ ಖಾದಿ ನಿಗಮವೆನ್ನುವುದು ಸರಕಾರಿ ಹೆಗ್ಗಣಗಳ ಕೈಯಲ್ಲಿ ಚಿಂದಿ ಚೂರಾಗಿ ಬಿಟ್ಟಿದೆ. ಸರಕಾರದ ಉದಾರತೆಯ ಮೂಲಕ ಬದುಕುತ್ತಿರುವ ಈ ನಿಗಮದಲ್ಲಿ, ಖಾದಿಯ ವೌಲ್ಯಗಳನ್ನು ಅರಿತುಕೊಂಡ, ಗಾಂಧೀಜಿಯ ಸ್ವದೇಶಿ ಆಂದೋಲನಗಳ ಕುರಿತಂತೆ ನಂಬಿಕೆಯಿಟ್ಟಿರುವ ಜನರೇ ಇಲ್ಲವಾಗಿದ್ದಾರೆ. ಬರೇ ವೇತನಕ್ಕಾಗಿ ಕೆಲಸ ಮಾಡುವವರು ಅದನ್ನು ತಮ್ಮ ವಿಶ್ರಾಂತಿಧಾಮವಾಗಿ ಆರಿಸಿಕೊಂಡಿದ್ದಾರೆ. ಸ್ವಾತಂತ್ರೋತ್ತರ ದಿನಗಳಲ್ಲಿ ಈ ಖಾದಿಯಲ್ಲಿ ಯಾವುದೇ ಕ್ರಿಯಾಶೀಲತೆ ಪ್ರದರ್ಶನವಾಗಲಿಲ್ಲ. ಪರಿಣಾಮವಾಗಿ ಖಾದಿಯನ್ನು ಕೊಳ್ಳುವವರೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ದುರಂತವೆಂದರೆ, ಇಂದು ಈ ಖಾದಿಯನ್ನು ಮೇಲೆತ್ತುವುದಕ್ಕಾಗಿ ಖಾದಿ ಗ್ರಾಮೋದ್ಯೋಗ ಆಯೋಗವು ಗಾಂಧೀಜಿಯನ್ನು ಹೊರ ಹಾಕಿ, ನರೇಂದ್ರ ಮೋದಿಯನ್ನು ಪ್ರತಿಷ್ಠಾಪಿಸಲು ಹೊರಟಿದೆ. ಅಂದರೆ, ಇಂದು ಖಾದಿಯ ದುಸ್ಥಿತಿಗೆ ಪರೋಕ್ಷವಾಗಿ ಗಾಂಧೀಜಿಯ ಭಾವಚಿತ್ರವೇ ಹೊಣೆ ಎಂದು ಖಾದಿ ಆಯೋಗದೊಳಗಿರುವ ಮುಖ್ಯಸ್ಥರಿಗೆ ಅನಿಸಿದೆ. ಆದುದರಿಂದಲೇ, ತಮ್ಮ ಕ್ಯಾಲೆಂಡರ್‌ಗಳು ಮತ್ತು ಡೈರಿಯಲ್ಲಿ ಗಾಂಧೀಜಿ ನೂಲು ತೆಗೆಯುತ್ತಿರುವ ಚಿತ್ರವನ್ನು ಬದಲಿಸಿ, ಅಲ್ಲಿ ಮೋದಿಯವರು ನೂಲುತ್ತಿರುವ ಚಿತ್ರವನ್ನು ಛಾಪಿಸಿದ್ದಾರೆ. ಇದು ಕೇವಲ ಖಾದಿಗೆ ಮಾಡಿದ ಅವಮಾನ ಮಾತ್ರವಲ್ಲ, ಇಡೀ ಭಾರತದ ಆತ್ಮಕ್ಕೆ ಆಯೋಗ ಘಾಸಿ ಮಾಡಿದೆ. ಆ ಮೂಲಕ ಖಾದಿ ಪ್ರತಿಪಾದಿಸುವ ಎಲ್ಲ ವೌಲ್ಯಗಳನ್ನು ಗಾಳಿಗೆ ತೂರಿದೆ. ಬಹುಶಃ ಖಾದಿಯ ಹಿನ್ನೆಲೆ, ಅದರ ಮಹತ್ವವನ್ನು ತಿಳಿಯದ ಮಂದಿ ಮಾತ್ರ ಇಂತಹದೊಂದು ನಿರ್ಧಾರವನ್ನು ಮಾಡಿಯಾರು. ಯಾರಿಗೆ ಖಾದಿ ಮತ್ತು ಗಾಂಧಿಯ ಹಿನ್ನೆಲೆ ಗೊತ್ತಿಲ್ಲವೋ ಅಂಥವರ ಕೈಯಲ್ಲಿ ಈ ಉದ್ಯಮ ಉದ್ಧಾರವಾಗುವುದಾದರೂ ಹೇಗೆ ಸಾಧ್ಯ?

 ಇಷ್ಟಕ್ಕೂ ಖಾದಿಗೂ ಮೋದಿಗೂ ಏನು ಸಂಬಂಧ? ಗಾಂಧೀಜಿ ಪ್ರತೀ ದಿನ ಕೆಲವು ಗಂಟೆಗಳ ಕಾಲ ಚರಕದಿಂದ ನೂಲು ತೆಗೆಯುತ್ತಿದ್ದರು. ಶ್ರಮದ ಬದುಕಿಗೆ ಆದ್ಯತೆಯನ್ನು ಕೊಡುತ್ತಿದ್ದರು. ತಾನು ತೆಗೆದ ನೂಲನ್ನು ಮಾರಿ ಅದರ ಹಣವನ್ನು ಆಶ್ರಮಕ್ಕೆ ಕೊಡುತ್ತಿದ್ದರು. ಇದೊಂದು ಸಾಂಕೇತಿಕ ಕ್ರಿಯೆಯೂ ಆಗಿತ್ತು. ವಿದೇಶಿ ಬಟ್ಟೆ ಧರಿಸುವುದು ಅವಮಾನ ಎಂದು ಅವರು ತಿಳಿದುಕೊಂಡಿದ್ದರು. ಸರಳತೆಗೆ ಅವರು ಆದ್ಯತೆ ನೀಡುತ್ತಿದ್ದರು. ಆದರೆ 8 ಲಕ್ಷ ರೂಪಾಯಿಯ ಬಟ್ಟೆ ಧರಿಸಿದ ಮೋದಿ, ಒಂದು ದಿನ ಚರಕದ ಮುಂದೆ ಕೂತು ನೂಲು ತೆಗೆದಂತೆ ನಟಿಸಿದರೆ, ಅದರಿಂದ ಖಾದಿಯ ಯಾವ ವೌಲ್ಯಗಳು ಪ್ರತಿಪಾದನೆಯಾಯಿತು. ಮಹಾತ್ಮಾ ಗಾಂಧೀಜಿ ಚರಕದಲ್ಲಿ ನೂಲುವ ಮೂಲಕವೇ ವಿದೇಶಿಯರನ್ನು ಭಾರತದಿಂದ ಹೊರಗಟ್ಟಿದರು. ಆದರೆ ನರೇಂದ್ರ ಮೋದಿ, ಇಂದು ವಿದೇಶಾದ್ಯಂತ ಪ್ರವಾಸ ಮಾಡಿ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಿದ್ದಾರೆ. ಭಾರತದ ಸಾರ್ವಜನಿಕ ಸಂಸ್ಥೆಗಳೆಲ್ಲವೂ ಖಾಸಗಿ ಕಂಪೆನಿಗಳ ಕೈವಶವಾಗುತ್ತಿವೆ. ನರೇಂದ್ರ ಮೋದಿಯ ನೀತಿಯಿಂದಾಗಿ ಗುಡಿ ಕೈಗಾರಿಕೆಗಳೆಲ್ಲ ನಾಶವಾಗಿವೆ. ರೈತರು ತಮ್ಮ ಭೂಮಿಯನ್ನು ಅನಿವಾರ್ಯವಾಗಿ ಬೃಹತ್ ಕಂಪೆನಿಗಳಿಗೆ ಒಪ್ಪಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಎಲ್ಲವನ್ನೂ ಮುಕ್ತಗೊಳಿಸಿದರು. ಭಾರತದ ದಿನಸಿ ಅಂಗಡಿಗಳೂ ಸರ್ವನಾಶವಾಗುವ ಅಂಚಿನಲ್ಲಿವೆ. ಇದೀಗ ಕಪ್ಪು ಹಣದ ಹೆಸರಿನಲ್ಲಿ ನೋಟು ನಿಷೇಧವನ್ನು ಮಾಡಿ, ಅಳಿದುಳಿದ ಸಣ್ಣ ಪುಟ್ಟ ಉದ್ಯಮಗಳನ್ನು ಸರ್ವನಾಶ ಮಾಡಿದ್ದಾರೆ. ತೆರಿಗೆಗಳ ಮೇಲೆ ತೆರಿಗೆಗಳನ್ನು ತೆರುವ ಸ್ಥಿತಿ ಭಾರತೀಯರದ್ದಾಗಿದೆ. ಇವೆಲ್ಲ ಪಕ್ಕಕ್ಕಿರಲಿ. ಗುಜರಾತ್ ಹತ್ಯಾಕಾಂಡಕ್ಕಾಗಿ ಈ ವರೆಗೆ ದೇಶದ ಕ್ಷಮೆಯನ್ನು ನರೇಂದ್ರ ಮೋದಿ ಯಾಚಿಸಿಲ್ಲ. ಪರೋಕ್ಷವಾಗಿ ಹತ್ಯಾಕಾಂಡವನ್ನು ಅವರು ಸಮರ್ಥಿಸುತ್ತಲೇ ಬರುತ್ತಿದ್ದಾರೆ. ಗಾಂಧೀಜಿಯ ಜಾಗದಲ್ಲಿ ನರೇಂದ್ರ ಮೋದಿಯನ್ನು ತಂದು ನಿಲ್ಲಿಸುವುದೆಂದರೆ, ಖಾದಿಯ ವೌಲ್ಯವನ್ನು ಕಾಲಿನಡಿಗೆ ಹಾಕಿ ತುಳಿಯುವುದೆಂದು ಅರ್ಥ. ಖಾದಿಯನ್ನು ತುಳಿಯುವುದೆಂದರೆ ಈ ದೇಶದ ಆತ್ಮಗೌರವವನ್ನೇ ತುಳಿಯುವುದು ಎಂದರ್ಥ. ಇದು ಖಾದಿ ಗ್ರಾಮೋದ್ಯೋಗ ಆಯೋಗದಿಂದಲೇ ನಡೆದಿರುವುದು ವಿಪರ್ಯಾಸ.

 ನಿಜಕ್ಕೂ ಖಾದಿ ಉದ್ಯಮವನ್ನು ಮೇಲೆತ್ತುವ ಉದ್ದೇಶವಿದ್ದರೆ, ಬದಲಿಸಬೇಕಾದುದು ಫೋಟೋವನ್ನಲ್ಲ. ತಮ್ಮ ಜಡ ಮನಸ್ಥಿತಿಯನ್ನು. ಖಾದಿ ಉದ್ಯಮದೊಳಗೆ ಕ್ರಿಯಾಶೀಲ ಬದಲಾವಣೆಗಳಾಗಬೇಕಾಗಿದೆ. ಇತರ ವಿದೇಶಿ ಬಟ್ಟೆ ಕಂಪೆನಿಗಳಿಗೆ ಸ್ಪರ್ಧೆ ನೀಡುವಂತೆ ಖಾದಿ ಬಟ್ಟೆಗಳಲ್ಲಿ ವೈವಿಧ್ಯತೆಗಳನ್ನು ತರುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕಾಗಿದೆ. ಆಧುನಿಕ ಬಟ್ಟೆ ಬರೆಗಳಿಗೆ ಪೂರಕವಾಗಿ, ಹೊಸ ಫ್ಯಾಶನ್‌ಗಳಿಗೆ ಖಾದಿ ಸ್ಪಂದಿಸಬೇಕಾಗಿದೆ. ಸ್ವದೇಶಿತನವೆನ್ನುವುದು ಇಂದು ಜೀವನ ಶೈಲಿಯಾಗಬೇಕು. ಅದಕ್ಕೆ ಪೂರಕವಾಗಿ ಯುವಜನರನ್ನು ಆಕರ್ಷಿಸುವಂತಹ ಉತ್ಪಾದನೆಗಳು ಖಾದಿಯಲ್ಲಿ ನಡೆಯಬೇಕು. ಅದಕ್ಕೆ ಬೇಕಾದ ಸೃಜನಶೀಲ ಅನುಭವಿ ಯುವಕರು ಖಾದಿ ಉದ್ಯಮವನ್ನು ಪ್ರವೇಶಿಸಬೇಕು. ಗಾಂಧಿ ಎಂದರೆ ಒಂದು ಜೀವನ ಶೈಲಿ. ಅದೊಂದು ಫ್ಯಾಶನ್. ಅದು ನಮ್ಮ ಐಡೆಂಟಿಟಿ. ಅಸ್ಮಿತೆ. ಇದಕ್ಕಾಗಿ ಬೇರೆ ಬೇರೆ ಮೋಡೆಲ್‌ಗಳನ್ನು ಬಳಸಿಕೊಳ್ಳಬಹುದು. ಆದರೆ ಆ ನೆಪದಲ್ಲಿ ಗಾಂಧಿಯನ್ನೇ ಬದಲಿಸಿದರೆ, ಖಾದಿ ತನ್ನ ಉದ್ದೇಶವನ್ನೇ ಕಳೆದುಕೊಂಡಂತೆ. ಗಾಂಧಿಯ ಸ್ಥಾನದಲ್ಲಿ ಮೋದಿಯನ್ನು ಸ್ಥಾಪಿಸಿದ ಅಧಿಕಾರಿಗಳನ್ನು ಅಲ್ಲಿಂದ ಕಿತ್ತೊಗೆಯುವುದು ಅತ್ಯಗತ್ಯವಾಗಿದೆ. ಹಾಗೆಯೇ, ಈ ಪ್ರಮಾದಕ್ಕೆ ಮೋದಿ ದೇಶದ ಕ್ಷಮೆಯಾಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News