ರೋಹಿತ್ ವೇಮುಲಾನಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ

Update: 2017-01-17 04:04 GMT

ಕಗ್ಗತ್ತಲಿನಿಂದ ನಕ್ಷತ್ರಗಳೆಡೆಗಿನ ರೋಹಿತ್ ವೇಮುಲಾನ ಪಯಣಕ್ಕೆ ಒಂದು ವರ್ಷ. ಆತನನ್ನು ಆತನ ಕನಸಿನ ನಕ್ಷತ್ರಗಳ ಲೋಕಕ್ಕೆ ಕಳುಹಿಸಿದ ಉಲ್ಕೆಗಳು ಮಾತ್ರ ಇನ್ನೂ ಹೈದರಾಬಾದ್ ವಿಶ್ವವಿದ್ಯಾನಿಲಯಗಳಲ್ಲಿ ಉರಿಯುತ್ತಲೇ ಇವೆ. ರೋಹಿತ್ ವೇಮುಲಾನದ್ದು ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಆತ್ಮಹತ್ಯೆಯಂತಹ ಸ್ಥಿತಿಗೆ ತಳ್ಳುವುದು ಪರೋಕ್ಷ ಕೊಲೆಗೆ ಸಮವಾಗಿದೆ. ‘ಮೀಸಲಾತಿಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ’ ಎನ್ನುವ ವೈದಿಕ ಮನಸ್ಥಿತಿಗೆ ಸವಾಲೆಸೆಯುವಂತೆ, ಪ್ರತಿಭೆಯ ಮೂಲಕವೇ ವಿಶ್ವವಿದ್ಯಾನಿಲಯದಲ್ಲಿ ಸ್ಥಾನವನ್ನು ಗಿಟ್ಟಿಸಿದ್ದ ರೋಹಿತ್ ವೇಮುಲಾನನ್ನು ಆ ಕಾರಣಕ್ಕಾಗಿಯೇ ಹೊಸಕಿ ಹಾಕಲಾಯಿತು.

ರೋಹಿತ್ ವೇಮುಲಾ ಸಾವಿಗೆ ನ್ಯಾಯ ನೀಡಬೇಕಾದ ವ್ಯವಸ್ಥೆ, ಇಡೀ ಪ್ರಕರಣವನ್ನೇ ತಿರುಚಿತು. ರೋಹಿತ್ ವೇಮುಲಾ ನ್ಯಾಯಕ್ಕಾಗಿ ಹಲವು ದಿನಗಳಿಂದ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಅಂಬೇಡ್ಕರ್ ಭಾವಚಿತ್ರದ ಮುಂದೆ ಹಗಲು ರಾತ್ರಿ ಧರಣಿ ಹೂಡಿದ್ದ. ಅವನು ಯಾವ ಕಾರಣಕ್ಕಾಗಿ ಧರಣಿ ಹೂಡಿದ್ದ ಮತ್ತು ಅವನು ಯಾರ ವಿರುದ್ಧ ಧರಣಿ ಹೂಡಿದ್ದ ಎನ್ನುವ ತನಿಖೆ ಗಂಭೀರವಾಗಿ ನಡೆದಿದ್ದರೆ ಇಂದು ರೋಹಿತ್ ವೇಮುಲಾನಿಗೆ ನ್ಯಾಯ ದೊರಕಿ ಬಿಡುತ್ತಿತ್ತೇನೋ. ಆದರೆ ರೋಹಿತ್ ವೇಮುಲಾ ಆತ್ಮಹತ್ಯೆಯ ಹಿಂದೆ ಬರೇ ವಿಶ್ವವಿದ್ಯಾನಿಲಯ ಮಾತ್ರವಲ್ಲದೆ, ಸಚಿವರ ಕೈವಾಡವೂ ಇದ್ದುದರಿಂದ ನಿರೀಕ್ಷೆಯಂತೆ ಆರೋಪಿಗಳು ಸುಲಭದಲ್ಲಿ ನುಣುಚಿಕೊಂಡರು ಮಾತ್ರವಲ್ಲ, ಅಂತಿಮವಾಗಿ ರೋಹಿತ್ ವೇಮುಲಾನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೇಂದ್ರ ಸರಕಾರ ತನ್ನನ್ನು ರಕ್ಷಿಸಿಕೊಂಡಿತು. ಅಂದರೆ ಆರೋಪಿಗಳನ್ನು ರಕ್ಷಿಸುವ ಮೂಲಕ ರೋಹಿತ್ ವೇಮುಲಾನನ್ನು ಎರಡು ಬಾರಿ ಕೊಂದು ಹಾಕಿತು. ಆದರೆ ರೋಹಿತ್ ವೇಮುಲಾ ಬಲಿದಾನ ಮಾತ್ರ ವ್ಯರ್ಥವಾಗಲಿಲ್ಲ.

ರೋಹಿತ್ ವೇಮುಲಾನಿಗಾದ ಅನ್ಯಾಯವನ್ನು ಮುಂದಿಟ್ಟುಕೊಂಡು, ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ದೇಶಾದ್ಯಂತ ಒಂದಾದರು. ಜೆಎನ್‌ಯುವಿನಲ್ಲಿ ರೋಹಿತ್ ಪರ ಧ್ವನಿ ಮೊದಲು ಮೊಳಗಿತು. ಆ ಮೂಲಕ ಕನ್ಹಯ್ಯಾ ಎನ್ನುವ ಯುವ ನಾಯಕನ ಉದಯವಾಯಿತು. ಅಂತೆಯೇ ಗುಜರಾತ್‌ನಲ್ಲಿ ಜಿಗ್ನೇಶ್ ಮೆವಾನಿ ಹುಟ್ಟಿಕೊಂಡ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ದುರ್ಬಲವರ್ಗದ ಯುವಕರನ್ನು ಒಂದಾಗಿಸುವಲ್ಲಿ ರೋಹಿತ್ ವೇಮುಲಾ ಕಾರಣವಾದ. ಒಬ್ಬ ರೋಹಿತ್‌ನ ಧ್ವನಿಯನ್ನು ಅಡಗಿಸಲು ಹೋದ ಸರಕಾರ, ನೂರಾರು, ಸಾವಿರಾರು ರೋಹಿತ್ ವೇಮುಲಾರನ್ನು ಸೃಷ್ಟಿಸಿದ್ದಂತೂ ಸತ್ಯ. ಇಂದು ರೋಹಿತ್ ವೇಮುಲಾ ಎನ್ನುವ ಹೆಸರು ಕೇವಲ ಒಬ್ಬ ವಿದ್ಯಾರ್ಥಿಯದ್ದಾಗಿ ಉಳಿದಿಲ್ಲ. ಈ ಒಂದು ವರ್ಷದಲ್ಲಿ ರೋಹಿತ್ ವೇಮುಲಾ ಒಂದು ಚಳವಳಿಯ ಹೆಸರಾಗಿ ಪರಿವರ್ತನೆಗೊಂಡಿದೆ. ಅಸಂಖ್ಯ ವಿದ್ಯಾರ್ಥಿಗಳು ಆ ಹೆಸರನ್ನು ತಮ್ಮ ಎದೆಯಲ್ಲಿ ಧರಿಸಿಕೊಂಡು, ವೇಮುಲಾ ಅರ್ಧಕ್ಕೆ ನಿಲ್ಲಿಸಿದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ರೋಹಿತ್ ವೇಮುಲಾನ ಆತ್ಮಹತ್ಯೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಇದೀಗ ದೇಶಾದ್ಯಂತ ಯುವಕರು ಒಂದಾಗಿ ಮತ್ತೆ ಬೀದಿಗಿಳಿದಿದ್ದಾರೆ. ಕನಿಷ್ಠ ವಿಶ್ವವಿದ್ಯಾನಿಲಯದ ಕುಲಪತಿಯನ್ನಾದರೂ ಜೈಲಿಗೆ ಕಳುಹಿಸಬೇಕು. ಹಾಗೆಯೇ, ರೋಹಿತ್ ವೇಮುಲಾ ಮೇಲಿನ ಅಮಾನತನ್ನು ಹಿಂದೆಗೆಯದಂತೆ ಒತ್ತಡ ಹೇರಿದ್ದ ಸಚಿವರನ್ನು ವಜಾಗೊಳಿಸಬೇಕು. ಈ ನಿಟ್ಟಿನಲ್ಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ತನಿಖೆಗೊಳಪಡಬೇಕು. ಮುಖ್ಯವಾಗಿ ಇದು ಕೇವಲ ರೋಹಿತ್ ವೇಮುಲಾ ಒಬ್ಬನ ಸಮಸ್ಯೆಯಲ್ಲ. ಅದೇ ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆಯೂ ಹಲವು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಎದುರಿಸುತ್ತಿರುವ ಅನ್ಯಾಯಗಳು ಈ ಸಂದರ್ಭದಲ್ಲಿ ಚರ್ಚೆಯಾಗಬೇಕಾಗಿದೆ. ರೋಹಿತ್ ವೇಮುಲಾ ಖಿನ್ನತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಿದೆ ಸರಕಾರ. ಬಹುಶಃ ಅವನದು ಕೊಲೆಯೇ ಆಗಿದ್ದಿದ್ದರೆ ತಾನು ನ್ಯಾಯ ನೀಡುತ್ತಿದ್ದೆ ಎಂಬಂತೆಯೂ ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಜೆಎನ್‌ಯುನಲ್ಲಿ ನಜೀಬ್ ಎಂಬ ಮುಸ್ಲಿಮ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಈವರೆಗಿನ ಪ್ರಾಥಮಿಕ ತನಿಖೆಗಳು ಅವನ ನಾಪತ್ತೆ ಒಂದು ಕೊಲೆಯಾಗಿರಬಹುದು ಎಂದು ಅನುಮಾನ ಪಡುತ್ತಿದೆ. ನಾಪತ್ತೆಯಾಗುವ ಹಿಂದಿನ ರಾತ್ರಿ ಎಬಿವಿಪಿ ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿರುವುದು ಸಹವಿದ್ಯಾರ್ಥಿಯಿಂದ ಬಹಿರಂಗವಾಗಿದೆ. ಆದರೆ ಪೊಲೀಸ್ ವ್ಯವಸ್ಥೆಯಾಗಲಿ, ಸರಕಾರವಾಗಲಿ ನಜೀಬ್ ಏನಾದ ಎನ್ನುವುದನ್ನು ಪತ್ತೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರೋಹಿತ್ ವೇಮುಲಾ ಮತ್ತು ನಜೀಬ್ ಒಂದೇ ನಾಣ್ಯದ ಎರಡು ಮುಖಗಳು.

 ಇಂದು ನಜೀಬ್‌ನ ಪ್ರಕರಣ ನನೆಗುದಿಗೆ ಬಿದ್ದಿರುವುದು ಹಾಗೂ ಹಿಂದೆ ರೋಹಿತ್ ಆತ್ಮಹತ್ಯೆ ನಡೆಸುವುದಕ್ಕೂ ಎರಡು ಸಮಾನ ಕಾರಣಗಳಿವೆ. ರೋಹಿತ್ ಸದಾ ದಲಿತ ಮತ್ತು ಎಡ ಚಿಂತನೆಗಳನ್ನು ಮುಂದಿಟ್ಟು ಸಂಘಟನೆ ಮಾಡಿಕೊಂಡು ಬಂದ ತರುಣ. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದಾತ. ಈ ಕಾರಣಕ್ಕಾಗಿಯೇ ಸುಳ್ಳು ಆರೋಪಗಳನ್ನು ಹೊರಿಸಿ ಅವನನ್ನು ವಿಶ್ವವಿದ್ಯಾನಿಲಯದಿಂದ ಹೊರ ಹಾಕುವುದಕ್ಕೆ ವ್ಯವಸ್ಥೆ ಹೊರಟಿತು. ತನ್ನ ವಿರುದ್ಧದ ಸಂಚನ್ನು ಆತ ಒಂಟಿಯಾಗಿ ಎದುರಿಸಬೇಕಾಯಿತು. ಆತನ ಸಮಸ್ಯೆ ನಮ್ಮೆಲ್ಲರದು ಎಂದು ಉಳಿದ ಪ್ರಗತಿ ಪರ ಸಂಘಟನೆಗಳು ತಿಳಿದುಕೊಳ್ಳಲಿಲ್ಲ. ಅಂಬೇಡ್ಕರ್ ಭಾವಚಿತ್ರವನ್ನು ಮುಂದಿಟ್ಟು ಹಗಲು ರಾತ್ರಿ ಆತ ಧರಣಿ ನಡೆಸಿದ.

ಹೀಗೆ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ರೋಹಿತ್‌ನ ಜೊತೆಗೆ ದಲಿತ ಸಂಘಟನೆಗಳು, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಬಲವಾಗಿ ನಿಂತಿದ್ದರೆ, ಅವನ ಧ್ವನಿಗೆ ಧ್ವನಿ ಸೇರಿಸಿದ್ದಿದ್ದರೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ. ಸಿಂಹ ಒಂಟಿ ಕಾಡುಕೋಣವನ್ನು ಬೇಟೆಯಾಡುತ್ತವೆಯೇ ಹೊರತು, ಗುಂಪಿಗೆ ಯಾವತ್ತೂ ದಾಳಿ ಮಾಡುವುದಿಲ್ಲ. ರೋಹಿತ್‌ನನ್ನು ಒಂಟಿಯಾಗಿಸಿದ ದಲಿತ ಮತ್ತು ಎಡಪಂಥೀಯ ಸಂಘಟನೆಗಳೇ ಅವನ ಸಾವಿನ ಮೊದಲ ಹೊಣೆಗಾರರು. ರೋಹಿತ್‌ನ ಬೆನ್ನಿಗೆ ಸಂಘಟನೆಗಳು ನಿಂತಿಲ್ಲ ಎನ್ನುವುದು ಅರಿತೇ, ಅವನ ವಿರುದ್ಧ ವಿಶ್ವವಿದ್ಯಾನಿಲಯಕ್ಕೆ ಆ ರೀತಿಯ ಅನ್ಯಾಯ ಎಸಗಲು ಸಾಧ್ಯವಾಯಿತು.

ರೋಹಿತ್‌ನಿಂದ ನಾವು ಕಲಿಯಬೇಕಾದ ಪಾಠವೂ ಅದೇ ಆಗಿದೆ. ನ್ಯಾಯಯುತವಾಗಿ ಹೋರಾಡುವ ಯಾವುದೇ ಹೋರಾಟಗಾರ ಒಂಟಿಯಾಗದಂತೆ ನೋಡಿಕೊಳ್ಳುವುದು ಮೊದಲ ಅಗತ್ಯ. ಅವನು ಯಾವುದೇ ಸಂಘಟನೆಗಳಿಗೆ, ಗುಂಪಿಗೆ ಸೇರಿರಲಿ. ಅನ್ಯಾಯಕ್ಕೀಡಾದಾತನ ಬೇಡಿಕೆ ನ್ಯಾಯಯುತವಾದುದೇ ಆಗಿದ್ದರೆ, ಆದ ಶೋಷಿತ ಸಮುದಾಯಕ್ಕೆ ಸೇರಿದವನೇ ಆಗಿದ್ದರೂ ಎಲ್ಲರೂ ಅವನ ಧ್ವನಿಗೆ ಧ್ವನಿ ಸೇರಿಸಬೇಕು. ಆಗ ಮಾತ್ರ ವ್ಯವಸ್ಥೆ ಅಂಜುತ್ತದೆ. ನಜೀಬ್ ನಾಪತ್ತೆ ವಿಷಯದಲ್ಲಿಯೂ ಇದು ನಡೆಯಬೇಕಾಗಿದೆ. ಎಲ್ಲ ಸಂಘಟನೆಗಳು ಭೇದಭಾವ ಮರೆತು ಒಂದಾಗಿ ಘರ್ಜಿಸಿದರೆ ಒಂದೋ ನಜೀಬ್‌ನ ಹೆಣ ಪತ್ತೆಯಾಗಬಹುದು. ಅಥವಾ ನಜೀಬ್‌ನ ಕೊಲೆಗಾರರು ಪತ್ತೆಯಾಗಬಹುದು. ಇದುವೇ ನಾವು ರೋಹಿತ್ ವೇಮುಲಾಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News