ಗ್ರಾಮೀಣ ಭಾರತದ ಶಿಕ್ಷಣ: ಕಠೋರ ವಾಸ್ತವದ ಚಿತ್ರಣ

Update: 2017-01-19 18:52 GMT

ಪ್ರಥಮ್ ಸ್ವಯಂಸೇವಾ ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ ಪ್ರಕಟವಾಗಿದ್ದು, ಕಳೆದ ಹತ್ತು ವರ್ಷಗಳಿಂದಲೂ ಇದು ಪ್ರತಿಪಾದಿಸುತ್ತಿರುವ ಒಂದಂಶವೆಂದರೆ ಗ್ರಾಮೀಣ ಭಾರತದ ಶಾಲಾ ಶಿಕ್ಷಣದ ಸ್ಥಿತಿಗತಿ ಕ್ರೂರ ಅಥವಾ ಕಠೋರ. ಕಳೆದ ಒಂದು ವರ್ಷದಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎನ್ನುವ ಚಿತ್ರಣವನ್ನು ವರದಿ ನೀಡಿದೆ.

ಗ್ರಾಮೀಣ ಪ್ರದೇಶದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ 1 ರಿಂದ 8ನೆ ತರಗತಿವರೆಗಿನ ಬಹಳಷ್ಟು ಮಂದಿ ಮಕ್ಕಳು ಎರಡನೆ ತರಗತಿಗೆ ಸೂಕ್ತವಾದ ಪಠ್ಯವನ್ನು ಕೂಡಾ ಓದಲಾರರು. ಅಥವಾ ಅವರ ವಯೋಮಿತಿಗೆ ಸಹಜ ಎನಿಸಿದ ಸರಳ ಲೆಕ್ಕಗಳನ್ನು ಕೂಡಾ ಮಾಡುವ ಸ್ಥಿತಿಯಲ್ಲಿಲ್ಲ. ಬಹುತೇಕ ಗ್ರಾಮೀಣ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗುತ್ತಾರೆ. ಆದರೆ ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳ ಶೈಕ್ಷಣಿಕ ಮಟ್ಟ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಗುಣಮಟ್ಟಕ್ಕಿಂತ ಸ್ವಲ್ಪಮಟ್ಟಿಗೆ ಉತ್ತಮ ಎಂದು ಎಎಸ್‌ಇಆರ್ ಕೇಂದ್ರದ ನಿರ್ದೇಶಕಿ ಹಾಗೂ ಅರ್ಥಶಾಸ್ತ್ರಜ್ಞೆ ವಿಲಿಮಾ ವಾಧ್ವಾ ಆರಂಭಿಕ ಪ್ರಬಂಧದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್ಥಿಕ- ಸಾಮಾಜಿಕ ಭಿನ್ನತೆ ಎನ್ನುವುದು ಅವರ ವಿಶ್ಲೇಷಣೆ.

ಪ್ರಥಮ್ ಸಂಸ್ಥೆಯು ತನ್ನ ಸಮೀಕ್ಷೆಗೆ 1 ರಿಂದ 8ನೆ ತರಗತಿವರೆಗೆ ಅಧ್ಯಯನ ಮಾಡುತ್ತಿರುವ ಮಕ್ಕಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿ, ಅವರ ಮನೆಗಳಲ್ಲಿ ಪರೀಕ್ಷೆ ನಡೆಸಿದೆ. ಈ ವರ್ಷದ ವರದಿಗಾಗಿ 589 ಜಿಲ್ಲೆಗಳಲ್ಲಿ ಮಾದರಿ ಸಮೀಕ್ಷೆಗಳನ್ನು ನಡೆಸಿದೆ.

ಓದುವ ಪರೀಕ್ಷೆಗೆ ವಿಷಯಗಳು 1 ಮತ್ತು 2ನೆ ತರಗತಿಯ ಮಟ್ಟದಲ್ಲಿದ್ದು, ಸ್ಥಳೀಯ ಭಾಷೆಯಲ್ಲಿವೆ. ಇಂಗ್ಲಿಷ್‌ಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗಿದೆ. ಗಣಿತ ವಿಷಯಕ್ಕೆ 1ರಿಂದ 100ರವರೆಗಿನ ಅಂಕೆಗಳನ್ನು ಗುರುತಿಸುವ ಅವರ ಸಾಮರ್ಥ್ಯ, ಎರಡಂಕಿಯ ವ್ಯವಕಲನ ಹಾಗೂ ಮೂರಂಕಿಯ ಸಂಖ್ಯೆಗೆ ಒಂದು ಅಂಕಿಯಿಂದ ಭಾಗಿಸುವ ಲೆಕ್ಕಗಳು ಒಳಗೊಂಡಿದ್ದವು.

ಪ್ರಾದೇಶಿಕ ಭಿನ್ನತೆ
ಸಾಮಾನ್ಯವಾಗಿ ವರದಿಯಾಗುವಂತೆ ರಾಷ್ಟ್ರೀಯ ಸರಾಸರಿಯನ್ನು ಪರಿಗಣಿಸಿದರೆ, ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 3ನೆ ತರಗತಿಯ ಶೇ.19ರಷ್ಟು ಮಕ್ಕಳು 2ನೆ ತರಗತಿಯ ಪುಸ್ತಕಗಳನ್ನು ಓದಬಲ್ಲರು. ಆದರೆ ಇದರಲ್ಲಿ ಸಾಕಷ್ಟು ಪ್ರಾದೇಶಿಕ ಭಿನ್ನತೆಗಳು ಒಳಗೊಂಡಿವೆ. ಉತ್ತರ ಪ್ರದೇಶದ ಮೂರನೇ ತರಗತಿ ಮಕ್ಕಳಲ್ಲಿ ಕೇವಲ ಶೇ.7ರಷ್ಟು ಮಕ್ಕಳು ಮಾತ್ರ ಎರಡನೆ ತರಗತಿಯ ಪಠ್ಯ ಓದಲು ಸಮರ್ಥರಿದ್ದರೆ, ಈ ಪ್ರಮಾಣ ಕೇರಳದಲ್ಲಿ ಶೇ.38 ಹಾಗೂ ಹಿಮಾಚಲ ಪ್ರದೇಶದಲ್ಲಿ ಶೇ.45ರಷ್ಟಿದೆ. ಮಹಾರಾಷ್ಟ್ರ ಹಾಗೂ ತಮಿಳುನಾಡಿನಂಥ ಕೆಲ ರಾಜ್ಯಗಳಲ್ಲಿ, ಗ್ರಾಮೀಣ ಸರಕಾರಿ ಶಾಲೆಗಳ 3ನೆ ತರಗತಿ ವಿದ್ಯಾರ್ಥಿಗಳು ಗ್ರಾಮೀಣ ಖಾಸಗಿ ಶಾಲೆ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ 2ನೆ ತರಗತಿ ಪಠ್ಯ ಓದಬಲ್ಲರು. ಮಹಾರಾಷ್ಟ್ರದಲ್ಲಿ ಸರಕಾರಿ ಶಾಲೆಗಳ ಮೂರನೆ ತರಗತಿಯಲ್ಲಿ ಓದುತ್ತಿರುವ ಶೇ.41ರಷ್ಟು ಮಕ್ಕಳು 2ನೆ ತರಗತಿ ಪಠ್ಯ ಓದಲು ಶಕ್ತರಿದ್ದರೆ, ಖಾಸಗಿ ಶಾಲೆಗಳ ಶೇ.38 ಮಂದಿ ಮಕ್ಕಳು ಮಾತ್ರ 2ನೆ ತರಗತಿ ಪಠ್ಯ ಓದಬಲ್ಲರು. ತಮಿಳುನಾಡಿನಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ.20 ಹಾಗೂ 13.5.

ಈ ಅಂಕಿ ಅಂಶಗಳು ಬಹುತೇಕ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ ನಡೆಸುವ ರಾಷ್ಟ್ರೀಯ ಸಾಧನೆ ಸಮೀಕ್ಷೆಯ ಅಂಕಿ ಅಂಶಗಳಿಗೆ ಸನಿಹದಲ್ಲಿವೆ. ಜತೆಗೆ ಹಲವು ರಾಜ್ಯಗಳ ಕಲಿಕಾ ಸಾಧನೆ ಸಮೀಕ್ಷೆಗಳ ಅಂಕಿ ಅಂಶಗಳಿಗೂ ಹೋಲಿಕೆಯಾಗುತ್ತವೆ. ಆದರೆ ಪ್ರಥಮ್ ಸಮರ್ಥನೆಯಂತೆ, ವಾರ್ಷಿಕ ಸಮೀಕ್ಷೆಗಳು, ಶೈಕ್ಷಣಿಕ ಸ್ಥಿತಿಗತಿಯ ವಾಸ್ತವ ಚಿತ್ರಣವನ್ನು ನೀಡುತ್ತವೆ.

ಸಮೀಕ್ಷಾ ವರದಿಯನ್ನು ದಿಲ್ಲಿಯಲ್ಲಿ ಬುಧವಾರ ಬಿಡುಗಡೆ ಮಾಡಿ ಮಾತನಾಡಿದ ಪ್ರಥಮ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಕ್ಮಿಣಿ ಬ್ಯಾನರ್ಜಿ, ಈ ಪರಿಸ್ಥಿತಿ ಗಣನೀಯವಾಗಿ ಸುಧಾರಿಸುವ ವರೆಗೂ ಪ್ರತೀ ವರ್ಷ ಸಮೀಕ್ಷೆ ನಡೆಸಲಾಗುವುದು. ಏಕೆಂದರೆ ಇದು ಸಮಾಜದ ವಾಸ್ತವ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.

ಆರಂಭಿಕ ಅಧ್ಯಾಯದಲ್ಲಿ ವಾಧ್ವಾ ಹೇಳಿರುವಂತೆ, ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯು, ಭಾರತದ ಶಾಲಾ ಶಿಕ್ಷಣದ ಸಮಸ್ಯೆಗಳಿಗೆ ಉತ್ತರವನ್ನು ಪಡೆಯುವ ಉದ್ದೇಶದ ಸಮೀಕ್ಷೆಯಲ್ಲ. ಪ್ರತೀ ವರ್ಷ ಎಎಸ್‌ಇಆರ್ ವರದಿ ಬಿಡುಗಡೆಯಾದಾಗಲೂ ಯಾವ ಸುಧಾರಣೆಯೂ ಕಾಣಿಸುವುದಿಲ್ಲ. ಶಿಕ್ಷಣದ ಸ್ಥಿತಿ ಸುಧಾರಿಸಬೇಕಾದರೆ ಏನು ಮಾಡಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಎಎಸ್‌ಇಆರ್ ಈ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲಿ ವಿನ್ಯಾಸಗೊಂಡಿರುವ ಸಮೀಕ್ಷೆಯಲ್ಲ. ಇದು ವಾಸ್ತವ ಚಿತ್ರಣವನ್ನು ಕ್ಷಿಪ್ರ ಮೌಲ್ಯಮಾಪನ ಮಾಡಿ, ಸಮಾಜದ ಮುಂದೆ ಬಿಂಬಿಸುವ ಪ್ರಯತ್ನ

ಆದಾಗ್ಯೂ, ಪ್ರಥಮ್ ಸಂಸ್ಥೆಯು, ಶಿಕ್ಷಣದ ಫಲಿತಾಂಶ ಸುಧಾರಣೆಗೆ ಸರಕಾರ ನಡೆಸುತ್ತಿರುವ ಹಲವು ಪ್ರಯತ್ನಗಳಲ್ಲಿ ಕೈಜೋಡಿಸಿದೆ. ಇದರ ಮುಖ್ಯವಾದ ಗುರಿ ಎಂದರೆ ನಿತ್ಯದ ಶಾಲಾ ವೇಳಾಪಟ್ಟಿಯ ನಡುವೆಯೇ ಮಿಶ್ರ ವಯೋಮಿತಿಯ ಮಕ್ಕಳಿಗೆ ಪರಿಹಾರಾತ್ಮಕ ತರಗತಿಗಳನ್ನು ಮಾಡುವುದು. ಇಂಥ ಕ್ರಮಗಳ ಕೊನೆಗೆ ಪರೀಕ್ಷೆಗಳನ್ನು ನಡೆಸಿ, ಮೂಲ ಕಲಿಕೆ ಹಾಗೂ ಗಣಿತ ವಿಷಯದಲ್ಲಿ ಆಗಿರುವ ಸುಧಾರಣೆಯನ್ನು ತೋರಿಸಲಾಗುತ್ತದೆ. ಆದರೆ ಇಂಥ ಕ್ರಮಗಳಿಂದ ಕೂಡಾ ಯಾವುದೇ ದೀರ್ಘಾವಧಿಯ ಸುಧಾರಣೆಗಳು ಕಂಡುಬಂದಿಲ್ಲ.

ವರದಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಭಾಷಣದಲ್ಲಿ ಒಂದು ಅಂಶವನ್ನು ಉಲ್ಲೇಖಿಸಲು ವಿಫಲರಾದರು. ರಾಜಧಾನಿಯಲ್ಲಿ ಮಾತ್ರ ಇದು ಸರಕಾರಿ ಕಲಿಕಾ ಫಲಿತಾಂಶದ ಸಮೀಕ್ಷೆಯನ್ನು ವಿನ್ಯಾಸಗೊಳಿಸಲು ಹಾಗೂ ಪರಿಹಾರಾತ್ಮಕ ಬೋಧನಾ ಯೋಜನೆಗೆ ಇದು ಸಾಕಷ್ಟು ಕೊಡುಗೆ ನೀಡಿದೆ. ಪ್ರಥಮ್ ಸಂಸ್ಥೆಯ ಶೈಲೇಂದ್ರ ಶರ್ಮಾ ಅವರು ದಿಲ್ಲಿ ಸರಕಾರದ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪ್ರಧಾನ ಸಲಹೆಗಾರರಾಗಿದ್ದಾರೆ.

ಕೃಪೆ: scroll.in

Writer - ಅಂಜಲಿ ಮೋದಿ

contributor

Editor - ಅಂಜಲಿ ಮೋದಿ

contributor

Similar News