ತುಮಕೂರಿನ ಆ ಮಾತು: ಯಡಿಯೂರಪ್ಪ-ಲಿಂಗಾಯತರನ್ನು ಒಟ್ಟಿಗೇ ಮಟ್ಟಹಾಕುವ ದೇವೇಗೌಡರ ‘ಮಹಾಯಜ್ಞ’ದ ಮುನ್ನುಡಿಯೇ?

Update: 2024-04-20 07:14 GMT

ತುಮಕೂರಿನ ಲೋಕಸಭಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ದೇವೇಗೌಡರು ಹೇಳಿದ ಆ ಮಾತು ನಿಜಕ್ಕೂ ಅಪಾರ ರಾಜಕೀಯ ಒಳಾರ್ಥವನ್ನು ಹೊಂದಿದೆ. ‘‘ತುಮಕೂರಿನಲ್ಲಿ ವಿ. ಸೋಮಣ್ಣ ಗೆಲ್ಲದಿದ್ದರೆ ನಾನು ಮೋದಿಗೆ ಹೇಗೆ ಮುಖ ತೋರಿಸಲಿ’’ ಎಂದು ದೇವೇಗೌಡರು ಹೇಳಿದ್ದನ್ನು ತುಸು ಡಿಸೆಕ್ಟ್ ಮಾಡಿ ನೋಡಿದಾಗ, ಅದರ ಹಿಂದೆ ಅಡಗಿರುವ ರಾಜಕೀಯ ಲೆಕ್ಕಾಚಾರಗಳು ಅಚ್ಚರಿ ಹುಟ್ಟಿಸುತ್ತವೆ. ತೊಂಭತ್ತರ ಹರೆಯದ ಗೌಡರು ಬಿಜೆಪಿಯೊಳಗೆ ಯಡಿಯೂರಪ್ಪನವರಿಗೆ ‘ಖೆಡ್ಡಾ’ ತೋಡಲು ಹೊರಟಿರುವುದು ಇದರಿಂದ ಸಾಬೀತಾಗುತ್ತದೆ. ಅದು ಹೇಗೆ? ಅದಕ್ಕೂ ಮೊದಲು ಗೌಡರಿಗೂ-ಯಡಿಯೂರಪ್ಪನವರಿಗೂ ಇರುವ ಸಂಬಂಧ ಎಂತಹದ್ದು ಅನ್ನೋದನ್ನು ನೋಡೋಣ.

ಟ್ವೆಂಟಿ-ಟ್ವೆಂಟಿ ಸರಕಾರದ ಪತನದಿಂದೀಚೆಗೆ ಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬದ ನಡುವೆ ಎಣ್ಣೆಸೀಗೆಕಾಯಿ ಸಂಬಂಧ ಇರುವುದು ತಿಳಿದಂತಹ ಸಂಗತಿ. ಮುಖ್ಯವಾಗಿ ದೇವೇಗೌಡರು ಯಡಿಯೂರಪ್ಪನವರನ್ನು ಈ ಪರಿ ದ್ವೇಷಿಸುತ್ತಾ ಬರಲು, ಕೇವಲ ವೈಯಕ್ತಿಕ ರಾಜಕೀಯ ಜಿದ್ದಾಜಿದ್ದಿ ಮಾತ್ರ ಕಾರಣವಲ್ಲ. ಇದರ ಹಿಂದೊಂದು ಜಾತಿ ಆಧಾರಿತ ಸೋಷಿಯಲ್ ಇಂಜಿನಿಯರಿಂಗ್ ಕೂಡಾ ಇದೆ.

ಕರ್ನಾಟಕದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಮತ್ತು ಅತಿಹೆಚ್ಚು ಅಧಿಕಾರ ಅನುಭವಿಸುತ್ತಾ ಬಂದ ಎರಡು ಸಮುದಾಯಗಳೆಂದರೆ ಲಿಂಗಾಯತ ಮತ್ತು ಒಕ್ಕಲಿಗ ಜಾತಿ. ಈ ಎರಡು ಸಮುದಾಯಗಳ ನಡುವೆಯೇ ಮುಖ್ಯಮಂತ್ರಿ ಹುದ್ದೆ ಹಸ್ತಾಂತರವಾಗುತ್ತಾ ಬಂದಿದ್ದು ಹೆಚ್ಚು. ಇದುವರೆಗಿನ ಕರ್ನಾಟಕದ ಸಿಎಂಗಳ ಪಟ್ಟಿ ತೆಗೆದುನೋಡಿದರೆ ಇದು ಅರ್ಥವಾಗುತ್ತದೆ. ಯಾವಾಗೆಲ್ಲ ಲಿಂಗಾಯತರಲ್ಲಿ ರಾಜಕೀಯ ಒಗ್ಗಟ್ಟು ಭಗ್ನಗೊಂಡು, ಹಂಚಿಹೋಗುತ್ತಾರೋ ಆಗೆಲ್ಲ ಒಕ್ಕಲಿಗರಿಗೆ ಅಧಿಕಾರ ದಕ್ಕುತ್ತಾ ಬಂದಿದೆ. ಆದರೆ ತೊಂಭತ್ತರ ದಶಕದಿಂದೀಚೆಗೆ, ತೀರಾ ಇತ್ತೀಚಿನವರೆಗೆ ಲಿಂಗಾಯತ ಸಮುದಾಯವನ್ನು ಹೆಚ್ಚೂಕಮ್ಮಿ ಪ್ರಭಾವಿಸಿ ತನ್ನ ಕೈಯಲ್ಲಿ ಇಟ್ಟುಕೊಂಡದ್ದು ಯಡಿಯೂರಪ್ಪ. ಹಾಗಾಗಿಯೇ ಬಿಜೆಪಿ ಇಲ್ಲಿ ಅಧಿಕಾರ ಅನುಭವಿಸಲು ಸಾಧ್ಯವಾಯಿತು. ಇದರರ್ಥ ಒಕ್ಕಲಿಗರ ಜಾತಿ ಐಡೆಂಟಿಟಿಯಾಗಿ ತಮ್ಮ ಕುಟುಂಬವನ್ನು ಪ್ರತಿಷ್ಠಾಪಿಸಿದ್ದ ದೇವೇಗೌಡರ ಕುಟುಂಬಕ್ಕೆ ಅಧಿಕಾರ ಅನುಭವಿಸುವ ಅವಕಾಶ ಮರೀಚಿಕೆಯಾಗುತ್ತಾ ಬಂತು. ‘ಹಂಗ್ ಅಸೆಂಬ್ಲಿ’ಯ ಹೊರತಾಗಿ ದೇವೇಗೌಡರ ಕುಟುಂಬಕ್ಕೆ ಅಧಿಕಾರ ಸಿಗಲಾರದು ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದೇ, ಯಡಿಯೂರಪ್ಪ ಲಿಂಗಾಯತರನ್ನು ಸಂಪೂರ್ಣವಾಗಿ ಬಿಜೆಪಿಯತ್ತ ಸೆಳೆದು ಒಗ್ಗೂಡಿಸಿದ್ದರಿಂದ. ಇದೇ ಕಾರಣಕ್ಕೆ ದೇವೇಗೌಡರಿಗೆ ಯಡಿಯೂರಪ್ಪನ ಮೇಲೆ ವಿಪರೀತ ಸಿಟ್ಟು.

ಈಗ ತುಮಕೂರಿನ ಆ ಮಾತಿಗೆ ಮರಳೋಣ. ಎಲ್ಲಿಯವರೆಗೆ ಲಿಂಗಾಯತರ ನಡುವೆ ಒಡಕು ಮೂಡುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಕುಟುಂಬ ಒಕ್ಕಲಿಗ ಜಾತಿ ಆಧಾರಿತ ರಾಜಕಾರಣ ಮಾಡಿಕೊಂಡು ಅಧಿಕಾರಕ್ಕೆ ಹತ್ತಿರವಾಗಲಾರದು ಅನ್ನುವುದು ಗೌಡರಿಗೆ ಗೊತ್ತು. ವಯಸ್ಸಾದ ನಂತರ ಯಡಿಯೂರಪ್ಪ ಹಿನ್ನೆಲೆಗೆ ಸರಿದರೆ, ಲಿಂಗಾಯತ ಮತಗಳು ಛಿದ್ರವಾಗಬಹುದೆಂದು ಗೌಡರು ಅಂದಾಜಿಸಿದ್ದಿರಬಹುದು. ಆದರೆ ದೇವೇಗೌಡರಂತೆಯೇ ಪುತ್ರವ್ಯಾಮೋಹಿಯಾದ ಯಡಿಯೂರಪ್ಪನವರು ತಮ್ಮ ಜಾಗಕ್ಕೆ ಮಗ ವಿಜಯೇಂದ್ರರನ್ನು ತಂದು ಕೂರಿಸಿದ್ದಾರೆ. ಈಗ ಸ್ವಪ್ರಯತ್ನದಿಂದ ಬಿಜೆಪಿಯೊಳಗಿರುವ ಲಿಂಗಾಯತ ಲೀಡರ್‌ಶಿಪ್ ಅನ್ನು ಧ್ವಂಸ ಮಾಡದಿದ್ದರೆ, ಮುಂದೆಂದೂ ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ಜಾತಿ ಆಧಾರಿತ ರಾಜಕೀಯ ಭವಿಷ್ಯ ಇರಲಾರದು ಅನ್ನುವುದನ್ನು ಅರ್ಥ ಮಾಡಿಕೊಂಡ ದೇವೇಗೌಡರು ಮೈತ್ರಿಯನ್ನೇ ಊರುಗೋಲನ್ನಾಗಿ ಮಾಡಿಕೊಂಡು ಆ ಕೆಲಸಕ್ಕೆ ಮುಂದಾಗಿದ್ದಾರೆ.

ಈ ಕೆಲಸಕ್ಕೆ ಅವರು ಅಸ್ತ್ರವಾಗಿ ಬಳಸಿಕೊಳ್ಳುತ್ತಿರೋದು ವಿ. ಸೋಮಣ್ಣರನ್ನು! ವಿ. ಸೋಮಣ್ಣರಿಗೂ ಯಡಿಯೂರಪ್ಪರಿಗೂ ಇರುವ ದುಷ್ಮನಿ ಎಂತಹದ್ದು ಅನ್ನುವುದು ಜಗಜ್ಜಾಹೀರು. ತಾನೇ ರಾಜ್ಯಾಧ್ಯಕ್ಷನಾಗಬೇಕೆಂದು ಸೋಮಣ್ಣ ಕಾಳಗ ನಡೆಸಿದ್ದಾಗಲಿ, ಯಡಿಯೂರಪ್ಪ ಕುಟುಂಬವನ್ನು ಬಹಿರಂಗವಾಗಿ ವಾಚಾಮಗೋಚರ ನಿಂದಿಸಿದ್ದಾಗಲಿ ಎಲ್ಲವೂ ಬಹಿರಂಗ. ಈ ಕಾಳಗ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಒಂದು ಹಂತದಲ್ಲಿ ಬಿಜೆಪಿಯಿಂದ ಕಾಲು ಹೊರಗಿಟ್ಟಿದ್ದ ಸೋಮಣ್ಣ ಕಾಂಗ್ರೆಸ್ ಸೇರುವ ಕುರಿತು ಮಾತುಕತೆಯನ್ನೂ ನಡೆಸಿದ್ದರು; ಹೈಕಮಾಂಡಿಗೆ ಡೆಡ್‌ಲೈನ್ ಕೂಡಾ ನೀಡಿದ್ದರು. ಇಂಟರೆಸ್ಟಿಂಗ್ ವಿಚಾರ ಅಂದರೆ ವಿ. ಸೋಮಣ್ಣ ಕೂಡಾ ಲಿಂಗಾಯತ ಸಮುದಾಯದ ರಾಜಕಾರಣಿ.

ಬಿಜೆಪಿಯೊಳಗಿನ ಈ ಭಿನ್ನಮತವನ್ನು ತಮ್ಮ ಲಾಭಕ್ಕೆ ಬಳಸಿಕೊಂಡ ದೇವೇಗೌಡರು, ಸೋಮಣ್ಣರನ್ನು ಮನೆಗೆ ಕರೆಸಿಕೊಂಡು ಸಮಾಧಾನ ಮಾಡಿದ ನಂತರವೇ ಬಿಜೆಪಿಯಲ್ಲಿ ಉಳಿಯಲು ಸೋಮಣ್ಣ ನಿರ್ಧರಿಸಿದ್ದು. ಹಾಗೆ ಸಮಾಧಾನ ಮಾಡುವಾಗ ದೇವೇಗೌಡರು ಸೋಮಣ್ಣರಿಗೆ ಕೊಟ್ಟ ಆಶ್ವಾಸನೆ ಯಾದರೂ ಏನಾಗಿತ್ತು? ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟನ್ನು ಕೊಡಿಸುವುದರ ಜೊತೆಗೆ, ತಮಗಿರುವ ಜಾತಿ ಪ್ರಭಾವವನ್ನು ಬಳಸಿಕೊಂಡು ಅಲ್ಲಿ ಗೆಲ್ಲಿಸಿಕೊಳ್ಳುತ್ತೇನೆ ಎಂಬ ದೇವೇಗೌಡರ ಆಶ್ವಾಸನೆಗೆ ಮಾರುಹೋಗಿಯೇ ಸೋಮಣ್ಣ ತಣ್ಣಗಾದದ್ದು ಎನ್ನುತ್ತವೆ ಜೆಡಿಎಸ್ ಮೂಲಗಳು.

ಯಡಿಯೂರಪ್ಪನವರು ತುಮಕೂರು ಕ್ಷೇತ್ರದಿಂದ ತಮ್ಮ ಆಪ್ತ ಮಾಧುಸ್ವಾಮಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿ, ಪ್ರಚಾರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಅವರಿಗೆ ಸೆಡ್ಡು ಹೊಡೆದು, ಮೋದಿ-ಶಾ ಬಳಿ ತಮಗೆ ಸೃಷ್ಟಿಯಾಗಿರುವ ಹೊಸ ತಾತ್ಕಾಲಿಕ ಆತ್ಮೀಯತೆಯನ್ನು ಬಳಸಿಕೊಂಡು ಸೋಮಣ್ಣರಿಗೆ ಟಿಕೆಟ್ ಕೊಡಿಸುವಲ್ಲಿ ಗೌಡರು ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಸೀಟು ಹಂಚಿಕೆಯ ಮಾತುಕತೆಗಳು ನಡೆದಾಗ ಒಕ್ಕಲಿಗ ಪ್ರಾಬಲ್ಯವಿರುವ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೆನ್ನುವ ಒತ್ತಾಯವನ್ನು ಗೌಡರು ಬಿಜೆಪಿ ಹೈಕಮಾಂಡ್ ಮುಂದಿಟ್ಟ ಸುದ್ದಿಗಳು ಕೇಳಿಬರುತ್ತಿದ್ದವು. ಆದರೆ ಸೋಮಣ್ಣರಿಗೆ ಬಿಜೆಪಿ ಟಿಕೆಟ್ ನೀಡುವುದಾದರೆ ತಾವು ತುಮಕೂರು ಕ್ಷೇತ್ರವನ್ನು ಬಿಜೆಪಿಗೇ ಬಿಟ್ಟುಕೊಡುವುದಾಗಿ ಗೌಡರು ಆಯ್ಕೆ ಮುಂದಿಟ್ಟಿದ್ದರಿಂದ ಅದು ಬಿಜೆಪಿ ಪಾಲಾಯಿತು ಎನ್ನಲಾಗುತ್ತಿದೆ. ಅದು ಎಷ್ಟರಮಟ್ಟಿಗೆ ಸತ್ಯವೋ, ಊಹೆಯೋ ಗೊತ್ತಿಲ್ಲ. ಆದರೆ ದೇವೇಗೌಡರಂತೂ ಸೋಮಣ್ಣರಿಗೆ ಹೀಗೆ ನಂಬಿಸಿದ್ದಾರೆ. ದೇವೇಗೌಡರು ತನಗೋಸ್ಕರ ಒಂದು ಕ್ಷೇತ್ರವನ್ನೇ ತ್ಯಾಗ ಮಾಡಿದ್ದಾರೆ ಅನ್ನುವ ಧನ್ಯತಾ ಭಾವನೆಗೆ ಸೋಮಣ್ಣ ಈಗಾಗಲೇ ಬಿದ್ದಾಗಿದೆ. ಸೋಮಣ್ಣರ ಕಾರಣಕ್ಕೆ ಲಿಂಗಾಯತರು ಹಾಗೂ ತಮ್ಮ ಕಾರಣಕ್ಕೆ ಒಕ್ಕಲಿಗರು ಮತ ಹಾಕಿದರೆ ಗೆಲುವು ಗ್ಯಾರಂಟಿ ಎಂಬ ಲೆಕ್ಕಾಚಾರ ದೇವೇಗೌಡರದ್ದಾಗಿತ್ತು. ಆದರೆ ಟಿಕೆಟ್ ಕೈತಪ್ಪಿದ ಮಾಧುಸ್ವಾಮಿ ಬಂಡಾಯದ ಬಾವುಟ ಹಾರಾಡಿಸುತ್ತಿರುವುದು ಸೋಮಣ್ಣರ ಗೆಲುವಿಗೆ ದೊಡ್ಡ ಅಡ್ಡಿಯಾಗಿದೆ. ಇತ್ತ ಕಾಂಗ್ರೆಸ್ ಮುದ್ದಹನುಮೇಗೌಡರನ್ನು ಕಣಕ್ಕಿಳಿಸಿರುವುದರಿಂದ ಒಕ್ಕಲಿಗ ಮತಗಳೂ ಹಂಚಿಹೋಗಲಿವೆ. ಈ ಆತಂಕದಿಂದಲೇ ಆವತ್ತು ದೇವೇಗೌಡರು ಒಕ್ಕಲಿಗ ಮತಗಳನ್ನು ಒಗ್ಗೂಡಿಸುವ ಸಲುವಾಗಿ ‘ಮೋದಿಗೆ ನಾನು ಹೇಗೆ ಮುಖ ತೋರಿಸಲಿ’ ಎಂಬ ಎಮೋಷನಲ್ ಮಾತು ಹೊರಹಾಕಿದ್ದು.

ಸೋಮಣ್ಣ ಗೆದ್ದರೆ, ಖಂಡಿತ ಆತ ಗೌಡರ ಋಣಕ್ಕೆ ಬಿದ್ದು ಅವರ ಕೈಗೊಂಬೆಯಾಗುತ್ತಾರೆ. ಯಡಿಯೂರಪ್ಪ ವಿರುದ್ಧ ಸೋಮಣ್ಣನಿಗಿರುವ ಸಿಟ್ಟನ್ನೇ ಗುರಾಣಿಯನ್ನಾಗಿ ಇಟ್ಟುಕೊಂಡು, ಬಿಜೆಪಿಯೊಳಗೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ಪ್ರಭಾವಕ್ಕೆ ಅಡ್ಡಗಾಲು ಹಾಕಬಹುದು ಅನ್ನುವುದು ದೇವೇಗೌಡರ ಎಣಿಕೆ. ಹೇಗೂ ಯಡಿಯೂರಪ್ಪರ ಪ್ರಭಾವವನ್ನು ತಗ್ಗಿಸಲು ಬಿ.ಎಲ್. ಸಂತೋಷ್ ಬಣ ಹಠಕ್ಕೆ ಬಿದ್ದಿದೆ. ಹಾಗಾಗಿಯೇ ಈ ಚುನಾವಣೆಯಲ್ಲಿ ಬಿಜೆಪಿಗೆ ವಿಪರೀತ ಬಂಡಾಯಗಳು ಭುಗಿಲೇಳವಂತಾಗಿದ್ದು. ಫಲಿತಾಂಶದ ನಂತರ ಬಿಜೆಪಿ ಕಳಪೆ ಸಾಧನೆಗೆ ಕುಸಿದರೆ, ಆಗ ವಿಜಯೇಂದ್ರರ ತಲೆದಂಡ ನಿಶ್ಚಿತ.

ಅಂತಹ ಸಂದರ್ಭ ಬಂದರೆ, ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷ ಯಾರು? ಒಕ್ಕಲಿಗರಿಗೆ ಕೊಡಲು ಸ್ವತಃ ದೇವೇಗೌಡರೇ ಬಿಡುವುದಿಲ್ಲ. ತಮ್ಮ ಕುಟುಂಬದ ಜಾತಿ ರಾಜಕಾರಣಕ್ಕೆ ಆತ ಮುಂದೊಂದು ದಿನ ಅಡ್ಡಿಯಾಗಬಲ್ಲ ಎಂಬ ಆತಂಕ ಅವರದ್ದು. ಅಲ್ಲದೆ ಈಗಾಗಲೇ ವಿರೋಧಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ನೀಡಲಾಗಿದೆ. ರಾಜ್ಯಾಧ್ಯಕ್ಷ ಹುದ್ದೆಯನ್ನೂ ಅವರಿಗೆ ನೀಡಲು ಸಾಧ್ಯವಿಲ್ಲ. ಆಗ ತಮ್ಮ ಪ್ರಭಾವ ಬಳಸಿ, ತಮ್ಮ ಆಜ್ಞಾಪಾಲಕನಂತಾದ ಸೋಮಣ್ಣರನ್ನು ಆ ಹುದ್ದೆಗೆ ತಂದು ಕೂರಿಸಬಹುದು ಅನ್ನುವುದು ಗೌಡರ ಲೆಕ್ಕಾಚಾರ ಎನ್ನಲಾಗುತ್ತಿದೆ. 2002ರಲ್ಲಿ ಗೌಡರು ಮೈತ್ರಿ ಬಂಧ ಬಳಸಿಕೊಂಡು, ಎಸ್.ಎಂ. ಕೃಷ್ಣ ಹಾಗೂ ಖರ್ಗೆಯವರನ್ನು ಓವರ್ ಟೇಕ್ ಮಾಡಿ, ಧರಂಸಿಂಗ್ ಥರದ ಸಾಧು ವ್ಯಕ್ತಿಯನ್ನು ಕಾಂಗ್ರೆಸ್‌ನಿಂದ ಸಿಎಂ ಮಾಡಿಸಿದ ರೀತಿಯ ಕಾರ್ಯಾಚರಣೆ ಅದಾಗಿರಲಿದೆ. ಆಗ ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದಲ್ಲೇ ಒಬ್ಬ ಪ್ರತಿಸ್ಪರ್ಧಿಯನ್ನು ಹುಟ್ಟುಹಾಕಿ, ಆ ಸಮುದಾಯದ ಒಗ್ಗಟ್ಟಿಗೆ ಬ್ರೇಕ್ ಹಾಕಲು ಗೌಡರು ಹೆಚ್ಚು ಶ್ರಮಪಡುವ ಅಗತ್ಯವಿಲ್ಲ.

ಇದು ಗೌಡರ ಪ್ಲ್ಯಾನ್! ಆ ಉದ್ದೇಶದಿಂದಲೇ ಯಡಿಯೂರಪ್ಪ ನವರ ಇಚ್ಛೆಗೆ ವಿರುದ್ಧವಾಗಿ, ಅವರ ವಿರೋಧಿಯಾದ ಸೋಮಣ್ಣರಿಗೆ ತುಮಕೂರಿನ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಳ್ಳುವ ಜಿದ್ದಿಗೆ ಬಿದ್ದಿದ್ದಾರೆ ಗೌಡರು. ಅದರ ಭಾಗವೇ ಆ ಎಮೋಷನಲ್ ಮಾತು! ಇದು ಯಡಿಯೂರಪ್ಪನವರಿಗೆ ತಿಳಿಯದ ಸಂಗತಿಯಲ್ಲ. ಶತಾಯಗತಾಯ ಸೋಮಣ್ಣರನ್ನು ಸೋಲಿಸಿ, ಗೌಡರ ಯೋಜನೆಯನ್ನು ತಲೆಕೆಳಗು ಮಾಡಬೇಕು ಅಂತ ಮಾಧುಸ್ವಾಮಿಗೆ ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ. ದೇವೇಗೌಡರು ಬಲು ಮುಂದಾಲೋಚನೆಯ ರಾಜಕಾರಣಿ. ಮತ್ತೊಬ್ಬರನ್ನು ಹೇಗೆ ಮಟ್ಟಹಾಕಬೇಕೆನ್ನುವುದನ್ನು ಕರಗತ ಮಾಡಿಕೊಂಡವರು. ಈ ಇಬ್ಬರ ಕಾಳಗದಲ್ಲಿ ಸೋಮಣ್ಣರ ಭವಿಷ್ಯ ಮಣ್ಣುಪಾಲಾಗುವುದು ಮಾತ್ರ ಸತ್ಯ. ಸೋತರೆ, ಅವರ ವಿರೋಧಿಯಾದ ಯಡಿಯೂರಪ್ಪ ಮೇಲುಗೈ ಸಾಧಿಸಿ, ಸತತ ಸೋಲಿನ ಸರದಾರನಾದ ಸೋಮಣ್ಣರನ್ನು ಶಾಶ್ವತವಾಗಿ ತುಳಿದುಹಾಕುತ್ತಾರೆ. ಒಂದುವೇಳೆ ಗೆದ್ದು, ಗೌಡರ ಲೆಕ್ಕಾಚಾರದಂತೆ ರಾಜ್ಯಾಧ್ಯಕ್ಷರಾದರೆ, ಗೌಡರು ಮತ್ತು ಬಿ.ಎಲ್.ಸಂತೋಷ್-ಜೋಶಿ ಥರದವರ ಜಾತಿ ಲಾಬಿಗೆ ಬಲಿಯಾಗಿ ಸ್ವಲ್ಪ ಕಾಲದಲ್ಲೇ ಮತ್ತೋರ್ವ ಧರಂ ಸಿಂಗ್‌ನಂತೆ ದುರಂತ ನಾಯಕನಾಗುತ್ತಾರೆ!!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಾಚಯ್ಯ ಎಂ. ಹಿಪ್ಪರಗಿ

contributor

Similar News